ಸಮಗ್ರ ಸುದ್ದಿ

ಆಯುರ್ವೇದವನ್ನು ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದೊಂದಿಗೆ ಸಂಯೋಜಿಸಿ ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಬಲಪಡಿಸಬೇಕು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

Share

ಗಜೇಂದ್ರಗಢ:ಆಯುರ್ವೇದವು ವಿಶ್ವದ ಅತ್ಯಂತ ಪ್ರಾಚೀನ ಹಾಗೂ ವೈಜ್ಞಾನಿಕ ವೈದ್ಯಕೀಯ ಪದ್ಧತಿಗಳಲ್ಲಿ ಒಂದಾಗಿದ್ದು, ಆರೋಗ್ಯವಂತನ ಆರೋಗ್ಯವನ್ನು ಕಾಪಾಡುವುದು ಹಾಗೂ ರೋಗಿಯ ರೋಗವನ್ನು ನಿವಾರಿಸುವುದು ಅದರ ಮೂಲ ಉದ್ದೇಶವಾಗಿದೆ. ಭಾರತದ ಈ ಅಮೂಲ್ಯ ಜ್ಞಾನ ಪರಂಪರೆಯನ್ನು ಆಧುನಿಕ ವಿಜ್ಞಾನ, ಸಂಶೋಧನೆ ಮತ್ತು ತಂತ್ರಜ್ಞಾನದೊಂದಿಗೆ ಸಂಯೋಜಿಸಿ ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.

ಗಜೇಂದ್ರಗಢದ ಟಿಟಿಡಿ ಕಲ್ಯಾಣಮಂಟಪದಲ್ಲಿ ಗುರುವಾರ ಭಗವಾನ್ ಮಹಾವೀರ್ ಜೈನ್ ಆಯುರ್ವೇದ ವೈದ್ಯಕೀಯ ಕಾಲೇಜು, ಸ್ನಾತಕೋತ್ತರ ಕೇಂದ್ರ ಮತ್ತು ಆಸ್ಪತ್ರೆ ಆಯೋಜಿಸಿದ್ದ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕರ್ನಾಟಕವು ಜ್ಞಾನ, ಆಧ್ಯಾತ್ಮಿಕತೆ, ವೈದ್ಯಕೀಯ ಹಾಗೂ ಸಂಸ್ಕøತಿಯ ಶ್ರೀಮಂತ ಪರಂಪರೆಯ ನೆಲೆಯಾಗಿದ್ದು, ಭಾರತೀಯ ಜ್ಞಾನ ಸಂಪ್ರದಾಯವನ್ನು ಸಮೃದ್ಧಗೊಳಿಸುವಲ್ಲಿ ರಾಜ್ಯದ ಕೊಡುಗೆ ಅಪಾರವಾಗಿದೆ. ಆಯುರ್ವೇದ, ಯೋಗ ಮತ್ತು ಪ್ರಕೃತಿಚಿಕಿತ್ಸೆಯ ಪರಂಪರೆ ಸಮಾಜದ ಆರೋಗ್ಯ ಮತ್ತು ಯೋಗಕ್ಷೇಮವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಅವರು ತಿಳಿಸಿದರು.

ಇಂದು ಕರ್ನಾಟಕವು ದೇಶದ ಪ್ರಮುಖ ಉನ್ನತ ಶಿಕ್ಷಣ ಹಾಗೂ ವೈದ್ಯಕೀಯ ಶಿಕ್ಷಣ ಕೇಂದ್ರವಾಗಿ ಬೆಳೆಯುತ್ತಿದ್ದು, ಇಲ್ಲಿನ ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು ಮತ್ತು ವೈದ್ಯಕೀಯ ಕಾಲೇಜುಗಳು ದೇಶದ ಯುವ ಪ್ರತಿಭೆಗಳಿಗೆ ಹೊಸ ಅವಕಾಶಗಳನ್ನು ಕಲ್ಪಿಸುತ್ತಿವೆ ಎಂದು ಹೇಳಿದರು.

