ಮಹಾಬಲಿಪುರಂ:ಕರ್ನಾಟಕ ಬಲಿಷ್ಠವಾದಾಗ, ದಕ್ಷಿಣ ಭಾರತ ಮತ್ತಷ್ಟು ಬಲಿಷ್ಠವಾಗುತ್ತದೆ. ದಕ್ಷಿಣ ಭಾರತ ಬಲಿಷ್ಠವಾದಾಗ, ಭಾರತ ಮತ್ತಷ್ಟು ಬಲಿಷ್ಠವಾಗುತ್ತದೆ. ನಾವು ಭಾರತದ ಅಭಿವೃದ್ಧಿಯ ಪಾಲುದಾರರು. ನಮಗೆ ನಮ್ಮ ನಿಧಿಗಳಲ್ಲಿ, ನಮ್ಮ ಧ್ವನಿಯಲ್ಲಿ ನ್ಯಾಯ ಬೇಕು. ನಮಗೆ ನ್ಯಾಯಯುತವಾಗಿ ಅನುದಾನ ನೀಡಿ. ದಕ್ಷಿಣ ಭಾರತಕ್ಕೆ ಸಲ್ಲಬೇಕಾದ ನ್ಯಾಯಯುತ ಪಾಲನ್ನು ನೀಡಿ ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಒತ್ತಾಯಿಸಿದರು.
ತಮಿಳುನಾಡಿನ ಮಹಾಬಲಿಪುರಂನಲ್ಲಿ ಗುರುವಾರ ನಡೆದ 31ನೇ ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಶಿವಕುಮಾರ್ ಅವರು ಮಾತನಾಡಿದರು.
“ಮುಂದಿನ ಚರ್ಚೆಯ ಸಂದರ್ಭದಲ್ಲಿ ಈ ಪ್ರತಿಯೊಂದು ವಿಷಯದ ಕುರಿತಾದ ನಿರ್ದಿಷ್ಟ ಸಮಸ್ಯೆಗಳು, ಸಂಬಂಧಿತ ಅಂಕಿ-ಅಂಶಗಳು ಹಾಗೂ ಕರ್ನಾಟಕ ಪ್ರಸ್ತಾಪಿಸುವ ಪರಿಹಾರ ಕ್ರಮಗಳನ್ನು ಈ ಮಂಡಳಿಯ ಮುಂದೆ ಮಂಡಿಸುತ್ತೇನೆ.”
“ಸ್ನೇಹಿತರೇ, ಕರ್ನಾಟಕ ಇಲ್ಲಿ ದೂರು ನೀಡಲು ಬಂದಿಲ್ಲ. ಆರ್ಥಿಕತೆಯನ್ನು ಮುನ್ನಡೆಸುತ್ತಿರುವ ರಾಜ್ಯಗಳಿಗೆ ಸಲ್ಲಬೇಕಾದ ಗೌರವ, ನ್ಯಾಯಯುತ ಅಂಶಗಳನ್ನು ತಿಳಿಸಲು ಬಂದಿದ್ದೇವೆ. ನಮ್ಮೊಂದಿಗೆ ಹೆಜ್ಜೆ ಹಾಕಿ. ನಾವು ಭಾರತದ ಭವಿಷ್ಯ ಬೆಳಗುವ ಅವಕಾಶಗಳನ್ನು ಮುಂದುವರೆಸಿಕೊಂಡು ಹೋಗುತ್ತೇವೆ ” ಎಂದರು.
