ಬೆಂಗಳೂರು: ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಸರ್ಕಾರ ವ್ಯವಹಾರ ನಿರ್ವಹಣೆ ನಿಯಮಗಳು, 1977ರ ಮೊದಲನೇ ಅನುಸೂಚಿಯ ಜನಸಂಖ್ಯೆ 15ರ ಅನ್ವಯ, ರಾಯಚೂರಿನ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (IIIT)ಯಲ್ಲಿ ಕೃತಕ ಬುದ್ಧಿಮತ್ತೆ ಉತ್ಕೃಷ್ಟತಾ ಕೇಂದ್ರ (Centre of Excellence in Artificial Intelligence – CoE-AI) ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ ಎಂದು ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಕೇಂದ್ರವನ್ನು ಐದು ವರ್ಷಗಳ ಅವಧಿಯಲ್ಲಿ ಒಟ್ಟು ₹12 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗುವುದು. ಇದರಲ್ಲಿ ₹5 ಕೋಟಿ 2026-27ರ ಬಜೆಟ್ ಘೋಷಣೆಯಡಿ ಹಾಗೂ ₹7 ಕೋಟಿ LEAP ಕಾರ್ಯಕ್ರಮದಡಿ ಒದಗಿಸಲಾಗುತ್ತದೆ.
ಈ ಉತ್ಕೃಷ್ಟತಾ ಕೇಂದ್ರವು ಉತ್ತರ ಕರ್ನಾಟಕದ 13 ಜಿಲ್ಲೆಗಳಿಗಾಗಿ ಪ್ರಾದೇಶಿಕ AI ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಬೆಂಗಳೂರು ಕೇಂದ್ರೀಕೃತ ತಂತ್ರಜ್ಞಾನ ಪರಿಸರದ ಅಸಮತೋಲನ ನಿವಾರಿಸಿ, ಟಿಯರ್-2 ಮತ್ತು ಟಿಯರ್-3 ನಗರಗಳಲ್ಲಿ AI ಶಿಕ್ಷಣ, ಸಂಶೋಧನೆ, ನಾವೀನ್ಯತೆ ಹಾಗೂ ಉದ್ಯಮಶೀಲತೆಯನ್ನು ಉತ್ತೇಜಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಕೃಷಿ, ಆರೋಗ್ಯ, ಶಿಕ್ಷಣ, MSME, ಆಡಳಿತ ಸೇರಿದಂತೆ ವಿವಿಧ ಕ್ಷೇತ್ರಗಳ ಸಮಸ್ಯೆಗಳಿಗೆ AI ಆಧಾರಿತ ಪರಿಹಾರಗಳನ್ನು ರೂಪಿಸಲು ಈ ಕೇಂದ್ರ ನೆರವಾಗಲಿದೆ.
ಈ ಯೋಜನೆಯಡಿ AI ಅಭಿವೃದ್ಧಿ ಪ್ರಯೋಗಾಲಯಗಳು, ಉನ್ನತ ಗಣಕ ಸಂಪನ್ಮೂಲಗಳು, ಪ್ರೋಟೋಟೈಪ್ ಅಭಿವೃದ್ಧಿ, ಕೌಶಲ್ಯಾಭಿವೃದ್ಧಿ ತರಬೇತಿಗಳು, ನವೋದ್ಯಮಗಳಿಗೆ ಇನ್ಕ್ಯುಬೇಷನ್, ಸ್ಟಾರ್ಟ್‌ಅಪ್ ಬೆಂಬಲ ಹಾಗೂ ಪ್ರಾದೇಶಿಕ ವಿಸ್ತರಣಾ ಕಾರ್ಯಕ್ರಮಗಳನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುವುದು.
ಯೋಜನೆಯ ನಿರ್ವಹಣೆಗೆ “IIIT Raichur ARIA – AI Research & Innovation Arena” ಎಂಬ ವಿಶೇಷ ಉದ್ದೇಶಿತ ಸಂಸ್ಥೆ (SPV) ರಚಿಸಲಾಗುವುದು. ಯೋಜನೆಯ ಅನುಷ್ಠಾನವು ಮೂರು ಹಂತಗಳಲ್ಲಿ ನಡೆಯಲಿದ್ದು, ಮೂಲಸೌಕರ್ಯ ನಿರ್ಮಾಣದಿಂದ ಆರಂಭಿಸಿ ನಾವೀನ್ಯತೆ, ಉದ್ಯಮಶೀಲತೆ ಮತ್ತು ದೀರ್ಘಕಾಲೀನ ಸ್ವಾವಲಂಬನೆಯತ್ತ ಕೊಂಡೊಯ್ಯಲಾಗುತ್ತದೆ.
ಈ ಯೋಜನೆಯ ಮೂಲಕ ರಾಯಚೂರು ಹಾಗೂ ಉತ್ತರ ಕರ್ನಾಟಕವನ್ನು ಕೃತಕ ಬುದ್ಧಿಮತ್ತೆ ಕ್ಷೇತ್ರದ ಪ್ರಮುಖ ಕೇಂದ್ರವನ್ನಾಗಿ ರೂಪಿಸುವುದರೊಂದಿಗೆ, ವಿದ್ಯಾರ್ಥಿಗಳು, ಸಂಶೋಧಕರು, ನವೋದ್ಯಮಿಗಳು ಮತ್ತು ಕೈಗಾರಿಕೆಗಳಿಗೆ ಜಾಗತಿಕ ಮಟ್ಟದ ಅವಕಾಶಗಳು ದೊರೆಯಲಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
