ಬೆಂಗಳೂರು: ಮೇಕೆದಾಟು ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಯ ಯೋಜನೆಯಾಗಿದ್ದು, ಇದಕ್ಕೆ ತಮಿಳುನಾಡು ಆಕ್ಷೇಪ, ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.
ವಿಕಾಸಸೌಧದಲ್ಲಿಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿದ ಅವರು, ಕುಡಿಯುವ ನೀರು ಪ್ರತಿಯೊಬ್ಬರ ಮೂಲಭೂತ ಹಕ್ಕು, ರಾಜಕೀಯ ಕಾರಣಕ್ಕಾಗಿ ವಿರೋಧ ಮಾಡುವುದು ಸರ್ವಥಾ ಸಮರ್ಥನೀಯವಲ್ಲ ಎಂದರು.
ಬೆಂಗಳೂರಿನಲ್ಲಿ 1 ಕೋಟಿಗೂ ಹೆಚ್ಚು ಜನರಿದ್ದು, ಕುಡಿಯುವ ನೀರು ಪೂರೈಸಲು ಮತ್ತು ಜಲ ವಿದ್ಯುತ್ ಉತ್ಪಾದಿಸಲು ರಾಜ್ಯ ಸರ್ಕಾರ ಈ ಯೋಜನೆ ರೂಪಿಸಿದ್ದು, ಈ ಯೋಜನೆಯಿಂದ ತಮಿಳುನಾಡಿಗೂ ಲಾಭವಾಗುತ್ತದೆ. ಹೀಗಾಗಿ ನೆರೆ ರಾಜ್ಯ ಬೆಂಬಲ ನೀಡಬೇಕೇ ಹೊರತು ವಿರೋಧ ಮಾಡಬಾರದು ಎಂದರು.
