ಸಮಗ್ರ ಸುದ್ದಿ

ಅನುಗ್ರಹ ಯೋಜನೆಯ ಬಾಕಿ ಹಣ ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಗೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಮನವಿ

Share

ಬೆಂಗಳೂರು: ರಾಜ್ಯದಲ್ಲಿ ಹೈನುಗಾರಿಕೆ, ಕುರಿ ಹಾಗೂ ಮೇಕೆ ಸಾಕಾಣಿಕೆಯನ್ನು ಅವಲಂಬಿಸಿರುವ ಲಕ್ಷಾಂತರ ರೈತರು ಮತ್ತು ಕುರಿಗಾಹಿಗಳ ಜೀವನೋಪಾಯವನ್ನು ಬಲಪಡಿಸುವ ಉದ್ದೇಶದಿಂದ 2013-18ರ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ನಮ್ಮ ಸರ್ಕಾರವು ಅನುಗ್ರಹ ಯೋಜನೆಯನ್ನು ಜಾರಿಗೆ ತಂದಿತ್ತು.

ಆದರೆ ಬಳಿಕ ಅಧಿಕಾರಕ್ಕೆ ಬಂದ ಸರ್ಕಾರಗಳು ರೈತರಿಗೆ ಆಸರೆಯಾಗಿದ್ದ ಈ ಮಹತ್ವಾಕಾಂಕ್ಷಿ ಯೋಜನೆ ಅನುದಾನದ ಕೊರತೆಯಿಂದಾಗಿ ನೆನಗುದಿಗೆ ಬಿದ್ದಿತ್ತು. ಹೀಗಾಗಿ ಯೋಜನೆಯನ್ನು ಸ್ಥಗಿತಗೊಳಿಸಿದ್ದರು. 2023ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರೈತರ ಹಿತದೃಷ್ಟಿಯಿಂದ ಈ ಯೋಜನೆಯನ್ನು ಮತ್ತೊಮ್ಮೆ ಜಾರಿಗೊಳಿಸಲಾಯಿತು.

2023ರಿಂದ ಇಲ್ಲಿಯವರೆಗೆ ಈ ಯೋಜನೆಗಾಗಿ ₹134 ಕೋಟಿ ಅನುದಾನವನ್ನು ಬಿಡುಗಡೆ ಮಾಡಿ ವೆಚ್ಚ ಮಾಡಲಾಗಿದೆ. ಇನ್ನೂ ₹97.57 ಕೋಟಿ ಅನುದಾನ ಬಿಡುಗಡೆ ಆಗಬೇಕಿದೆ. ಕೃಷಿಯ ಜೊತೆಗೆ ಪಶುಸಂಗೋಪನೆಯನ್ನು ಕಸುಬಾಗಿಸಿಕೊಂಡಿರುವ ರೈತರ ಹಿತಾಸಕ್ತಿಯನ್ನು ಕಾಪಾಡುವ ದೃಷ್ಟಿಯಿಂದ, ಬಾಕಿ ಇರುವ ₹97.57 ಕೋಟಿ ಅನುದಾನವನ್ನು ತ್ವರಿತವಾಗಿ ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಗೆ ಪತ್ರ ಬರೆಯಲಾಗಿದೆ.

ಸಣ್ಣ ಪ್ರಾಣಿಗಳ ಸಾವಿಗೆ ಪರಿಹಾರ ಧನ ವಿತರಿಸಿದ ವಿವರ:

ಅನುಗ್ರಹ ಯೋಜನೆಯಡಿ 2023-24ನೇ ಸಾಲಿನಲ್ಲಿ ಆಕಸ್ಮಿಕವಾಗಿ ಮೃತಪಟ್ಟ 30,705 ಕುರಿ ಹಾಗೂ ಮೇಕೆಗಳಿಗೆ ₹14.93 ಕೋಟಿ, 2024-25ನೇ ಸಾಲಿನಲ್ಲಿ ಮೃತಪಟ್ಟ 89,481 ಸಣ್ಣ ಪ್ರಾಣಿಗಳಿಗೆ ₹32.87 ಕೋಟಿ, 2025-26ನೇ ಸಾಲಿನಲ್ಲಿ ಮೃತಪಟ್ಟ 74,801 ಕುರಿ ಹಾಗೂ ಮೇಕೆಗಳಿಗೆ ₹29 ಕೋಟಿ, ಹಾಗೂ 2026-27ನೇ ಸಾಲಿನಲ್ಲಿ ಕಳೆದ ತಿಂಗಳವರೆಗೆ ಮೃತಪಟ್ಟ 22,579 ಕುರಿ ಹಾಗೂ ಮೇಕೆಗಳಿಗೆ ₹7.25 ಕೋಟಿ ಪರಿಹಾರ ಧನವನ್ನು ವಿತರಿಸಲಾಗಿದೆ.

ದೊಡ್ಡ ಪ್ರಾಣಿಗಳ ಸಾವಿಗೆ ಪರಿಹಾರ ಧನ ವಿತರಿಸಿದ ವಿವರ

ಅನುಗ್ರಹ ಯೋಜನೆಯಡಿ 2023-24ನೇ ಸಾಲಿನಲ್ಲಿ ಮೃತಪಟ್ಟ 12,965 ಹಸು, ಎಮ್ಮೆ ಹಾಗೂ ಇತರ ದೊಡ್ಡ ಜಾನುವಾರುಗಳಿಗೆ ₹12.88 ಕೋಟಿ, 2024-25ನೇ ಸಾಲಿನಲ್ಲಿ ಮೃತಪಟ್ಟ 30,289 ದೊಡ್ಡ ಜಾನುವಾರುಗಳಿಗೆ ₹14.99 ಕೋಟಿ, 2025-26ನೇ ಸಾಲಿನಲ್ಲಿ ಮೃತಪಟ್ಟ 32,804 ದೊಡ್ಡ ಜಾನುವಾರುಗಳಿಗೆ ₹20.85 ಕೋಟಿ, ಹಾಗೂ 2026-27ನೇ ಸಾಲಿನಲ್ಲಿ ಇದುವರೆಗೆ ಮೃತಪಟ್ಟ 6,202 ದೊಡ್ಡ ಜಾನುವಾರುಗಳಿಗೆ ₹5.25 ಕೋಟಿ ಪರಿಹಾರ ಧನವನ್ನು ವಿತರಿಸಲಾಗಿದೆ.

ರೈತರು ರಾಜ್ಯ ಸರ್ಕಾರದಿಂದ ಪರಿಹಾರದ ನಿರೀಕ್ಷೆಯಲ್ಲಿದ್ದು, ಶೀಘ್ರ ಅನುದಾನವನ್ನು ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಗೆ ಕೋರಿದ್ದೇನೆ ಎಂದು ತಿಳಿಸಿದ್ದಾರೆ.


Share

You cannot copy content of this page