ಸಮಗ್ರ ಸುದ್ದಿ

ಉದ್ಯೋಗ ಖಾತ್ರಿಯಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಫಲವೃಕ್ಷೋದ್ಯಾನ: ಈಶ್ವರ ಖಂಡ್ರೆ

Share

ಬೆಂಗಳೂರು: ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿನ ಸರ್ಕಾರಿ ಜಮೀನಿನಲ್ಲಿ “ಫಲವೃಕ್ಷೋದ್ಯಾನ’’ ಅಭಿವೃದ್ಧಿಪಡಿಸಿ ಇದನ್ನು ವಾರ್ಷಿಕ ಆಧಾರದ ಮೇಲೆ ಪಾರದರ್ಶಕವಾಗಿ ಹರಾಜು ಮೂಲಕ ಅದೇ ಗ್ರಾಮದ ಯುವಜನರಿಗೆ ಗುತ್ತಿಗೆ ನೀಡುವ ಬಗ್ಗೆ ಕ್ರಮ ವಹಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಸೂಚಿಸಿದ್ದಾರೆ.

ಪ್ರತಿ ಗ್ರಾಮದಲ್ಲಿ ಈ ರೀತಿಯ ಫಲವೃಕ್ಷೋದ್ಯಾನ ಅಭಿವೃದ್ಧಿಪಡಿಸುವುದರಿಂದ ಗ್ರಾಮದಲ್ಲಿನ ಹಸಿರು ಹೊದಿಕೆಯೂ ಹೆಚ್ಚುತ್ತದೆ. ನಿರುದ್ಯೋಗಿ, ಭೂರಹಿತ ಯುವಜನರಿಗೆ ಉದ್ಯೋಗವೂ ಲಭಿಸುತ್ತದೆ ಜೊತೆಗೆ ಗ್ರಾಮ ಪಂಚಾಯತಿ ಮತ್ತು ಕಂದಾಯ ಇಲಾಖೆಗೆ ಆದಾಯವೂ ಬರುತ್ತದೆ ಎಂದು ಇಲಾಖೆಯ ಕಾರ್ಯದರ್ಶಿಯವರಿಗೆ ನೀಡಿರುವ ಲಿಖಿತ ಸೂಚನೆಯಲ್ಲಿ ತಿಳಿಸಿದ್ದಾರೆ.

ಪಂಚಾಯತಿ ವ್ಯಾಪ್ತಿಯ ಕಂದಾಯ ಇಲಾಖೆಗೆ ಸೇರಿದ ಸರ್ಕಾರಿ ಭೂಮಿಯಲ್ಲಿ ತೋಟಗಾರಿಕೆ ಬೆಳೆಗಳಾದ ಮಾವು, ಸಪೋಟ, ಬೆಟ್ಟನೆಲ್ಲಿಕಾಯಿ, ತೆಂಗು, ಹೈಬ್ರೀಡ್ ನೇರಳೆ, ಹುಣಸೆ ಇತ್ಯಾದಿ ಬೆಳೆಸಿದರೆ ಅದರಿಂದ ಪಂಚಾಯತಿಗಳಿಗೆ ಮತ್ತು ಕಂದಾಯ ಇಲಾಖೆಗೆ ಆದಾಯ ಬರುತ್ತದೆ. ಸರ್ಕಾರಿ ಭೂಮಿ ಒತ್ತುವರಿಯ ನಿಲ್ಲುತ್ತದೆ. ತೋಟಗಾರಿಕೆ ಬೆಳೆಯ ಈ ವೃಕ್ಷಗಳನ್ನು ಯಾವಾಗ ಬೇಕಾದರೂ ತೆರವು ಮಾಡಿ ಸರ್ಕಾರದ ಯೋಜನೆಗಳಿಗೆ ಭೂ ಬಳಕೆ ಮಾಡಲೂ ಅವಕಾಶ ಇರುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಇದರ ಜೊತೆಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯರಸ್ತೆ, ಸಂಪರ್ಕ ರಸ್ತೆಗಳ ಎರಡೂ ಬದಿಯಲ್ಲಿ ಹುಣಸೆ, ಮಾವು ಇತ್ಯಾದಿ ಮರಗಳನ್ನು ನೆಟ್ಟು, ಇವುಗಳನ್ನು ಸಹ ವಾರ್ಷಿಕ ಆಧಾರದಲ್ಲಿ ಸ್ಥಳೀಯರಿಗೆ ಹರಾಜು ಮೂಲಕ ಗುತ್ತಿಗೆ ನೀಡಿದರೆ ಇದರಿಂದಲೂ ಪಂಚಾಯತಿಗಳಿಗೆ ಆದಾಯ ಬರಲಿದ್ದು, ಗ್ರಾಮೀಣ ಮೂಲಸೌಕರ್ಯ ಅಭಿವೃದ್ದಿಗೆ ಹೆಚ್ಚುವರಿ ಆರ್ಥಿಕ ನೆರವು ಲಭಿಸುತ್ತದೆ. ಗ್ರಾಮೀಣರಿಗೆ ಹೆಚ್ಚುವರಿ ಆದಾಯವೂ ಲಭಿಸುತ್ತದೆ ಎಂದು ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಬರುವ ಕಂದಾಯ ಇಲಾಖೆಗೆ ಸೇರಿದ ಸರ್ಕಾರಿ ಜಮೀನುಗಳಲ್ಲಿ ವಿಬಿಜಿ ರಾಮ್ ಜಿ ಸಹಯೋಗದಲ್ಲಿ ಈ ರೀತಿ ಫಲವೃಕ್ಷೋದ್ಯಾನ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಕ್ರಿಯಾಯೋಜನೆ ರೂಪಿಸುವಂತೆ ಕಾರ್ಯದರ್ಶಿಗೆ ಸೂಚಿಸಿದ್ದಾರೆ.


Share

You cannot copy content of this page