ಸಮಗ್ರ ಸುದ್ದಿ

ಹೊಸ ತಲೆಮಾರಿಗೆ ದಾಸಸಾಹಿತ್ಯದ ಪರಂಪರೆ: ಆಗಸ್ಟ್ 6, 7ಕ್ಕೆ ಜಯನಗರದಲ್ಲಿ ‘ಭಜ ಮನ’ ಗಾಯನ ಕಾರ್ಯಾಗಾರ

Share

ಬೆಂಗಳೂರು: ‘ಪರಮ್ ಕಲ್ಚರ್’, ‘ಹರಿವಂಶ ಗ್ರೂಪ್’ ಮತ್ತು ‘ಯುವಕ ಸಂಘ’ದ ಸಹಯೋಗದೊಂದಿಗೆ ‘ಭಜ ಮನ’ ಎಂಬ ಎರಡು ದಿನಗಳ ವಿಶೇಷ ಕಛೇರಿ-ಪೂರ್ವ (Pre-Concert) ಗಾಯನ ಕಾರ್ಯಾಗಾರವನ್ನು ಜಯನಗರದ ‘ಯುವಕ ಸಂಘ’ದಲ್ಲಿ ಆಗಸ್ಟ್ 6 ಮತ್ತು 7 ರಂದು ಸಂಜೆ 6 ರಿಂದ 8 ಗಂಟೆಯವರೆಗೆ ಆಯೋಜಿಸಿದೆ. ಪ್ರಸಿದ್ಧ ಶಾಸ್ತ್ರೀಯ ಸಂಗೀತ ವಿದ್ವಾಂಸ ಹಾಗೂ ಹರಿದಾಸ ಸಾಹಿತ್ಯದ ಖ್ಯಾತನಾಮರಾದ ಡಾ.ವಿದ್ಯಾಭೂಷಣ ಮತ್ತು ಅವರ ಪುತ್ರಿ ಮೇಧಾ ವಿದ್ಯಾಭೂಷಣ ಅವರು ಈ ಸಾಂಸ್ಕೃತಿಕ ತರಬೇತಿಯ ನೇತೃತ್ವ ವಹಿಸಲಿದ್ದಾರೆ.

ಈ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವ ಸಂಗೀತ ಪ್ರೇಮಿಗಳು ಮತ್ತು ವಿದ್ಯಾರ್ಥಿಗಳಿಗೆ ಕಲಾವಿದರಿಂದ ನೇರವಾಗಿ ದಾಸರಪದಗಳು ಹಾಗೂ ಭಜನೆಗಳನ್ನು ಕಲಿಯುವ ಸುವರ್ಣಾವಕಾಶ ದೊರೆಯಲಿದೆ. ಇದರೊಂದಿಗೆ ವಿದ್ವಾಂಸರ ಸುದೀರ್ಘ ಸಂಗೀತ ಪಯಣ, ಭಕ್ತಿಪೂರ್ವಕ ಗಾಯನದ ಶೈಲಿ ಮತ್ತು ಅವರ ಅನುಭವಗಳ ಕುರಿತು ಹತ್ತಿರದಿಂದ ತಿಳಿಯಬಹುದಾಗಿದೆ. ಈ ಕಾರ್ಯಾಗಾರಕ್ಕೆ ನೋಂದಾಯಿಸಿಕೊಳ್ಳಲು ಮತ್ತು ಪ್ರವೇಶಾವಕಾಶ ಪಡೆಯಲು ‘ಬುಕ್‌ಮೈಶೋ’ ನಲ್ಲಿ (BookMyShow) ಅವಕಾಶ ಕಲ್ಪಿಸಲಾಗಿದೆ.

ವಿಶೇಷ ತರಬೇತಿಯೊಂದಿಗೆ ವೇದಿಕೆ ಹಂಚಿಕೊಳ್ಳುವ ಸುವರ್ಣಾವಕಾಶ

ಒಟ್ಟು ನಾಲ್ಕು ಗಂಟೆಗಳ ಕಾಲ ನಡೆಯುವ ಈ ಕಾರ್ಯಾಗಾರದಲ್ಲಿ ವಿಶೇಷ ಕಲಿಕಾ ಸಾಮಗ್ರಿಗಳನ್ನು ನೀಡಲಾಗುವುದು. ಜೊತೆಗೆ, ಕಾರ್ಯಾಗಾರದಲ್ಲಿ ಉತ್ತಮ ಪ್ರದರ್ಶನ ನೀಡುವ ಅಭ್ಯಾಸಿಗಳನ್ನು ಆಯ್ಕೆ ಮಾಡಿ, ಆಗಸ್ಟ್ 8 ರಂದು ಎನ್‌ಎಂಕೆಆರ್‌ವಿ ಕಲಾಕ್ಷೇತ್ರದ ಮಂಗಳ ಮಂಟಪದಲ್ಲಿ ಸಂಜೆ 5 ಗಂಟೆಗೆ ನಡೆಯಲಿರುವ ಮುಖ್ಯ ಕಛೇರಿಯಲ್ಲಿ ಡಾ. ವಿದ್ಯಾಭೂಷಣ ಅವರೊಂದಿಗೆ ವೇದಿಕೆ ಹಂಚಿಕೊಂಡು ಹಾಡುವ ಅಪರೂಪದ ಅವಕಾಶವನ್ನು ಕಲ್ಪಿಸಿಕೊಡಲಾಗುತ್ತದೆ.

ನಾಲ್ಕು ದಶಕಗಳ ಸಂಗೀತ ಪಯಣದ ಹರಿದಾಸ ಸಾಹಿತ್ಯದ ಕೊಂಡಿ

ಕಳೆದ ನಾಲ್ಕು ದಶಕಗಳಿಂದ ದಾಸರ ಪದಗಳನ್ನು ಜಗತ್ತಿನಾದ್ಯಂತ ಪಸರಿಸಿರುವ ಡಾ. ವಿದ್ಯಾಭೂಷಣ ಅವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಹಾಗೂ ‘ಸಂಗೀತ ವಿದ್ಯಾ ನಿಧಿ’ ಬಿರುದಾಂಕಿತರಾಗಿದ್ದಾರೆ. 100ಕ್ಕೂ ಹೆಚ್ಚು ಆಲ್ಬಮ್‌ಗಳ ಮೂಲಕ ಹರಿದಾಸ ಸಾಹಿತ್ಯವನ್ನು ಮನೆಮನಗಳಿಗೆ ತಲುಪಿಸಿರುವ ಅವರು, ಇದೀಗ ಹೊಸ ತಲೆಮಾರಿನ ಗಾಯಕರಿಗೆ ಭಕ್ತಿಪೂರ್ವಕ ಗಾಯನದ ಪರಂಪರೆಯನ್ನು ಧಾರೆ ಎರೆಯಲು ‘ಭಜ ಮನ’ ಮೂಲಕ ಮುಂಚೂಣಿಯಲ್ಲಿದ್ದಾರೆ.


Share

You cannot copy content of this page