ಬೆಂಗಳೂರು :ಪೋಲ್ ವಾಲ್ಟ್ ಕ್ರೀಡೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಅಮೋಘ ಸಾಧನೆ ಮಾಡುವ ಮೂಲಕ ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ಗೆ ಆಯ್ಕೆಯಾಗಿರುವ ಸಿಂಧುಶ್ರೀ ಗಣೇಶ್ ಅವರಿಗೆ ಉಪ ಮುಖ್ಯಮಂತ್ರಿಗಳು, ಕಂದಾಯ ಮತ್ತು ಕ್ರೀಡಾ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಅಂತರರಾಷ್ಟ್ರೀಯ ಗುಣಮಟ್ಟದ 3 ಪೋಲ್‌ಗಳನ್ನು ವಿತರಿಸಿ, ಶುಭಹಾರೈಸಿದರು
ಆ ಬಳಿಕ ನಡೆದ ಮಾಧ್ಯಮಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಸಿಂಧುಶ್ರೀ ಅವರು ಪೋಲ್ ವಾಲ್ಟ್ ಕ್ರೀಡೆಯಲ್ಲಿ ಸಾಧನೆ ಮಾಡಿದ್ದಾರೆ. ಅವರಿಗಾಗಿ ಕರ್ನಾಟಕ ರಾಜ್ಯ ಕ್ರೀಡಾ ಮತ್ತು ಯುವಸಬಲೀಕರಣ ಇಲಾಖೆ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರದ ವತಿಯಿಂದ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಬಳಸುವ ಗುಣಮಟ್ಟದ 3 ಹೊಸ ಪೋಲ್‌ಗಳನ್ನು ವಿದೇಶದಿಂದ ತರಿಸಿ ಕೊಡಲಾಗಿದೆ. ಅದರ ಜೊತೆಗೆ 5 ಲಕ್ಷ ರೂ. ಹಣವನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.
ಕೂಲಿ ಕೆಲಸ ಮಾಡುತ್ತಿದ್ದ ಗಣೇಶ್ ಅವರಿಗೆ ತಮ್ಮ ಪುತ್ರಿಯನ್ನು ಕ್ರೀಡಾಪಟುವನ್ನಾಗಿ ಮಾಡುವ ಆಸೆಯಿತ್ತು. ಅದಕ್ಕಾಗಿ ಚೆನ್ನಾಗಿ ತರಬೇತಿಯನ್ನು ಕೊಡಿಸುತ್ತಾರೆ. ಆನಂತರ ಕ್ರೀಡಾಸಕ್ತಿದಾರರು ಗಮನಿಸಿ, ಚೆನ್ನಾಗಿ ಓಡುತ್ತೀಯ. ಬೆಂಗಳೂರಿನಲ್ಲಿ ತರಬೇತಿ ಪಡೆಯುವಂತೆ ಹೇಳಿ ಆಕೆಯನ್ನು ಕಳುಹಿಸಿಕೊಡುತ್ತಾರೆ. ಆಕೆಯ ಟ್ಯಾಲೆಂಟ್ ಗುರುತಿಸಿ ಪೋಲೋ ವಾಲ್ಟ್‌ಗೆ ತಯಾರಿ ಮಾಡುತ್ತಾರೆ. ಸ್ಪೋರ್ಟ್ಸ್ ಆಥಾರಿಟಿ ಆಫ್ ಇಂಡಿಯಾ ಸಂಸ್ಥೆಯಿಂದ ತರಬೇತಿ ಪಡೆದುಕೊಂಡು ಸಿಂಧುಶ್ರೀ ಗಣೇಶ್ ಇದೀಗ ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಜಪಾನ್‌ನಲ್ಲಿ ನಡೆಯಲಿರುವ ಏಷ್ಯಾನ್ ಗೇಮ್ಸ್‌ನಲ್ಲಿ ಪೋಲೋ ವಾಲ್ಟ್ ಕ್ರೀಡಾಪಟುವಾಗಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಂದು ವಿವರಿಸಿದರು.
ಯುವತಿಯ ತಂದೆ ಗಣೇಶ್ ಅವರು ಈಗ ನಮ್ಮ ಜೊತೆಗಿಲ್ಲ. ಆದರೆ ತಂದೆಯ ಆಸೆಯನ್ನು ಸಿಂಧುಶ್ರೀ ಪೂರೈಸಿದ್ದಾರೆ. ತಾಯಿ ಮನೆ ಕೆಲಸ ಮಾಡಿ, ಪುತ್ರಿಯನ್ನು ಪ್ರೋತ್ಸಾಹಿಸಿದ್ದಾರೆ. ಬಡ ಕುಟುಂಬದ ಈ ಹೆಣ್ಣು ಮಗಳಿಗೆ ಶುಭವಾಗಲಿ. ಏಷ್ಯನ್ ಗೇಮ್ಸ್‌ನಲ್ಲಿ ಸಾಧನೆ ಮಾಡಿ, ದೇಶಕ್ಕೆ ಪದಕ ತರುವ ಮೂಲಕ ನಮ್ಮ ನಾಡಿಗೆ ಕೀರ್ತಿ ಹೆಚ್ಚಿಸಲು ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಯವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಅವರು, ಆಯುಕ್ತರಾದ ಎಂ.ಎನ್.ಅನುಚೇತ್, ಸರ್ಕಾರಿ ವಿಮಾನಯಾನ ತರಬೇತಿ ಶಾಲೆಯ ನಿರ್ದೇಶಕರಾದ ಬಸವರಾಜ್ ಮುಂತಾದವರು ಉಪಸ್ಥಿತರಿದ್ದರು.