ಘಟಿಕೋತ್ಸವದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿದ ರಾಜ್ಯಪಾಲರು, ಇಂದು ಅವರು ಕೇವಲ ಪದವಿಯನ್ನು ಮಾತ್ರ ಪಡೆಯುತ್ತಿಲ್ಲ; ಜ್ಞಾನದೊಂದಿಗೆ ಜವಾಬ್ದಾರಿ, ಅಧಿಕಾರದೊಂದಿಗೆ ಕರ್ತವ್ಯ ಹಾಗೂ ವೈದ್ಯಕೀಯದ ಮೂಲಕ ಮಾನವೀಯ ಸೇವೆ ಸಲ್ಲಿಸುವ ಪವಿತ್ರ ಹೊಣೆಗಾರಿಕೆಯನ್ನು ಸ್ವೀಕರಿಸುತ್ತಿದ್ದಾರೆ ಎಂದು ಹೇಳಿ, ವಿದ್ಯಾರ್ಥಿಗಳ ಯಶಸ್ಸಿನ ಹಿಂದೆ ಶ್ರಮಿಸಿದ ಪೋಷಕರು, ಶಿಕ್ಷಕರು ಹಾಗೂ ಕುಟುಂಬದ ಸದಸ್ಯರನ್ನು ಅಭಿನಂದಿಸಿದರು.

ಭಾರತೀಯ ಸಂಸ್ಕøತಿಯಲ್ಲಿ ವೈದ್ಯರನ್ನು “ವೈದ್ಯ ನಾರಾಯಣೋ ಹರಿ” ಎಂದು ಗೌರವಿಸಲಾಗುತ್ತದೆ ಎಂದು ಉಲ್ಲೇಖಿಸಿದ ಅವರು, ಆಚಾರ್ಯ ಚರಕರು ವೈದ್ಯರ ಧರ್ಮವನ್ನು ಕರುಣೆ ಮತ್ತು ನಿಸ್ವಾರ್ಥ ಸೇವೆಯ ಮೂಲಕ ವಿವರಿಸಿದ್ದಾರೆ ಎಂದರು. ಇದೇ ಸಂದೇಶವು ಭಗವಾನ್ ಮಹಾವೀರರ “ಅಹಿಂಸಾ ಪರಮೋ ಧಮರ್ಃ” ಎಂಬ ತತ್ವದೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ. ಪ್ರತಿಯೊಬ್ಬ ಜೀವಿಯ ನೋವನ್ನು ನಿವಾರಿಸಿ, ಜೀವ ರಕ್ಷಿಸುವುದೇ ವೈದ್ಯರ ನಿಜವಾದ ಧರ್ಮವಾಗಬೇಕು ಎಂದು ತಿಳಿಸಿದರು.