ಕರ್ನಾಟಕ, ದಕ್ಷಿಣ ಭಾರತದ ಮೂಲಕ ಭಾರತದ ಅಭಿವೃದ್ಧಿ ಪಯಣ
“ನಾನು ಹೆಮ್ಮೆಯ ಭಾರತೀಯನಾಗಿ ಹಾಗೂ 16 ಶತಮಾನಗಳಿಗೂ ಹೆಚ್ಚಿನ ಇತಿಹಾಸವನ್ನು ಹೊಂದಿರುವ ನಮ್ಮ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಹೆಮ್ಮೆಯ ಕನ್ನಡಿಗನಾಗಿ ಮಾತನಾಡುತ್ತಿದ್ದೇನೆ. ನಾನು ಕರ್ನಾಟಕದ ಪರವಾಗಿ ಮಾತ್ರವಲ್ಲ, ಇಡೀ ದಕ್ಷಿಣ ಭಾರತದ ಪರವಾಗಿ ಮಾತನಾಡುತ್ತಿದ್ದೇನೆ. ಭಾರತದ ಅಭಿವೃದ್ಧಿಯ ಪಯಣವು ದಕ್ಷಿಣ ಭಾರತದ ಮೂಲಕ ಸಾಗುತ್ತದೆ. ಭಾರತದ ಅಭಿವೃದ್ಧಿಯ ತೇರು ದಕ್ಷಿಣ ಭಾರತ ಮೂಲಕವೇ ಸಾಗುತ್ತಿತ್ತು, ಸಾಗುತ್ತಿದೆ, ಸಾಗುತ್ತದೆ” ಎಂದರು.
“ನಮ್ಮ ಐದು ರಾಜ್ಯಗಳು ಭಾರತದ ಒಟ್ಟು ಜನಸಂಖ್ಯೆಯ ಸುಮಾರು ಶೇ.20ರಷ್ಟನ್ನು ಹೊಂದಿದ್ದರೂ, ದೇಶದ ಒಟ್ಟು ಜಿಡಿಪಿಗೆ ಸುಮಾರು ಶೇ.33ರಷ್ಟು ಕೊಡುಗೆ ನೀಡುತ್ತಿವೆ. ಅಂದರೆ, ಭಾರತದ ಆರ್ಥಿಕತೆಯಲ್ಲಿ ಉತ್ಪತ್ತಿಯಾಗುವ ಪ್ರತಿ ಮೂರು ರೂಪಾಯಿಗಳಲ್ಲಿ ಒಂದು ರೂಪಾಯಿ ದಕ್ಷಿಣ ಭಾರತದಿಂದ ಬರುತ್ತದೆ. ಭಾರತದ ಆರ್ಥಿಕತೆಯ ಈ ಪ್ರಮುಖ ಎಂಜಿನ್‌ಲ್ಲಿ ಕರ್ನಾಟಕವು ಅತ್ಯಂತ ಬಲಿಷ್ಠ ಚಾಲಕ ಶಕ್ತಿಗಳಲ್ಲಿ ಒಂದಾಗಿದೆ” ಎಂದು ಪುನಃರುಚ್ಚರಿಸಿದರು.
“ಸಾಫ್ಟ್‌ವೇರ್ ರಪ್ತಿನಲ್ಲಿ ನಾವು ದೇಶದಲ್ಲೇ ಪ್ರಥಮ ಸ್ಥಾನದಲ್ಲಿದ್ದೇವೆ. ಭಾರತದ ಸಾಫ್ಟ್‌ವೇರ್ ರಪ್ತಿನಲ್ಲಿ ಕರ್ನಾಟಕದ ಕೊಡುಗೆ ಶೇ.42ರಷ್ಟಿದೆ. ಸುಮಾರು 1,100 ಗ್ಲೋಬಲ್ ಕೇಪಬಲಿಟಿ ಸೆಂಟರ್‌ಗಳನ್ನು (GCCs) ಹೊಂದಿರುವ ನಾವು, ದೇಶದಲ್ಲೇ ಅತಿ ಹೆಚ್ಚು GCCಗಳನ್ನು ಹೊಂದಿರುವ ರಾಜ್ಯವಾಗಿದ್ದೇವೆ. 2019ರಿಂದ 2025ರ ಅವಧಿಯಲ್ಲಿ ಭಾರತದ ಒಟ್ಟು ವಿದೇಶಿ ನೇರ ಬಂಡವಾಳ (FDI) ಈಕ್ವಿಟಿ ಒಳಹರಿವಿನಲ್ಲಿ ಶೇ.21ಕ್ಕಿಂತ ಹೆಚ್ಚಿನ ಪಾಲನ್ನು ಕರ್ನಾಟಕ ಆಕರ್ಷಿಸಿದೆ” ಎಂದು ವಿವರಿಸಿದರು.
