ಸಮಗ್ರ ಸುದ್ದಿ

ಜಾತಿ, ಧರ್ಮವ ಮೀರಿ ನಿಂತಿರುವ ಜೆನ್‌ಜಿ ಗಳು ಸಮಾಜಕ್ಕೆ ಮಾದರಿ | ಸಂವಿಧಾನದಲ್ಲಿ ಪ್ರತಿಪಾದಿಸಿರುವ ಸಮಾನತೆಯನ್ನು ಅಕ್ಷರಶಃ ಜೀವನದಲ್ಲಿ  ಅಳವಡಿಸಿಕೊಂಡವರು ದೇವರಾಜ ಅರಸು –  ಡಾ. ಜಿ. ಪರಮೇಶ್ವರ

Share

ಬೆಂಗಳೂರು :ಜೆನ್‌ಜಿ ಗಳು ಇಂದು ಎಲ್ಲೆಡೆ ಸದ್ದು ಮಾಡುತ್ತಿದ್ದಾರೆ. ಅವರ ಆಸೆ ಆಕಾಂಕ್ಷೆಗಳು ಬೇರೆ ಇವೆ.‌ ಅವರಿಗೆ ಜಾತಿ, ಧರ್ಮಗಳ ವ್ಯತ್ಯಾಸ ಬೇಕಿಲ್ಲ. ಜೀವನ ಕಟ್ಟಿಕೊಳ್ಳುವುದೇ ಅವರಿಗೆ ಮುಖ್ಯ. ಇಂತದ್ದೊಂದು ಆಲೋಚನೆ ಕಡೆಗೆ ಅವರು ಇಡೀ ಸಮಾಜವನ್ನು ಕೊಂಡೊಯ್ಯುತ್ತಿರುವುದು ಗಮನಾರ್ಹವಾಗಿದೆ ಎಂದು ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಮತ್ತು ಕ್ರೀಡಾ ಸಚಿವರಾದ ಡಾ.ಜಿ.ಪರಮೇಶ್ವರ ಹೇಳಿದರು. 

ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ರೊ.‌ ಪಿ.ವಿ.ನಂಜರಾಜ ಅರಸು ಅವರಿಗೆ ‘ಡಿ. ದೇವರಾಜ ಅರಸು ಪ್ರಶಸ್ತಿ’ ಪ್ರದಾನ ಮಾಡಿದ ಬಳಿಕ ಅವರು ಮಾತನಾಡಿದರು. 

ಇಂದು ಮಾಜಿ‌ ಮುಖ್ಯಮಂತ್ರಿ ದೇವರಾಜ ಅರಸು ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಜನ್ಮದಿನ. ಇಬ್ಬರು ದೇಶದಲ್ಲಿ ಬದಲಾವಣೆಗೆ ಅಡಿಗಲ್ಲು ಹಾಕಿದ ಮಹಾನ್ ನಾಯಕರು.‌ ಸಮಾಜದ ಒಳಿತಿನ ದೃಷ್ಟಿಯಿಂದ ತಮ್ಮ‌ ಅಧಿಕಾರಾವಧಿಯಲ್ಲಿ ಹಲವು ಬದಲಾವಣೆ ತಂದಿದ್ದಾರೆ. ದೇವರಾಜ ಅರಸು ಅವರು ಶ್ರೇಣೀಕೃತ ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡವರು. ಸಮಾಜದಲ್ಲಿ ಪ್ರತಿಯೊಬ್ಬರಿಗೂ ಗೌರವ, ಸ್ವಾಭಿಮಾನದ ಬದುಕು ಸಿಗಬೇಕು ಎಂದು ಅನೇಕ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಅವುಗಳಿಂದ ಇಂದು ಅನೇಕ ಧನಾತ್ಮಕ ಬದಲಾವಣೆಯನ್ನು ನಾವು ಕಾಣುತ್ತಿದ್ದೇವೆ ಎಂದರು. 

