ಚಿತ್ರದುರ್ಗ: ಪ್ರಶ್ನೆ ಪತ್ರಿಕೆ ಸೋರಿಕೆ, ಅಕ್ರಮಗಳು ನಡೆದರೆ ಜಿಲ್ಲಾಧಿಕಾರಿಗಳೇ ಹೊಣೆ, ಹೊಸ ಬೋರ್ ವೆಲ್ ವಿಡಿಯೋ, ಫೋಟೊ, ಜಿಪಿಎಸ್ ಕಡ್ಡಾಯ, ಕೇಂದ್ರಕ್ಕೆ ಬರ ಪರಿಸ್ಥಿತಿ ವಿವರಿಸಲು ಸಂಸದರ ಸಭೆ ಹಾಗೂ ಸರ್ವಪಕ್ಷ ನಿಯೋಗ, ಬಡವರಿಗೆ ಸೂರು, ಪ್ರತಿ ಕ್ಷೇತ್ರದ ಬಿತ್ತನೆ ಬೀಜ, ಗೊಬ್ಬರ ದಾಸ್ತಾನು ಬಗ್ಗೆ ಸ್ಥಳೀಯ ಶಾಸಕರಿಗೆ ಮಾಹಿತಿ ನೀಡಬೇಕು ಎನ್ನುವ ಅಂಶಗಳನ್ನು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.
ಚಿತ್ರದುರ್ಗದ ಮುರುಘಾ ಮಠದ ಅನುಭವ ಮಂಟಪದಲ್ಲಿ ಶನಿವಾರ ನಡೆದ ಬೆಂಗಳೂರು ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಾಗೂ ನಂತರ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡಿದರು.
ಸಭೆಯಲ್ಲಿ ಶಾಸಕರು ಮುಂದಿಟ್ಟ ಕ್ಷೇತ್ರದ ಸಮಸ್ಯೆಗಳನ್ನು ಆಲಿಸಿದರು. ಶೀಘ್ರ ಬಗೆಹರಿಸಬಹುದಾದ ಸಮಸ್ಯೆಗಳನ್ನು ದಾಖಲಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಶಾಸಕರು ಹೇಳಿದ ಎಲ್ಲ ಅಂಶಗಳು ದಾಖಲಾಗಬೇಕು ಎಂದು ಸೂಚಿಸಿದರು.
ಪ್ರಶ್ನೆ ಪತ್ರಿಕೆ ಸೋರಿಕೆಯಾದರೆ ಜಿಲ್ಲಾಧಿಕಾರಿಗಳೇ ಹೊಣೆ
*ರಾಜ್ಯದಲ್ಲಿ ನೇಮಕಾತಿ ಪರ್ವ ನಡೆಯುತ್ತಿದೆ. ಸುಮಾರು 70 ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ನೇಮಕಾತಿ ಪರೀಕ್ಷೆ ನಡೆಯುವ ಕಡೆ ಕಡ್ಡಾಯವಾಗಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಪ್ರಶ್ನೆ ಪತ್ರಿಕೆಗೆ ಹೆಚ್ಚಿನ ಭದ್ರತೆ ಒದಗಿಸಬೇಕು. ಪರೀಕ್ಷೆಯ, ಪ್ರಶ್ನೆ ಪತ್ರಿಕೆ ತಯಾರಿಕೆ, ಹಂಚಿಕೆ ಹೀಗೆ ಪ್ರತಿಯೊಂದು ಹಂತವೂ ದಾಖಲೆಯಾಗಬೇಕು. ನೀಟ್ ಹಗರಣ ಎಲ್ಲರ ಗಮನದಲ್ಲಿರಲಿ. ಪ್ರಶ್ನೆ ಪತ್ರಿಕೆ ಸೋರಿಕೆಯಾದರೆ ಅಧಿಕಾರಿಗಳೇ ಹೊಣೆ” ಎಂದು ಎಚ್ಚರಿಸಿದರು.
