ಬೆಂಗಳೂರು:ಕೆ.ಆರ್. ಪುರಂನಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗಿನ ಹೊರವರ್ತುಲ ರಸ್ತೆಯನ್ನು (ORR) ಆಮೂಲಾಗ್ರವಾಗಿ ಮೇಲ್ದರ್ಜೆಗೇರಿಸಲು, ಮೂಲಸೌಕರ್ಯ ಸುಧಾರಿಸಲು ಹಾಗೂ ವಾಹನ ದಟ್ಟಣೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರವು ₹450 ಕೋಟಿ ರೂ. ಅನುದಾನ ಮೀಸಲಿಟ್ಟಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಗೋಲ್ಡ್‌ಮನ್ ಸ್ಯಾಕ್ಸ್, ಹೆಲಿಯೊಸ್ ಬಿಸಿನೆಸ್ ಪಾರ್ಕ್, ಕಡುಬೀಸನಹಳ್ಳಿಯಲ್ಲಿ ಹೊರ ವರ್ತುಲ ರಸ್ತೆ ಕಂಪನಿಗಳ ಸಂಘ (ORRCA), ಐಟಿ ಪಾರ್ಕ್ ಮಾಲೀಕರು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಗೂ ಸ್ಥಳೀಯ ಜನಸಾಮಾನ್ಯರೊಂದಿಗೆ ಶನಿವಾರ ಸಮಾಲೋಚನಾ ಸಭೆ ನಡೆಸಲಾಯಿತು.
ಸಭೆಯಲ್ಲಿ ಹೊರ ವರ್ತುಲ ರಸ್ತೆ ವ್ಯಾಪ್ತಿಯಲ್ಲಿರುವ ಪ್ರಮುಖ ಜಂಕ್ಷನ್‌ಗಳು, ಸರ್ವಿಸ್ ರಸ್ತೆಗಳು, ಪಾದಚಾರಿ ಮಾರ್ಗಗಳು, ಮೆಟ್ರೋ ಕಾಮಗಾರಿಗಳು, ಮಳೆನೀರು ಚರಂಡಿಗಳು, ಸಾರ್ವಜನಿಕ ಸಾರಿಗೆ ಸಂಪರ್ಕ, ವಾಹನ ನಿಲುಗಡೆ ವ್ಯವಸ್ಥೆ ಹಾಗೂ ನಾಗರಿಕರ ಸುರಕ್ಷತೆಯನ್ನು ಒಳಗೊಂಡ ಹಲವು ವಿಷಯಗಳ ಕುರಿತು ಸುದೀರ್ಘವಾಗಿ ಚರ್ಚಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಲಾಯಿತು.
ಕಾರಿಡಾರ್ ಎದುರಿಸುತ್ತಿರುವ ಸವಾಲುಗಳು ಹಾಗೂ ಯೋಜನೆಯ ಹಿನ್ನೆಲೆ
ಹೊರವರ್ತುಲ ರಸ್ತೆಯು ದೇಶದ ಆರ್ಥಿಕತೆಗೆ ಮತ್ತು ಐಟಿ ಕ್ಷೇತ್ರದ ಅಭಿವೃದ್ಧಿಗೆ ಅತ್ಯಂತ ಪ್ರಮುಖವಾದ ಕಾರಿಡಾರ್ ಆಗಿದೆ. ಆದರೆ, ಕಳೆದ 30-40 ವರ್ಷಗಳಿಂದ ಅನಧಿಕೃತ ಹಾಗೂ ನಿಯಮಬಾಹಿರವಾಗಿ ಲೇಔಟ್‌ಗಳು ಮತ್ತು ಕಟ್ಟಡಗಳು ನಿರ್ಮಾಣಗೊಂಡಿದ್ದರಿಂದ ಇಂದು ರಸ್ತೆ ಅಗಲ, ಒಳಚರಂಡಿ ಮತ್ತು ಪಾದಚಾರಿ ಮಾರ್ಗಗಳ ಅಭಾವ ಎದುರಾಗಿದೆ. ಉದಾಹರಣೆಗೆ ಜಯನಗರದಲ್ಲಿ ಶೇಕಡಾ 23 ರಷ್ಟು ಜಾಗ ರಸ್ತೆಗೆ ಲಭ್ಯವಿದ್ದರೆ, ಈ ಈಸ್ಟ್ ಝೋನ್‌ನಲ್ಲಿ ಶೇಕಡಾ 8 ರಷ್ಟು ಮಾತ್ರ ಲಭ್ಯವಿದೆ. ಜೊತೆಗೆ ಅನಧಿಕೃತ ಕಟ್ಟಡಗಳಿಂದಾಗಿ ಪಾರ್ಕಿಂಗ್ ಜಾಗವಿಲ್ಲದೆ ವಾಹನಗಳು ರಸ್ತೆಯಲ್ಲೇ ನಿಲ್ಲುವುದರಿಂದ ಹಾಗೂ ನಿಯಮಬಾಹಿರವಾಗಿ ಕ್ರಾಸ್ ಆಗುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗಿದೆ.
