ಬೆಂಗಳೂರು : ಮಾನ್ಯ ಇಂಧನ ಮತ್ತು ಪ್ರವಾಸೋದ್ಯಮ ಸಚಿವರಾದ ಕೆ ಜೆ ಜಾರ್ಜ್ ಅವರ ನಿರ್ದೇಶನದಂತೆ, ವಿಶ್ವ ಪಾರಂಪರಿಕ ತಾಣವಾಗಿರುವ ಹಂಪಿಯನ್ನು ಮತ್ತಷ್ಟು ಸ್ವಚ್ಛ, ಹಸಿರು ಹಾಗೂ ಪ್ರವಾಸಿಗರಿಗೆ ಅನುಕೂಲಕರ ತಾಣವನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ “ಕ್ಲೀನ್ & ಗ್ರೀನ್ ಹಂಪಿ” ಅಭಿಯಾನ ರೂಪಿಸಲು ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಗಳಾದ ಡಾ. ರಾಮ್ ಪ್ರಸಾತ್ ಮನೋಹರ್, ಅವರು ಹಂಪಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ವಿಜಯನಗರ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಹಂಪಿಯ ಸ್ವಚ್ಛತೆ, ಪ್ರವಾಸಿಗರಿಗೆ ಲಭ್ಯವಿರುವ ಮೂಲಸೌಕರ್ಯ ಹಾಗೂ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಸಭೆ ನಡೆಸಿದ ಕಾರ್ಯದರ್ಶಿಗಳು, ಸಾರ್ವಜನಿಕರು ಹಾಗೂ ಪ್ರವಾಸಿಗರನ್ನು ಒಳಗೊಳ್ಳುವ ರೀತಿಯಲ್ಲಿ “ಕ್ಲೀನ್ & ಗ್ರೀನ್ ಹಂಪಿ” ಅಭಿಯಾನಕ್ಕೆ ಸಮಗ್ರ ಕಾರ್ಯಯೋಜನೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವಿಶ್ವವಿಖ್ಯಾತ ಹಂಪಿಯನ್ನು ಸ್ವಚ್ಚವಾಗಿಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಮಾನ್ಯ ಪ್ರವಾಸೋದ್ಯಮ ಮತ್ತು ಇಂಧನ ಸಚಿವರು ಸೂಚನೆ ನೀಡಿದ್ದಾರೆ. ಹಂಪಿಯಂತಹ ವಿಶ್ವಪ್ರಸಿದ್ಧ ಪಾರಂಪರಿಕ ತಾಣದ ಸ್ವಚ್ಛತೆ ಕೇವಲ ಇಲಾಖೆಗಳ ಜವಾಬ್ದಾರಿಯಾಗದೆ, ಅಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗ ಹಾಗೂ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ನಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ, ಪ್ರವಾಸಿಗರನ್ನು ಅಭಿಯಾನದ ಭಾಗವಾಗಿಸುವ ಕಾರ್ಯಕ್ರಮಗಳನ್ನು ರೂಪಿಸುವಂತೆ ಕಾರ್ಯದರ್ಶಿ ರಾಮ್ ಪ್ರಸಾತ್ ಮನೋಹರ್ ಸೂಚಿಸಿದರು.
ಹಂಪಿಯ ಸಮಗ್ರ ಸ್ವಚ್ಛತಾ ನಿರ್ವಹಣೆಗಾಗಿ ಸಮಗ್ರ ಏಜೆನ್ಸಿಯನ್ನು ನೇಮಕ ಮಾಡಲು ಟೆಂಡರ್ ಪ್ರಕ್ರಿಯೆ ಕೈಗೊಳ್ಳುವಂತೆ ಹಂಪಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚನೆ ನೀಡಲಾಯಿತು. ಆಯ್ಕೆಯಾಗುವ ಏಜೆನ್ಸಿಯ ಮೂಲಕ ಹಂಪಿಯ ವಿವಿಧ ಪ್ರದೇಶಗಳ ಸ್ವಚ್ಛತೆ ಮತ್ತು ನಿರ್ವಹಣೆಯನ್ನು ವ್ಯವಸ್ಥಿತವಾಗಿ ಕೈಗೊಳ್ಳುವ ಉದ್ದೇಶ ಹೊಂದಲಾಗಿದೆ.
