ಬೆಂಗಳೂರು: ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿರುವ ಜಿ.ಎಸ್.ಪಾಟೀಲ್ ಅವರಿಗೆ ಅಭಿನಂದನೆಗಳು. ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರು ಕೂಡ ಈ ಸ್ಥಾನ ಅವರಿಗೆ ಹೇಳಿ ಮಾಡಿಸಿದಂತಿದೆ ಎಂದು ಪ್ರಶಂಸಿದ್ದಾರೆ. ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಸದನವು ಉತ್ತಮ ರೀತಿಯಲ್ಲಿ ನಡೆಯಲಿ ಎಂದು ಉಪ ಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ ಅವರು ಶುಭಹಾರೈಸಿದರು.
ಇಂದು ಗುರುಪಾದಗೌಡ ಸಂಗನಗೌಡ ಪಾಟೀಲ ಅವರು ಸರ್ವಾನುಮತದಿಂದ ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಡಿಸಿಎಂ ಡಾ.ಜಿ. ಪರಮೇಶ್ವರ್ ಸದನವನ್ನುದ್ದೇಶಿಸಿ ಮಾತನಾಡಿದರು.
ಜಿ.ಎಸ್.ಪಾಟೀಲ್ ಅವರ ಕುಟುಂಬ ಸಮಾಜದಲ್ಲಿ ಅಪಾರ ಜನಪ್ರೀತಿಯನ್ನು ಗಳಿಸಿದೆ. ನನಗೆ ಅವರ ಕುಟುಂಬದಲ್ಲಿ ಬಿ.ಎಸ್ ಪಾಟೀಲ್ ಮತ್ತು ಆರ್.ಎಸ್ ಪಾಟೀಲ್ ತುಂಬಾ ಆತ್ಮೀಯರು. ಬಿ.ಎಸ್ ಪಾಟೀಲ್ ಅವರು ನನ್ನನ್ನು ತುಂಬಾ ಪ್ರೀತಿಯಿಂದ ಕಾಣುತ್ತಿದ್ದರು. ಅವರು ಕಾರ್ಯದರ್ಶಿಯಾಗಿ ರಾಜ್ಯದಲ್ಲಿ ಅನೇಕ ಬದಲಾವಣೆಗಳಿಗೆ ಕಾರಣೀಭೂತರಾಗಿದ್ದಾರೆ ಎಂದರು.
ಮುಂದುವರೆದು ಮಾತನಾಡಿ, ಮುಖ್ಯಮಂತ್ರಿಗಳು ಬೆಂಗಳೂರನ್ನು ಗ್ರೇಟರ್ ಬೆಂಗಳೂರು ಮಾಡುವಂತಹ ಸಂದರ್ಭದಲ್ಲಿ ಅವರ ಸಲಹೆ – ಸೂಚನೆಗಳನ್ನು ತೆಗೆದುಕೊಂಡು ಮಾಡಬೇಕು ಎಂದು ಹೇಳಿ ಅವರನ್ನು ಸಮಿತಿಯಲ್ಲಿ ಸೇರಿಸಿಕೊಂಡಿರುವಂತಹ ವಿಷಯ ನಮಗೆಲ್ಲರಿಗೂ ತಿಳಿದಿದೆ. ಆರ್.ಎಸ್ ಪಾಟೀಲ್ ಅವರನ್ನು ಕಂಡರೆ ಅತ್ಯಂತ ಗೌರವ ನನಗಿದೆ. ಲೋಕಸಭಾ ಸದಸ್ಯರಾಗಿ ಎಂತಹ ನಡತೆ ಅವರದ್ದೂ ಎಂದರೆ ನಾವೆಲ್ಲ ಅವರನ್ನು ಅನುಕರಣೆ ಮಾಡಬೇಕು. ಅವರನ್ನು ನಾನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳುತ್ತಿರುವುದಾಗಿ ಹೇಳಿದರು.