ಈ ಸಮಸ್ಯೆಗೆ ಸ್ಪಂದಿಸಿರುವ ಮುಖ್ಯಮಂತ್ರಿಗಳು ಹಾಗೂ ರಾಜ್ಯ ಸರ್ಕಾರವು 450 ಕೋಟಿ ರೂ. ಬಿಡುಗಡೆ ಮಾಡಿದ್ದು, ಅಗತ್ಯವಿದ್ದರೆ ಹೆಚ್ಚುವರಿ ಅನುದಾನ ನೀಡಲು ಬದ್ಧವಾಗಿದೆ. ಕೇವಲ ರಸ್ತೆಯ ಮೇಲ್ಮೈ ಸರಿಪಡಿಸುವುದರಿಂದ ದಟ್ಟಣೆ ಕಡಿಮೆಯಾಗುವುದಿಲ್ಲ, ಬದಲಾಗಿ ಮೂಲಸೌಕರ್ಯ ಸರಿಪಡಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಜಂಕ್ಷನ್‌ಗಳ ವೈಜ್ಞಾನಿಕ ಪುನಾರಚನೆ ಹಾಗೂ ಸಂಚಾರ ಸುಧಾರಣೆ
ಜಂಕ್ಷನ್‌ಗಳಲ್ಲಿ ಉಂಟಾಗುತ್ತಿರುವ ಅಪಾರ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ವೈಜ್ಞಾನಿಕ ಮಾದರಿಯ ಬದಲಾವಣೆಗಳನ್ನು ತರಲಾಗುತ್ತಿದೆ. ಜಂಕ್ಷನ್‌ನ ಕೇಂದ್ರ ಭಾಗದಲ್ಲಿ ವಾಹನಗಳು ನೇರವಾಗಿ ಬಲಕ್ಕೆ ತಿರುಗುವುದನ್ನು ತಡೆದು, ವಾಹನ ಸಂಚಾರವನ್ನು ಸ್ವಲ್ಪ ಮುಂದೆ ಡೈವರ್ಟ್ ಮಾಡಲಾಗುವುದು. ಇದರಿಂದ ವಾಹನಗಳು ಆಪೋಸಿಟ್ ಸರ್ವಿಸ್ ರೋಡ್ ಮೂಲಕ ಅತ್ಯಂತ ಸುಗಮವಾಗಿ ‘ಫ್ರೀ ಲೆಫ್ಟ್’ ಅಥವಾ ಯು-ಟರ್ನ್ ತೆಗೆದುಕೊಳ್ಳಲು ಅನುಕೂಲವಾಗಲಿದೆ. ಪ್ರತಿಯೊಂದು ಜಂಕ್ಷನ್‌ನ ವಿನ್ಯಾಸವೂ ಭಿನ್ನವಾಗಿದ್ದು, ಸ್ಥಳೀಯ ಅಗತ್ಯಕ್ಕೆ ತಕ್ಕಂತೆ ಪ್ರತ್ಯೇಕ ಡಿಸೈನ್ ಸಿದ್ಧಪಡಿಸಲಾಗಿದೆ. ಈ ಬದಲಾವಣೆಗಳನ್ನು ಕಾಯಂ ಮಾಡುವ ಮೊದಲು, 3 ತಿಂಗಳ ಕಾಲ ಆರ್‌ಸಿಸಿ ಬ್ಯಾರಿಕೇಡ್‌ಗಳನ್ನು ಬಳಸಿ ಪ್ರಾಯೋಗಿಕವಾಗಿ (Trial) ಪರಿಶೀಲಿಸಲಾಗುವುದು ಎಂದು ವಿವರಿಸಿದರು.