“ಭಾರತದ ಜನಸಂಖ್ಯೆಯಲ್ಲಿ ಕರ್ನಾಟಕದ ಪಾಲು ಕೇವಲ ಶೇ.5.5ರಷ್ಟಿದ್ದರೂ, ದೇಶದ ಜಿಡಿಪಿಗೆ ನಮ್ಮ ಕೊಡುಗೆ ಶೇ.9ರಷ್ಟಿದೆ. ಕರ್ನಾಟಕದ ತಲಾ GSDP ದೇಶದಲ್ಲೇ ಅತ್ಯಧಿಕವಾಗಿದ್ದು, ಭಾರತದ ತಲಾ GSDPಗಿಂತ ಸುಮಾರು ಎರಡು ಪಟ್ಟು ಹೆಚ್ಚಾಗಿದೆ. ದೇಶದ ಏರೋಸ್ಪೇಸ್ ಉದ್ಯಮದ ಶೇ.60ರಷ್ಟು ಭಾಗ ಕರ್ನಾಟಕದಲ್ಲಿದೆ. ಭಾರತದ ಕಾಫಿ ಉತ್ಪಾದನೆಯ ಸುಮಾರು ಶೇ 70 ಮತ್ತು ಸಂಸ್ಕರಿಸಿದ ಸೌತೆಕಾಯಿ (gherkin) ರಫ್ತಿನ ಶೇ90 ಕೊಡುಗೆ ನಮ್ಮದಾಗಿದೆ. ಬೆಂಗಳೂರು ಇಂದು ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿ, ನ್ಯೂಯಾರ್ಕ್, ಬೀಜಿಂಗ್ ಮತ್ತು ಲಂಡನ್‌ಗಳೊಂದಿಗೆ ವಿಶ್ವದ ಪ್ರಮುಖ ಐದು Al ನಗರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ” ಎಂದು ಹೇಳಿದರು.
ನಾವು ನ್ಯಾಯಯುತ ಪಾಲು ನಿರೀಕ್ಷಿಸುತ್ತಿದ್ದೇವೆ
“15ನೇ ಹಣಕಾಸು ಆಯೋಗದ ಅವಧಿಯಲ್ಲಿ ವಿಭಜಿಸಬಹುದಾದ ತೆರಿಗೆ ಭಾಗದಲ್ಲಿ ಕರ್ನಾಟಕದ ಪಾಲು ಶೇ.4.7ರಿಂದ ಶೇ.3.6ಕ್ಕೆ ಇಳಿಕೆಯಾಯಿತು. ಇದು ಸುಮಾರು ಶೇ.23ರಷ್ಟು ಕಡಿತವಾಗಿದ್ದು, ಆರು ವರ್ಷಗಳ ಅವಧಿಯಲ್ಲಿ ರಾಜ್ಯಕ್ಕೆ ಅಂದಾಜು ರೂ.65,000 ಕೋಟಿಯಷ್ಟು ನಷ್ಟ ಉಂಟಾಗಿದೆ. 15ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ರೂ.5,495 ಕೋಟಿ ವಿಶೇಷ ಅನುದಾನ ಮತ್ತು ರೂ.6,000 ಕೋಟಿ ರಾಜ್ಯ-ನಿದಿ ಷ್ಟ ಅನುದಾನವನ್ನು ಶಿಫಾರಸು ಮಾಡಿತ್ತು. ಆದರೆ, ಈ ಎರಡೂ ಶಿಫಾರಸು ಮಾಡಿದ ಅನುದಾನಗಳು ಬಿಡುಗಡೆಯಾಗಿಲ್ಲ” ಎಂದು ಆಗಿರುವ ಅನ್ಯಾಯ ವಿವರಿಸಿದರು.
