ಸಮಗ್ರ ಸುದ್ದಿ

ಶೈಕ್ಷಣಿಕ ಕ್ಷೇತ್ರದ ಆಶೋತ್ತರ- ಪಾರದರ್ಶಕತೆಗೆ ಒತ್ತು|ಕೇಂದ್ರ ನೂತನ ಶಿಕ್ಷಣ ಸಚಿವರಾಗಿ ಪ್ರಲ್ಹಾದ್ ಜೋಶಿ ಅಧಿಕಾರ ಸ್ವೀಕಾರ

Share

ನವದೆಹಲಿ: ದೇಶದ ವಿದ್ಯಾರ್ಥಿ-ಯುವ ಜನರ ಉಜ್ವಲ ಭವಿಷ್ಯ ರೂಪಿಸುವ ಶೈಕ್ಷಣಿಕ ಕ್ಷೇತ್ರವನ್ನು ಪಾರದರ್ಶಕವಾಗಿ ಮತ್ತಷ್ಟು ಬಲಪಡಿಸುವ ದಿಸೆಯಲ್ಲಿ ಕೊಂಡೊಯ್ಯುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕೇಂದ್ರದ ನೂತನ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಭರವಸೆ ವ್ಯಕ್ತಪಡಿಸಿದರು.

ದೆಹಲಿಯಲ್ಲಿ ನೂತನ ಶಿಕ್ಷಣ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಸಾರಥ್ಯದಲ್ಲಿ 12 ವರ್ಷಗಳಿಂದಲೂ ಭಾರತದ ಶಿಕ್ಷಣ ವ್ಯವಸ್ಥೆ ಅಭೂತಪೂರ್ವ ಸುಧಾರಣೆ ಕಂಡಿದೆ. ಅವರ ಮಾರ್ಗದರ್ಶನದಲ್ಲಿ ಮತ್ತಷ್ಟು ಹೊಸ ಹೊಸ ಸುಧಾರಣಾ ಕ್ರಮಗಳು ಕಾರ್ಯರೂಪಕ್ಕೆ ಬರಲಿವೆ ಎಂದರು.

ನೀಟ್ ವಿವಾದದಂತಹ ಪ್ರಸ್ತುತ ಸನ್ನಿವೇಶದಲ್ಲಿ ಪ್ರಧಾನಿ ಮೋದಿ ಅವರು ನನ್ನ ಮೇಲೆ ನಂಬಿಕೆಯಿಟ್ಟು ಶಿಕ್ಷಣ ಇಲಾಖೆ ಹೆಚ್ಚುವರಿ ಹೊಣೆಗಾರಿಕೆ ವಹಿಸಿದ್ದಾರೆ. ಎಲ್ಲರ ಸಹಕಾರದಲ್ಲಿ ಅತ್ಯಂತ ಜವಾಬ್ದಾರಿಯುತವಾಗಿ ನಿಭಾಯಿಸುತ್ತೇನೆಂದು ಹೇಳಿದರು.

ಧರ್ಮೇಂದ್ರ ಪ್ರಧಾನ್ ಅವರು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮೂಲಕ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಆವಿಷ್ಕಾರ, ಕ್ರಾಂತಿಗೆ ನಾಂದಿ ಹಾಡಿದ್ದಾರೆ. ಅವರ ಅಗತ್ಯ ಸಲಹೆ, ಸಹಕಾರದೊಂದಿಗೆ ಮತ್ತಷ್ಟು ಸುಧಾರಣೆ ನೀತಿಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ಪ್ರಧಾನಿ ಮೋದಿ ಅವರು ನನ್ನ ಮೇಲೆ ನಂಬಿಕೆಯಿರಿಸಿ ಶಿಕ್ಷಣ ಕ್ಷೇತ್ರದ ಮಹತ್ತರ ಜವಾಬ್ದಾರಿ ವಹಿಸಿದ್ದಾರೆ. ಮೋದಿ ಅವರ ಸಮರ್ಥ ಆಡಳಿತದಲ್ಲಿ ಅವರ ಅತ್ಯುಪಯುಕ್ತ ಮಾರ್ಗದರ್ಶನದೊಂದಿಗೆ ನಮ್ರತೆ ಮತ್ತು ಅತ್ಯಂತ ಜವಾಬ್ದಾರಿಯಿಂದ ಈ ಕರ್ತವ್ಯವನ್ನು ಪೂರೈಸುವುದಾಗಿ ವಿಶ್ವಾಸದಿಂದ ಹೇಳಿದರು.

ಆಹಾರ ಇಲಾಖೆ, ಹೊಸ ಮತ್ತು ನವೀಕರಿಸಬಹುದಾದ ಇಂಧನ, ಗ್ರಾಹಕ ವ್ಯವಹಾರ ಸಚಿವಾಲಯಗಳ ಜವಾಬ್ದಾರಿ ಜತೆಗೆ ಇದೀಗ ದೇಶದ ಶೈಕ್ಷಣಿಕ ಕ್ಷೇತ್ರದ ಮಗದೊಂದು ಮಹತ್ವದ ಜವಾಬ್ದಾರಿಯನ್ನು ನೀಡಿದ್ದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಹೇಳುತ್ತೇನೆ. ಅವರ ಮಾರ್ಗದರ್ಶನ ಮತ್ತು ನಾಯಕತ್ವದಲ್ಲಿ ಪಾರದರ್ಶಕತೆಗೆ ಒತ್ತು ನೀಡುವುದಾಗಿ ಪ್ರಲ್ಹಾದ ಜೋಶಿ ಹೇಳಿದರು.

ಪ್ರಧಾನಿ ಮೋದಿ ಅವರ ನಿರೀಕ್ಷೆ ಜತೆಗೆ ವಿದ್ಯಾರ್ಥಿ-ಯುವಜನರ, ಸಮಗ್ರ ಶೈಕ್ಷಣಿಕ ವಲಯದ ಆಶೋತ್ತರಗಳಿಗೆ ತ್ವರಿತವಾಗಿ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.


Share

You cannot copy content of this page