“ಜನರ ಮನೆ ಬಾಗಿಲಿಗೆ ಸರ್ಕಾರ ಹೋಗಬೇಕು. ಜನರು ಸರ್ಕಾರದ ಬಾಗಿಲಿಗೆ ಬರಬಾರದು. ಅಧಿಕಾರಿಗಳು ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕು. ಸುಮ್ಮನೆ ತಕರಾರು ಮಾಡಿದರೆ ಕ್ರಮ ಕೈಗೊಳ್ಳುವೆ. ನಾನು ಕೊಟ್ಟ ಸ್ವಾತಂತ್ರ್ಯ ದುರುಪಯೋಗ ಮಾಡಿಕೊಂಡರೆ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಎಚ್ಚರಿಸಿದರು.
ಹೊಸ ಬೋರ್ ವೆಲ್ ವಿಡಿಯೋ, ಫೋಟೊ, ಜಿಪಿಎಸ್ ಕಡ್ಡಾಯ
“ಹೊಸ ಬೋರ್ ವೆಲ್ ಕೊರೆಯುವ ಮುಂಚಿನ ಹಾಗೂ ನಂತರದ ವಿಡಿಯೋ, ಫೋಟೋಗಳನ್ನು ದಾಖಲಿಸಬೇಕು. ಜಿಪಿಎಸ್ ಕೂಡ ನಮೂದಿಸಬೇಕು. ಬೋರ್ ವೆಲ್ ಆಳದ ಬಗ್ಗೆಯೂ ದಾಖಲಿಸಬೇಕು. 150 ಅಡಿ ಆಳ ಕೊರೆದು 500- 600 ಅಡಿ ಆಳ ಕೊರೆಯಲಾಗಿದೆ ಎಂದು ಅಕ್ರಮಕ್ಕೆ ಆಸ್ಪದ ನೀಡಬಾರದು” ಎಂದರು.
“ಹೊಸದಾಗಿ ಬೋರ್ ವೆಲ್ ಕೊರೆದರೆ, ದುರಸ್ತಿಗೊಳಿಸಿದರೆ ಪ್ರತಿಯೊಂದರ ಮಾಹಿತಿ ದಾಖಲಿಸಬೇಕು. ಹೊಸ ಬೋರ್ ವೆಲ್ ಕೊರೆದರೆ ಜಿಪಿಎಸ್ ಮಾಹಿತಿ ದಾಖಲಿಸಬೇಕು. ವಿದ್ಯುತ್ ಸಂಪರ್ಕ ಸೇರಿದಂತೆ ಪ್ರತಿ ತೀರ್ಮಾನದ ಬಗ್ಗೆಯೂ ಮಾಹಿತಿಗಳು ಪಾರದರ್ಶಕವಾಗಿರಬೇಕು” ಎಂದರು.
“ಎಲ್ ನೀನೋ ಪ್ರಭಾವದಿಂದಾಗಿ ರಾಜ್ಯದಲ್ಲಿ ಬಹುತೇಕ ಎಲ್ಲಾ ಅಣೆಕಟ್ಟುಗಳಲ್ಲಿ ನೀರಿನ ಶೇಖರಣೆ ಕಡಿಮೆಯಾಗಿದ್ದು, ಈ ಬಾರಿಯ ಬರ ಪರಿಸ್ಥಿತಿಯನ್ನು ನಾವೆಲ್ಲರೂ ‘ಟೀಮ್ ಕರ್ನಾಟಕ’ವಾಗಿ ಎದುರಿಸೋಣ”ಎಂದು ಕರೆ ನೀಡಿದರು.
