ಸಮಗ್ರ ಸುದ್ದಿ

ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಕಚೇರಿಗಾಗಿ ಜಾಗ ನೀಡಲು ಬದ್ಧ: ಸಿಎಂ ಡಿ ಕೆ ಶಿವಕುಮಾರ್

Share

ಬೆಂಗಳೂರು: ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಕಚೇರಿಗೆ ಜಾಗ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ. ವಿಧಾನಸೌಧ ಸುತ್ತಮುತ್ತ ಜಾಗ ಹುಡುಕಬೇಕು, ಹೊರ ಭಾಗದಲ್ಲಾದರೆ ದೊಡ್ಡ ಜಾಗ ನೀಡಲು ಸಿದ್ಧ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಭರವಸೆ ನೀಡಿದರು.

ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಪದಾಧಿಕಾರಿಗಳು ಸಿಎಂ ಡಿ ಕೆ ಶಿವಕುಮಾರ್ ಅವರನ್ನು ಗೃಹಕಚೇರಿ ಕೃಷ್ಣಾದಲ್ಲಿ ಗುರುವಾರ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಈ ವೇಳೆ ಶಿವಕುಮಾರ್ ಅವರು ಮಾತನಾಡಿದರು.

“ಮಹಿಳೆಯರ ಪ್ರೋತ್ಸಾಹದಿಂದ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ನಾವು ಚುನಾವಣೆಗೂ ಮುನ್ನ ಮಹಿಳೆಯರ ಹಿತ ಕಾಯಲು ಪ್ರಕಟಿಸಿದ್ದ ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ, ಅನ್ನಭಾಗ್ಯ, ಯುವನಿಧಿ ಯೋಜನೆ ಜಾರಿ ಮಾಡಿದ್ದೇವೆ. ಈ ಯೋಜನೆಗಳಿಂದ ಕ್ರಾಂತಿಕಾರಿ ಬದಲಾವಣೆ ಬಂದಿದೆ. ನಮ್ಮ ಯೋಜನೆಗಳನ್ನು ರಾಷ್ಟ್ರದಲ್ಲಿ ಬೇರೆ ರಾಜ್ಯಗಳು ಇವುಗಳನ್ನು ಪಾಲನೆ ಮಾಡಿವೆ. ನಮ್ಮ ಸರ್ಕಾರ ಈ ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ವಾರ್ಷಿಕವಾಗಿ ಖರ್ಚು ಮಾಡುತ್ತಿದೆ. ನಾಗರಿಕರ ಆಸ್ತಿ ದಾಖಲೆಗಳನ್ನು ಡಿಜಿಟಲ್ ಸ್ಕ್ಯಾನ್ ಮಾಡಿಸಿ ದಾಖಲೆಗಳನ್ನು ಸರಿಪಡಿಸಿಕೊಡಲು ನಮ್ಮ ಸರ್ಕಾರ ಮುಂದಾಗಿದೆ. ನಮ್ಮ ಗ್ಯಾರಂಟಿ ದೇಶದ ಗ್ಯಾರಂಟಿಯಾಗಿದೆ” ಎಂದರು.

ನೀವು ಆಗಾಗ್ಗೆ ಸೇರಿ ಸಂಘಟನೆ ಮಾಡಿಕೊಳ್ಳಿ. ಹೆಣ್ಣು ಮಕ್ಕಳು ಜಗಳ ಮಾತ್ರ ಮಾಡಿಕೊಳ್ಳಬೇಡಿ. ಸ್ಪರ್ಧೆ ಇದ್ದೇ ಇರುತ್ತದೆ. ಈ ದೇಶದಲ್ಲಿ ಬದಲಾವಣೆ ಆಗಬೇಕಾದರೆ ಮಹಿಳೆಯರು ಹಾಗೂ ಯುವಕರಿಂದ ಮಾತ್ರ ಸಾಧ್ಯ ಎಂಬುದು ನನ್ನ ನಂಬಿಕೆ. ನಮ್ಮ ಕಾಂಗ್ರೆಸ್ ಸರ್ಕಾರ ಈ ಹಿಂದೆ ಮಹಿಳೆಯರಿಗಾಗಿ ಅಂಗನವಾಡಿ, ಆಶಾ ಕಾರ್ಯಕರ್ತೆ ಕಾರ್ಯಕ್ರಮ ತಂದಿದೆ. ನಿಮ್ಮ ಸಂಘದಲ್ಲಿ 5,500 ಸದಸ್ಯೆಯರಿದ್ದಾರೆ. ನೀವು ಎಷ್ಟು ಜನ ಇದ್ದೀರೋ ಅರಮನೆ ಮೈದಾನದಲ್ಲಿ ದೊಡ್ಡ ಸಮಾವೇಶ ಮಾಡಿ. ಸರ್ಕಾರದ ವತಿಯಿಂದ ನಿಮಗೆ ಅಗತ್ಯ ಸಹಾಯ ಮಾಡಲಾಗುವುದು ಎಂದು ತಿಳಿಸಿದರು.