“16ನೇ ಹಣಕಾಸು ಆಯೋಗವು ನಮ್ಮ ರಾಜ್ಯಕ್ಕೆ ಭಾಗಶಃ ನ್ಯಾಯ ಒದಗಿಸಿದ್ದು, ಕರ್ನಾಟಕದ ಪಾಲನ್ನು ಶೇ.3.64ರಿಂದ ಶೇ.4.131ಕ್ಕೆ ಹೆಚ್ಚಿಸುವ ಮೂಲಕ ಕೆಲವು ಮಟ್ಟಿಗೆ ಮರುಸ್ಥಾಪಿಸಿದೆ. ಆದಾಗ್ಯೂ, ನಮ್ಮ ಪಾಲನ್ನು ಸಂಪೂರ್ಣವಾಗಿ ಶೇ.4.7ಕ್ಕೆ ನಿಲ್ಲಿಸಬೇಕಿದೆ. ಕರ್ನಾಟಕವು GST ಮತ್ತು ಆದಾಯ ತೆರಿಗೆಗೆ ಎರಡನೇ ಅತಿ ದೊಡ್ಡ ಕೊಡುಗೆ ನೀಡುವ ರಾಜ್ಯವಾಗಿದೆ. ಬೆಳವಣಿಗೆ ಮತ್ತು ಆದಾಯದ ವಿಷಯದಲ್ಲಿ ಉತ್ತಮ ಸಾಧನೆ ಮಾಡುವ ರಾಜ್ಯವನ್ನು ಪ್ರೋತ್ಸಾಹಿಸಬೇಕೇ ಹೊರತು, ದಂಡಿಸಬಾರದು” ಎಂದರು.
“ಹಣಕಾಸು ಆಯೋಗವೇ ಈ ಪಾಲುಗಳನ್ನು ನಿರ್ಧರಿಸುತ್ತದೆ ಎಂಬುದು ನನಗೆ ತಿಳಿದಿದೆ. ಆದರೆ, ಹೆಚ್ಚುವರಿ Terms of Referenceಗಳನ್ನು ನೀಡುವ ಮೂಲಕ ಕೇಂದ್ರ ಸರ್ಕಾರವು ಆಯೋಗಕ್ಕೆ ಮಾರ್ಗದರ್ಶನ ನೀಡಬಹುದು. ಇದೀಗ ಹಣಕಾಸು ಆಯೋಗದ ವರದಿ ಅಂಗೀಕಾರಗೊಂಡಿದ್ದು, ರಾಜ್ಯಗಳ ಪಾಲು ಅಂತಿಮಗೊಂಡಿರುವ ಸಂದರ್ಭದಲ್ಲಿ, ಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು ಯೋಜನೆ, STRR ದಕ್ಷಿಣ ಭಾಗ, ರಾಯಚೂರಿಗೆ AIIMS ಹಾಗೂ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್‌ನಂತಹ ಹೆಚ್ಚುವರಿ ಕೇಂದ್ರ ಯೋಜನೆಗಳ ಮೂಲಕ ಕರ್ನಾಟಕಕ್ಕೆ ನ್ಯಾಯ ಒದಗಿಸಬೇಕು” ಎಂದು ಒತ್ತಾಯಿಸಿದರು.
ಪ್ರಾತಿನಿಧ್ಯವೆಂದರೆ ಕೇವಲ ಸಂಖ್ಯೆಗಳಲ್ಲ, ನಮ್ಮ ಪ್ರಭಾವ ಧ್ವನಿ
“ಇಡೀ ದಕ್ಷಿಣ ಭಾರತದ ಮತ್ತೊಂದು ಪ್ರಮುಖ ವಿಚಾರ ಎಂದರೆ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ. ಯಾವುದೇ ದಕ್ಷಿಣ ರಾಜ್ಯ ತನ್ನ ಲೋಕಸಭಾ ಸ್ಥಾನಗಳನ್ನು ಕಳೆದುಕೊಳ್ಳುವುದಿಲ್ಲ ಎಂಬ ಭರವಸೆಯನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಪ್ರಾತಿನಿಧ್ಯವೆಂದರೆ ಕೇವಲ ಸಂಖ್ಯೆಗಳ ವಿಷಯವಲ್ಲ. ಅದು ನಮ್ಮ ಪ್ರಭಾವ ಮತ್ತು ಧ್ವನಿಯ ವಿಷಯವೂ ಹೌದು. ದಕ್ಷಿಣ ಭಾರತವು ದೇಶದ ಕರೆಯನ್ನು ಸ್ವೀಕರಿಸಿ, ಜನಸಂಖ್ಯೆಯನ್ನು ಶಿಸ್ತುಬದ್ಧವಾಗಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಯಶಸ್ಸೇ ನಮ್ಮ ಧ್ವನಿಯನ್ನು ದುರ್ಬಲಗೊಳಿಸಲು ಕಾರಣವಾಗಬಾರದು. ನಮ್ಮ ಆರ್ಥಿಕ ತೂಕಕ್ಕೆ ತಕ್ಕ ರಾಜಕೀಯ ಧ್ವನಿಯೂ ಇರಬೇಕು” ಎಂದು ವಾದಿಸಿದರು.
