ಸಮಗ್ರ ಸುದ್ದಿ

ಗ್ರಾಮೀಣ ಅಭ್ಯರ್ಥಿ ಮೀಸಲಾತಿಯನ್ನು ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಮೀಸಲಿಡಿ- ಪುರುಷೋತ್ತಮ ಬಿಳಿಮಲೆ ಆಗ್ರಹ

Share

ಬೆಂಗಳೂರು: ಗ್ರಾಮೀಣ ಪ್ರದೇಶಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ಹಾಗೂ ಉದ್ಯೋಗಾವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ 90ರ ದಶಕದಿಂದ ಜಾರಿಯಲ್ಲಿರುವ ಗ್ರಾಮೀಣ ಅಭ್ಯರ್ಥಿ ಮೀಸಲಾತಿಗೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

ಈ ಬಗ್ಗೆ ಶುಕ್ರವಾರ ಶಾಲಾ ಶಿಕ್ಷಣ ಇಲಾಖೆಗೆ ಪತ್ರ ಬರೆದಿರುವ ಬಿಳಿಮಲೆ, 90ರ ದಶಕದಲ್ಲಿದ್ದ ಶೈಕ್ಷಣಿಕ ಪರಿಸ್ಥಿತಿಗೂ ಇಂದಿನ ವಸ್ತುಸ್ಥಿತಿಗೂ ಆಗಾಧವಾದ ಅಂತರವಿರುವುದನ್ನು ನಾವು ಗಮನಿಸಬಹುದಾಗಿದ್ದು, ಸರ್ಕಾರಿ ಶಾಲೆಗಳು ಅತಿವೇಗವಾಗಿ ಕಣ್ಮರೆಯಾಗುತ್ತಿರುವ ಹಾಗೂ ಖಾಸಗಿ ಶಾಲೆಗಳು ಗ್ರಾಮೀಣ ಪ್ರದೇಶಗಳಲ್ಲಿಯೂ ನಿರಂತರವಾಗಿ ವಿಸ್ತರಿಸಿಕೊಳ್ಳುತ್ತಿರುವ ಇಂದಿನ ಕಾಲಘಟ್ಟವು ಈ ಮೀಸಲಾತಿಯ ಪ್ರಸ್ತುತತೆಯನ್ನೇ ಬದಲಾಯಿಸಿದೆ ಎಂದಿದ್ದಾರೆ.

ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳು, ಖಾಸಗಿ ಶಾಲೆಗಳು, ಕೇಂದ್ರ ಪಠ್ಯಕ್ರಮದ ಶಾಲೆಗಳು ಸೇರಿದಂತೆ ಹಲವು ಮಾದರಿಯ ಶಾಲೆಗಳು ಅಸ್ತಿತ್ವದಲ್ಲಿರುವ ಇಂದಿನ ಸಂದರ್ಭದಲ್ಲಿ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳು ಮೂಲೆಗುಂಪಾಗುತ್ತಿರುವ ಸ್ಥಿತಿಯನ್ನು ನಾವು ಅಸಹಾಯಕವಾಗಿ ಗಮನಿಸುವ ಅನಿವಾರ್ಯತೆಗೆ ಸಿಲುಕಿದ್ದೇವೆ ಎಂದಿರುವ ಬಿಳಿಮಲೆ, ತಮ್ಮೆಲ್ಲಾ ಸಮಸ್ಯೆಗಳ ನಡುವೆಯೂ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಬಗ್ಗೆ ನಾವು ಇನ್ನಷ್ಟು ಸಹಾನುಭೂತಿಯಿಂದ ಕೆಲಸ ಮಾಡಬೇಕಿದೆ ಎಂದಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿಕಲಿಯುತ್ತಿರುವ ವಿದ್ಯಾರ್ಥಿಗಳ ಕಲಿಕಾ ಮಟ್ಟದ ಕುರಿತಂತೆ ಒಂದು ಅಧ್ಯಯನವನ್ನು ಕೈಗೊಂಡಿದ್ದು, ಪ್ರಾಧಿಕಾರವು ಇಷ್ಟರಲ್ಲಿಯೇ ಅದನ್ನು ಸರ್ಕಾರಕ್ಕೆ ಸಲ್ಲಿಸಲಿದೆ ಎಂದಿರುವ ಅವರು, ಈ ವರದಿಯ ಸಲಹೆಗಳು ಮಕ್ಕಳ ಆಂಗ್ಲ ಮತ್ತು ಕನ್ನಡ ಭಾಷಾ ಕಲಿಕೆಯ ಗುಣಮಟ್ಟದ ಕುರಿತಂತೆ ಆಶಾದಾಯಕವಾದ ಚಿತ್ರಣವನ್ನೇನೂ ನೀಡಿಲ್ಲವೆಂದಿದ್ದಾರೆ.

ಹಾಗಾಗಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಗ್ರಾಮೀಣ ಅಭ್ಯರ್ಥಿ ಮೀಸಲಾತಿಯನ್ನು ವಿಶೇಷ ಒದಗಿಸಬೇಕಾದ ಅವಶ್ಯಕತೆ ಎಂದಿರುವ ಬಿಳಿಮಲೆ, ಈ ನಿಟ್ಟಿನಲ್ಲಿ ಸರ್ಕಾರವು ನೀತಿ-ನಿರೂಪಣೆಗೆ ಮುಂದಾದಲ್ಲಿ ಪ್ರತಿಭಾವಂತ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಲ್ಲಿ ಭರವಸೆ ತುಂಬಿದಂತಾಗುವುದಲ್ಲದೇ, ಕನ್ನಡ ಭಾಷೆಯ ಪುರೋಭಿವೃದ್ಧಿಗೆ ಸರ್ಕಾರವು ಕ್ರಿಯಾಶೀಲವಾಗಿ ಸ್ಪಂದಿಸಿದಂತಾಗುತ್ತದೆ ಎಂದಿದ್ದಾರೆ.


Share

You cannot copy content of this page