ಪ್ರಪಂಚದ ಯಾವುದೇ ದೇಶದಲ್ಲಿ ಶ್ರೇಣಿಕೃತ ವ್ಯವಸ್ಥೆ ಇಲ್ಲ. ನಾನಂತು ಯಾವ ದೇಶದಲ್ಲೂ ಜಾತಿ ವ್ಯವಸ್ಥೆ ನೋಡಿಲ್ಲ. ಭಾರತದಲ್ಲಿ ಯಾಕೆ ಬಂತು ಎನ್ನುವುದಕ್ಕೆ ಉತ್ತರ ಎಲ್ಲರಿಗೂ ಗೊತ್ತಿದೆ. ಮನುಷ್ಯನನ್ನು ಮನುಷ್ಯನನ್ನಾಗಿ ಕಾಣಬೇಕು ಎಂಬುದೇ ದೇವರಾಜ ಅರಸು ಅವರ ಕನಸಾಗಿತ್ತು. ಅದನ್ನು ಸಾಕಾರ ಮಾಡಲು ಅವರು ಶ್ರಮಿಸಿದರು ಎಂದು ತಿಳಿಸಿದರು.

ಮುಂದುವರೆದು, ಭಗವಾನ್ ಬುದ್ಧರು ಸಮಾನತೆಯನ್ನು ಪ್ರತಿಪಾದನೆ ಮಾಡಿದರು. ಬಸವೇಶ್ವರರು ಸಮಾಜದ ಪರಿವರ್ತನೆಗೆ ನಾಂದಿ ಹಾಡಿದರು. ಹೀಗೆ ಅನೇಕ ಧೀಮಂತ ನಾಯಕರು ತಮ್ಮ ಜೀವಿತಕಾಲದಲ್ಲಿ ಸಮಾಜಕ್ಕಾಗಿ ಕೊಡುಗೆಗಳನ್ನು ನೀಡಿದ್ದಾರೆ. ದೇವರಾಜ ಅರಸು ಅವರು ಸ್ವಾಭಿಮಾನದ ಬದುಕು ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ನಡೆಸಿದರು‌. ಸಾಮಾಜಿಕವಾಗಿ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಅನೇಕ ರೀತಿಯ ಪ್ರಯತ್ನಗಳನ್ನು ಮಾಡಿದರು‌ ಎಂದು ಹೇಳಿದರು. 

ಮಲ ಹೊರುವ ಪದ್ಧತಿ ಜಗತ್ತಿನ ಯಾವ ದೇಶದಲ್ಲೂ ಇರಲಿಲ್ಲ. ನಾವು 21 ಶತಮಾನಕ್ಕೆ ಕಾಲಿಟ್ಟಿದ್ದೇವೆ, ಎಲ್ಲೆಡೆ ಆಧುನಿಕತೆಯ ಗಾಳಿ ಬೀಸುತ್ತಿದೆ. ಹೀಗಿದ್ದರೂ ಇಂದಿಗೂ ಈ ಅನಿಷ್ಟ ಪದ್ಧತಿ ಅನೇಕ ರಾಜ್ಯಗಳಲ್ಲೂ ಇದೆ ಎನ್ನುವುದು ನೋವಿನ ವಿಚಾರ. ಮಲಹೊರುವ ಪದ್ಧತಿಯನ್ನು ನಿಷೇಧ ಮಾಡಿ, ಆ ಸಮುದಾಯಗಳಿಗೆ ಗೌರವ ತರುವ ಕೆಲಸ ಮಾಡಿರುವುದೇ ದೇಶದಲ್ಲಿ ಮೊದಲ ದೊಡ್ಡ ಬದಲಾವಣೆ. ಈ ಬದಲಾವಣೆಗೆ ಮುನ್ನುಡಿ ಬರೆದವರು ದೇವರಾಜ ಅರಸು ಅವರು ಎಂದು ತಿಳಿಸಿದರು. 