ಜಿ.ಎಸ್ ಪಾಟೀಲ್ ಅವರು 1989ರಲ್ಲಿ ಆಯ್ಕೆಯಾಗಿ ಬಂದಾಗ ನಾನು ಕೂಡ ಅದೇ ಸಮಯದಲ್ಲಿ ಆಯ್ಕೆಯಾಗಿ ಬಂದೆ. ವೀರೇಂದ್ರ ಪಾಟೀಲ್ ಅವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನಾವೆಲ್ಲ ಆಯ್ಕೆಯಾಗಿದ್ದೆವು. ಅಂದಿನಿಂದ ಅವರು 8 ಬಾರಿ ಚುನಾವಣೆಗೆ ಸ್ಪರ್ಧಿಸಿದ್ದರು. 4 ಬಾರಿ ಆಯ್ಕೆ ಆಗಿದ್ದಾರೆ. ಸದನದ ಹೊರಗಡೆ ಅಥವಾ ಒಳಗಡೆಯಾಗಲಿ, ಎಲ್ಲಾ ಶಾಸಕರು ಮತ್ತು ವಿರೋಧ ಪಕ್ಷದವರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರು. ಹೀಗಾಗಿ ಜಿ.ಎಸ್.ಪಾಟೀಲ್ ಅವರಿಗೆ ಸಭಾಧ್ಯಕ್ಷರ ಸ್ಥಾನ ಸೂಕ್ತವಾಗಿದೆ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ವಿರೋಧ ಪಕ್ಷದ ನಾಯಕರಾದ ಅಶೋಕ್ ಅವರು ಆಯ್ಕೆ ವೇಳೆ ಭಾಗವಹಿಸಬೇಕಿತ್ತು. ರಾಜಕೀಯ ಚರ್ಚೆಗಳು ಬೇರೆ. ಆದರೆ, ಒಬ್ಬ ಅಧ್ಯಕ್ಷನನ್ನು ಆಯ್ಕೆ ಮಾಡುವಾಗ ನೀವು ಹೊರಗುಳಿದಿದ್ದು ನನಗೆ ಸರಿ ಅನಿಸಲಿಲ್ಲ. ನೀವು ಭಾಗವಹಿಸುತ್ತಿದ್ದರೆ ನಿಮಗೂ ಗೌರವ ಸಿಗುತ್ತಿತ್ತು ಹಾಗೂ ಆ ಪೀಠಕ್ಕೂ ಗೌರವ ನೀಡಿದಂತಾಗುತ್ತಿತ್ತು ಎಂದರು.
ಈ ಸದನವನ್ನು ನಡೆಸುವಾಗ ಎಲ್ಲರಿಗೂ ಮುಕ್ತವಾಗಿ ಅವಕಾಶಗಳನ್ನು ಕೊಡಬೇಕು ಎಂದು ನಾವು ಸಭಾಧ್ಯಕ್ಷರಿಂದ ನಿರೀಕ್ಷಿಸುತ್ತಿದ್ದೇವೆ. ಜೊತೆಗೆ ರಾಜ್ಯದಲ್ಲಿ ಜ್ವಲಂತ ಸಮಸ್ಯೆಗಳು ಬರುತ್ತದೆ. ಸರ್ಕಾರ ಒಂದು ಕಡೆಯಲ್ಲಿ ಅಭಿಪ್ರಾಯಗಳನ್ನು ಇಟ್ಟುಕೊಂಡಿರುತ್ತದೆ. ವಿರೋಧ ಪಕ್ಷಗಳು ಇನ್ನೊಂದು ಅಭಿಪ್ರಾಯಗಳನ್ನು ಇಟ್ಟುಕೊಂಡಿರುತ್ತಾರೆ .ಆದರೆ ರಾಜ್ಯದ ಹಿತದೃಷ್ಟಿಯಿಂದ ಆ ಸಮಸ್ಯೆಯನ್ನು ಯಾವ ರೀತಿ ತೆಗೆದುಕೊಂಡು ಹೋಗಬೇಕು ಅನ್ನುವುದನ್ನು ಸರ್ಕಾರಕ್ಕೆ ತಾವು ತಿಳಿಸಬೇಕಾಗುತ್ತದೆ. ಹೀಗಾಗಿ ಈ ಪೀಠ ಅತ್ಯಂತ ಜವಾಬ್ದಾರಿಯಿಂದ ತೀರ್ಪು ನೀಡಬೇಕು ಎಂದ ಅವರು, ಅತ್ಯಂತ ಗೌರವಯುತವಾದ ಪೀಠವನ್ನು ಅಲಂಕರಿಸಿರುವ ಜಿ.ಎಸ್.ಪಾಟೀಲ್ ಅವರನ್ನು ಮತ್ತೊಮ್ಮೆ ಅಭಿನಂದಿಸಿದರು.
ಇದೇ ವೇಳೆ, ಈ ಹಿಂದಿನ ಸಭಾಧ್ಯಕ್ಷರಾಗಿದ್ದ ಯು.ಟಿ.ಖಾದರ್ ಅವರು ಕೂಡ ಆ ಸ್ಥಾನದಲ್ಲಿ ಕುಳಿತುಕೊಂಡು ಬಹಳ ಪ್ರಾಮಾಣಿಕವಾಗಿ ಕೆಲಸವನ್ನು ಮಾಡಿದ್ದಾರೆ. ಆರಂಭದಲ್ಲಿ ಚಿಕ್ಕ ವಯಸ್ಸು, ಅನುಭವದ ಕೊರತೆ, ಯಾವ ರೀತಿ ಸದನ ನಡೆಸುತ್ತಾರೆ ಎಂಬೆಲ್ಲ ಅನುಮಾನಗಳು ಜನರಲ್ಲಿತ್ತು. ಆದರೆ ಅನುಮಾನಗಳನೆಲ್ಲಾ ದೂರ ಮಾಡಿ ಆ ಸ್ಥಾನಕ್ಕೆ ಅತ್ಯಂತ ಗೌರವವನ್ನು ತಂದು ಕೊಡುವಂತಹ ಕೆಲಸವನ್ನು ಖಾದರ್ ಅವರು ಮಾಡಿದ್ದಾರೆ ಎಂದು ಪ್ರಶಂಸಿಸಿದರು.
