ಸಮಗ್ರ ಸುದ್ದಿ

ಕೊಪ್ಪಳ ಜಿಲ್ಲೆ ಬರ ಘೋಷಣೆ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆ: ಸಚಿವ ಶಿವರಾಜ್ ತಂಗಡಗಿ

Share

ಕೊಪ್ಪಳ: ಬರ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸುತ್ತೇವೆ. ವಾಸ್ತವ ಪರಿಸ್ಥಿತಿ ಅರಿತು ಬರ ಘೋಷಣೆಯ ಬಗ್ಗೆ ಕ್ರಮ ವಹಿಸುತ್ತೇವೆ. ರೈತರ ಜೊತೆ ಸರ್ಕಾರ ಇದ್ದು, ಚಿಂತೆಗೀಡಾಗಬಾರದು ಎಂದು ಸಚಿವ ಶಿವರಾಜ್ ಎಸ್.ತಂಗಡಗಿ ಹೇಳಿದ್ದಾರೆ.

ತಮ್ಮ ಹಿರಿಯ ಸಂಪುಟ ಸಹೋದ್ಯೋಗಿ
ಬಸವರಾಜ ರಾಯರೆಡ್ಡಿ ಅವರೊಂದಿಗೆ ಕುಷ್ಟಗಿ, ಕುಕನೂರ, ಯಲಬುರ್ಗಾ ಮತ್ತು ಕೊಪ್ಪಳ ತಾಲೂಕುಗಳಲ್ಲಿ ಬೆಳೆಹಾನಿಗೀಡಾದ ಪ್ರದೇಶಗಳಿಗೆ ಭೇಟಿ‌ ನೀಡಿ ಪರಿಶೀಲಿಸಿದ ಬಳಿಕ ಸಚಿವ‌ ಶಿವರಾಜ್ ತಂಗಡಗಿ ಅವರು ಮಾಧ್ಯಮದವರ ಜೊತೆ ಮಾತನಾಡಿದರು.

ಕೊಪ್ಪಳ ಜಿಲ್ಲೆಯಲ್ಲಿ ಮಳೆ‌ ಕೊರತೆಯಿಂದ ಬೆಳೆ ನಾಶವಾಗಿರುವ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ್ದು, ರೈತರಿಗೆ ನ್ಯಾಯಯುತ ಪರಿಹಾರ ಒದಗಿಸಲಾಗುವುದು ಅವರು ಭರವಸೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ ಶೇ.40ರಷ್ಟು ಮಳೆ ಕೊರತೆಯಾಗಿದ್ದು, ಇದರಿಂದಾಗಿ ಶೇ.63ರಷ್ಟು ಮಾತ್ರ ಬಿತ್ತನೆಯಾಗಿದೆ. ತೊಗರಿ, ಹೆಸರು, ಸಜ್ಜೆ ಸೇರಿದಂತೆ ನಾನಾ ಬೆಳೆಗಳು ಹಾಳಾಗಿರುವುದನ್ನು ನಾವು ಖುದ್ದು ನೋಡಿದ್ದೇವೆ. ಈ ಬಗ್ಗೆ ಜಿಲ್ಲೆಯಿಂದ ವರದಿ ಕಳಿಸುತ್ತೇವೆ.

ರೈತರಿಗೆ ನ್ಯಾಯಯುತ ಪರಿಹಾರ: ಇನ್ನು ಸಚಿವರಾದ ಬಸವರಾಜ ರಾಯರೆಡ್ಡಿ ಅವರು ಮಾತನಾಡಿ, ಮಳೆಯಾಗದೇ ಬರ ಬೀಳುವುದು ಈ ಭಾಗದಲ್ಲಿ ಹೊಸತಲ್ಲ. ವಾಡಿಕೆಯ ಮಳೆಯು ರಾಜ್ಯದಲ್ಲಿ ಶೆ.32ರಷ್ಟು ಹಾಗೂ ಕೊಪ್ಪಳ ಜಿಲ್ಲೆಯಲ್ಲಿ 40ರಷ್ಟು ಕೊರತೆಯಾಗಿದೆ. 100 ಎಕರೆ ಬದಲು ಕೇವಲ 66 ಎಕರೆ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾದ‌ ಪರಿಸ್ಥಿತಿ ಎಲ್ಲೆಡೆ ಕಾಣುತ್ತಿದೆ. ನಷ್ಟಕ್ಕೆ ಒಳಗಾಗಿರುವ ರೈತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಅವರು ಮಾತನಾಡಿ, ಬಿತ್ತಿದ ಬೆಳೆಗಳು ಬಾಡುತ್ತಿರುವ ಬಗ್ಗೆ ಕ್ಷೇತ್ರ ಭೇಟಿ ಮಾಡಿ ಫೋಟೊ ಮತ್ತು ವಿಡಿಯೋ ಸಂಗ್ರಹಿಸಿ ಸಚಿವರೊಂದಿಗೆ ಚರ್ಚಿಸಿ ವಸ್ತುನಿಷ್ಠ ವರದಿಯನ್ನು ಸರ್ಕಾರಕ್ಕೆ ಕಳುಹಿಸುತ್ತೇವೆ. ಈಗಾಗಲೇ ಜಿಲ್ಲೆಯ 1.56 ಲಕ್ಷ ರೈತರು ಬೆಳೆ ವಿಮೆಯ ಪ್ರಿಮಿಯಂ ಕಟ್ಟಿದ್ದಾರೆ. ಬರದ ವೇಳೆಯಲ್ಲಿ ರೈತರು ಪರ್ಯಾಯ ಕೃಷಿಯತ್ತ ಹೊರಳಲು ತೋಟಗಾರಿಕೆ, ಕೃಷಿ ಇಲಾಖೆಗಳು ರೈತರಲ್ಲಿ ಜಾಗೃತಿ ಮೂಡಿಸುತ್ತಿವೆ ಎಂದು ತಿಳಿಸಿದರು.

ವಾಡಿಕೆಗಿಂತ ಕಡಿಮೆ ಮಳೆ: ಕೊಪ್ಪಳ ಜಿಲ್ಲೆಯಲ್ಲಿ ಇದುವರೆಗೆ 158 ಮಿಮೀ ನಷ್ಟು ವಾಡಿಕೆ ಮಳೆಯಾಗಬೇಕಿತ್ತು. ಬದಲಾಗಿ 98 ಮೀ. ಮೀಟರ್ ಮಾತ್ರ ಮಳೆಯಾಗಿದೆ. ಯಲಬುರ್ಗಾ ತಾಲೂಕಿನಲ್ಲಿ ಶೆ.35ರಷ್ಟು ಹಾಗೂ ಕುಕನೂರ ತಾಲೂಕಿನಲ್ಲಿ ಶೆ.24ರಷ್ಟು ಮಳೆಯ ಕೊರತೆಯಾಗಿದೆ ಎಂದು ಇದೇ ವೇಳೆ ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಮಾಜಿ ಸಂಸದರಾದ ಸಂಗಣ್ಣ ಕರಡಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ ಪಿ ಮೋಹನರಾಜ್, ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಇಟ್ನಾಳ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್ ಅರಸಿದ್ದಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಕೊಪ್ಪಳ ಸಹಾಯಕ ಆಯುಕ್ತರಾದ ಮೆಹಬೂಬ ಜಿಲಾನಿ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.


Share

You cannot copy content of this page