ಆಯುರ್ವೇದವು ಅಥರ್ವವೇದ, ಚರಕ ಸಂಹಿತೆ, ಸುಶ್ರುತ ಸಂಹಿತೆ ಹಾಗೂ ಅμÁ್ಟಂಗ ಹೃದಯದಂತಹ ಮಹತ್ವದ ಗ್ರಂಥಗಳ ಆಧಾರದ ಮೇಲೆ ರೂಪುಗೊಂಡ ಸಮಗ್ರ ವೈದ್ಯಕೀಯ ವ್ಯವಸ್ಥೆಯಾಗಿದ್ದು, ದೇಹ, ಮನಸ್ಸು, ಆತ್ಮ, ಪ್ರಕೃತಿ ಹಾಗೂ ಪರಿಸರದ ನಡುವಿನ ಸಮತೋಲನವನ್ನು ಪ್ರತಿಪಾದಿಸುತ್ತದೆ. ಸಾವಿರಾರು ವರ್ಷಗಳ ಹಿಂದೆಯೇ ಭಾರತವು ಸಮಗ್ರ ಆರೋಗ್ಯದ ಪರಿಕಲ್ಪನೆಯನ್ನು ಜಗತ್ತಿಗೆ ಪರಿಚಯಿಸಿದ್ದು, ಇಂದು ಜಗತ್ತು ಅನುಸರಿಸುತ್ತಿರುವ ಅನೇಕ ಆರೋಗ್ಯ ತತ್ವಗಳು ಆಯುರ್ವೇದದಲ್ಲಿ ಅಡಕವಾಗಿವೆ. ಜೀವನಶೈಲಿ ಸಂಬಂಧಿತ ಕಾಯಿಲೆಗಳು, ಮಾನಸಿಕ ಒತ್ತಡ, ಸ್ಥೂಲಕಾಯ, ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳು ವಿಶ್ವದಾದ್ಯಂತ ಹೆಚ್ಚುತ್ತಿರುವ ಸಂದರ್ಭದಲ್ಲಿ ಆಯುರ್ವೇದದ ಮಹತ್ವ ಮತ್ತಷ್ಟು ಹೆಚ್ಚಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಯೋಗ ಮತ್ತು ಆಯುರ್ವೇದವು ಭಾರತದ ಅಮೂಲ್ಯ ಪರಂಪರೆಯಾಗಿದ್ದು, ಇಂದು ಇಡೀ ಜಗತ್ತು ಭಾರತದತ್ತ ವಿಶ್ವಾಸದಿಂದ ನೋಡುತ್ತಿದೆ.”ಸಂಪ್ರದಾಯ ನಮ್ಮ ಹೆಮ್ಮೆ, ವಿಜ್ಞಾನ ನಮ್ಮ ಶಕ್ತಿ ಮತ್ತು ಸಂಶೋಧನೆ ನಮ್ಮ ಭವಿಷ್ಯ”. ಭಾರತೀಯ ವೈದ್ಯಕೀಯ ಜ್ಞಾನವನ್ನು ಆಧುನಿಕ ವೈಜ್ಞಾನಿಕ ಸಂಶೋಧನೆ ಮತ್ತು ತಂತ್ರಜ್ಞಾನದೊಂದಿಗೆ ಸಂಯೋಜಿಸುವ ಅಗತ್ಯವನ್ನು ಒತ್ತಿ ಹೇಳಿದರು. ಕೃತಕ ಬುದ್ಧಿಮತ್ತೆ, ಜೈವಿಕ ತಂತ್ರಜ್ಞಾನ, ಜೀನೋಮಿಕ್ಸ್, ಡಿಜಿಟಲ್ ಆರೋಗ್ಯ, ಟೆಲಿಮೆಡಿಸಿನ್ ಹಾಗೂ ಆಧುನಿಕ ರೋಗನಿರ್ಣಯ ತಂತ್ರಜ್ಞಾನಗಳೊಂದಿಗೆ ಆಯುರ್ವೇದ ವಿದ್ಯಾರ್ಥಿಗಳು ಹೆಜ್ಜೆ ಹಾಕಬೇಕು. ಆಯುರ್ವೇದ ಔಷಧಗಳು ಹಾಗೂ ಚಿಕಿತ್ಸಾ ವಿಧಾನಗಳ ವೈಜ್ಞಾನಿಕ ಅಧ್ಯಯನವನ್ನು ಉತ್ತೇಜಿಸುವ ಜೊತೆಗೆ ಔಷಧಗಳ ಗುಣಮಟ್ಟ, ಸುರಕ್ಷತೆ ಹಾಗೂ ವಿಶ್ವಾಸಾರ್ಹ ವೈಜ್ಞಾನಿಕ ಪುರಾವೆಗಳನ್ನು ಬಲಪಡಿಸಬೇಕು ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿ–2020 ಬಹುಶಿಸ್ತೀಯ ಶಿಕ್ಷಣ, ಸಂಶೋಧನೆ, ನಾವೀನ್ಯತೆ ಹಾಗೂ ಭಾರತೀಯ ಜ್ಞಾನ ಸಂಪ್ರದಾಯಗಳ ಏಕೀಕರಣಕ್ಕೆ ವಿಶೇಷ ಒತ್ತು ನೀಡುತ್ತದೆ. ಆಯುರ್ವೇದ ಶಿಕ್ಷಣವನ್ನು ಆಧುನಿಕ ಸಂಶೋಧನೆ, ಜೈವಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಡಿಜಿಟಲ್ ಆರೋಗ್ಯ ಹಾಗೂ ಪುರಾವೆ ಆಧಾರಿತ ವೈದ್ಯಕೀಯದೊಂದಿಗೆ ಸಂಯೋಜಿಸುವುದು ಕಾಲದ ಅಗತ್ಯವಾಗಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯಂತೆ ಕೇಂದ್ರ ಸರ್ಕಾರ ಆಯುμï ಸಚಿವಾಲಯವನ್ನು ಬಲಪಡಿಸಿದ್ದು, ರಾಷ್ಟ್ರೀಯ ಆಯುμï ಮಿಷನ್, ಆಯುμÁ್ಮನ್ ಭಾರತ್, ಡಿಜಿಟಲ್ ಹೆಲ್ತ್ ಮಿಷನ್ ಸೇರಿದಂತೆ ಹಲವು ಯೋಜನೆಗಳ ಮೂಲಕ ಭಾರತದ ಸಾಂಪ್ರದಾಯಿಕ ವೈದ್ಯಕೀಯ ವ್ಯವಸ್ಥೆಯನ್ನು ಜಾಗತಿಕ ಮಟ್ಟದಲ್ಲಿ ಉತ್ತೇಜಿಸಲಾಗುತ್ತಿದೆ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರು, ಯಶಸ್ವಿ ವೈದ್ಯರಾಗಲು ಜ್ಞಾನ, ಕೌಶಲ್ಯ, ಸಂಶೋಧನಾ ಮನೋಭಾವ, ನೀತಿಬದ್ಧತೆ ಹಾಗೂ ಕರುಣೆ ಎಂಬ ಐದು ಗುಣಗಳು ಅತ್ಯಗತ್ಯ. ಈ ಗುಣಗಳನ್ನು ಅಳವಡಿಸಿಕೊಂಡ ವೈದ್ಯರು ಸಮಾಜದ ವಿಶ್ವಾಸವನ್ನು ಗಳಿಸುವುದರ ಜೊತೆಗೆ ರಾಷ್ಟ್ರ ನಿರ್ಮಾಣದಲ್ಲಿಯೂ ಮಹತ್ವದ ಪಾತ್ರ ವಹಿಸುತ್ತಾರೆ ಎಂದು ಅವರು ತಿಳಿಸಿದರು.