ನಮ್ಮ ಮುಖ್ಯ ಕಾರ್ಯದರ್ಶಿಗಳು ಕಾನೂನು ಚೌಕಟ್ಟಿನಲ್ಲಿ ಬೇರೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಅವರು ನೀಡು ಶಿಫಾರಸ್ಸು ಮೇಲೆ ತೀರ್ಮಾನ ಮಾಡುತ್ತೇವೆ. ನೀವು ಇಲ್ಲಿ ನನ್ನ ಜೊತೆ ಮಾತನಾಡುವುದು ಮುಖ್ಯವಲ್ಲ. ನಮ್ಮ ಸಂದೇಶವನ್ನು ನೀವು ಎಷ್ಟು ಜನ ಮಹಿಳಾ ಸಿಬ್ಬಂದಿಗೆ ಕಳುಹಿಸುತ್ತೀರಿ ಎಂಬುದು ಮುಖ್ಯ. ಶಿವಕುಮಾರ್ ನಿಂದ ನಿಮಗೆ ರಾಜ್ಯದಲ್ಲಿ ನ್ಯಾಯ ಸಿಗುತ್ತಿದೆ ಎಂಬ ವಿಶ್ವಾಸ ಇದೆ ಅಲ್ಲವೇ? ನೀವು ಮತ್ತೆ ಈ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು. ಆಗ ಇದಕ್ಕೆ ಬೆಲೆ ಇರುತ್ತದೆ. ಇಲ್ಲವಾದರೆ ಇದಕ್ಕೆ ಬೆಲೆ ಇರುವುದಿಲ್ಲ. ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ ಎಂದು ಶುಭಕೋರಿದರು.

ನಾನು ಈ ಹಿಂದೆ ನಾ ನಾಯಕಿ ಕಾರ್ಯಕ್ರಮ ಮಾಡಿದ್ದೆ. ಅಂದರೆ ಪ್ರತಿ ಮಹಿಳೆ ತನ್ನ ಮನೆಯಲ್ಲಿ ನಾಯಕಿಯಾಗಿರುತ್ತಾಳೆ. ಅದು ನಮ್ಮಲ್ಲಿ ಹೆಚ್ಚು ಚಾಲ್ತಿಗೆ ಬರಲಿಲ್ಲ. ಮತ್ತೆ ಇದಕ್ಕೆ ಹೊಸ ರೂಪ ನೀಡಲು ಪ್ರಯತ್ನಿಸುತ್ತೇನೆ. ಮಹಿಳೆಯರಲ್ಲಿ ನಾಯಕತ್ವ ಗುಣ ಬೆಳೆಸಲು ನಾವು ಜಾಗೃತಿ ಮೂಡಿಸಬೇಕು. ಮುಂದೆ ರಾಜಕೀಯದಲ್ಲಿ ಮಹಿಳಾ ಮೀಸಲಾತಿ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಆಗ ಯಾರು ಏನಾಗುತ್ತಾರೆ ಹೇಳಲು ಸಾಧ್ಯವಿಲ್ಲ. ಮೋಟಮ್ಮ ಅವರು ಸಿಬ್ಬಂದಿಯಾಗಿದ್ದರು. ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾದರು. ನಾಯಕತ್ವ ಗುಣ ಬೆಳೆಸಿಕೊಳ್ಳಿ, ಸಾಕಷ್ಟು ಅವಕಾಶಗಳಿವೆ. ನಮ್ಮ ಸರ್ಕಾರ ನಿಮ್ಮ ಜತೆ ಇದೆ. ನೀವು ನಮ್ಮ ಸರ್ಕಾರದ ಜತೆ ಇರಬೇಕು ಎಂದು ತಿಳಿಸಿದರು.


Share

You cannot copy content of this page