ಕಾಲ್ನಡಿಗೆ ಸಾರಿಗೆ ಮತ್ತು ನಾಗರಿಕ ಸೌಲಭ್ಯಗಳ ವಿಸ್ತರಣೆ
ಉಪಯೋಗವಿಲ್ಲದೆ ಬಿದ್ದಿರುವ ಹಾಗೂ ಅನಧಿಕೃತ ಚಟುವಟಿಕೆಗಳಿಗೆ ಬಳಕೆಯಾಗುತ್ತಿರುವ ಜಂಕ್ಷನ್ ಸ್ಥಳಗಳನ್ನು ಸ್ವಚ್ಛಗೊಳಿಸಿ, ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗುವುದು. ಅಲ್ಲಿ ಉತ್ತಮ ದೀಪಾಲಂಕಾರ ಹಾಗೂ ಪಾದಚಾರಿಗಳಿಗೆ ಬೇಕಾದ ಸಿವಿಕ್ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು.
ಪಾದಚಾರಿಗಳ ಹಿತದೃಷ್ಟಿಯಿಂದ ಪ್ರಸ್ತುತ ಇರುವ ಮೇಲ್ಮೈ ಆರ್‌ಸಿಸಿ ಡ್ರೈನ್‌ಗಳನ್ನು ತೆರವುಗೊಳಿಸಿ, ಪೈಪ್‌ಗಳ ಮೂಲಕ ಸಬ್-ಸರ್ಫೇಸ್ ಡ್ರೈನೇಜ್ ವ್ಯವಸ್ಥೆ ಮಾಡಲಾಗುವುದು. ಇದರಿಂದ ಉಳಿಯುವ ಜಾಗವನ್ನು ಸೇರಿಸಿ ಕನಿಷ್ಠ 10 ಅಡಿ ಅಗಲದ ಸುಸಜ್ಜಿತ ಹಾಗೂ ಬಾಳಿಕೆ ಬರುವ ಗ್ರಾನೈಟ್ ಪಾದಚಾರಿ ಮಾರ್ಗಗಳನ್ನು (Walkable Footpaths) ನಿರ್ಮಿಸಲಾಗುವುದು. ಜೊತೆಗೆ ವಾಹನಗಳ ಬಳಕೆ ಕಡಿಮೆ ಮಾಡಲು ಸಾಧ್ಯವಿರುವ ಕಡೆಗಳಲ್ಲಿ ಸೈಕಲ್ ಟ್ರ್ಯಾಕ್ ಹಾಗೂ ಬಸ್ ಬೇ ತಲುಪಲು ‘ಹೈ-ರೈಸ್ ಪಾದಚಾರಿ ಕ್ರಾಸಿಂಗ್’ ಮತ್ತು ಫುಟ್‌ಓವರ್ ಬ್ರಿಡ್ಜ್‌ಗಳನ್ನು ವಿನ್ಯಾಸಗೊಳಿಸಲಾಗುವುದು ಎಂದು ತಿಳಿಸಿದರು.
ರಸ್ತೆ ನಿರ್ಮಾಣ, ಅತಿಕ್ರಮಣ ತೆರವು ಹಾಗೂ ಗುತ್ತಿಗೆದಾರರ ಹೊಣೆಗಾರಿಕೆ
ಪ್ರಮುಖ ಕ್ಯಾರಿಯೇಜ್‌ವೇಗಳಲ್ಲಿ ಆಸ್ಫಾಲ್ಟ್ ಅಥವಾ ‘ವೈಟ್ ಟಾಪಿಂಗ್’ ಮಾಡುವ ಕುರಿತು ಪರಿಶೀಲನೆ ನಡೆಯುತ್ತಿದ್ದು, ವೈಟ್ ಟಾಪಿಂಗ್ ಮಾಡುವುದರಿಂದ ಸುಮಾರು 25 ವರ್ಷಗಳ ಕಾಲ ರಸ್ತೆ ಬಾಳಿಕೆ ಬರಲಿದೆ. ಇನ್ನು ಸರ್ವಿಸ್ ರಸ್ತೆಗಳಲ್ಲಿ ಭೂಗತ ಯುಟಿಲಿಟಿ ಲೈನ್‌ಗಳಿರುವುದರಿಂದ ಅಲ್ಲಿ ಆಸ್ಫಾಲ್ಟ್ ರಸ್ತೆಗಳನ್ನೇ ಮರುನಿರ್ಮಾಣ (Reconstruction) ಮಾಡಲಾಗುವುದು. ರಸ್ತೆ ಅತಿಕ್ರಮಣ ತೆರವುಗೊಳಿಸಲು ಮೂಲ ಭೂಸ್ವಾಧೀನ ದಾಖಲೆಗಳ ಪ್ರಕಾರ ಸರ್ವೇ ನಡೆಸಿ ಪೂರ್ಣ ಪ್ರಮಾಣದ ರಸ್ತೆ ಅಗಲವನ್ನು ಹಿಂಪಡೆಯಲು ಸೂಚಿಸಲಾಗಿದೆ.
