ಬೆಂಗಳೂರು:ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿ ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು (DC) ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ (CEO) ಮಹತ್ವದ ಸಭೆ ನಡೆಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಕಡಕ್ ಸೂಚನೆಗಳನ್ನು ನೀಡಿದ್ದಾರೆ.
ನನಗೆ ಕೇವಲ ಕಾಗದದ ಮೇಲಿರುವ (ಪೇಪರ್) ವರದಿಗಳು ಬೇಡ, ವಾಸ್ತವ ತಿಳಿಸುವ ಫೀಲ್ಡ್ ರಿಪೋರ್ಟ್ ಮುಖ್ಯ. ಅಧಿಕಾರಿಗಳು ಕೊಡುವ ವರದಿಗೂ, ನಮಗೆ ಸಿಗುವ ಗ್ರೌಂಡ್ ರಿಪೋರ್ಟ್‌ಗೂ ವ್ಯತ್ಯಾಸ ಇರಬಾರದು ಎಂದು ಮುಖ್ಯಮಂತ್ರಿ ಅವರು ಎಚ್ಚರಿಸಿದ್ದಾರೆ.
ಬರ ನಿರ್ವಹಣೆಗೆ ಸಿಎಂ ಕಟ್ಟುನಿಟ್ಟಿನ ಸೂಚನೆ:
‘ಟೀಮ್ ಕರ್ನಾಟಕ’ ಮನಸ್ಥಿತಿಯಲ್ಲಿ ಕೆಲಸ ಮಾಡಿ:
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುನ್ನ ಅಧಿಕಾರಿಗಳು ತಮ್ಮ ಅನುಭವ ಮತ್ತು ಕಾರ್ಯಕ್ಷಮತೆಯನ್ನು ಸಾಬೀತುಪಡಿಸಬೇಕು. ಆಡಳಿತಾತ್ಮಕವಾಗಿ ಒಗ್ಗಟ್ಟಿನಿಂದ ‘ಟೀಮ್ ಕರ್ನಾಟಕ’ ಮಾದರಿಯಲ್ಲಿ ಕೆಲಸ ಮಾಡಬೇಕು. ಈಗಾಗಲೇ ಬೆಳಗಾವಿ ಮತ್ತು ಕಲ್ಬುರ್ಗಿ ವಿಭಾಗಗಳಲ್ಲಿ ನೀಡಿರುವ ಸೂಚನೆಗಳು ಕಾಲಮಿತಿಯಲ್ಲಿ ಜಾರಿಯಾಗುತ್ತಿದ್ದು, ಉತ್ತಮವಾಗಿ ಕೆಲಸ ಮಾಡುತ್ತಿರುವ ಅಧಿಕಾರಿಗಳಿಗೆ ಸಿಎಂ ಅಭಿನಂದನೆ ಸಲ್ಲಿಸಿದರು.
ಕುಡಿಯುವ ನೀರಿಗೆ ಹೆಚ್ಚುವರಿ ಅನುದಾನ:
ರಾಜ್ಯದ ಗ್ರಾಮೀಣ ಭಾಗದ ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲು ತಲಾ 1 ಕೋಟಿ ರೂಪಾಯಿಗಳ ಹೆಚ್ಚುವರಿ ಅನುದಾನವನ್ನು ಸಿಎಂ ಘೋಷಿಸಿದ್ದಾರೆ.
