ಬೆಂಗಳೂರು :ಕೈಮಗ್ಗ ಮತ್ತು ಜವಳಿ ಇಲಾಖೆಯ ವತಿಯಿಂದ 12ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಗಸ್ಟ್ 7 ರಂದು ಬೆಳಿಗ್ಗೆ 11.00 ಗಂಟೆಗೆ ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೇಂದ್ರ ಕಛೇರಿ ಕೊಂಡಜ್ಜಿ ಬಸಪ್ಪ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ. ಜಿ. ಪರಮೇಶ್ವರ ಘನ ಉಪಸ್ಥಿತಿಯಲ್ಲಿ ಸಚಿವರಾದ ರಿಜ್ವಾನ್ ಅರ್ಷದ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭದಲ್ಲಿ ವಿರೋಧ ಪಕ್ಷದ ನಾಯಕರು, ಸಚಿವರು, ಶಾಸಕರು, ನಿಗಮದ ಅಧ್ಯಕ್ಷರು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ.
ಭಾರತದ ಒಟ್ಟು ಬಟ್ಟೆ ಉತ್ಪಾದನೆಯಲ್ಲಿ ಶೇಕಡಾ 15 ರಷ್ಟು ಭಾಗ ಕೈಮಗ್ಗ ಕ್ಷೇತ್ರದಿಂದಲೇ ಬರುತ್ತದೆ. ವಿಶ್ವದಲ್ಲಿ ಉತ್ಪಾದನೆಯಾಗುವ ಒಟ್ಟು ಕೈಮಗ್ಗ ಉತ್ಪನ್ನಗಳಲ್ಲಿ ಶೇಕಡಾ 95 ರಷ್ಟು ಉತ್ಪನ್ನಗಳು ಭಾರತದಲ್ಲೇ ತಯಾರಾಗುತ್ತವೆ ಎನ್ನುವುದು ವಿಶೇಷ.
2019-20ರ ಕೇಂದ್ರ ಸರ್ಕಾರದ 4ನೇ ರಾಷ್ಟ್ರೀಯ ಕೈಮಗ್ಗ ಗಣತಿಯ ಪ್ರಕಾರ, ಕರ್ನಾಟಕದಲ್ಲಿ 54,791 ಕೈಮಗ್ಗ ನೇಕಾರರಿದ್ದಾರೆ. ಇಲ್ಲಿ 29,377 ಕೈಮಗ್ಗಗಳಲ್ಲಿ ಹತ್ತಿ ಬಟ್ಟೆಗಳು, ರೇμÉ್ಮ ಸೀರೆಗಳು, ಇಳಕಲ್ ಸೀರೆಗಳು, ಟವಲ್, ಲುಂಗಿ ಹಾಗೂ ಬೆಡ್‍ಶೀಟ್‍ಗಳನ್ನು ಉತ್ಪಾದಿಸಲಾಗುತ್ತಿದೆ.
1905ರ ಆಗಸ್ಟ್ 7 ರಂದು ಕಲ್ಕತ್ತಾದಲ್ಲಿ ಸ್ವದೇಶಿ ಚಳುವಳಿ ಪ್ರಾರಂಭವಾಗಿತ್ತು. ಇದರ ಸ್ಮರಣಾರ್ಥವಾಗಿ ಮತ್ತು ಭಾರತದ ಕೈಮಗ್ಗ ಉತ್ಪನ್ನಗಳನ್ನು ಉತ್ತೇಜಿಸಲು 2015ರಲ್ಲಿ ಕೇಂದ್ರ ಸರ್ಕಾರವು ಆಗಸ್ಟ್ 7 ರಂದು ‘ರಾಷ್ಟ್ರೀಯ ಕೈಮಗ್ಗ ದಿನ’ವೆಂದು ಘೋಷಿಸಿತು.
