ಬೆಂಗಳೂರು :ರಾಜ್ಯದ 63 ಗಡಿ ತಾಲ್ಲೂಕುಗಳು ಹಾಗೂ ನೆರೆ ರಾಜ್ಯಗಳಲ್ಲಿರುವ 6 ಪ್ರಮುಖ ಕನ್ನಡ ಪ್ರದೇಶಗಳ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕøತಿಕ ಪರಿಸ್ಥಿತಿಯ ಕುರಿತು ಹಂಪಿ ಕನ್ನಡ ವಿಶ್ವವಿದ್ಯಾಲಯವು ಸಿದ್ಧಪಡಿಸಿದ ‘ಸಮೀಕ್ಷೆ ವರದಿ-2026′ ಅನ್ನು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ.
ಹಂಪಿ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಪ್ರೊ. ಎನ್. ಚಿನ್ನಸ್ವಾಮಿ ಸೋಸಲೆ ಅವರ ನೇತೃತ್ವದ ಅಧ್ಯಯನ ತಂಡವು ಈ ವರದಿಯನ್ನು ಕ್ರೋಢೀಕರಿಸಿ, ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರದ ಅವರಿಗೆ ಹಸ್ತಾಂತರಿಸಿತು.
ವರದಿಯ ಪ್ರಮುಖ ಶಿಫಾರಸ್ಸುಗಳು:
ಶೈಕ್ಷಣಿಕ ಕ್ಷೇತ್ರದ ಸುಧಾರಣೆಗಳು:
ಶಾಲೆಗಳ ದುರಸ್ತಿ ಹಾಗೂ ಮೂಲಸೌಕರ್ಯ: ಗಡಿ ಭಾಗದ ಶೇ. 90ರಷ್ಟು ಶಾಲೆಗಳು ಶಿಥಿಲಗೊಂಡಿದ್ದು, ನೂತನ ಕಟ್ಟಡಗಳ ನಿರ್ಮಾಣ, ದುರಸ್ತಿ ಮತ್ತು ಮೂಲಸೌಕರ್ಯ ಕಲ್ಪಿಸಲು ಆದ್ಯತೆಯ ಮೇರೆಗೆ ಅನುದಾನ ನೀಡಬೇಕು.
ಕನ್ನಡ ಮಾಧ್ಯಮ ವಸತಿ ಶಾಲೆಗಳು: ಗಡಿ ತಾಲ್ಲೂಕುಗಳ ಪ್ರತಿ ಹೋಬಳಿಯಲ್ಲೂ ಕನಿಷ್ಠ ಒಂದು ಕನ್ನಡ ಮಾಧ್ಯಮ ವಸತಿ ಶಾಲೆಯನ್ನು ಸ್ಥಾಪಿಸಬೇಕು.
ಶೇ. 5ರಷ್ಟು ಸಮತಲ ಮೀಸಲಾತಿ: ಹೊರರಾಜ್ಯಗಳಲ್ಲಿ ಕನ್ನಡ ಕಲಿತ ಮಕ್ಕಳಿಗೆ ರಾಜ್ಯದ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಶೇ. 5ರಷ್ಟು ಪ್ರತ್ಯೇಕ ಸಮತಲ ಮೀಸಲಾತಿಯೊಂದಿಗೆ ಕಡ್ಡಾಯ ಪ್ರವೇಶಾತಿ ನೀಡಬೇಕು.
ಅಂಗನವಾಡಿ ಹಾಗೂ ಶಿಕ್ಷಕರ ನೇಮಕಾತಿ: ಗಡಿ ಭಾಗಗಳಲ್ಲಿ ಕನ್ನಡ ಅಂಗನವಾಡಿಗಳ ನಿರ್ಮಾಣ ಮತ್ತು ಶಿಕ್ಷಕರ ನೇಮಕಾತಿಗೆ ಆದ್ಯತೆ ನೀಡಬೇಕು. ಹೊರರಾಜ್ಯದ ಕನ್ನಡ ಶಾಲೆಗಳಿಗೆ ಧನಸಹಾಯ ನೀಡಿ ಶಿಕ್ಷಕರನ್ನು ನೇಮಿಸಬೇಕು.
ಪರೀಕ್ಷಾ ಪ್ರಾಧಿಕಾರದ ಷರತ್ತು ವಿನಾಯಿತಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ‘ಕ್ಲಾಸ್ ಸಿ.ಡಿ.’ ಮತ್ತು ‘ಎನ್’ ವರ್ಗಗಳಿಗೆ ಯಾವುದೇ ಮಾತೃಭಾಷೆಯ ಷರತ್ತು ವಿಧಿಸದೆ ಮೀಸಲಾತಿ ಸೀಟುಗಳಿಗೆ ಆದೇಶ ಹೊರಡಿಸಬೇಕು.
ಸಾಮಾಜಿಕ ಕ್ಷೇತ್ರದಲ್ಲಿ ನೆರವು:
ಸಂವಿಧಾನಾತ್ಮಕ ಸೌಲಭ್ಯಗಳು: ಸಂವಿಧಾನದ ಅನುಚ್ಛೇದ 29, 30, 347, 350 ಮತ್ತು 350ಎ ಪ್ರಕಾರ ಭಾಷಾ ಅಲ್ಪಸಂಖ್ಯಾತ ಪ್ರದೇಶಗಳ ಕನ್ನಡಿಗರಿಗೆ ಲಭ್ಯವಾಗಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕು.
371ಎ ಮಾದರಿಯ ವಿಶೇಷ ಸೌಲಭ್ಯ:
371ಎ ಅಡಿಯಲ್ಲಿ ದೊರೆಯುವ ಸೌಲಭ್ಯಗಳ ಮಾದರಿಯಲ್ಲೇ ಹೊರರಾಜ್ಯದ ಕನ್ನಡಿಗರಿಗೂ ವಿಶೇಷ ಸೌಲಭ್ಯಗಳನ್ನು ವಿಸ್ತರಿಸಬೇಕು.
ಸಾಂಸ್ಕøತಿಕ ಉತ್ತೇಜನ:
**ಸಾಂಸ್ಕøತಿಕ ಭವನಗಳ ನಿರ್ಮಾಣ:# ಜತ್ತ, ಅಕ್ಕಲಕೋಟೆ, ಕಾಸರಗೋಡು, ಅದೋನಿ, ಮಂತ್ರಾಲಯ ಹಾಗೂ ಹೊಸೂರಿನಂತಹ ಹೊರರಾಜ್ಯದ ಕನ್ನಡ ಪ್ರದೇಶಗಳಲ್ಲಿ ಪ್ರತಿ ತಿಂಗಳು ವಿಶೇಷ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಹಾಗೂ ಸಾಂಸ್ಕøತಿಕ ಭವನಗಳನ್ನು ನಿರ್ಮಿಸಬೇಕು ಎಂದು ವರದಿಯಲ್ಲಿ ತಿಳಿಸಿದ್ದಾರೆ.
ಈ ಸಮಗ್ರ ವರದಿಯನ್ನು ಶೀಘ್ರದಲ್ಲೇ ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಿ, ಮುಂದಿನ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ ತಿಳಿಸಿದ್ದಾರೆ.
