ಬೆಂಗಳೂರು: ರಾಜ್ಯದ 5927 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವೃತ್ತಿನಿರತ ಯುವಕರನ್ನು ಗುರುತಿಸಿ ಅವರಿಗೆ 3 ರಿಂದ 6 ತಿಂಗಳ ಕೌಶಲ್ಯ ತರಬೇತಿ ನೀಡಿ, ಉದ್ಯೋಗಾರ್ಹತೆ ಹೆಚ್ಚಿಸಲು ಕ್ರಮ ವಹಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹಾಗೂ ಗದಗ ಪಂಚಾಯತ್ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಈಶ್ವರ ಬಿ ಖಂಡ್ರೆ ಸೂಚಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ವಿದೇಶದಲ್ಲೂ ನಮ್ಮ ಗ್ರಾಮೀಣ ಯುವಜನರಿಗೆ ಉದ್ಯೋಗ ಸಿಗುವಂತೆ ಮಾಡಲು ಮತ್ತು ವಿದೇಶದಿಂದ ರಾಜ್ಯಕ್ಕೆ ಬರುವ ಪ್ರವಾಸಿಗರಿಗೆ ಪ್ರವಾಸಿ ತಾಣಗಳಲ್ಲಿ ಗೈಡ್ ಆಗಿ ಸೇವೆ ಸಲ್ಲಿಸಲು ಅನುವಾಗುವಂತೆ ಸ್ಪೋಕನ್ ಇಂಗ್ಲಿಷ್, ಜರ್ಮನ್, ಸ್ಪ್ಯಾನಿಷ್, ರಷ್ಯನ್ ಇತ್ಯಾದಿ ವಿದೇಶೀ ಭಾಷಾ ಸರ್ಟಿಫಿಕೇಟ್ ಕೋರ್ಸ್ ಆರಂಭಿಸುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸಲು ತಿಳಿಸಿದರು.
ವಿಶ್ವವಿದ್ಯಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾಗುವಂತೆ ಮಾಡಲು ಇಂದಿನ ಯುಗಮಾನದ ಅಗತ್ಯಗಳಿಗೆ ಅನುಗುಣವಾಗಿ ಕೃತಕ ಬುದ್ಧಿಮತ್ತೆ ಸೇರಿದಂತೆ ಹೊಸ ಹೊಸ ಕೋರ್ಸ್ ಆರಂಭಿಸಲು ತಜ್ಞರ ಸಮಿತಿ ರಚಿಸಿ ವರದಿ ಪಡೆಯುವಂತೆ ನಿರ್ದೇಶನ ನೀಡಿದರು.
ಯಾವುದೇ ವಿಶ್ವವಿದ್ಯಾನಿಲಯ ಗುಣಮಟ್ಟದ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ವಿಶ್ವಾಸಾರ್ಹತೆ ಗಳಿಸಬೇಕು. ಸ್ಥಾಪನೆಯಾದ 6 -8 ವರ್ಷದಲ್ಲಿ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದು ಅಭಿಪ್ರಾಯಪಟ್ಟ ಈಶ್ವರ ಖಂಡ್ರೆ, ವಿಶ್ವವಿದ್ಯಾಲಯದಲ್ಲಿ ಬೋಧಕರ ಕೊರತೆ ಆಗದಂತೆ ಕ್ರಮ ವಹಿಸಲೂ ಸೂಚಿಸಿದರು.
ವಿ ಬಿ ಜಿ ರಾಮ್ ಜಿ, ಜಲ ಜೀವನ ಮಿಷನ್ ಅಧ್ಯಯನ ಶಿಕ್ಷಣದ ಭಾಗವಾಗಬೇಕು:
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಗ್ರಾಮೀಣ ಪರಿಸರದ ಪರಿಚಯ ಕಡ್ಡಾಯವಾಗಿ ಆಗಬೇಕು. ಈ ನಿಟ್ಟಿನಲ್ಲಿ ಜುಲೈ 1ರಿಂದ ಜಾರಿಗೆ ಬಂದಿರುವ ಹೊಸ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ವಿಬಿಜಿ ರಾಮ್ ಜೀ, ಜಲ ಜೀವನ ಮಿಷನ್, ಹರ್ ಘರ್ ಜಲ್, ಗ್ರಾಮೀಣ ಜೀವನೋಪಾಯ ಅಭಿಯಾನ, ಗ್ರಾಮೀಣ ರಸ್ತೆ, ಸಾಮಾಜಿಕ ಅರಣ್ಯ ಸೇರಿದಂತೆ ಇಲಾಖೆಯ ವಿವಿಧ ಕೇಂದ್ರ ಹಾಗೂ ರಾಜ್ಯ ಪ್ರಾಯೋಜಿತ ಯೋಜನೆಗಳ ಬಗ್ಗೆ ಅಧ್ಯಯನ ಮಾಡಲು ವಿದ್ಯಾರ್ಥಿಗಳಿಗೆ ಪ್ರಾಜೆಕ್ಟ್ ವರ್ಕ್ ನೀಡಬೇಕು ಎಂದು ತಿಳಿಸಿದರು.
ಗ್ರಾಮೀಣಾಭಿವೃದ್ಧಿಗೆ ಮತ್ತು ಗ್ರಾಮೀಣ ಜನರ ಸುಗಮ ಜೀವನಕ್ಕೆ ಮತ್ತು ಜೀವನಮಟ್ಟ ಸುಧಾರಣೆಗೆ ಅನುವಾಗುವಂತೆ ಹೊಸ ಹೊಸ ಪರಿಕಲ್ಪನೆಗಳನ್ನು ನೀಡಲು ಗದಗ ವಿವಿಯ ವಿದ್ಯಾರ್ಥಿಗಳಿಗೆ ಹ್ಯಾಕಥಾನ್ ರೀತಿಯಲ್ಲಿ ಸ್ಪರ್ಧೆಗಳನ್ನು ನಡೆಸುವಂತೆಯೂ ಸೂಚಿಸಿದರು.
ಆವರಣ ಗೋಡೆ ನಿರ್ಮಿಸಲು ಸೂಚನೆ:
ಗದಗದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಸುಮಾರು 353 ಎಕರೆ ಪ್ರದೇಶಕ್ಕೂ ಆವರಣ ಗೋಡೆ ನಿರ್ಮಿಸಿ ಒತ್ತುವರಿ ಆಗದಂತೆ ಕ್ರಮ ವಹಿಸಲು ಮತ್ತು ವಿವಿ ಆವರಣದಲ್ಲಿ ವಿವಿಧ ಪ್ರಭೇದದ ಗಿಡ ಮರ ಬೆಳೆಸಿ ಹಸಿರು ಹೊದಿಕೆ ಹೆಚ್ಚಿಸಲು, ಸ್ಥಳೀಯ ಪವನ ವಿದ್ಯುತ್ ಕಂಪನಿಗಳ ಸಿಎಸ್ಆರ್ ನಿಧಿಯ ನೆರವು ಪಡೆಯಲು ಈಶ್ವರ ಖಂಡ್ರೆ ಸೂಚಿಸಿದರು.
ಸಭೆಯಲ್ಲಿ ಇಲಾಖೆಯ ಕಾರ್ಯದರ್ಶಿ ಡಿ. ರಂದೀಪ್, ಕುಲಪತಿ ಪ್ರೊ. ಡಾ. ಸುರೇಶ್ ವಿ ನಾಡಗೌಡರ್ ಮತ್ತಿತರರು ಭಾಗಿಯಾಗಿದ್ದರು.