ಆಗಸ್ಟ್ 7 ರ ಕಾರ್ಯಕ್ರಮದಲ್ಲಿ ರೇಷ್ಮೆ, ಹತ್ತಿ ಮತ್ತು ಉಣ್ಣೆ ನೇಕಾರಿಕೆ ವಲಯದಲ್ಲಿ ನೈಪುಣ್ಯತೆ ಹಾಗೂ ಅತ್ಯುತ್ತಮ ಸಾಧನೆ ತೋರಿದ ನೇಕಾರರಿಗೆ 2026ನೇ ಸಾಲಿನ ರಾಜ್ಯ ಮಟ್ಟದ ಕೈಮಗ್ಗ ನೇಕಾರರ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ರಾಜ್ಯ ಮಟ್ಟದ ಕೈಮಗ್ಗ ನೇಕಾರರ ಪ್ರಶಸ್ತಿ ಪ್ರದಾನ ಸಮಾರಂಭದ ಅಂಗವಾಗಿ ರೇಷ್ಮೆ, ಹತ್ತಿ ಹಾಗೂ ಉಣ್ಣೆ ನೇಕಾರಿಕೆ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ ರಾಜ್ಯದ ಅತ್ಯುತ್ತಮ ಕೈಮಗ್ಗ ನೇಕಾರರಿಗೆ ಪ್ರಶಸ್ತಿ ಮತ್ತು ನಗದು ಬಹುಮಾನಗಳನ್ನು ಪ್ರಕಟಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಮಾನ್ಯ ಕೇಂದ್ರ ಸಚಿವರು, ಲೋಕಸಭಾ ಸದಸ್ಯರು, ಶಾಸಕರು ಹಾಗೂ ಇತರ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗಿದ್ದು, ವಿಜೇತರಿಗೆ ನಗದು ಬಹುಮಾನ, ಶಾಲು, ಪ್ರಮಾಣ ಪತ್ರ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಗುವುದು.
ರೇಷ್ಮೆ ವಿಭಾಗದಲ್ಲಿ ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡದ ಗುರುನಾಥ ಗೊಂಡಬಾಳ ಇಲಕಲ್ ರೇಷ್ಮೆ ಸೀರೆ ಉತ್ಪನ್ನ ಮಾದರಿಯಲ್ಲಿ ಪ್ರಥಮ ಸ್ಥಾನದೊಂದಿಗೆ ರೂ. 25,000 ನಗದು ಬಹುಮಾನ ಪಡೆದರೆ, ಬೆಂಗಳೂರು ನಗರದ ಸುಂದರ, ಆನೇಕಲ್ ಸಾಂಪ್ರದಾಯಿಕ ಸೀರೆ ಮಾದರಿಯಲ್ಲಿ ದ್ವಿತೀಯ ಸ್ಥಾನದೊಂದಿಗೆ ರೂ. 20,000 ಗಳಿಸಿದ್ದಾರೆ. ಹತ್ತಿ ವಿಭಾಗದಲ್ಲಿ ಬಾಗಲಕೋಟೆಯ ಸಣ್ಣಪ್ಪ ಜುಂಜಾ, ಇಲಕಲ್ ಖಾದಿ ಹತ್ತಿ ಸೀರೆ ಮಾದರಿಯಲ್ಲಿ ಪ್ರಥಮ ಸ್ಥಾನ ಗಳಿಸಿ ರೂ. 20,000 ಬಹುಮಾನ ಗಿಟ್ಟಿಸಿದರೆ, ಬೆಂಗಳೂರಿನ ಎ.ಪಿ. ನಾಗರಾಜ್, ಸ್ವರ್ಣ ಕಲ್ಯಾಣಿ ಹತ್ತಿ ಜರಿ ಸೀರೆ ಮಾದರಿಯಲ್ಲಿ ದ್ವಿತೀಯ ಸ್ಥಾನದೊಂದಿಗೆ ರೂ. 15,000 ಪಡೆದಿದ್ದಾರೆ. ಇನ್ನು ಉಣ್ಣೆ ವಿಭಾಗದಲ್ಲಿ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಪಿ.ಟಿ. ತಿಪ್ಪೇಸ್ವಾಮಿ ಕನಕದಾಸರ ಚಿತ್ರದ ಉಣ್ಣೆ ಕಂಬಳಿ ಮಾದರಿಯಲ್ಲಿ ಪ್ರಥಮ ಸ್ಥಾನ ಪಡೆದು ರೂ. 15,000 ನಗದು ಬಹುಮಾನಕ್ಕೆ ಪಾತ್ರರಾಗಿದ್ದಾರೆ.
ರಾಜ್ಯಮಟ್ಟದ ಕೈಮಗ್ಗ ನೇಕಾರರ ಪ್ರಶಸ್ತಿಯನ್ನು ಪಡೆಯುತ್ತಿರುವ ಕೈಮಗ್ಗ ನೇಕಾರರು ಎಲ್ಲರ ಅಭಿನಂದನೆ ಭಾಜನರಾಗಿದ್ದಾರೆ. “ನನ್ನ ಕೈಮಗ್ಗ, ನನ್ನ ಹೆಮ್ಮೆ” ಎಂಬ ಆಶಯದೊಂದಿಗೆ ಸಾರ್ವಜನಿಕರು ಕೈಮಗ್ಗ ಉತ್ಪನ್ನಗಳನ್ನು ಖರೀದಿಸಿ ನೇಕಾರರನ್ನು ಪ್ರೋತ್ಸಾಹಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