ಮಂದಿನ ವಾರ ಸಚಿವ ಸಂಪುಟ ವಿಸ್ತರಣೆ
“ಮುಂದಿನ ವಾರ ಸಚಿವ ಸಂಪುಟ ವಿಸ್ತರಣೆ ಆಗಬಹುದು. ಆಗ ಎಲ್ಲಾ ಮಂತ್ರಿಗಳು ಕೈ ಜೋಡಿಸಿ ಕೆಲಸ ಮಾಡಬೇಕಾಗುತ್ತದೆ. ಒಟ್ಟಾಗಿ ರಾಜ್ಯದ ಬರ ಪರಿಸ್ಥಿತಿ ಅವಲೋಕಿಸಬೇಕು. ರೈತರಿಗೆ ತೊಂದರೆ ಆಗದಂತೆ ಎಚ್ಚರ ವಹಿಸಬೇಕು. ಇದೇ ನಮ್ಮ ಮುಂದಿರುವ ಹೊಣೆಗಾರಿಕೆ. ಜಿಲ್ಲಾಡಳಿತವು ಗ್ರಾಮೀಣ ಭಾಗದ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಕುಡಿಯುವ ನೀರು ಪೂರೈಕೆಗೆ 1 ಕೋಟಿ ರೂ.ವರೆಗೆ ಖರ್ಚು ಮಾಡಬಹುದು ಎಂದು ಬೆಳಗಾವಿ ಸಭೆಯಲ್ಲಿ ತೀರ್ಮಾನ ಮಾಡಲಾಗಿತ್ತು. ಈ ಬಗ್ಗೆ ನಿರ್ಲಕ್ಷ್ಯ ಸಲ್ಲದು” ಎಂದು ಎಚ್ಚರಿಸಿದರು.
ಬೆಳೆ ವಿಮೆ; ರೈತರಿಗೆ ನೆರವಾಗಿ
“ಬೆಳೆ ವಿಮೆ ಬಗ್ಗೆ ರೈತರಿಗೆ ಅಧಿಕಾರಿಗಳು ನೆರವಾಗಬೇಕು. ಅರಿವು ಮೂಡಿಸಬೇಕು. ರೈತರು ಯಾವುದೇ ಕಾರಣಕ್ಕೂ ಮುಂದಿನ ಮಳೆ, ಅಣೆಕಟ್ಟು ನೀರು ನೆಚ್ಚಿಕೊಂಡು ಬೆಳೆ ಹಾಕಬಾರದು. ನೀರಾವರಿ ಸಮಿತಿ, ಅಧಿಕಾರಿಗಳು ಹಾಗೂ ಸರ್ಕಾರದ ಮಾರ್ಗದರ್ಶನ ಆಧಾರದ ಮೇಲೆ ಬೆಳೆ ಹಾಕಿಕೊಳ್ಳಬೇಕು. ನಿಮ್ಮಷ್ಟಕ್ಕೆ ನೀವೆ ಬೆಳೆ ಹಾಕಿದರೆ ನಷ್ಟಕ್ಕೆ ನೀವೇ ಹೊಣೆಯಾಗಬೇಕಾಗುತ್ತದೆ. ನಮ್ಮಿಂದ ಸಹಕಾರ ನೀಡಲು ಆಗುವುದಿಲ್ಲ. ಆಲಮಟ್ಟಿ ಹೊರತಾಗಿ ಬೇರೆ ಯಾವ ಜಲಾಶಯದಲ್ಲೂ ನೀರಿನ ಪರಿಸ್ಥಿತಿ ಉತ್ತಮವಾಗಿಲ್ಲ” ಎಂದರು.
“1 ಕೋಟಿ ಕುಟುಂಬಗಳಿಗೆ 1 ವರ್ಷದಲ್ಲಿ ಇ ಖಾತಾ ಹಂಚಿಕೆ ಮಾಡಬೇಕು. ಪ್ರತಿ ತಾಲ್ಲೂಕಿನಲ್ಲಿ ವಸತಿ ರಹಿತರಿಗೆ ನಿವೇಶನ ನೀಡಬೇಕು. ಜಿಲ್ಲಾಧಿಕಾರಿಗಳು ಭೂ ಬ್ಯಾಂಕ್ ರಚಿಸಬೇಕು. ಪ್ರತಿಯೊಬ್ಬರು ಸ್ವಂತ ಸೂರು ಹೊಂದಿರಬೇಕು. ತಕ್ಷಣವೇ ವಿಬಿಜಿ ರಾಮ್ ಜೀ ಕಾಮಗಾರಿಗಳನ್ನು ಬೇಗ ಕೈಗೆತ್ತಿಕೊಳ್ಳಬೇಕು” ಎಂದರು.