“ನಮ್ಮ ಪ್ರಾತಿನಿಧ್ಯದ ಪಾಲನ್ನು ಸಂಖ್ಯಾತ್ಮಕವಾಗಿಯೂ ಅಥವಾ ಅನುಪಾತದಲ್ಲಿಯೂ ಕಡಿಮೆ ಮಾಡಬಾರದು. ನಾನು ಹೇಳುತ್ತಿರುವ ಈ ನಿಲುವನ್ನು ಇಲ್ಲಿ ಉಪಸ್ಥಿತರಿರುವ ಎಲ್ಲ ಮುಖ್ಯಮಂತ್ರಿಗಳು ಬೆಂಬಲಿಸುತ್ತಾರೆ ಎಂಬ ವಿಶ್ವಾಸ ನನಗಿದೆ. 1971ರ ಜನಸಂಖ್ಯಾ ಆಧಾರವನ್ನು ಗೌರವಿಸಬೇಕು ಮತ್ತು ನಮ್ಮ ಧ್ವನಿಯ ಬಲವನ್ನು ಸಂರಕ್ಷಿಸಬೇಕು” ಎಂದು ಒತ್ತಾಯಿಸಿದರು.
ಲೋಕಸಭಾ ಸ್ಥಾನ ಯಥಾಸ್ಥಿತಿಯಲ್ಲಿ ಕಾಯ್ದುಕೊಂಡು ಮಹಿಳಾ ಮೀಸಲಾತಿ ಒದಗಿಸಿ
“ನಮ್ಮ ಮಹಿಳೆಯರಿಗೆ ದೊರೆಯಬೇಕಾದ ನ್ಯಾಯ ಮತ್ತಷ್ಟು ವಿಳಂಬವಾಗಬಾರದು. ಮಹಿಳೆಯರು ತಮ್ಮ ನ್ಯಾಯಯುತ ಪ್ರಾತಿನಿಧ್ಯಕ್ಕಾಗಿ ಬಹಳ ಕಾಲದಿಂದ ಕಾಯುತ್ತಿದ್ದಾರೆ. ಮಹಿಳಾ ಮೀಸಲಾತಿಯು ಮತ್ತೊಂದು ಜನಗಣತಿಯವರೆಗೆ ಕಾಯಬೇಕಾದ ಅಗತ್ಯವಿಲ್ಲ. ಆದ್ದರಿಂದ, ಪ್ರಸ್ತುತ ಇರುವ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಂಡು, ಇದೇ ಸ್ಥಾನಗಳ ಸಂಖ್ಯೆಯೊಳಗೆ ಮಹಿಳಾ ಮೀಸಲಾತಿಯನ್ನು ಒದಗಿಸುವಂತೆ ಈ ಮಂಡಳಿಯು ಒಂದು ನಿರ್ಣಯವನ್ನು ಅಂಗೀಕರಿಸಬೇಕೆಂದು ನಾನು ಒತ್ತಾಯಿಸುತ್ತೇನೆ. ನಮ್ಮ ಈ ಸಾಮೂಹಿಕ ನಿಲುವಿನ ಹಿಂದೆ ನನ್ನ ಸಹ ಮುಖ್ಯಮಂತ್ರಿಗಳು ಒಗ್ಗಟ್ಟಾಗಿ ನಿಲ್ಲಬೇಕೆಂದು ನಾನು ಕರೆ ನೀಡುತ್ತೇನೆ” ಎಂದರು.
