ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಧರ್ಮಪತ್ನಿ ಹಾಗೂ ಎಚ್.ಡಿ.ರೇವಣ್ಣ, ಕುಮಾರಸ್ವಾಮಿ, ಅವರ ತಾಯಿ ಶ್ರೀಮತಿ ಚನ್ನಮ್ಮ ಅವರು ಇಂದು ಸಂಜೆ ನಿಧನರಾಗಿದ್ದಾರೆ.
ಚನ್ನಮ್ಮನವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಸಿಎಂ ಡಿ.ಕೆ.ಶಿವಕುಮಾರ್, ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ವಿ.ಸೋಮಣ್ಣ, ಸಚಿವರಾದ ಎಂ.ಬಿ.ಪಾಟೀಲ್, ಈಶ್ವರ್ ಖಂಡ್ರೆ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ, ಅಪಾರ ಧೈವಭಕ್ತೆಯಾಗಿದ್ದ ಚನ್ನಮ್ಮನವರು ತುಂಬು ಕುಟುಂಬವನ್ನು ಸಾಕಿ ಸಲಹಿದ ಮಹಾನ್ ತಾಯಿ.
ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ ಸೇರಿದಂತೆ ಅವರ ಕುಟುಂಬ ಸದಸ್ಯರ ರಾಜಕೀಯ ಮತ್ತು ಬದುಕಿನ ಏಳ್ಗೆಯ ಹಿಂದೆ ಚನ್ನಮ್ಮನವರ ಪರಿಶ್ರಮ ಅಡಗಿದೆ ಎಂದು ಸಿಎಂ ಹೇಳಿದ್ದಾರೆ.
ಅವರು ಆಸ್ಪತ್ರೆಯಿಂದ ಗುಣಮುಖರಾಗಿ ವಾಪಸ್ಸು ಬರುತ್ತಾರೆ ಎಂದು ಎಲ್ಲರೂ ನಂಬಿಕೆ ಇಟ್ಟಿದ್ದರು. ಆ ನಂಬಿಕೆ ಸುಳ್ಳಾಗಿರುವುದಕ್ಕೆ ಬಹಳ ಬೇಸರವಾಗಿದೆ ಎಂದು ತಿಳಿಸಿದ್ದಾರೆ.
ಯಶಸ್ವಿ ಪುರುಷನ ಹಿಂದೆ ಮಹಿಳೆ ಇದ್ದೇ ಇರುತ್ತಾಳೆ ಎನ್ನುತ್ತಾರೆ. ದೇವೇಗೌಡರ ಪ್ರತಿ ಯಶಸ್ಸಿನ ಹಿಂದೆ ನಿಂತಿದ್ದವರು. ಅವರ ಕುಟುಂಬ ಸದಸ್ಯರು ಸೋತಾಗ ಕುಗ್ಗಲಿಲ್ಲ, ಗೆದ್ದಾಗ ಹಿಗ್ಗಲಿಲ್ಲ. ರಾಜಕೀಯದ ಏಳು-ಬೀಳುಗಳಲ್ಲಿ ದೇವೇಗೌಡರಿಗೆ ಬೆನ್ನೆಲುಬಾಗಿ ನಿಂತವರು ಎಂದು ಸಿಎಂ ಶಿವಕುಮಾರ್ ಅವರು ಹೇಳಿದ್ದಾರೆ.
ಮನೆಯನ್ನು ಜವಾಬ್ದಾರಿಯಿಂದ ನೋಡಿಕೊಳ್ಳುವ ಮೂಲಕ ಅವರು ಗೌಡರ ಬದುಕಿನ ನಿಜವಾದ ಶಕ್ತಿಯಾಗಿದ್ದರು. ಮೌನದಿಂದಲೇ ಇಡೀ ಕುಟುಂಬದ ನಿರ್ವಹಣೆ ಮಾಡಿದವರು.
ಯಾವುದೇ ಪ್ರಚಾರ ಬಯಸದೆ, ತೆರೆಮರೆಯಲ್ಲಿ ಇದ್ದವರು. ಇಳಿ ವಯಸ್ಸಿನಲ್ಲಿ ಪತ್ನಿಯ ಅಗಲಿಕೆ ದೇವೇಗೌಡರಿಗೆ ಹಾಗೂ ಅವರ ಕುಟುಂಬ ವರ್ಗದವರಿಗೆ ನೋವು ತರುವುದರ ಜತೆಗೆ ತುಂಬಲಾರದ ನಷ್ಟವಾಗಿದೆ.ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ.
ಅವರ ಕುಟುಂಬವರ್ಗ, ಬಂಧುಗಳು ಹಾಗೂ ಹಿತೈಷಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಿಎಂ ಅವರು ತಿಳಿಸಿದ್ದಾರೆ.