ಮನುಷ್ಯನಿಗೆ ಭೂಮಿ ಆಸ್ತಿಯಷ್ಟೇ ಅಲ್ಲ ಶಕ್ತಿಯೂ ಆಗಿದೆ. ಕಷ್ಟಪಟ್ಟು ಭೂಮಿಯ ಉಳುಮೆ ಮಾಡುವವರನ್ನೇ ಭೂಸುಧಾರಣಾ ಕಾಯ್ದೆಯ ಮೂಲಕ ಭೂಮಿಯ ಒಡೆಯನನ್ನಾಗಿ ಮಾಡಿದರು. ಉತ್ತರ ಕರ್ನಾಟಕ ಭಾಗದಲ್ಲಿ ಕೆಲವೇ ಕೆಲವು ಭೂಮಾಲೀಕರು ಎರಡು ಸಾವಿರ, ಮೂರು ಸಾವಿರ ಎಕರೆ ಜಮೀನು ಹೊಂದಿದ್ದರು. ಅಂತವರ ಭೂಮಿಯನ್ನು ಬಡವರಿಗೆ ಹಂಚಿದರು. ಇದು ಸಾಮಾನ್ಯ‌ ಕೆಲಸವಲ್ಲ. ಸಂವಿಧಾನದಲ್ಲಿ ಪ್ರತಿಪಾದಿಸಿರುವ ಸಮಾನತೆಯನ್ನು ಅಕ್ಷರಶಃ ಜೀವನದಲ್ಲಿ ಅಳವಡಿಸಿಕೊಂಡವರು ದೇವರಾಜ ಅರಸು ಎಂದರು. 

ದೂರದೃಷ್ಟಿ ಹೊಂದಿದ್ದ ದೇವರಾಜ ಅರಸು ಅವರು ಕ್ಯಾಲಿಫೋರ್ನಿಯಾದಲ್ಲಿರುವ ಎಲೆಕ್ಟ್ರಾನಿಕ್ ಸಿಟಿ ಮಾದರಿಯಲ್ಲಿ ಬೆಂಗಳೂರಿನಲ್ಲಿ ಎಲೆಕ್ಟ್ರಾನಿಕ್ ಸಿಟಿಯನ್ನು ನಿರ್ಮಿಸಿದರು. ಲಕ್ಷಾಂತರ ಯುವಕರಿಗೆ ಉದ್ಯೋಗ ನೀಡುವ ಮೂಲಕ ಭವಿಷ್ಯದ ಆರ್ಥಿಕ ಚಟುವಟಿಕೆಗಳಿಗೆ ಅಡಿಗಲ್ಲು ಹಾಕಿದರು. ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿ ದೃಷ್ಟಿಯಲ್ಲಿ ಕರ್ನಾಟಕವನ್ನು ದೇಶದಲ್ಲೇ ಮಾದರಿ ರಾಜ್ಯವನ್ನಾಗಿ ಮಾಡಿದರು. ರಾಜ್ಯದ ಮುಖ್ಯಮಂತ್ರಿಯಾಗಿ ಅಮೋಘ ಸೇವೆ ಸಲ್ಲಿಸಿ ಇತಿಹಾಸವನ್ನು ಬಿಟ್ಟು ಹೋಗಿದ್ದಾರೆ ಎಂದು ದೇವರಾಜ ಅರಸು ಅವರ ಸಾಧನೆಯನ್ನು ಕೊಂಡಾಡಿದರು. 

ಕರ್ನಾಟಕ ಪ್ರಪಂಚದಲ್ಲೇ ಮಾದರಿಯಾಗಿದೆ. ಲಕ್ಷಾಂತರ ಮಕ್ಕಳು ವಿದೇಶ ಮತ್ತು ಬೇರೆ ರಾಜ್ಯಗಳ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಬರುತ್ತಿದ್ದಾರೆ. ಗುಣಮಟ್ಟದ ಶಿಕ್ಷಣ ರಾಜ್ಯದಲ್ಲಿ ಸಿಗುತ್ತಿದೆ. ಇದಕ್ಕೆ ಅಡಿಗಲ್ಲು ಹಾಕಿದವರು ದೇವರಾಜ ಅರಸು ಅವರು ಎಂದರು. 