ಇದರ ಜೊತೆಗೆ, HWHAMA ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಹಂಪಿಯ ಪಾರಂಪರಿಕ ಹಾಗೂ ನೈಸರ್ಗಿಕ ಪರಿಸರದ ಸಂರಕ್ಷಣೆಗೆ ಪ್ಲಾಸ್ಟಿಕ್ ಮುಕ್ತ ವಾತಾವರಣ ನಿರ್ಮಿಸುವುದು ಪ್ರಮುಖ ಹೆಜ್ಜೆಯಾಗಲಿದೆ.
ಹಂಪಿಯ ವಿರೂಪಾಕ್ಷ ದೇವಸ್ಥಾನದ ಸಮೀಪದ ಶೌಚಾಲಯ ಸಂಕೀರ್ಣದ ಸ್ವಚ್ಛತೆ ಹಾಗೂ ನಿರ್ವಹಣೆಯನ್ನು ನಿಯಮಿತವಾಗಿ ಖಚಿತಪಡಿಸಿಕೊಳ್ಳುವಂತೆ ವಿಜಯನಗರ ಜಿಲ್ಲಾಧಿಕಾರಿ ಹಾಗೂ HWHAMA ಅಧ್ಯಕ್ಷರಿಗೆ ಕಾರ್ಯದರ್ಶಿಗಳು ಸೂಚಿಸಿದ್ದಾರೆ. ಪ್ರವಾಸಿಗರ ಬಳಕೆಯಲ್ಲಿರುವ ಶೌಚಾಲಯಗಳ ಸ್ವಚ್ಛತೆ ಹಾಗೂ ನಿರ್ವಹಣೆಗೆ ವಿಶೇಷ ಗಮನ ನೀಡುವಂತೆ ನಿರ್ದೇಶಿಸಲಾಯಿತು.
ಇದೇ ವೇಳೆ, ಹಂಪಿ ನೂಕ್ ಯೋಜನೆಯಡಿ ಹೊಸ ಶೌಚಾಲಯ ಸಂಕೀರ್ಣವನ್ನು ಪುನರ್‌ನಿರ್ಮಿಸಲು ಪ್ರಸ್ತಾವನೆ ಸಲ್ಲಿಸುವಂತೆ ವಿಜಯನಗರ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಯಿತು. ಪ್ರವಾಸಿಗರ ಹೆಚ್ಚುತ್ತಿರುವ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಮೂಲಸೌಕರ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ.
“ಕ್ಲೀನ್ & ಗ್ರೀನ್ ಹಂಪಿ” ಅಭಿಯಾನದ ಮೂಲಕ ಹಂಪಿಯ ಪಾರಂಪರಿಕ ಸ್ವರೂಪವನ್ನು ಕಾಪಾಡುವುದರ ಜೊತೆಗೆ, ಸ್ವಚ್ಛತೆ, ಪರಿಸರ ಸಂರಕ್ಷಣೆ ಹಾಗೂ ಉತ್ತಮ ಪ್ರವಾಸಿಗರ ಅನುಭವಕ್ಕೆ ಆದ್ಯತೆ ನೀಡುವ ಉದ್ದೇಶವನ್ನು ಇಲಾಖೆ ಹೊಂದಿದೆ.
ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆ ಆಯುಕ್ತರಾದ ಶಿವಪ್ರಸಾದ್ ಪಿ.ಆರ್, ವಿಡಿಯೋ ಕಾನ್ಫರೆನ್ಸ್ ಮೂಲಕ ವಿಜಯನಗರ ಜಿಲ್ಲಾಧಿಕಾರಿಗಳಾದ ಕವಿತಾ ಎಸ್ ಮಣಿಕೆರೆ, ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಕೋಟ್
-“ವಿಶ್ವ ಪಾರಂಪರಿಕ ತಾಣವಾಗಿರುವ ಹಂಪಿಯ ಸಂರಕ್ಷಣೆ ಮತ್ತು ಸ್ವಚ್ಛತೆ ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಹಂಪಿಯನ್ನು ಕೇವಲ ಪ್ರವಾಸಿ ತಾಣವಾಗಿ ನೋಡುವುದಕ್ಕಿಂತ, ಅದರ ಪಾರಂಪರಿಕ ಮಹತ್ವವನ್ನು ಕಾಪಾಡಿಕೊಂಡು ಸ್ವಚ್ಛ, ಹಸಿರು ಹಾಗೂ ಪ್ರವಾಸಿಗರಿಗೆ ಉತ್ತಮ ಅನುಭವ ನೀಡುವ ತಾಣವನ್ನಾಗಿ ಅಭಿವೃದ್ಧಿಪಡಿಸುವುದು ನಮ್ಮ ಉದ್ದೇಶ. ‘ಕ್ಲೀನ್ & ಗ್ರೀನ್ ಹಂಪಿ’ ಅಭಿಯಾನದಲ್ಲಿ ಸಾರ್ವಜನಿಕರು ಮತ್ತು ಪ್ರವಾಸಿಗರ ಸಹಭಾಗಿತ್ವವನ್ನು ಖಚಿತಪಡಿಸಿಕೊಂಡು, ಹಂಪಿಯ ಸೌಂದರ್ಯ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೂ ಉಳಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು.”
-ಕೆ.ಜೆ. ಜಾರ್ಜ್, ಮಾನ್ಯ ಇಂಧನ ಹಾಗೂ ಪ್ರವಾಸೋದ್ಯಮ ಸಚಿವರು
ಕೋಟ್
-“ಹಂಪಿ ಕರ್ನಾಟಕದ ಹೆಮ್ಮೆಯ ಪಾರಂಪರಿಕ ತಾಣವಾಗಿದ್ದು, ಇಲ್ಲಿನ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆ ಅತ್ಯಂತ ಪ್ರಮುಖವಾಗಿದೆ. “ಕ್ಲೀನ್ & ಗ್ರೀನ್ ಹಂಪಿ”ಯನ್ನು ಕೇವಲ ಸರ್ಕಾರಿ ಇಲಾಖೆಗಳ ಅಭಿಯಾನವನ್ನಾಗಿ ಮಾಡದೆ, ಪ್ರವಾಸೋದ್ಯಮ ಸಚಿವರ ನಿರ್ದೇಶನದಂತೆ ಸಾರ್ವಜನಿಕರು ಮತ್ತು ಪ್ರವಾಸಿಗರು ಸಕ್ರಿಯವಾಗಿ ಭಾಗವಹಿಸುವ ಜನಾಭಿಯಾನವಾಗಿ ರೂಪಿಸಲು ಸೂಚಿಸಲಾಗಿದೆ. ಸ್ವಚ್ಛತೆ, ಪ್ಲಾಸ್ಟಿಕ್ ನಿಯಂತ್ರಣ ಹಾಗೂ ಮೂಲಸೌಕರ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಸಮಗ್ರ ಕಾರ್ಯಯೋಜನೆ ರೂಪಿಸಿ ಅನುಷ್ಠಾನಗೊಳಿಸಲಾಗುವುದು.
- ಡಾ. ರಾಮ್ ಪ್ರಸಾತ್ ಮನೋಹರ್, ಐಎಎಸ್, ಕಾರ್ಯದರ್ಶಿಗಳು, ಪ್ರವಾಸೋದ್ಯಮ ಇಲಾಖೆ
