ಸಮಗ್ರ ಸುದ್ದಿ

ನಗರ ಪೊಲೀಸ್ ವ್ಯವಸ್ಥೆಯನ್ನು ಭವಿಷ್ಯದ ಸವಾಲುಗಳಿಗೆ ಸಜ್ಜುಗೊಳಿಸಲು ಕರ್ನಾಟಕ ಅರ್ಬನ್ ಪೋಲಿಸಿಂಗ್ ಇನ್ನೋವೇಶನ್ ಸೆಂಟರ್

Share

ಬೆಂಗಳೂರು: ನಗರ ಪೊಲೀಸ್ ವ್ಯವಸ್ಥೆಯನ್ನು ಇನ್ನಷ್ಟು ಸ್ಮಾರ್ಟ್, ತಂತ್ರಜ್ಞಾನ ಆಧಾರಿತ ಹಾಗೂ ಭವಿಷ್ಯದ ಸವಾಲುಗಳಿಗೆ ಸಜ್ಜುಗೊಳಿಸಲು “ಕರ್ನಾಟಕ ಅರ್ಬನ್ ಪೋಲಿಸಿಂಗ್ ಇನ್ನೋವೇಶನ್ ಸೆಂಟರ್” (Karnataka Urban Policing Innovation Center) ಸ್ಥಾಪಿಸುವ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ತಜ್ಞರ ಸಲಹಾ ತಂಡಗಳೊಂದಿಗೆ ಸವಿಸ್ತಾರ ಪರಿಶೀಲನಾ ಸಭೆ ನಡೆಸಲಾಯಿತು ಎಂದು ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ನಗರೀಕರಣದ ವೇಗ ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ ಅಪರಾಧಗಳ ಸ್ವರೂಪ, ಸಾರ್ವಜನಿಕ ಸುರಕ್ಷತೆ ಮತ್ತು ಸಂಚಾರ ನಿರ್ವಹಣೆಯ ಸವಾಲುಗಳೂ ನಿರಂತರವಾಗಿ ಬದಲಾಗುತ್ತಿವೆ. ಇಂತಹ ಹೊಸ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಂಶೋಧನೆ, ನಾವೀನ್ಯತೆ, ಆವಿಷ್ಕಾರ ಹಾಗೂ ತಂತ್ರಜ್ಞಾನ ಆಧಾರಿತ ಪರಿಹಾರಗಳಿಗೆ ವಿಶೇಷ ಒತ್ತು ನೀಡುವ ಶಾಶ್ವತ ಸಂಸ್ಥೆಯ ಅಗತ್ಯವಿದೆ ಎಂದು ಸಚಿವರು ಅಧಿಕಾರಿಗಳಿಗೆ ಹೇಳಿದರು.

ಪ್ರಸ್ತಾವಿತ ಕರ್ನಾಟಕ ಅರ್ಬನ್ ಪೋಲಿಸಿಂಗ್ ಇನ್ನೋವೇಶನ್ ಸೆಂಟರ್ ಮೂಲಕ ಸಂಶೋಧನೆ, ನಾವೀನ್ಯತೆ ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ ಅಗತ್ಯ ಸಂಪನ್ಮೂಲಗಳನ್ನು ಮೀಸಲಿಟ್ಟು, ನಗರ ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ರೂಪಿಸುವ ಉದ್ದೇಶ ಹೊಂದಲಾಗಿದೆ. ಈ ಕೇಂದ್ರವು ಕೃತಕ ಬುದ್ಧಿಮತ್ತೆ (AI), ದತ್ತಾಂಶ ವಿಶ್ಲೇಷಣೆ, ಸ್ಮಾರ್ಟ್ ನಿಗಾ ವ್ಯವಸ್ಥೆಗಳು, ಡಿಜಿಟಲ್ ತಂತ್ರಜ್ಞಾನಗಳು ಹಾಗೂ ಇತರ ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆಯ ಮೂಲಕ ನಗರ ಪೊಲೀಸ್ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ನೆರವಾಗಲಿದೆ ಎಂದು ತಿಳಿಸಿದ್ದಾರೆ.

ಈ ಕೇಂದ್ರದ ಮೂಲಕ ಸ್ಮಾರ್ಟ್ ಸರ್ವೆಲೆನ್ಸ್, ಪರಿಣಾಮಕಾರಿ ಸಂಚಾರ ನಿರ್ವಹಣೆ, ಅಪರಾಧ ತಡೆ, ಸಾರ್ವಜನಿಕ ಸುರಕ್ಷತೆ ಮತ್ತು ನಗರ ಪ್ರದೇಶಗಳಲ್ಲಿ ಉದ್ಭವಿಸುತ್ತಿರುವ ಹೊಸ ಸವಾಲುಗಳಿಗೆ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಆದ್ಯತೆ ನೀಡಲಾಗುವುದು ಎಂದೂ ಸಚಿವರು ಮಾಹಿತಿ ನೀಡಿದ್ದಾರೆ.
ನಮ್ಮ ನಗರಗಳು ನಿರಂತರವಾಗಿ ಬೆಳೆಯುತ್ತಿವೆ ಮತ್ತು ರೂಪಾಂತರಗೊಳ್ಳುತ್ತಿವೆ. ಅದಕ್ಕೆ ಅನುಗುಣವಾಗಿ ಪೊಲೀಸ್ ವ್ಯವಸ್ಥೆಯೂ ಆಧುನೀಕರಣಗೊಳ್ಳಬೇಕು. ನಿರಂತರ ಸಂಶೋಧನೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವ ಸಾಂಸ್ಥಿಕ ವ್ಯವಸ್ಥೆಯನ್ನು ನಿರ್ಮಿಸುವ ಮೂಲಕ ಭವಿಷ್ಯದ ನಗರ ಪೊಲೀಸ್ ವ್ಯವಸ್ಥೆಯನ್ನು ಇನ್ನಷ್ಟು ಸಮರ್ಥ, ತ್ವರಿತ ಮತ್ತು ನಾಗರಿಕ ಸ್ನೇಹಿಯಾಗಿಸುವುದು ನಮ್ಮ ಗುರಿಯಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.


Share

You cannot copy content of this page