ಸಂಪನ್ಮೂಲಗಳಲ್ಲಿ ನ್ಯಾಯಯುತ ಪಾಲು ಅಗತ್ಯ
“ಸ್ನೇಹಿತರೇ, ನಮ್ಮ ಧ್ವನಿಯಲ್ಲಿ ನ್ಯಾಯಯುತತೆ ಒಂದು ಭಾಗವಾದರೆ, ನಮ್ಮ ಸಂಪನ್ಮೂಲಗಳಲ್ಲಿ ನ್ಯಾಯಯುತ ಪಾಲು ಇನ್ನೊಂದು ಭಾಗವಾಗಿದೆ. ಈ ಸಭೆಯಲ್ಲಿರುವ ಪ್ರತಿಯೊಂದು ರಾಜ್ಯಕ್ಕೂ ನೀರಿಗಿಂತ ಮಹತ್ವದ ಸಂಪನ್ಮೂಲ ಮತ್ತೊಂದಿಲ್ಲ. ನಮ್ಮ ನದಿಗಳು ರಾಜಕೀಯ ಗಡಿಗಳನ್ನು ಗುರುತಿಸುವುದಿಲ್ಲ. ಕಾವೇರಿ, ಕೃಷ್ಣಾ, ತುಂಗಭದ್ರಾ, ಪೆನ್ನಾರ್ ಮತ್ತು ಪಾಲಾರ್ ನದಿಗಳು ಇಡೀ ದಕ್ಷಿಣ ಪರ್ಯಾಯ ದ್ವೀಪದ ಜೀವನಾಡಿಗಳಾಗಿವೆ. ನೀರು ನಮ್ಮನ್ನು ಒಗ್ಗೂಡಿಸಬೇಕು, ವಿಭಜಿಸಬಾರದು. ನೀರಿನ ಹಂಚಿಕೆಯಿಂದ ನೀರಿನ ಸಹಕಾರದತ್ತ ಸಾಗುವ ಸಮಯ ಈಗ ಬಂದಿದೆ” ಎಂದು ಕರೆ ನೀಡಿದರು.
“ಈ ಸಹಕಾರ ಹೇಗಿರಬೇಕು ಎಂಬುದನ್ನು ಕರ್ನಾಟಕ ತೋರಿಸಿಕೊಟ್ಟಿದೆ. ಜೂನ್ 25ರಂದು ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಸಿ.ಆರ್. ಪಾಟೀಲ್ ಅವರ ಅಮೂಲ್ಯ ನಾಯಕತ್ವಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತಾ, ನಾವು ಜಂಟಿ ಸಾರ್ವಜನಿಕ ಸಭೆಯನ್ನು ನಡೆಸಿದೆವು. ಇದು ಅಂತಾರಾಜ್ಯ ಜಲ ಸಂಬಂಧಗಳ ಇತಿಹಾಸದಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದ ಮುಖ್ಯಮಂತ್ರಿಗಳಾದ ಚಂದ್ರಬಾಬು ನಾಯ್ಡು ಹಾಗೂ ರೇವಂತ್ ರೆಡ್ಡಿ ಅವರು ನನ್ನೊಂದಿಗೆ ಆ ಸಭೆಯಲ್ಲಿ ಭಾಗವಹಿಸಿದ್ದರು. ನಾವು ಸ್ಪರ್ಧಿಗಳಾಗಿ ಅಲ್ಲ, ಪಾಲುದಾರರಾಗಿ ಕುಳಿತು ಚರ್ಚೆ ನಡೆಸಿದೆವು. ಇದೇ ಕರ್ನಾಟಕದ ಮಾದರಿ” ಎಂದು ಹೇಳಿದರು.
