ಸಮಗ್ರ ಸುದ್ದಿ

ಸಾವಿರ ಪದಗಳಲ್ಲಿ ಹೇಳುವುದನ್ನು ಒಂದು ಚಿತ್ರ ತಿಳಿಸುತ್ತದೆ: ಜೆ.ಮಂಜುನಾಥ್

Share

ಬೆಂಗಳೂರು: ಸಾವಿರ ಪದಗಳಲ್ಲಿ ವಿಶ್ಲೇಷಣೆ ಮಾಡಬಹುದಾದುದನ್ನು ಒಂದು ಛಾಯಾಚಿತ್ರ ತಿಳಿಸುವುದರಿಂದ ಛಾಯಾಚಿತ್ರಕ್ಕಿರುವ ಶಕ್ತಿ ಎಂತಹದು ಎಂಬುದನ್ನು ತಿಳಿಸುತ್ತದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಜೆ.ಮಂಜುನಾಥ್ ಅವರು ಅಭಿಪ್ರಾಯಪಟ್ಟರು.

ಅವರು ಇಂದು ಇಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಕರ್ನಾಟಕ ಚಿತ್ರ ಕಲಾ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ FOCUS-ON-NEWS 2.0 ಪತ್ರಿಕಾ ಛಾಯಾಗ್ರಾಹಕರಿಗೆ ರಾಷ್ಟ್ರಮಟ್ಟದ ಛಾಯಾಚಿತ್ರ ಪ್ರದರ್ಶನ, ಸ್ಪರ್ಧೆ ಹಾಗೂ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಛಾಯಾಗ್ರಾಹಕರು ನಮ್ಮ ಸುತ್ತ ಮುತ್ತ ನಡೆಯುವ ಘಟನೆಗಳು ಮತ್ತು ಭಾವನೆಗಳನ್ನು ಕ್ಯಾಮಾರದಲ್ಲಿ ಸೆರೆ ಹಿಡಿದು ಜನರಿಗೆ ತಲುಪಿಸುತ್ತಾರೆ. ಸಾವಿರ ಪದಗಳು ತಿಳಿಸುವುದನ್ನು ಒಂದು ಛಾಯಾಚಿತ್ರ ಹೇಳುವುದಲ್ಲದೆ ನಮ್ಮ ಮನದಲ್ಲಿ ಬಹಳ ಕಾಲ ಉಳಿಯುತ್ತದೆ. ಕೆಲವೊಂದು ಸಾರಿ ಛಾಯಾಚಿತ್ರ ತೆಗೆಯಲು ಛಾಯಾಗ್ರಾಹಕರು ತುಂಬಾ ಸಹನೆಯಿಂದ ಕಾಯಬೇಕಾಗುತ್ತದೆ. ಹಾಗೆಯೇ ಕೆಲವೊಂದು ಬಾರಿ ತುಂಬಾ ಸೂಕ್ಷ್ಮತೆ ಮತ್ತು ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕಾಗುತ್ತದೆ. ಹಾಗಾಗಿ ಅವರ ಶ್ರಮ ಮತ್ತು ಶ್ರದ್ಧೆ ಅತ್ಯಂತ ಪ್ರಶಂಸನೀಯ ಎಂದರು.