ಕೇಂದ್ರದ ಬಳಿ ಸರ್ವಪಕ್ಷ ನಿಯೋಗ, ದೆಹಲಿಯಲ್ಲಿ ಸಂಸದರ ಸಭೆ
“ಬರ ಪರಿಸ್ಥಿತಿ ಬಗ್ಗೆ ಕೇಂದ್ರ ಸರ್ಕಾರದ ಬಳಿ ಚರ್ಚಿಸಲು ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಲಾಗುವುದು. ದೆಹಲಿಯಲ್ಲಿ ಸೋಮವಾರ ಸಂಸದರ ಸಭೆ ನಡೆಸಲಾಗುವುದು”ಎಂದರು.
“ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಲು ಸಾಧ್ಯವಿಲ್ಲ ಎಂದು ಕಾವೇರಿ ನೀರು ನಿರ್ವಾಹಣಾ ಸಮಿತಿ ಮುಂದೆ ಹೇಳಲಾಗಿದೆ. ಅವರಿಗೂ ಪರಿಸ್ಥಿತಿಯ ಬಗ್ಗೆ ಅರಿವಿದೆ. ಪ್ರಧಾನಿ ಮೋದಿ ಅವರು ಸಹ ಎಲ್ ನೀನೋ ಪರಿಣಾಮದ ಬಗ್ಗೆ ಮಾತನಾಡಿದ್ದಾರೆ. ಈ ಎಚ್ಚರಿಕೆಯನ್ನು ನಾವು ಕಡೆಗಣಿಸಬಾರದು. ನಾನು ಸಹ ಪ್ರಧಾನಿಯವರಿಗೆ ಬರ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದೇನೆ. ಡಿಸಿಎಂ ಅವರೂ ಸಹ ಬರದ ಬಗ್ಗೆ ವಸ್ತುಸ್ಥಿತಿ ತಿಳಿಸಲು ಪ್ರಧಾನಿಯವರ ಬಳಿಗೆ ಶೀಘ್ರ ನಿಯೋಗ ಕಳುಹಿಸಲಿದ್ದಾರೆ” ಎಂದರು.
“ಉಚಿತ ಬಸ್ ಪಾಸ್ ಗಳನ್ನು ಸರಿಯಾಗಿ ಹಂಚಿಕೆ ಮಾಡಲಾಗುತ್ತಿದೆಯೇ ಎಂದು ಶಾಸಕರು, ಜನಪ್ರತಿನಿಧಿಗಳು ಶಾಲೆಗಳಿಗೆ ತೆರಳಿ ಪರಿಶೀಲಿಸಬೇಕು. ಜನರ ಸಮಸ್ಯೆಗಳಿಗೆ ಎಐ ಆಧಾರಿತ ಏಕೀಕೃತ ಸಮಗ್ರ ದೂರು ಪರಿಹಾರ ವ್ಯವಸ್ಥೆ ಬಳಸಬೇಕು” ಎಂದರು.
“ಸಿಎಸ್ ಆರ್ ಅನುದಾನ ಬಳಕೆ ಬಗ್ಗೆ ಹಾಗೂ ಗ್ರಾಮೀಣ ಭಾಗದ ಶಾಲೆಗಳ ಅಭಿವೃದ್ಧಿ ಬಗ್ಗೆ ಸೂಕ್ತ ಗಮನ ಹರಿಸಬೇಕು. ಗ್ರಾಮೀಣ ಭಾಗಗಳಲ್ಲಿ ಸಿಎಸ್ಆರ್ ಶಾಲೆಗಳನ್ನು ಮಾದರಿ ಶಾಲೆಗಳಾಗಿ ಮಾಡಲು ತೀರ್ಮಾನಿಸಿದ್ದೇವೆ. ಯಾವುದೇ ಸಮಸ್ಯೆ ಬಂದರು ಅದಕ್ಕೆ ಸ್ಪದಿಸುವ ವಿಶ್ವಾಸ ಮೂಡಿಸಿದ್ದೇವೆ. ಗೃಹಲಕ್ಷ್ಮೀ ಹಣ ಒಂದಷ್ಟು ನಕಲಿ ಖಾತೆಗಳಿಗೆ ಹೋಗಿದೆ. ಅದನ್ನು ಸಹ ಪರಿಶೀಲಿಸುವ ಕೆಲಸ ಮಾಡಲಾಗುತ್ತಿದೆ. ಇದರ ಬಗ್ಗೆಯೂ ಸೂಕ್ತ ಗಮನ ಹರಿಸಲಾಗುತ್ತಿದೆ” ಎಂದು ತಿಳಿಸಿದರು.
