ಬೆಂಗಳೂರು: ರಾಜ್ಯದಲ್ಲಿ ಮಾನವ ಸಮುದಾಯದ ಜೊತೆಗೆ ಯಾವುದೇ ಜೀವಸಂಕುಲ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆ ಆಗದಂತೆ ಅಧಿಕಾರಿಗಳು ಅತ್ಯಂತ ಗಂಭೀರವಾಗಿ ಜವಾಬ್ದಾರಿ ನಿರ್ವಹಿಸಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕಟ್ಟುನಿಟ್ಟಾಗಿ ಸೂಚಿಸಿದರು.
ರಾಜ್ಯದಲ್ಲಿ ಭೀಕರ ಬರಗಾಲ ತಲೆದೋರಿರುವ ಹಿನ್ನೆಲೆಯಲ್ಲಿ ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ಮಹತ್ವದ ವೀಡಿಯೋ ಸಂವಾದ ನಡೆಯಿತು. ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು (DC) ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ (CEO) ನಡೆದ ಈ ಸಭೆಯಲ್ಲಿ ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಬರ ಪರಿಸ್ಥಿತಿ ಎದುರಿಸಲು ಹಲವು ಪ್ರಮುಖ ನಿರ್ದೇಶನಗಳನ್ನು ನೀಡಿದರು.
ಎಲ್‌ನೀನೋ ಎಫೆಕ್ಟ್ – ಶೇ. 68 ರಷ್ಟು ಮಳೆ ಕೊರತೆ:
ರಾಜ್ಯದಲ್ಲಿ ಎದುರಾಗಿರುವ ಭೀಕರ ಬರಗಾಲದ ಸ್ಥಿತಿಯನ್ನು ವಿವರಿಸಿದ ಉಪಮುಖ್ಯಮಂತ್ರಿ, “ಎಲ್‌ನೀನೋ ಪ್ರಭಾವದಿಂದಾಗಿ ಸಮುದ್ರದಲ್ಲಿ 2 ಡಿಗ್ರಿ ಉಷ್ಣಾಂಶ ಹೆಚ್ಚಾಗಿದ್ದರೆ, ರಾಜ್ಯದಲ್ಲಿ 4 ರಿಂದ 6 ಡಿಗ್ರಿ ತಾಪಮಾನ ಏರಿಕೆಯಾಗಿದೆ. ಈ ಬಾರಿ ರಾಜ್ಯದಲ್ಲಿ ಸರಾಸರಿ ಶೇ. 68 ರಷ್ಟು ಮಳೆ ಕೊರತೆಯಾಗಿದ್ದು, ಕೆಲವು ಭಾಗಗಳಲ್ಲಿ ಶೇ. 48 ರಷ್ಟು ಕೊರತೆ ಕಂಡುಬಂದಿದೆ. ತೀವ್ರ ಮಳೆ ಕೊರತೆಯಿಂದಾಗಿ ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಆತಂಕವಿದೆ ಎಂದರು.
ಕುಡಿಯುವ ನೀರಿಗೆ ಮೊದಲ ಆದ್ಯತೆ – ಕೃಷಿಗೆ ಜಲಾಶಯದ ನೀರಿಲ್ಲ:
ಅಂತರ್ಜಲ ಮಟ್ಟವು 88 ತಾಲ್ಲೂಕುಗಳಲ್ಲಿ ಭೀಕರವಾಗಿ ಕುಸಿದಿದ್ದು (-4 ರಷ್ಟು), ಟ್ಯಾಂಕರ್ ಮೂಲಕ ನೀರು ಪೂರೈಸುವ ಗ್ರಾಮಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಶಾಸಕರು ಹೊಸ ಬೋರ್‌ವೆಲ್‌ಗಳಿಗಾಗಿ ಬೇಡಿಕೆ ಇಡುತ್ತಿದ್ದಾರೆ. ಸಿಎಂ ಅವರ ಕಟ್ಟುನಿಟ್ಟಿನ ನಿರ್ದೇಶನದಂತೆ ಜಲಾಶಯದಲ್ಲಿರುವ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕೆ ಮಾತ್ರ ಮೀಸಲಿಡಬೇಕು, ಯಾವುದೇ ಕಾರಣಕ್ಕೂ ಬೆಳೆಗೆ ಹರಿಸಬಾರದು ಎಂದು ಡಾ. ಜಿ. ಪರಮೇಶ್ವರ ಸ್ಪಷ್ಟಪಡಿಸಿದರು.
329 ಕೋಟಿ ರೂ. ಅನುದಾನ ಸದ್ಬಳಕೆ ಮಾಡಿ:
ಪ್ರಸ್ತುತ ರಾಜ್ಯದ ಜಿಲ್ಲಾಧಿಕಾರಿಗಳ ಪಿಡಿ (PD) ಖಾತೆಯಲ್ಲಿ ಒಟ್ಟು 329 ಕೋಟಿ ರೂಪಾಯಿ ಹಣ ಲಭ್ಯವಿದೆ. ಈ ಹಣವನ್ನು ಸಮರ್ಪಕವಾಗಿ ಮತ್ತು ತ್ವರಿತವಾಗಿ ಬಳಸದೆ ಹೋದರೆ ಜನರು ಮತ್ತಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಹೊಸದಾಗಿ ಕೊರೆಸುವ ಬೋರ್‌ವೆಲ್‌ಗಳಿಗೆ ಕೇವಲ ಭರವಸೆ ನೀಡದೇ ತಕ್ಷಣವೇ ಮೋಟಾರ್ ಪಂಪ್ ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಆದೇಶಿಸಿದರು.
