ಸಮಗ್ರ ಸುದ್ದಿ

ಜು.26ಕ್ಕೆ ಸಂಗೀತ, ನೃತ್ಯ ಸಿರಿಯ ವೈಭವ: ಉದಯೋನ್ಮುಖ ಕಲಾವಿದರ ಕಲಾ ಸಂಗಮ | ‘ಪರಮ್ ವಿಹಾರ’ ಸರಣಿಯ 14ನೇ ಆವೃತ್ತಿ ಕಾರ್ಯಕ್ರಮ

Share

ಬೆಂಗಳೂರು: ರಾಜಧಾನಿಯ ಪ್ರಮುಖ ಸಾಂಸ್ಕೃತಿಕ ಕೇಂದ್ರಗಳಲ್ಲೊಂದಾದ ಜಯನಗರದ ‘ಸನಾತನ ಕಲಾಕ್ಷೇತ್ರ’ದಲ್ಲಿ ‘ಪರಮ್ ಕಲ್ಚರ್’ (Param Culture) ವತಿಯಿಂದ ಆಯೋಜಿಸಲ್ಪಡುತ್ತಿರುವ ‘ಪರಮ್ ವಿಹಾರ’ (Param Vihaara) ಸಾಂಸ್ಕೃತಿಕ ಸರಣಿಯ 14ನೇ ಆವೃತ್ತಿಯ ಕಾರ್ಯಕ್ರಮವು ಜುಲೈ 26ರ ಭಾನುವಾರ ಸಂಜೆ 6 ಗಂಟೆಯಿಂದ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.

ಪ್ರತಿ ತಿಂಗಳ ನಾಲ್ಕನೇ ಭಾನುವಾರ ನಡೆಯುವ ‘ಪರಮ್ ವಿಹಾರ’ ಕಾರ್ಯಕ್ರಮವು, ಉದಯೋನ್ಮುಖ ಕಲಾವಿದರಿಗೆ ವೇದಿಕೆ ಕಲ್ಪಿಸಲು ಮತ್ತು ಸುಲಭವಾಗಿ ಪ್ರವೇಶಿಸಬಹುದಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಮುದಾಯದ ಸಹಭಾಗಿತ್ವವನ್ನು ಬೆಳೆಸಲು ‘ಪರಮ್ ಕಲ್ಚರ್’ ಹಮ್ಮಿಕೊಳ್ಳುತ್ತಿರುವ ಒಂದು ಉತ್ತಮ ಸಾಂಸ್ಕೃತಿಕ ಪ್ರಯತ್ನವಾಗಿದೆ.

ಸಂಗೀತದ ನಾದಲಹರಿ, ನೃತ್ಯ ವೈಭವ:

ಕಾರ್ಯಕ್ರಮದ ಮೊದಲಾರ್ಧದಲ್ಲಿ ಕುಮಾರಿ ಮಾಲವಿ ಗುರುಪ್ರಸನ್ನ ಮತ್ತು ಕುಮಾರಿ ಪ್ರಣವಿ ಗುರುಪ್ರಸನ್ನ ಅವರ ವಾಯೊಲಿನ್ ಜುಗಲ್‌ಬಂದಿ ಕಾರ್ಯಕ್ರಮ ನಡೆಯಲಿದೆ. ಇವರಿಗೆ ಮೃದಂಗದಲ್ಲಿ ಕೃಷ್ಣ ವೇದಾಂತ ಹಾಗೂ ಪಕ್ಕವಾದ್ಯ ಮೋರ್ಸಿಂಗ್‌ನಲ್ಲಿ ಲಿಖಿತ್ ಕೆ.ಎಂ. ಸಾಥ್ ನೀಡಲಿದ್ದಾರೆ.

ನಂತರ ದ್ವಿತೀಯಾರ್ಧದಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯದ ಸಾಂಪ್ರದಾಯಿಕ ಶೈಲಿಯನ್ನು ಬಿಂಬಿಸುವ ಭರತನಾಟ್ಯ ಪ್ರದರ್ಶನವು ಕಲಾಪ್ರೇಮಿಗಳನು ಕಣ್ಮನ ಸೆಳೆಯಲಿದೆ. ಗುರು ಶ್ರೀಮತಿ ಡಾ. ನಾಗಲಕ್ಷ್ಮಿ ನಾಗರಾಜನ್ ಅವರ ಶಿಷ್ಯವೃಂದದಿಂದ ಈ ಆಕರ್ಷಕ ನೃತ್ಯ ಪ್ರದರ್ಶನ ಮೂಡಿಬರಲಿದೆ.

ಹೊಸ ತಲೆಮಾರಿನ ಕಲಾ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಾ, ನಮ್ಮ ಸಾಂಪ್ರದಾಯಿಕ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಾಗೂ ಕಲೆಯ ಮೂಲಕ ಸಮುದಾಯದ ನಿರಂತರ ತೊಡಗಿಸಿಕೊಳ್ಳುವಿಕೆಯನ್ನು ಸಾಧಿಸುವಲ್ಲಿ ‘ಪರಮ್ ಕಲ್ಚರ್’ ತನ್ನ ಬದ್ಧತೆಯನ್ನು ಈ ಕಾರ್ಯಕ್ರಮದ ಮೂಲಕ ಮುಂದುವರಿಸಿದೆ. ಪರಮ್‌ ವಿಹಾರ ಕಾರ್ಯಕ್ರಮಕ್ಕೆ ಪ್ರವೇಶವು ಸಾರ್ವಜನಿಕರಿಗೆ ಉಚಿತವಾಗಿರಲಿದೆ ಎಂದು ಪರಮ್ ಪೌಂಡೇಶನ್ ನ ಮಾಧ್ಯಮ ಸಂಯೋಜಕಿ ದೀಪಾ ಅವರು ತಿಳಿಸಿದ್ದಾರೆ.


Share

You cannot copy content of this page