ವಿಶೇಷವಾಗಿ, ರಸ್ತೆ ಗುಣಮಟ್ಟವನ್ನು ಕಾಯ್ದುಕೊಳ್ಳಲು ‘ಆ್ಯನುಟಿ ಪೇಮೆಂಟ್’ (Annuity Payment) ಮಾದರಿಯನ್ನು ಚಿಂತಿಸಲಾಗುತ್ತಿದೆ. ಇದರ ಪ್ರಕಾರ, ಗುತ್ತಿಗೆದಾರರೇ ಮುಂದಿನ 10 ರಿಂದ 12 ವರ್ಷಗಳ ಕಾಲ ರಸ್ತೆ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ಹೊರಬೇಕಾಗುತ್ತದೆ. ರಸ್ತೆಯ ಮೇಲ್ಮೈ, ದೀಪಗಳು ಹಾಗೂ ಪಾದಚಾರಿ ಮಾರ್ಗದ ಗುಣಮಟ್ಟವನ್ನು ವರ್ಷಂಪ್ರತಿ ಪರಿಶೀಲಿಸಿ ಸರ್ಕಾರವು ಅವರಿಗೆ ಕಂತುಗಳಲ್ಲಿ ಹಣ ಪಾವತಿಸಲಿದೆ ಎಂದು ವಿವರಿಸಿದರು.
ಮೆಟ್ರೋ ಕಾರ್ಯಾಚರಣೆ, ಸ್ಕೈವಾಕ್ ಹಾಗೂ ಮಾಸ್ ಟ್ರಾನ್ಸಿಟ್ ಆದ್ಯತೆ
ಮೆಟ್ರೋ ಕಾರ್ಯಾಚರಣೆ ಆರಂಭವಾದರೆ ರಸ್ತೆ ಮೇಲಿನ ಶೇ. 30 ರಷ್ಟು ವಾಹನ ದಟ್ಟಣೆ ಕಡಿಮೆಯಾಗಲಿದೆ ಎಂಬುದು ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ಸಾಬೀತಾಗಿದೆ. ಆದ್ದರಿಂದ ಈ ವರ್ಷದ ಅಕ್ಟೋಬರ್‌ನಿಂದ ಮೆಟ್ರೋ ಟ್ರಯಲ್ ರನ್ ಆರಂಭಿಸಿ, ಮುಂದಿನ ವರ್ಷದ ವೇಳೆಗೆ ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳಿಸಲು ಮೆಟ್ರೋ ಸಂಸ್ಥೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ರಸ್ತೆ ಕಾಮಗಾರಿ ಮತ್ತು ಮೆಟ್ರೋ ಕಾಮಗಾರಿಗಳು ಒಂದಕ್ಕೊಂದು ಅಡಚಣೆಯಾಗದಂತೆ ಹಂತ-ಹಂತವಾಗಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುವುದು. ಇದರೊಂದಿಗೆ ಮೆಟ್ರೋ ಮಾರ್ಗದುದ್ದಕ್ಕೂ ಸ್ಕೈವಾಕ್ ಹಾಗೂ ‘ಲಾಸ್ಟ್ ಮೈಲ್ ಕನೆಕ್ಟಿವಿಟಿ’ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಕರಡು ವಿನ್ಯಾಸದ ಕುರಿತು ಸಾರ್ವಜನಿಕರು ಮತ್ತು ಸ್ಥಳೀಯರಿಂದ ಸಲಹೆಗಳನ್ನು ಸ್ವೀಕರಿಸಿ ಅಂತಿಮ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.