“ಪ್ರತಿಯೊಂದು ನದಿಪಾತ್ರದ ರಾಜ್ಯಕ್ಕೂ ತನ್ನದೇ ಆದ ನ್ಯಾಯಸಮ್ಮತ ಅಗತ್ಯಗಳಿವೆ ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಮತ್ತು ನಮ್ಮ ನಿಲುವು ಮೂರು ತತ್ತ್ವಗಳ ಮೇಲೆ ಆಧಾರಿತವಾಗಿದೆ. ಸಮಾನತೆ. ಪಾರದರ್ಶಕತೆ. ಸಹಕಾರ. ಆದರೆ ಸಹಕಾರವು ಎರಡೂ ದಿಕ್ಕಿನಲ್ಲೂ ಇರಬೇಕು. ಕರ್ನಾಟಕವು ಸದಾ ತನ್ನ ನೆರೆ ರಾಜ್ಯಗಳ ಹಕ್ಕುಗಳನ್ನು ಗೌರವಿಸಿದೆ. ಅದೇ ರೀತಿಯಲ್ಲಿ ನಮ್ಮ ಹಕ್ಕುಗಳನ್ನೂ ಗೌರವಿಸಬೇಕೆಂದು ನಾವು ಬಯಸುತ್ತೇವೆ. ನ್ಯಾಯಮಂಡಳಿಗಳ ತೀರ್ಪುಗಳಡಿ ನಮಗೆ ಕಾನೂನುಬದ್ಧವಾಗಿ ದೊರೆಯಬೇಕಾದ ನೀರಿನ ಪಾಲು ಹಾಗೂ ನಮ್ಮ ರೈತರಿಗೆ ನೀರನ್ನು ತಲುಪಿಸುವ ಯೋಜನೆಗಳ ಸಮಯೋಚಿತ ಪೂರ್ಣಗೊಳಿಸುವಿಕೆಯನ್ನು ನಾವು ನಿರೀಕ್ಷಿಸುತ್ತೇವೆ” ಎಂದರು.
“ಕೃಷ್ಣಾ ನದಿ, ಮೇಲ್ದಂಡೆ ಭದ್ರಾ ಯೋಜನೆ ಹಾಗೂ ನದಿಗಳ ಜೋಡಣೆಯ ಕುರಿತು ಕರ್ನಾಟಕದ ನಿರ್ದಿಷ್ಟ ನಿಲುವನ್ನು ಚರ್ಚೆಯ ಸಂದರ್ಭದಲ್ಲಿ ಈ ಮಂಡಳಿಯ ಮುಂದೆ ಮಂಡಿಸುತ್ತೇನೆ. ಆದರೆ, ನೀರು ನನ್ನ ಮಾತಿನ ಆರಂಭ ಮಾತ್ರ. ನಮ್ಮ ಕಾಳಜಿಗಳು ಅಲ್ಲಿಗೆ ಮುಗಿಯುವುದಿಲ್ಲ. ಆರೋಗ್ಯ ಸೇವೆಗಳ ಹಣಕಾಸು, ಶಿಕ್ಷಣ ಮತ್ತು ಪೌಷ್ಟಿಕಾಂಶ, ಅತ್ಯಂತ ಬಡ ಕುಟುಂಬಗಳಿಗೆ ವಸತಿ, ಕರಾವಳಿ ಸವೆತ ಮತ್ತು ವಿಪತ್ತು ನಿರ್ವಹಣೆಗೆ ನೆರವು, ಗಣಿಗಾರಿಕೆ ಮತ್ತು ಖನಿಜ ಸಂಪತ್ತು ಹೊಂದಿರುವ ರಾಜ್ಯಗಳ ಹಣಕಾಸಿನ ಹಕ್ಕುಗಳು, ಕೇಂದ್ರ ಸಂಸ್ಥೆಗಳಿಗೆ ರಾಜ್ಯಗಳು ನೀಡಿರುವ ಭೂಮಿ, ನ್ಯಾಯ ವಿತರಣೆ ಮತ್ತು ಡಿಜಿಟಲ್ ಮೂಲಸೌಕರ್ಯ, ನಮ್ಮ ಗ್ರಾಮಗಳಲ್ಲಿ ಬ್ಯಾಂಕಿಂಗ್ ಮತ್ತು ಹಣಕಾಸು ಒಳಗೊಳ್ಳುವಿಕೆ, ನಮ್ಮ ರೈತರಿಗೆ ಬೆಂಬಲ ಇಂದಿನ ಕಾರ್ಯಸೂಚಿಯಲ್ಲಿ ಅಧಿಕೃತವಾಗಿ ಸೇರಿಸದಿದ್ದರೂ, ಈ ಮಂಡಳಿಯ ಮುಂದೆ ಪ್ರಸ್ತಾಪಿಸುವಷ್ಟು ಮಹತ್ವವುಳ್ಳ ಇನ್ನೂ ಎರಡು ವಿಷಯಗಳಿವೆ ಎಂದು ನಾನು ಭಾವಿಸುತ್ತೇನೆ” ಎಂದರು.