“ಎಸ್ ಐಆರ್ ನಡೆಯುತ್ತಿದೆ. ಜನರು ಮತ ಕಳೆದುಕೊಳ್ಳಬಾರದು. ದಾಖಲೆಗಳಿಗೆ ಪರದಾಡಬಾರದು ಎಂದು ಜಾತಿ ಪ್ರಮಾಣ ಪತ್ರಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಖಾಯಂ ನಿವಾಸಿ ಪತ್ರವನ್ನು ಸಹ ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಬೇಕು” ಎಂದು ಸೂಚಿಸಿದರು.
ಶಾಸಕರು ಸಮಸ್ಯೆಗಳನ್ನು ನನ್ನ ಬಳಿ ಹೇಳಿಕೊಳ್ಳಬಹುದು
“ಶಾಸಕರ ಸಮಸ್ಯೆ ಆಲಿಸಲು ಇಬ್ಬರು ಅಧಿಕಾರಿಗಳ ನೇಮಕ ಮಾಡಿದ್ದೇನೆ. ಎಲ್ಲಾ ಶಾಸಕರು ನೇರವಾಗಿ ನನ್ನ ಬಳಿಯೇ ಯಾವುದೇ ಸಮಸ್ಯೆ ಇದ್ದರೂ ಹೇಳಬಹುದು. ಅದನ್ನು ಬಗೆಹರಿಸಲು ಆದಷ್ಟು ಪ್ರಯತ್ನ ಮಾಡುತ್ತೇನೆ. ಆಗಸ್ಟ್ ಎರಡನೇ ವಾರ ಅಥವಾ 6 ನೇ ತಾರೀಕು ವಿಧಾನಸಭೆ ಅಧಿವೇಶನ ನಡೆಯಬಹುದು. ಎಸ್ ಐಆರ್ ನಿಂದ ಅಧಿವೇಶನ ಮುಂದೂಡುವ ಪರಿಸ್ಥಿತಿ ಎದುರಾಯಿತು. ಇನ್ನಷ್ಟು ಮುಂದೂಡಿಕೆ ಕಷ್ಟವಾಗಬಹುದು” ಎಂದು ತಿಳಿಸಿದರು.
ಪ್ರತಿ ಕ್ಷೇತ್ರದ ಬಿತ್ತನೆ ಬೀಜ, ಗೊಬ್ಬರ ದಾಸ್ತಾನು ಬಗ್ಗೆ ಸ್ಥಳೀಯ ಶಾಸಕರಿಗೆ ಮಾಹಿತಿ ನೀಡಿ
“ಅಧಿಕಾರಿಗಳು ಬರ ಪರಿಸ್ಥಿತಿ ಸೇರಿದಂತೆ ಇತರೇ ಅಂಕಿಅಂಶಗಳ ಬಗ್ಗೆ ಮಾಹಿತಿ ನೀಡಿದಾಗ ಅವರಿಗೆ ಸಿಎಂ ಅವರು ಖಡಕ್ ನಿರ್ದೇಶನಗಳನ್ನು ನೀಡಿದರು. ಈ ವಾರ ಮಳೆ ಇಲ್ಲದಿರಬಹುದು. ಆದರೆ ಪ್ರಕೃತಿ ಕಣ್ಣು ಬಿಟ್ಟು ಮುಂದಿನ ದಿನಗಳಲ್ಲಿ ಮಳೆ ಬಂದರೆ ಆಗ ಯಾವುದೇ ತೊಂದರೆ ಆಗಬಾರದು. ಪ್ರತಿ ಕ್ಷೇತ್ರದ ಬಿತ್ತನೆ ಬೀಜ, ಗೊಬ್ಬರ ದಾಸ್ತಾನು ಬಗ್ಗೆ ಸ್ಥಳೀಯ ಶಾಸಕರಿಗೆ ಮಾಹಿತಿ ನೀಡಬೇಕು. ಏಕೆಂದರೆ ರೈತರು ಶಾಸಕರ ಮೇಲೆ ಗೊಬ್ಬರ, ಬಿತ್ತನೆ ಬೀಜಗಳಿಗೆ ಒತ್ತಡ ಹೇರುತ್ತಾ ಇರುತ್ತಾರೆ. ಇದರ ಬಗ್ಗೆ ಅವರಿಗೂ ಮಾಹಿತಿ ಇರಲೇಬೇಕು. ನಗರ ಪ್ರದೇಶದ ಶಾಸಕರು ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆ ಅಲ್ಲಿ ವಿಶೇಷ ಗಮನಹರಿಸಲು ಸೂಚಿಸಿದ್ದು, ಇದಕ್ಕಾಗಿ ಜಿಲ್ಲಾಧಿಕಾರಿಗಳ ಬಳಿ ಹಣ ಇದೆ. ಅಗತ್ಯವಿದ್ದರೆ ಇನ್ನಷ್ಟು ಹಣ ನೀಡಲು ಸಿದ್ಧವಿದ್ದೇವೆ” ಎಂದು ಸೂಚಿಸಿದರು.
ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಸಿಎಂ
“ನೀವು ಕೆಲಸಕ್ಕೆ ಸೇರುವ ಮೊದಲೇ ನಾವು ಜನಪ್ರತಿನಿಧಿಗಳಾಗಿ ಕೆಲಸ ಮಾಡಿದ್ದೇವೆ. ನಮಗೆ ಪ್ರತಿ ವ್ಯವಸ್ಥೆಯ ಪರಿಚಯವಿದೆ. ತಳಮಟ್ಟದ ನೌಕರರಿಂದ ಹಿಡಿದು ಉನ್ನತ ಮಟ್ಟದ ಅಧಿಕಾರಿಗಳ ಶಕ್ತಿಯವರೆಗೂ ನನಗೆ ಏನಾಗುತ್ತದೆ ಎಂದು ಅರಿವಿದೆ. ನಮ್ಮ ಹಣೆಬರಹ ನಿಮ್ಮ ಕೈಯಲ್ಲಿದೆ. ಜನ ಭೇಟಿಗೆ ಬಂದಾಗ ಅವರನ್ನು ಗೌರವದಿಂದ ಕಾಣಬೇಕು. ಜನರ ಸಮಸ್ಯೆಗಳಿಗೆ ಪರಿಹರ ಹುಡುಕಬೇಕು. ಕೆಲಸಗಳನ್ನು ತಳ್ಳಿ ಹಾಕುವ ಗುಣ ಒಳ್ಳೆಯದಲ್ಲ. ನಾವು ಜನರ ಸೇವೆಗೆ ದುಡಿಯಬೇಕು. ಭ್ರಷ್ಟಾಚಾರಕ್ಕೆ ಹಂತ ಹಂತವಾಗಿ ಕಡಿವಾಣ ಹಾಕುತ್ತಿದ್ದೇವೆ” ಎಂದು ಎಚ್ಚರಿಕೆ ನೀಡಿದರು.
