ಬೆಂಗಳೂರು: ರಾಜಧಾನಿಯ ಸಾಂಸ್ಕೃತಿಕ ವಲಯದಲ್ಲಿ ʻರಸಂʼ(RaSam) ಎಂಬ ವಿಶಿಷ್ಟ ಸಂಗೀತ ಮತ್ತು ಸಂವಾದದ ಕಾರ್ಯಕ್ರಮವು ಜಯನಗರದ ಯುವಪಥ ಸಭಾಂಗಣದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು. ಭಾರತೀಯ ಸಂಗೀತದ ವಿವಿಧ ಆಯಾಮ ಹಾಗೂ ರುಚಿಗಳನ್ನು ಪ್ರೇಕ್ಷಕರಿಗೆ ಉಣಬಡಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಸಂಗೀತ ಸಂಜೆಯಲ್ಲಿ ಸೇರಿದ್ದ ನೂರಾರು ರಸಿಕರ ಮನಗೆದ್ದಿತು.
ಪರಮ್ ಫೌಂಡೇಶನ್, ಯುವಪಥ ಮತ್ತು ವಿಪಿ ಕಲ್ಚರ್ ಕ್ಲಬ್* ಸಹಯೋಗದಲ್ಲಿ ನಡೆದ ಈ ಅಪರೂಪದ ಗಾನ ವೈಭವವು ನಗರದ ಸಂಗೀತಪ್ರೇಮಿಗಳಿಗೆ ಒಂದು ಮರೆಯಲಾಗದ ಸಾಂಸ್ಕೃತಿಕ ರಸದೌತಣ ನೀಡಿತು.
ಖ್ಯಾತ ಗಾಯಕ ವಿಜಯ್ ಪ್ರಕಾಶ್ ಮತ್ತು ವಿದ್ವಾಂಸ ಜಗದೀಶ್ ಶರ್ಮಾ ಸಂಪಾ ಅವರ ಜಂಟಿ ಪ್ರಸ್ತುತಿಯಲ್ಲಿ ಮೂಡಿಬಂದ ಈ ಕಾರ್ಯಕ್ರಮವು, ಶಾಸ್ತ್ರೀಯ ಮತ್ತು ಭಕ್ತಿ ಸಂಗೀತದಿಂದ ಹಿಡಿದು ಸುಗಮ ಸಂಗೀತ ಹಾಗೂ ಜನಪ್ರಿಯ ಚಲನಚಿತ್ರ ಗೀತೆಗಳವರೆಗಿನ ಸುದೀರ್ಘ ಪಯಣವನ್ನು ಕಣ್ಣಿಗೆ ಕಟ್ಟುವಂತೆ ಅನಾವರಣಗೊಳಿಸಿತು. ಹಾಡುಗಳ ಹಿಂದಿನ ಭಾವನೆಗಳು, ಪರಂಪರೆ ಮತ್ತು ತಾಂತ್ರಿಕ ಆಯಾಮಗಳ ಬಗ್ಗೆ ಕಲಾವಿದರು ನಡೆಸಿದ ರಸಮಯ ಸಂವಾದ ಪ್ರೇಕ್ಷಕರ ಚಪ್ಪಾಳೆಗೆ ಪಾತ್ರವಾಯಿತು.
ಕಾರ್ಯಕ್ರಮಕ್ಕೆ ಗಿಟಾರ್‌ನಲ್ಲಿ ಶ್ರೀನಿವಾಸ್ ಆಚಾರ್, ಕೀಬೋರ್ಡ್‌ನಲ್ಲಿ ಉಮೇಶ್ ವಿ, ತಬಲಾದಲ್ಲಿ ಬಿ.ಎಸ್. ವೇಣುಗೋಪಾಲ ರಾಜು, ಡ್ರಮ್ಸ್‌ನಲ್ಲಿ ಪ್ರವೀಣ್ ಎಸ್, ವಯಲಿನ್‌ನಲ್ಲಿ ರಂಜನ್ ಕುಮಾರ್ ಬೆಯುರಾ ಹಾಗೂ ಹಾರ್ಮೋನಿಯಂನಲ್ಲಿ ಪ್ರವೀಣ್ ಡಿ. ರಾವ್ ಅದ್ಭುತ ಹಿನ್ನೆಲೆ ಸಂಗೀತ ಒದಗಿಸಿದರು. “ಬಾನಿಗೊಂದು ಎಲ್ಲೆ ಎಲ್ಲಿದೆ..”, “ಮಗಳು ಜಾನಕಿ..” ಟೈಟಲ್ ಸಾಂಗ್ , “ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು..” ಸೇರಿದಂತೆ ಹಲವಾರು ಜನಪ್ರಿಯ ಚಲನಚಿತ್ರ ಗೀತೆ, ಸುಗಮ ಸಂಗೀತದ ಹಾಡುಗಳು ಕೇಳುಗರನ್ನು ಮಂತ್ರಮುಗ್ದಗೊಳಿಸಿತು.