ಸಂಚಾರ ದಟ್ಟಣೆ ನಿವಾರಣೆಗೆ ವೈಜ್ಞಾನಿಕ ಕ್ರಮಕ್ಕೆ ಸೂಚನೆ
ಹೊರ ವರ್ತುಲ ರಸ್ತೆ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ಹೆಚ್ಚಿರುವ ಜಂಕ್ಷನ್‌ಗಳನ್ನು ಗುರುತಿಸಿ ವೈಜ್ಞಾನಿಕ ಟ್ರಾಫಿಕ್ ನಿರ್ವಹಣಾ ಯೋಜನೆ ರೂಪಿಸಬೇಕು. ಅಗತ್ಯವಿರುವ ಸ್ಥಳಗಳಲ್ಲಿ ಜಂಕ್ಷನ್ ಮರುವಿನ್ಯಾಸ, ಸಿಗ್ನಲ್ ಸಮನ್ವಯ, ಯು-ಟರ್ನ್ ವ್ಯವಸ್ಥೆ ಹಾಗೂ ಸರ್ವಿಸ್ ರಸ್ತೆಗಳ ಸುಧಾರಣೆ ಮೂಲಕ ವಾಹನ ಸಂಚಾರವನ್ನು ಸುಗಮಗೊಳಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಪ್ರಾಯೋಗಿಕ ಯೋಜನೆಗಳನ್ನು ಯಶಸ್ವಿಗೊಳಿಸಿ ಶಾಶ್ವತ ಅನುಷ್ಠಾನ
ಸಂಚಾರ ನಿರ್ವಹಣೆ ಹಾಗೂ ರಸ್ತೆ ವಿನ್ಯಾಸದಲ್ಲಿ ಅಗತ್ಯವಿರುವ ಸ್ಥಳಗಳಲ್ಲಿ ಮೊದಲಿಗೆ ಪ್ರಾಯೋಗಿಕ (Pilot) ಮಾದರಿಯನ್ನು ಜಾರಿಗೊಳಿಸಿ ಅದರ ಫಲಿತಾಂಶವನ್ನು ಪರಿಶೀಲಿಸಬೇಕು. ಯಶಸ್ವಿಯಾದ ಯೋಜನೆಗಳನ್ನು ನಂತರ ಶಾಶ್ವತವಾಗಿ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪಾದಚಾರಿಗಳಿಗೆ ಸುರಕ್ಷಿತ ಹಾಗೂ ನಿರಂತರ ಫುಟ್‌ಪಾತ್ ನಿರ್ಮಾಣಕ್ಕೆ ಆದ್ಯತೆ
ಮೆಟ್ರೋ ನಿಲ್ದಾಣಗಳು, ಐಟಿ ಪಾರ್ಕ್‌ಗಳು ಹಾಗೂ ವಾಣಿಜ್ಯ ಪ್ರದೇಶಗಳ ಸುತ್ತಮುತ್ತ ಪಾದಚಾರಿಗಳಿಗೆ ಸುರಕ್ಷಿತ, ನಿರಂತರ ಹಾಗೂ ಅಡೆತಡೆ ರಹಿತ ಫುಟ್‌ಪಾತ್ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಸಾರ್ವಜನಿಕರು ರಸ್ತೆ ದಾಟುವ ಸ್ಥಳಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಜೊತೆಗೆ ಅಗತ್ಯವಿರುವ ಕಡೆಗಳಲ್ಲಿ ಪಾದಚಾರಿ ದಾಟುವ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಲಾಯಿತು.
ಸಾರ್ವಜನಿಕ ಸ್ಥಳಗಳ ಸದ್ಬಳಕೆಗೆ ಯೋಜನೆ ರೂಪಿಸಲು ಸೂಚನೆ
ರಸ್ತೆ ಬದಿಯ ಖಾಲಿ ಜಾಗಗಳು ಹಾಗೂ ಬಳಕೆಯಾಗದ ಸಾರ್ವಜನಿಕ ಸ್ಥಳಗಳನ್ನು ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡದೆ ಸಾರ್ವಜನಿಕರ ಉಪಯೋಗಕ್ಕೆ ತಕ್ಕಂತೆ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕು. ಹಸಿರು ಪ್ರದೇಶ, ವಿಶ್ರಾಂತಿ ಸ್ಥಳ ಹಾಗೂ ಸಾರ್ವಜನಿಕ ಸೌಲಭ್ಯಗಳ ಅಭಿವೃದ್ಧಿಗೆ ಯೋಜನೆ ರೂಪಿಸುವಂತೆ ಸಚಿವರು ತಿಳಿಸಿದರು.