ಅರಣ್ಯ ಅಧಿಕಾರಿಗಳು ತೊಂದರೆ ನೀಡದಿರಿ
*ಕುಡಿಯುವ ನೀರಿನ ಪೈಪ್ ಅರಣ್ಯ ಪ್ರದೇಶದಲ್ಲಿ ಹೋಗುತ್ತಿದ್ದರೆ ಅದನ್ನು ಅಳವಡಿಸಲು ಯಾವುದೇ ಕಾರಣಕ್ಕೂ ತೊಂದರೆ ಕೊಡಬಾರದು. ಬರವಿದ್ದು ಈ ಸಮಯದಲ್ಲಿ ಸಹಕರಿಸಬೇಕು. ಈಗಾಗಲೇ ಇರುವ ಹಳೆಯ ರಸ್ತೆಗಳ ದುರಸ್ತಿಗೆ ತೊಡಕು ಉಂಟುಮಾಡಬಾರದು. ಬೋರ್ ವೆಲ್ ಕೊರೆಯುವುದಕ್ಕೂ ತೊಂದರೆ ಕೊಡಬಾರದು. ನಾನು ಹೇಳಿದ ಮೇಲೆ ಮುಗಿಯಿತು. ಎತ್ತಿನಹೊಳೆ ಸಮಯದಲ್ಲಿ ಅರಣ್ಯ ಇಲಾಖೆಯ ತೊಂದರೆಗಳನ್ನು ನಾನು ನೋಡಿದ್ದೇನೆ” ಎಂದು ಕಿಡಿಕಾರಿದರು.
ಸಿಎಂ ನಡೆಗೆ ಶಾಸಕರಿಂದ ಮೆಚ್ಚುಗೆಯ ಸುರಿಮಳೆ
“ಬೆಂಗಳೂರಿನಿಂದ ಹೊರ ಬಂದು ಬೇರೆ ಜಿಲ್ಲೆಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸುತ್ತಿರುವುದು ಹೊಸ ರೀತಿಯ ಆಲೋಚನೆ. ಇದರಿಂದ ನಮಗೂ ಹೊಸ ಹುರುಪು ಬಂದಿದೆ” ಎಂದು ಕೆಜಿಎಫ್ ಶಾಸಕಿ ರೂಪಕಲಾ ಅವರು ಬಣ್ಣಿಸಿದರು.
ಮೊಣಕಾಲ್ಮೂರು ಶಾಸಕರಾದ ಗೋಪಾಲಕೃಷ್ಣ ಅವರು “ನೀವು ಡೈನಾಮಿಕ್ ಇದ್ದೀರಿ. ಉತ್ತಮ ನೀರಾವರಿ ಯೋಜನೆಗಳ ಕುರಿತು ನಿರ್ದಾರ ಮಾಡಿ” ಎಂದರು. ವಿಪಕ್ಷಗಳ ಶಾಸಕರಾದ ಅರಗ ಜ್ಞಾನೇಂದ್ರ ಅವರು, ರವಿಕುಮಾರ್ ಅವರೂ ಸಹ ಮೆಚ್ಚುಗೆ ಸೂಚಿಸಿದರು.
ಅಧಿಕಾರಿಗಳ ಸಭೆ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬರಬೇಕು
“ಅಧಿಕಾರಿಗಳು ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ನೆಚ್ಚಿಕೊಳ್ಳಬೇಡಿ. ನೀವೇ ಕಣ್ಣಾರೇ ನೋಡಿ ಪರಿಸ್ಥಿತಿ ಅವಲೋಕಿಸಬೇಕು. ಸ್ಥಳೀಯ ಪತ್ರಿಕೆ, ಚಾನಲ್ ಗಳಲ್ಲಿ ನಿಮ್ಮ ಸಭೆಯ ಬಗ್ಗೆ, ಜನಜಾಗೃತಿ ಬಗ್ಗೆ ಸುದ್ದಿಗಳು ಬಿತ್ತರವಾಗಬೇಕು. ನಿಮ್ಮ ವಾಹನಗಳಿಗೆ ಜಿಪಿಎಸ್ ಹಾಕಬೇಕಾಗಬಹುದು. ಇದಕ್ಕೆ ಆಸ್ಪದ ನೀಡಬೇಡಿ” ಎಂದು ಹೇಳಿದರು.