ನಕಲಿ ಬೋರ್‌ವೆಲ್ ದಂಧೆಗೆ ಬ್ರೇಕ್ – ಸಿಇಒಗಳೇ ಹೊಣೆ:
ಹೊಸದಾಗಿ ಬೋರ್‌ವೆಲ್ ಕೊರೆಸುವಾಗ ಕಡ್ಡಾಯವಾಗಿ ಅದರ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಬೇಕು. ಎಲ್ಲೋ ಬೋರ್ ಕೊರೆಸಿದೆ ಎಂದು ಕತೆ ಹೇಳಿದರೆ ಒಪ್ಪುವುದಿಲ್ಲ. ಎಲ್ಲಾದರೂ ನಕಲಿ ಅಥವಾ ಬೋಗಸ್ ಬೋರ್‌ವೆಲ್ ಪ್ರಕರಣಗಳು ಕಂಡುಬಂದರೆ ಅದಕ್ಕೆ ಆಯಾ ಜಿಲ್ಲೆಯ ಜಿ.ಪಂ. ಸಿಇಒಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಕಠಿಣ ಎಚ್ಚರಿಕೆ ನೀಡಿದರು.
178 ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆ:
ರಾಜ್ಯದಲ್ಲಿ ಪ್ರಸ್ತುತ ಶೇಕಡಾ 60 ರಷ್ಟು ಮಳೆ ಕೊರತೆ ಕಾಣಿಸಿಕೊಂಡಿದ್ದು, ಬರೋಬ್ಬರಿ 178 ತಾಲೂಕುಗಳು ತೀವ್ರ ಮಳೆ ಕೊರತೆಯಿಂದ ಕಂಗಾಲಾಗಿವೆ. ಅಣೆಕಟ್ಟುಗಳಲ್ಲಿರುವ ನೀರಿನ ಸಂಗ್ರಹದ ಆಧಾರದ ಮೇಲೆ ಕೃಷಿ ಚಟುವಟಿಕೆಗಳು ಮುಂದುವರೆಯಬೇಕು. ಈ ಕುರಿತು ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಲು ಡಿಸಿ ಮತ್ತು ಸಿಇಒಗಳು ಸದಾ ರೈತರ ಸಂಪರ್ಕದಲ್ಲಿರಬೇಕು.
ಕೇಂದ್ರ ತಂಡಕ್ಕೆ ವಾಸ್ತವಾಂಶ ಮನವರಿಕೆ ಮಾಡಿ:
ಮುಂದಿನ 15 ದಿನಗಳಲ್ಲಿ ಕೇಂದ್ರ ಸರ್ಕಾರಕ್ಕೆ ರಾಜ್ಯದ ಬರ ಪರಿಸ್ಥಿತಿಯ ಸಮಗ್ರ ವರದಿಯನ್ನು ರವಾನಿಸಬೇಕಾಗಿದೆ. ಆದ್ದರಿಂದ ಅಧಿಕಾರಿಗಳು ತ್ವರಿತವಾಗಿ ಮಾಹಿತಿ ಸಂಗ್ರಹಿಸಬೇಕು. ಅಲ್ಲದೆ, ಬರ ಪರಿಸ್ಥಿತಿ ಅಧ್ಯಯನಕ್ಕೆ ಬರುವ ಕೇಂದ್ರದ ಜಂಟಿ ತಂಡಕ್ಕೆ (Central Team) ಕೇವಲ ಅಂಕಿ-ಅಂಶ ನೀಡದೆ, ನೇರವಾಗಿ ಫೀಲ್ಡ್‌ಗೆ ಕರೆದೊಯ್ದು ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು.
ಟ್ರಾನ್ಸ್‌ಫಾರ್ಮರ್ ರಿಪೇರಿಗೆ ಆದ್ಯತೆ:
ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆ ತಲೆದೋರದಂತೆ ಹೆಚ್ಚುವರಿ ಟ್ರಾನ್ಸ್‌ಫಾರ್ಮರ್‌ಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಇವುಗಳ ರಿಪೇರಿ ಹಾಗೂ ನಿರ್ವಹಣೆಗಾಗಿ ಈಗಾಗಲೇ 4ಜಿ ರಿಯಾಯ್ತಿ ನೀಡಲಾಗಿದ್ದು, ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಬೇಕು. ಪಶು ಸಂಗೋಪನೆ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು.