ಮೆಟ್ರೋ ಕಾಮಗಾರಿಗಳೊಂದಿಗೆ ಸಮನ್ವಯಕ್ಕೆ ಆದ್ಯತೆ
ಬಿಎಂಆರ್‌ಸಿಎಲ್ ಕೈಗೊಳ್ಳುತ್ತಿರುವ ಮೆಟ್ರೋ ಕಾಮಗಾರಿಗಳು ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳ ನಡುವೆ ಸಮನ್ವಯ ಸಾಧಿಸಿ ಸಾರ್ವಜನಿಕರಿಗೆ ಕನಿಷ್ಠ ತೊಂದರೆಯಾಗುವಂತೆ ಕಾಮಗಾರಿಗಳನ್ನು ಯೋಜಿಸಬೇಕು. ರಸ್ತೆ ಅಗಲೀಕರಣ, ಯುಟಿಲಿಟಿಗಳ ಸ್ಥಳಾಂತರ ಹಾಗೂ ಸಂಚಾರ ನಿರ್ವಹಣೆಯನ್ನು ಸಮನ್ವಯದೊಂದಿಗೆ ಕೈಗೊಳ್ಳುವಂತೆ ಸೂಚಿಸಿದರು.
ಮಳೆನೀರು ಚರಂಡಿ ಮತ್ತು ಯುಟಿಲಿಟಿ ಕಾಮಗಾರಿಗಳಿಗೆ ಸಮನ್ವಯ
ಮಳೆನೀರು ಚರಂಡಿ, ಕುಡಿಯುವ ನೀರು, ಒಳಚರಂಡಿ, ವಿದ್ಯುತ್ ಹಾಗೂ ಅನಿಲ ಪೈಪ್‌ಲೈನ್ ಸೇರಿದಂತೆ ವಿವಿಧ ಯುಟಿಲಿಟಿ ಕಾಮಗಾರಿಗಳನ್ನು ಪರಸ್ಪರ ಸಮನ್ವಯದೊಂದಿಗೆ ಕೈಗೊಳ್ಳಬೇಕು. ರಸ್ತೆಗಳನ್ನು ಪುನಃ ಪುನಃ ಅಗೆದ ಪರಿಸ್ಥಿತಿ ಉಂಟಾಗದಂತೆ ಎಲ್ಲಾ ಇಲಾಖೆಗಳು ಸಮಗ್ರ ಕಾರ್ಯಯೋಜನೆ ರೂಪಿಸುವಂತೆ ಸೂಚಿಸಿದರು.
ಸಾರ್ವಜನಿಕ ಶೌಚಾಲಯ, ವಾಹನ ನಿಲುಗಡೆ ಹಾಗೂ ನಾಗರಿಕ ಸೌಲಭ್ಯಗಳ ಅಭಿವೃದ್ಧಿ
ಹೊರ ವರ್ತುಲ ರಸ್ತೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಶೌಚಾಲಯಗಳ ಕೊರತೆ ಇರುವ ಪ್ರದೇಶಗಳನ್ನು ಗುರುತಿಸಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು. ಜೊತೆಗೆ ವಾಹನ ನಿಲುಗಡೆ ವ್ಯವಸ್ಥೆ, ಬಸ್ ನಿಲ್ದಾಣಗಳು ಹಾಗೂ ಪಾದಚಾರಿ ಸೌಲಭ್ಯಗಳನ್ನು ಸುಧಾರಿಸಲು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಐಟಿ ಸಂಸ್ಥೆಗಳ ಸಹಭಾಗಿತ್ವಕ್ಕೆ ಕರೆ
ಹೊರ ವರ್ತುಲ ರಸ್ತೆ ವ್ಯಾಪ್ತಿಯ ಐಟಿ ಕಂಪನಿಗಳು, ಟೆಕ್ ಪಾರ್ಕ್‌ಗಳು ಹಾಗೂ ORRCA ಪ್ರತಿನಿಧಿಗಳು ತಮ್ಮ ಅನುಭವ ಹಾಗೂ ಸಲಹೆಗಳನ್ನು ಸರ್ಕಾರದೊಂದಿಗೆ ಹಂಚಿಕೊಳ್ಳುವ ಮೂಲಕ ರಸ್ತೆ ಹಾಗೂ ಸಾರ್ವಜನಿಕ ಮೂಲಸೌಕರ್ಯ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಸಚಿವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ದಕ್ಷಿಣ ನಗರ ಪಾಲಿಕೆ ಆಯುಕ್ತರಾದ ಕೆ. ಎನ್. ರಮೇಶ್, ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ. ಎಸ್. ರಮೇಶ್ ಸೇರಿದಂತೆ ಬಿಎಂಆರ್ ಸಿಎಲ್ ಮುಖ್ಯಸ್ಥರು ಹಾಗೂ ಇನ್ನಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
