ಬೆಂಗಳೂರು: ಪ್ರಸಕ್ತ ಮುಂಗಾರಿನಲ್ಲಿ ತೀವ್ರ ಮಳೆಯ ಅಭಾವ ಎದುರಿಸುತ್ತಿರುವ ಗದಗ ಜಿಲ್ಲೆಯ ಯಾವುದೇ ಭಾಗದಲ್ಲಿ ಕುಡಿಯುವ ನೀರಿನ ಕೊರತೆ ಆಗದ ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಗದಗ ಜಿಲ್ಲೆ ಪ್ರಕೃತಿ ವಿಕೋಪ ಮೇಲುಸ್ತುವಾರಿ ಸಚಿವ ಈಶ್ವರ ಬಿ ಖಂಡ್ರೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.
ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಉನ್ನತ ಅಧಿಕಾರಿಗಳೊಂದಿಗೆ ವರ್ಚುವಲ್ ಸಭೆ ನಡೆಸಿದ ಸಚಿವರು, ನಾಳೆ ಮುಖ್ಯಮಂತ್ರಿಯವರು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಕಾರ್ಯ ನಿರ್ವಹಣಾಧಿಕಾರಿಗಳ ಸಭೆ ಕರೆದಿದ್ದು ಈ ಸಭೆಯಲ್ಲಿ ಗದಗ ಮತ್ತು ಬೀದರ್ ಜಿಲ್ಲೆಯ ಬರ ಪರಿಸ್ಥಿತಿಯ ಬಗ್ಗೆ ಪ್ರಸ್ತಾಪಿಸಲಾಗುವುದು ಎಂದರು.
ಗದಗ್ ನ ಎಲ್ಲ ತಾಲೂಕುಗಳಲ್ಲಿ ತೀವ್ರ ಮಳೆಯ ಕೊರತೆಯಾಗಿದ್ದು, ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು, ತತ್ ಕ್ಷಣವೇ ಬರ ಪರಿಹಾರ ಕಾಮಗಾರಿ ಆರಂಭಿಸಬೇಕು ಎಂಬ ಜನಪ್ರತಿನಿಧಿಗಳ ಒತ್ತಾಯಕ್ಕೆ ಸ್ಪಂದಿಸಿದ ಈಶ್ವರ ಖಂಡ್ರೆ, ಕೇಂದ್ರ ಸರ್ಕಾರದ ಮಾನದಂಡಗಳಂತೆ ಪರಿಶೀಲಿಸಲಾಗುತ್ತಿದೆ. ಈಗಾಗಲೇ ಜಿಲ್ಲಾ ಕಾರ್ಯದರ್ಶಿಗಳು ಸ್ಥಳಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಜನ, ಜಾನುವಾರುಗಳಿಗೆ ನೀರಿನ ಕೊರತೆ ಆಗದಂತೆ, ದನಕರುಗಳಿಗೆ ಮೇವಿನ ಕೊರತೆ ಆಗದಂತೆ ಕ್ರಮ ವಹಿಸಲು ಸೂಚಿಸಿದ ಅವರು, ಜಿಲ್ಲೆಯ ಯಾರೂ ಕೆಲಸ ಅರಸಿ ಗುಳೆ ಹೋಗುವುದನ್ನು ತಪ್ಪಿಸಲು ಅವರಿರುವ ಸ್ಥಳದಲ್ಲೇ ಉದ್ಯೋಗ ಒದಗಿಸಲು ಸೂಚಿಸಿದರು.
ಕುಡಿಯುವ ನೀರಿನ ಯೋಜನೆಗಳನ್ನು ಕೈಗೊಳ್ಳಲು ಜಲಜೀವನ ಅಭಿಯಾನದ ಜೊತೆಗೆ ವಿ ಬಿ ಜಿ ರಾಮ್ ಜಿಯಲ್ಲೂ ಅವಕಾಶವಿದ್ದು, ಕೂಡಲೇ ಸಮರೋಪಾದಿಯಲ್ಲಿ ಕಾಮಗಾರಿ ಕೈಗೆತ್ತಿಕೊಂಡು ಜನರ ಸಂಕಷ್ಟಕ್ಕೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬೆಳೆ ವಿಮೆ ಕಂತು ಕಟ್ಟಿಸಿಕೊಳ್ಳಲು ಲೀಡ್ ಬ್ಯಾಂಕ್ ಗೆ ಸೂಚನೆ:
ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿದ್ದ ಕಾರಣ ರೈತರು ಶೇ.82ರಷ್ಟು ಬಿತ್ತನೆ ಮಾಡಿದ್ದಾರೆ. ಆದರೆ ಮಳೆ ಕೊರತೆಯಿಂದ ಹೆಸರು, ಮೆಕ್ಕೆಜೋಳ ಮೊದಲಾದ ಬೆಳೆ ಒಣಗುತ್ತಿದ್ದು, ಕಟ್ ಬಾಕಿ ಇರುವವರಿಂದ ಮತ್ತು ಓಟಿಎಸ್ ಆದವರಿಂದ ಬೆಳೆ ವಿಮೆ ಕಂತು ಕಟ್ಟಿಸಿಕೊಳ್ಳುವುದಿಲ್ಲ ಎಂಬುದು ಸರಿಯಲ್ಲ. ಕೆಲವು ಬೆಳೆಗಳಿಗೆ ಈ ತಿಂಗಳ 22ರವರೆಗೆ ಹಾಗೂ ಮತ್ತೆ ಕೆಲವು ಬೆಳೆಗೆ 31ರವರೆಗೆ ಕಂತು ಪಾವತಿಸಲು ಅವಕಾಶವಿದ್ದು, ಇದಕ್ಕೆ ಅವಕಾಶ ಕಲ್ಪಿಸುವಂತೆ ಲೀಡ್ ಬ್ಯಾಂಕ್ ಹಾಗೂ ಡಿಸಿಸಿ ಬ್ಯಾಂಕ್ ಗೆ ಸೂಚಿಸುವಂತೆ ತಿಳಿಸಿದರು.
ರೈತರು ಪಡೆದ ಸಾಲ ಕಟ್ಟಿಲ್ಲ ಎಂಬ ಕಾರಣಕ್ಕೆ ಬೆಳೆ ವಿಮೆಯಿಂದ ವಂಚಿತರಾಗಬಾರದು ಎಂದು ಎಚ್.ಕೆ. ಪಾಟೀಲ್ ಪ್ರತಿಪಾದಿಸಿದರು. ಓಟಿಎಸ್ ಆಗಿರುವ ರೈತರಿಗೆ ಹೊಸ ಖಾತೆ ತೆರೆದು ಕಂತು ಪಾವತಿಸಲು ಸೂಚಿಸುವಂತೆ ಈಶ್ವರ ಖಂಡ್ರೆ ತಿಳಿಸಿದರು.
ಸಭೆಯಲ್ಲಿ ಶಾಸಕರುಗಳಾದ ಎಚ್.ಕೆ. ಪಾಟೀಲ್, ಜಿ.ಎಸ್. ಪಾಟೀಲ್, ಸಿ.ಸಿ. ಪಾಟೀಲ್, ಚಂದ್ರು ಲಮಾಣಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿ ಸಮೀರ್ ಶುಕ್ಲ, ಆಯುಕ್ತರಾದ ದಿವ್ಯ ಪ್ರಭು, ಜಿಲ್ಲಾಧಿಕಾರಿ ಸಿ.ಎಸ್.ಶ್ರೀಧರ್ ಮತ್ತಿತರರು ಭಾಗಿಯಾಗಿದ್ದರು.