ಬೆಳೆ ವಿಮೆ ಅಕ್ರಮದ ಬಗ್ಗೆ ಪ್ರತ್ಯೇಕ ವರದಿ:
ಗುಲ್ಬರ್ಗ ಮತ್ತು ಬೆಳಗಾವಿ ವಿಭಾಗಗಳ ಪರಿಶೀಲನೆ ನಡೆಸುವಾಗ ಬೆಳೆ ವಿಮೆ ವಿಚಾರದಲ್ಲಿ ಅಕ್ರಮ ಹಾಗೂ ತಾರತಮ್ಯ ನಡೆಯುತ್ತಿರುವ ಆರೋಪಗಳು ಕೇಳಿಬಂದಿದ್ದು, ಈ ಬಗ್ಗೆ ತಕ್ಷಣವೇ ಪ್ರತ್ಯೇಕ ವರದಿ ನೀಡುವಂತೆ ಸಿಎಂ ಆದೇಶಿಸಿದ್ದಾರೆ. ವಿಶೇಷವಾಗಿ ಸಣ್ಣ ಮತ್ತು ಅತಿ ಸಣ್ಣ ರೈತರ ಹಿತ ಕಾಯುವುದು ಅಧಿಕಾರಿಗಳ ಮೊದಲ ಆದ್ಯತೆಯಾಗಬೇಕು.
ಅಧಿಕಾರಿಗಳ ವರ್ತನೆಗೆ ಸಿಎಂ ಅಸಮಾಧಾನ:
ಸಭೆಯಲ್ಲಿ ಉಪ ಮುಖ್ಯಮಂತ್ರಿಗಳು ಬರ ಪರಿಸ್ಥಿತಿಯ ವಿಷಯ ಮಂಡಿಸುವಾಗ ಮೊಬೈಲ್ ಫೋನ್ ಬಳಸುತ್ತಿದ್ದ ಅಧಿಕಾರಿಯೊಬ್ಬರ ವರ್ತನೆಗೆ ಸಿಎಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ತುರ್ತು ಇದ್ದರೆ ಸಭೆಯಿಂದ ಹೊರಗೆ ಹೋಗಿ ಮಾತನಾಡುವುದು ಒಳ್ಳೆಯದು. ಉಪ ಮುಖ್ಯಮಂತ್ರಿಗಳು ಸರ್ಕಾರದ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ, ಅವರ ಕ್ರಿಯೆಗೆ ಗೌರವ ನೀಡುವುದು ನಿಮ್ಮ ಜವಾಬ್ದಾರಿ” ಎಂದು ಸಿಎಂ ತರಾಟೆಗೆ ತೆಗೆದುಕೊಂಡರು.
ಸರ್ಕಾರ ಅಗತ್ಯವಿರುವ ಎಲ್ಲಾ ರೀತಿಯ ಅನುದಾನ ಹಾಗೂ ಸೌಲಭ್ಯಗಳನ್ನು ಹೇರಳವಾಗಿ ನೀಡುತ್ತಿದೆ. ಇಷ್ಟಾದರೂ ಯಾವುದೇ ಜಿಲ್ಲೆಯಲ್ಲಿ ಅಧಿಕಾರಿಗಳ ಕರ್ತವ್ಯಲೋಪದಿಂದ ಸಾರ್ವಜನಿಕರಿಗೆ ತೊಂದರೆಯಾದರೆ ಅಥವಾ ಅನಾಹುತ ಸಂಭವಿಸಿದರೆ ಅದಕ್ಕೆ ಅಧಿಕಾರಿಗಳೇ ಸಂಪೂರ್ಣ ಜವಾಬ್ದಾರಿ ಹೊರಬೇಕಾಗುತ್ತದೆ ಎಂದು ಮುಖ್ಯಮಂತ್ರಿಗಳು ಅಂತಿಮ ಎಚ್ಚರಿಕೆ ನೀಡಿದ್ದಾರೆ.