ಮಾಧ್ಯಮಕ್ಷೇತ್ರದಲ್ಲಿ ತಂತ್ರಜ್ಞಾನವು ವೇಗವಾಗಿ ಬದಲಾಗುತ್ತಿದ್ದು, ಆಧುನಿಕ ಉಪಕರಣಗಳ ಅವಶ್ಯಕತೆ ಇರುವುದರಿಂದ ಆಧುನಿಕತೆಗೆ ತಕ್ಕಂತೆ ಛಾಯಾಗ್ರಾಹಕರು ಕೂಡ ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವುದು ಅಗತ್ಯವಾಗಿದೆ. ಕರ್ನಾಟಕ ವಿವಿಧ ಭಾಗಗಳಲ್ಲಿ ಈ ವೃತ್ತಿಯಲ್ಲಿ ತೊಡಗಿರುವವರಿಗೆ ತಂತ್ರಜ್ಞಾನದ ಅರಿವು, ಜಾಗೃತಿ ಮೂಡಿಸಲು ತರಬೇತಿ ನೀಡುವುದು ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಅಕಾಡೆಮಿಯು ಹಮ್ಮಿಕೊಂಡಿರುವ ಎರಡು ದಿನಗಳ ಕಾರ್ಯಾಗಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಛಾಯಾಗ್ರಾಹಕರು ಭಾಗವಹಿಸುವ ಮೂಲಕ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕಾರ್ಯಗಾರದ ಉದ್ಘಾಟನೆಯಲ್ಲಿ ಭಾಗವಹಿಸಿದ್ದ ಖ್ಯಾತ ಕನ್ನಡ ಚಲನಚಿತ್ರ ನಟ ಶ್ರೀಮುರಳಿ ಅವರು ಮಾತನಾಡಿ ಛಾಯಾಗ್ರಾಹಕರ ಕೆಲಸ ಸವಾಲಿನ ಕೆಲಸವಾಗಿದ್ದು, ಅವರು ಎಲೆಮರೆ ಕಾಯಿಯಂತೆ ಕೆಲಸ ನಿರ್ವಹಿಸುತ್ತಾರೆ ಎಂದರು.

ಒಂದು ಛಾಯಾಚಿತ್ರಕ್ಕಾಗಿ ಕೆಲವೊಂದು ಸಾರಿ ನೂರಾರು ಛಾಯಾಚಿತ್ರ ತೆಗೆಯಬೇಕಾಗುತ್ತದೆ. ಪರದೆಯ ಮೇಲೆ ಚಿತ್ರವನ್ನು ನೋಡಿ ಅದು ಚೆನ್ನಾಗಿದೆ, ಇದು ಚೆನ್ನಾಗಿಲ್ಲ ಎಂದು ನಾವು ಸುಲಭವಾಗಿ ವಿಶ್ಲೇಷಿಸುತ್ತೇವೆ. ಆದರೆ ಆ ಚಿತ್ರ ತೆಗೆಯಲು ಛಾಯಾಗ್ರಾಹಕನ ಶ್ರಮ ಎಷ್ಟಿರುತ್ತದೆ ಎಂಬುದನ್ನು ನಾವು ಮರೆಯುತ್ತೇವೆ. ಛಾಯಾಗ್ರಾಹಕರ ಕೆಲಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.

ಛಾಯಾಚಿತ್ರ ಸ್ಪರ್ಧೆಗೆ ಅಂತಿಮವಾಗಿ ಪ್ರವೇಶ ಪಡೆದ 50 ಛಾಯಾಚಿತ್ರಗಳನ್ನು ವೀಕ್ಷಿಸಿದಾಗ ನನಗೆ ಸಂತೋಷ ಮತ್ತು ನೋವು ಎರಡು ಭಾಸವಾಯಿತು. ಕೆಲವು ಚಿತ್ರಗಳು ಜೀವನವನ್ನು ಸುಂದರವಾಗಿಸಿ, ಮನಸ್ಸನ್ನು ಉಲ್ಲಾಸಗೊಳಿಸಿದರೆ, ಮತ್ತೆ ಕೆಲವು ಮನಸಿಗೆ ನೋವವನ್ನು ನೀಡುತ್ತದೆ. ಇದೇ ಛಾಯಾಚಿತ್ರಕ್ಕಿರುವ ಶಕ್ತಿ ಎಂದರು.

ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಕೇರಳದ ಬಿನುರಾಜು, ದ್ವಿತೀಯ ಬಹುಮಾನ ಮುಂಬೈನ ಕುನಾಲ್ ಪಾಟೀಲ್ ಹಾಗೂ ತೃತೀಯ ಬಹುಮಾನ ತೆಲಂಗಾಣದ ವೀರಗೋಣಿ ರಜನಿಕಾಂತ್ ಅವರು ಪಡೆದಿರುವುದಾಗಿ ಈ ಸಂದರ್ಭದಲ್ಲಿ ಪ್ರಶಸ್ತಿ ವಿಜೇತರ ಹೆಸರನ್ನು ಘೋಷಣೆ ಮಾಡಲಾಯಿತು.

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಶ್ರೀಮತಿ ಆಯೇಶಾ ಖಾನಂ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಸಮಾಜದಲ್ಲಿ ಅವಘಡ ಅಥವಾ ಅನಾಹುತ ಸಂಭವಿಸಿದಾಗ ಎಲ್ಲರೂ ದೂರ ಓಡಿದರೆ ಛಾಯಾಗ್ರಾಹಕರು ಮಾತ್ರ ಸತ್ಯವನ್ನು ಜಗತ್ತಿಗೆ ತೋರಿಸಲು, ಪ್ರಾಣದ ಹಂಗನ್ನು ತೊರೆದು ಘಟನಾ ಸ್ಥಳಕ್ಕೆ ಹೋಗುತ್ತಾರೆ. ಅವರು ಮಾಧ್ಯಮ ಕ್ಷೇತ್ರದ ಕಣ್ಣುಗಳಿದ್ದಂತೆ ಎಂದರು.

ಈ ಬಾರಿಯ ಪ್ರದರ್ಶನಕ್ಕೆ ದೇಶದಾದ್ಯಂತ ಸುಮಾರು 222ಕ್ಕೂ ಹೆಚ್ಚ ಛಾಯಾಚಿತ್ರಗಳು ಬಂದಿದ್ದು, ಅಸೋಷಿಯೇಟಡ್ ಪ್ರೆಸ್ ನ ಹಿರಿಯ ಪೋಟೋ ಎಡಿಟರ್ ಎಜಾಜ್ ರಾಹಿ ಅವರು ಅತ್ಯಂತ ವೃತ್ತಿಪರವಾಗಿ, ನಿಷ್ಪಕ್ಷಪಾತವಾಗಿ ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡಿದ್ದಾರೆ ಎಂದು ತಿಳಿಸಿದರು.

ಸುಳ್ಳು ಸುದ್ದಿ ಹಾಗೂ ತಪ್ಪು ಮಾಹಿತಿಗಳನ್ನು ತಡೆಯಲು ಅಕಾಡೆಮಿ ಶ್ರಮಿಸುತ್ತಿದೆ. ಎಐ ಮತ್ತು ಆಧುನಿಕ ತಂತ್ರಜ್ಞಾನ ಯುಗದಲ್ಲಿ ವೃತ್ತಿಪರ ಛಾಯಾಗ್ರಾಹಕರಿಗೆ ಸತ್ಯ ಸಂದತೆ ಮತ್ತು ಧೈರ್ಯ ಅತ್ಯಂತ ಪ್ರಮುಖವಾಗಿದ್ದು, ಕರ್ನಾಟಕದಲ್ಲಿ ಆರಂಭಗೊಂಡ ಈ ಪ್ರಯತ್ನವು ಈಗ ರಾಷ್ಟ್ರೀಯ ಮಟ್ಟ ತಲುಪಿದ್ದು, ಮುಂದಿನ ದಿನಗಳಲ್ಲಿ ದಕ್ಷಿಣ ಏಷ್ಯಾ ಮಟ್ಟದಲ್ಲಿ ಈ ಪ್ರದರ್ಶನವನ್ನು ವಿಸ್ತರಿಸುವ ಆಶಯವನ್ನು ವ್ಯಕ್ತಪಡಿಸಿದರು.

ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಛಾಯಾಗ್ರಾಹಕರು ಈ ಕ್ಷೇತ್ರಕ್ಕೆ ಬರಬೇಕೆಂದು ಆಯೇಶಾ ಖಾನಂ ಅವರು ಆಶಯ ವ್ಯಕ್ತಪಡಿಸಿದರು.


Share

You cannot copy content of this page