“ಮೊದಲನೆಯದು ನಮ್ಮ ಖನಿಜ ಸಂಪನ್ಮೂಲಗಳಿಗೆ ಸಂಬಂಧಿಸಿದೆ. Mines & Minerals (Development & Regulation) Act, 2026 ಅನ್ನು ಕೇಂದ್ರ ಸರ್ಕಾರವು ಮರುಪರಿಶೀಲಿಸಬೇಕೆಂದು ನಾನು ಒತ್ತಾಯಿಸುತ್ತೇನೆ. ಈ ಕಾಯ್ದೆಯು ಪ್ರಮುಖ ಖನಿಜಗಳ ಮೇಲೆ ತೆರಿಗೆ ವಿಧಿಸುವ ರಾಜ್ಯಗಳ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಈ ಹಕ್ಕನ್ನು ಸುಪ್ರೀಂ ಕೋರ್ಟ್ ಒಂಬತ್ತು ನ್ಯಾಯಮೂರ್ತಿಗಳ ಪೀಠವು ರಾಜ್ಯಗಳಿಗೆ ನೀಡಿದೆ. ಎರಡನೆಯದು ಹೆಚ್ಚುತ್ತಿರುವ ಮಾದಕ ವಸ್ತುಗಳ ಕಳ್ಳಸಾಗಣೆಯ ಸವಾಲು. ಮಾದಕ ವಸ್ತುಗಳ ಕಳ್ಳಸಾಗಣೆಯನ್ನು ತಡೆಯಲು ನಮಗೆ ಬಲಿಷ್ಠ ಕಾನೂನುಗಳು, ಬಲಿಷ್ಠ ಜಾರಿ ವ್ಯವಸ್ಥೆ ಮತ್ತು ಕಳ್ಳಸಾಗಣೆದಾರರ ವಿರುದ್ಧ ಅತ್ಯಂತ ಕಠಿಣ ಕ್ರಮಗಳ ಅಗತ್ಯವಿದೆ” ಎಂದು ವಿವರಿಸಿದರು.
“ಈ ಕಾನೂನು ಚೌಕಟ್ಟನ್ನು ಬಲಪಡಿಸಿ, ಈ ಅಕ್ರಮ ವ್ಯವಹಾರದಿಂದ ಲಾಭ ಪಡೆಯುವವರ ವಿರುದ್ಧ ತ್ವರಿತ ಮತ್ತು ಕಠಿಣ ಕಾನೂನು ಕ್ರಮ ಕೈಗೊಳ್ಳಲು ರಾಜ್ಯಗಳಿಗೆ ಅಗತ್ಯ ಬೆಂಬಲ ನೀಡಬೇಕೆಂದು ನಾನು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ. ಇವು ಪ್ರತ್ಯೇಕ ಬೇಡಿಕೆಗಳಲ್ಲ. ನಮ್ಮ ಜನರಿಗಾಗಿ ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹೇಗೆ ಕಾರ್ಯಗತಗೊಳಿಸಬೇಕು ಎಂಬುದಕ್ಕೆ ಸಂಬಂಧಿಸಿದ ಪ್ರಶ್ನೆಗಳಾಗಿವೆ. ಮುಂದಿನ ಚರ್ಚೆಯ ಸಂದರ್ಭದಲ್ಲಿ ಈ ಪ್ರತಿಯೊಂದು ವಿಷಯದ ಕುರಿತಾದ ನಿರ್ದಿಷ್ಟ ಸಮಸ್ಯೆಗಳು, ಸಂಬಂಧಿತ ಅಂಕಿ-ಅಂಶಗಳು ಹಾಗೂ ಕರ್ನಾಟಕ ಪ್ರಸ್ತಾಪಿಸುವ ಪರಿಹಾರ ಕ್ರಮಗಳನ್ನು ಈ ಮಂಡಳಿಯ ಮುಂದೆ ಮಂಡಿಸುತ್ತೇನೆ” ಎಂದು ತಿಳಿಸಿದರು.
