ಸಮಗ್ರ ಸುದ್ದಿ

ಬತ್ತಿಹೋದ ಕೊಳವೆ ಬಾವಿಗಳ ಮರುಪೂರಣಕ್ಕೆ ವಿಬಿಜಿ ರಾಮ್ ಜಿ ನೆರವು: ಈಶ್ವರ ಖಂಡ್ರೆ

Share

ಬೆಂಗಳೂರು: ರಾಜ್ಯದ ವಿವಿಧ ಪ್ರದೇಶಗಳಲ್ಲಿ ಅಂತರ್ಜಲಮಟ್ಟ 1000 ಅಡಿಗೂ ಕೆಳಗೆ ಹೋಗಿದ್ದು, ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರವೇ ಕೊಳವೆ ಬಾವಿ ಕೊರೆಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.

ಜಲಜೀವನ್ ಅಭಿಯಾನ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಕಡೆ 1000 ಅಡಿ ಕೊರೆದರೂ ನೀರು ಬರುವುದಿಲ್ಲ. ನೀರು ಸಿಕ್ಕರೂ ಕುಡಿಯಲು ಯೋಗ್ಯವಾಗಿರುವುದಿಲ್ಲ. ಹಲವು ಕೊಳವೆ ಬಾವಿಗಳು ನಿಷ್ಕ್ರಿಯವಾಗುತ್ತಿವೆ. ಹೀಗಾಗಿ ಸಾಧ್ಯವಾದಷ್ಟೂ ಮೇಲ್ಮೈ ನೀರು ಪೂರೈಕೆಗೆ ಆದ್ಯತೆ ನೀಡಿ, ಅನಿವಾರ್ಯವಾದಲ್ಲಿ ಮಾತ್ರ ಭೂಗರ್ಭ ಶಾಸ್ತ್ರಜ್ಞರ ಅಭಿಪ್ರಾಯ ಪಡೆದು ಕೊಳವೆ ಬಾವಿ ಕೊರೆಸಿ ಎಂದು ಆದೇಶ ನೀಡಿದರು.

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಈಗಾಗಲೇ ಕೊರೆಸಲಾಗಿರುವ, ಸಕ್ರಿಯವಾಗಿರುವ ಮತ್ತು ಬತ್ತಿಹೋಗಿರುವ ಕೊಳವೆ ಬಾವಿಗಳ ಮರುಪೂರಣಕ್ಕೆ ವಿಬಿಜಿ ರಾಮ್ ಜಿ ಯೋಜನೆಯಡಿ ಕಾಮಗಾರಿ ಕೈಗೆತ್ತಿಕೊಳ್ಳಲು ಸೂಚಿಸಿದರು.

ರಾಜ್ಯದಲ್ಲಿ ಮಳೆ ಕೊರತೆಯಿಂದ ಜುಲೈ ತಿಂಗಲಲ್ಲಿ 766 ಗ್ರಾಮ ಪಂಚಾಯತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ಈ ತಿಂಗಳು ಮಳೆಯಾಗುತ್ತಿರುವುದರಿಂದ ಈ ಸಂಖ್ಯೆ 747ಕ್ಕೆ ಇಳಿಕೆಯಾಗಿದೆ. ಪ್ರಸ್ತುತ 138 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿರುವುದಾಗಿ ಅಧಿಕಾರಿಗಳು ಸಭೆಗೆ ತಿಳಿಸಿದರು.

ಯಾವುದೇ ಗ್ರಾಮದಿಂದ ಕುಡಿಯುವ ನೀರಿನ ಸಮಸ್ಯೆ ಕುರಿತು ದೂರು ಬಂದರೆ 24 ಗಂಟೆಯೊಳಗೆ ಪರಿಹರಿಸಲು ಇಲ್ಲವೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಈಶ್ವರ ಖಂಡ್ರೆ ಸೂಚಿಸಿದರು.

ಸಭೆಯಲ್ಲಿ ಕಾರ್ಯದರ್ಶಿ ಡಿ. ರಂದೀಪ್, ಆಯುಕ್ತರಾದ ಫೌಜಿಯಾ ತರನ್ನುಂ ಮತ್ತಿತರರು ಪಾಲ್ಗೊಂಡಿದ್ದರು.


Share

You cannot copy content of this page