“ವಿಬಿಜಿ ಗ್ರಾಮ್ ಜಿ ಯೋಜನೆಗೆ ರಾಜಕೀಯ ವಿರೋಧವಿದ್ದರು ಮೂಲಕ ರಾಜ್ಯ ಸರ್ಕಾರ 40% ಹಣ ಹಾಗೂ ಕೇಂದ್ರ ಸರ್ಕಾರ 60% ಹಣ ಹಾಕಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ರೂಪುರೇಷೆ ತೀರ್ಮಾನ ಮಾಡುತ್ತಿದ್ದೇವೆ. ಜನ ಹಾಗೂ ಜಾನುವಾರುಗಳಿಗೆ ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ಹಾಗೂ ಪಶುಗಳಿಗೆ ಮೇವಿನ ಕೊರತೆ ಆಗಲೇಬಾರದು. ಆರ್ ಓ ಪ್ಲಾಂಟ್ ಗಳ ದುರಸ್ತಿ ಬಗ್ಗೆ ಗಮನ ಹರಿಸಬೇಕು” ಎಂದು ನಿರ್ದೇಶನ ನೀಡಿದರು.
“ನಾನು ಮುಖ್ಯಮಂತ್ರಿಯಾದ ಬಳಿಕ ಸರ್ಕಾರ ಹಾಗೂ ಆಡಳಿತಕ್ಕೆ ಹೊಸ ರೂಪ ನೀಡಲು ಮುಂದಾಗಿದ್ದೇನೆ. ಪ್ರಜಾಸೇವಾ ಇಲಾಖೆ ಹೊಸ ಆಲೋಚನೆ. ಶಾಸಕರು, ಅಧಿಕಾರಿಗಳು ಈ ಇಲಾಖೆ ಮೂಲಕ ಜನರ ಮಧ್ಯೆ ಸರ್ಕಾರ ಇರುವಂತೆ ನೋಡಿಕೊಳ್ಳಬೇಕು. ಜನರ ಸಮಸ್ಯೆಗಳನ್ನು ಗಮನಿಸಿ ಬಗೆಹರಿಸಬೇಕು. ಜನರ ಬಳಿಗೆ ಸರ್ಕಾರವೇ ಹೋಗಬೇಕು. ಪ್ರಜಾಸೇವಾ ಇಲಾಖೆ ಇರುವುದೇ ಜನರಿಗಾಗಿ” ಎಂದರು.
“ಮೊದಲನೇ ಮತ್ತು ಮೂರನೇ ಶನಿವಾರ ಪ್ರತಿ ವಿಧಾನಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿಗಳ ನೇತೃತ್ವದಲ್ಲಿ ಜನರ ಸಮಸ್ಯೆ ಆಲಿಸಬೇಕು, ಬಗೆಹರಿಸಬೇಕು. ಇದೇ ಪ್ರಜಾಸೇವಾ ಇಲಾಖೆಯ ಧ್ಯೇಯೋದ್ದೇಶ. ಪ್ರತಿ ಮನೆಗೂ ಸರ್ಕಾರ ತಲುಪುತ್ತಿದೆ ಎಂದು ಜನರಿಗೆ ಮನವರಿಕೆ ಮಾಡಿಕೊಡಬೇಕು. ಜನರು ನೀಡಿದ ಅರ್ಜಿಗೆ ಪರಿಹಾರ ಸಿಗುವ ತನಕ ಅದರ ಬಗ್ಗೆ ಗಮನಹರಿಸಬೇಕು. ಸಚಿವರು ಎಲ್ಲಾ ಕ್ಷೇತ್ರಗಳಿಗೂ ಪ್ರವಾಸ ಮಾಡಬೇಕು. ಯಾವುದೇ ಪಕ್ಷದ ಶಾಸಕರಿದ್ದರೂ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಹವಾಲು ಸ್ವೀಕರಿಸಿ, ಪರಿಹರಿಸಬೇಕು. ಎಲ್ಲಾ ಕ್ಷೇತ್ರಗಳಲ್ಲಿ ಕಾರ್ಯಕ್ರಮ ಮಾಡಿದ ಬಳಿಕ, ಇದನ್ನು ಹೋಬಳಿ ಮಟ್ಟದಲ್ಲಿ ನಡೆಸಬೇಕು. ಈ ಸಭೆಗಳಿಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಹೋಗಬೇಕು ತೀರ್ಮಾನಿಸಲಾಗಿದೆ” ಎಂದು ತಿಳಿಸಿದರು.