ಗುಳೆ ತಡೆಗೆ ಉದ್ಯೋಗ ಖಾತರಿ – ಸಿಇಒಗಳಿಗೆ ಎಚ್ಚರಿಕೆ:
ಉತ್ತರ ಕರ್ನಾಟಕದ ಬಳ್ಳಾರಿ, ಕಲಬುರಗಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರ ಜಿಲ್ಲೆಗಳಿಂದ ಜನರು ಉದ್ಯೋಗ ಅರಸಿ ವಲಸೆ (ಗುಳೆ) ಹೋಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಸಚಿವರು, ಜನರಿಗೆ ಸ್ಥಳೀಯವಾಗಿ ಕೆಲಸ ನೀಡಲು ಉದ್ಯೋಗ ಖಾತರಿ ಯೋಜನೆಯನ್ನು ತಕ್ಷಣ ಚುರುಕುಗೊಳಿಸುವಂತೆ ಸೂಚಿಸಿದರು. ರಾಜ್ಯದ ಸುಮಾರು 2,443 ಗ್ರಾಮ ಪಂಚಾಯಿತಿಗಳಲ್ಲಿ ಇನ್ನೂ ಕೆಲಸಗಳು ಆರಂಭವಾಗಿಲ್ಲದಿರುವುದನ್ನು ಗಂಭೀರವಾಗಿ ಪರಿಗಣಿಸಿದ ಅವರು, ಎಲ್ಲಾ ಜಿ.ಪಂ. ಸಿಇಒಗಳು ಈ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದರು.
ಹೆಚ್ಚು ನೀರು ಹೀರುವ ಬೆಳೆಗಳಿಗೆ ಬ್ರೇಕ್ – ಮೇವು ಸಂಗ್ರಹಕ್ಕೆ ಸೂಚನೆ:
75 ತಾಲ್ಲೂಕುಗಳಲ್ಲಿ ಕಳೆದ 4 ವಾರಗಳಿಂದ ಒಣ ಹವೆ ಮುಂದುವರಿದಿದ್ದು, ಈ ಬಗ್ಗೆ ಕೇಂದ್ರಕ್ಕೆ ವರದಿ ಸಲ್ಲಿಸಲು ತಕ್ಷಣ ‘ಗ್ರೌಂಡ್ ಟ್ರೂಥಿಂಗ್’ (ವಾಸ್ತವ ಪರಿಶೀಲನೆ) ನಡೆಸಬೇಕು. ಮೆಕ್ಕೆಜೋಳ, ಕಬ್ಬಿನಂತಹ ಹೆಚ್ಚು ನೀರು ಬೇಡುವ ಬೆಳೆಗಳನ್ನು ಬೆಳೆಯದಂತೆ ರೈತರಲ್ಲಿ ಜಾಗೃತಿ ಮೂಡಿಸಬೇಕು. ನೆರೆ ರಾಜ್ಯಗಳಲ್ಲೂ ಬರ ಇರುವುದರಿಂದ ಮೇವಿನ ಲಭ್ಯತೆ ಕಡಿಮೆಯಿದೆ. ಆದ್ದರಿಂದ ಪಶುಸಂಗೋಪನೆ ಇಲಾಖೆಯು ಸಕ್ರಿಯವಾಗಿ ಕಾರ್ಯನಿರ್ವಹಿಸಿ, ನೀರಿನ ಮೂಲ ಇರುವ ರೈತರಿಗೆ ಮೇವಿನ ಬೀಜ ವಿತರಿಸಬೇಕು ಹಾಗೂ ಮೇವು ಬೆಳೆದ ರೈತರಿಂದ ನೇರವಾಗಿ ಖರೀದಿಸಬೇಕು ಎಂದು ತಿಳಿಸಿದರು.
ಪ್ರತಿವಾರ ಟಾಸ್ಕ್‌ಫೋರ್ಸ್ ಸಭೆ ನಡೆಸಿ:
ಕಳೆದ 2023ರಲ್ಲಿ ಜಲಾಶಯಗಳು ತುಂಬಿದ್ದರಿಂದ ಬರ ಪರಿಸ್ಥಿತಿ ಅಷ್ಟಾಗಿ ತಟ್ಟಿರಲಿಲ್ಲ. ಆದರೆ ಈ ಬಾರಿ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದ್ದು, ಜಲಾಶಯಗಳು ಖಾಲಿಯಾಗಿವೆ. ಆದ್ದರಿಂದ ಅಧಿಕಾರಿಗಳು ಅತ್ಯಂತ ಗಂಭೀರವಾಗಿ ಕೆಲಸ ಮಾಡಬೇಕು. ಹೊಸ ಬೋರ್‌ವೆಲ್ ಕೊರೆಸುವ ಕುರಿತು ಟಾಸ್ಕ್‌ಫೋರ್ಸ್‌ನಲ್ಲಿ ತೀರ್ಮಾನ ಕೈಗೊಳ್ಳಬೇಕು ಮತ್ತು ಪ್ರತಿ ಜಿಲ್ಲೆಯಲ್ಲೂ ವಾರಕ್ಕೊಮ್ಮೆ ಕಡ್ಡಾಯವಾಗಿ ಟಾಸ್ಕ್‌ಫೋರ್ಸ್ ಸಭೆ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಬೇಕು ಎಂದು ಆದೇಶಿದ್ದಾರೆ.