ಭಗವಾನ್ ಮಹಾವೀರರ ಆದರ್ಶಗಳೊಂದಿಗೆ ಸಂಬಂಧ ಹೊಂದಿರುವ ಶಿಕ್ಷಣ ಸಂಸ್ಥೆಯಿಂದ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಸತ್ಯ, ಸಂಯಮ, ಕರುಣೆ, ಸೇವೆ ಹಾಗೂ ಸ್ವಯಂಶಿಸ್ತು ಎಂಬ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.

“ನಿಮ್ಮ ಜ್ಞಾನದೊಂದಿಗೆ ಕರುಣೆ, ನಿಮ್ಮ ಕೌಶಲ್ಯದೊಂದಿಗೆ ನೀತಿಬದ್ಧತೆ ಹಾಗೂ ನಿಮ್ಮ ಜೀವನದಲ್ಲಿ ಸೇವಾ ಮನೋಭಾವ ಬೆರೆತಾಗ ಮಾತ್ರ ನಿಮ್ಮ ಯಶಸ್ಸು ವೈಯಕ್ತಿಕ ಸಾಧನೆಯμÉ್ಟೀ ಅಲ್ಲ, ರಾಷ್ಟ್ರದ ಸಾಧನೆಯಾಗುತ್ತದೆ. ಮಾನವೀಯ ಸೇವೆಯ ಮೂಲಕ ರಾಷ್ಟ್ರದ ಕೀರ್ತಿಯನ್ನು ಹೆಚ್ಚಿಸಿ, ಸಮಾಜದಲ್ಲಿ ಭರವಸೆ ಮತ್ತು ವಿಶ್ವಾಸ ಮೂಡಿಸುವ ವೈದ್ಯರಾಗಿ ಬೆಳೆಯಿರಿ,” ಎಂದು ರಾಜ್ಯಪಾಲರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಭಗವಾನ್ ಮಹಾವೀರ್ ಜೈನ್ ಆಯುರ್ವೇದ ವೈದ್ಯಕೀಯ ಕಾಲೇಜಿನ ಅಧ್ಯಕ್ಷರಾದ ಅಶೋಕ್ ಕುಮಾರ್ ಬಾಗ್ಮಾರ್, ಕಾರ್ಯದರ್ಶಿ ಅಜಿತ್ ಕುಮಾರ್ ಬಾಗ್ಮಾರ್, ಶ್ರೀಮತಿ ತಾರಾಬಾಯಿ ಬಾಗ್ಮಾರ್, ನಿರ್ದೇಶಕರ ಮಂಡಳಿಯ ಸದಸ್ಯರಾದ ಸಂದೀಪ್ ಖಿವ್ಸಾರ್, ವರ್ಧಮಾನ ಬಾಗ್ಮಾರ್, ಪ್ರಾಂಶುಪಾಲರಾದ ಡಾ. ಎನ್.ಎಚ್. ಕುಲಕರ್ಣಿ, ಆಡಳಿತ ಮಂಡಳಿಯ ಸದಸ್ಯರು, ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.


Share

You cannot copy content of this page