ವಿಧಾನಸೌಧದ ಕಾರಿಡಾರ್‌ನಲ್ಲಿ ಬರುವ ನಮ್ಮ ತಂದೆಯವರನ್ನು ಸಿಬ್ಬಂದಿಗಳು ಪಕ್ಕಕ್ಕೆ ಸರಿಸಿದ್ದರು. ಇದನ್ನು ಗಮನಿಸಿದ್ದ ದೇವರಾಜ ಅರಸು ಅವರು ತಮ್ಮ ಕಚೇರಿಗೆ ಕರೆದೊಯ್ದು ಮಾತನಾಡಿಸಿದ್ದರು. ಶ್ರೀ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿಗೆ ಅವರು ಅನುಮತಿ ನೀಡಿಸಿದ್ದರು. ಉನ್ನತ ಶಿಕ್ಷಣಕ್ಕೆ ಅಡಿಗಲ್ಲು ಹಾಕಿದವರು ದೇವರಾಜ ಅರಸು ಅವರು ಎಂದು ತಮ್ಮ ತಂದೆಯೊಂದಿಗಿನ ಅರಸು ಅವರ ಬಾಂಧವ್ಯ ನೆನಪಿಸಿಕೊಂಡರು. 

ನಮ್ಮ ರಾಜ್ಯದ ಮಕ್ಕಳು ಪ್ರಪಂಚದ ಎಲ್ಲ ಕಡೆ ಉದ್ಯೋಗ ನಿಮಿತ್ತ ವಾಸಿಸುತ್ತಿದ್ದಾರೆ. ಕರ್ನಾಟಕವು ಶಿಕ್ಷಣದಲ್ಲಿ ಶಕ್ತಿ ಪಡೆದುಕೊಂಡಿದ್ದರೆ ಅದು ದೇವರಾಜ ಅರಸು ಅವರ ಕೊಡುಗೆ ಎಂದು ಭಾವಿಸುತ್ತೇನೆ. ಸ್ವಾತಂತ್ರ್ಯ ಬಂದಾಗ ಮಹಾತ್ಮ ಗಾಂಧಿ ರವರು ಡೆಮಾಕ್ರಟಿಕ್ ರಿಪಬ್ಲಿಕ್ ಬಯಸಿದ್ದರು. ಇದನ್ನು ಮಾಡಿ ತೋರಿಸಿದವರು ದೇವರಾಜ ಅರಸು ಅವರು ಎನ್ನುವುದು ನಮಗೆ ಹೆಮ್ಮೆಯ ವಿಷಯ ಎಂದು ತಿಳಿಸಿದರು. 

ಇತಿಹಾಸ ಇಲ್ಲದೆ ಹೋಗಿದ್ದರೆ ನಮಗೆ ಇದನ್ನೆಲ್ಲಾ ಹೇಳುವವರು ಯಾರು. ಮೈಸೂರಿನ ಇತಿಹಾಸ ಬರೆಯದೆ ಹೋಗಿದ್ದರೆ ನಾಡಿನ ಅರ್ಧ ಇತಿಹಾಸ ನಮಗೆ ಗೊತ್ತಾಗುತ್ತಿರಲಿಲ್ಲ‌.‌ ನಂಜರಾಜ ಅರಸು ಅವರನ್ನು ಗುರುತಿಸಿ ದೇವರಾಜ ಅರಸು ಪ್ರಶಸ್ತಿ ನೀಡುವ ಮೂಲಕ ಪ್ರಶಸ್ತಿಗೆ ಗೌರವ ತರುವ ಕೆಲಸವನ್ನು ಮಾಡಿದ್ದಾರೆ. ಭಗವಂತನು ನಂಜರಾಜ ಅರಸು ಅವರಿಗೆ ಸುಧೀರ್ಘ ಆಯುಷ್ಯ, ಆರೋಗ್ಯ ಶಕ್ತಿ ನೀಡಲಿ ಎಂದು ಆಶಿಸಿದರು.

ಸಿದ್ಧರಾಮಯ್ಯ ಅವರು ದೇವರಾಜ ಅರಸು ಅವರ ದಾರಿಯಲ್ಲಿ ನಡೆದುಕೊಂಡು ಬಂದವರು. ದನಿಯಿಲ್ಲದ ಜನರಿಗೆ ದನಿ‌ ನೀಡುವ ಕೆಲಸ‌ ಮಾಡಿದ್ದಾರೆ. ಬಡವರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ತಮ್ಮದೇ ಆದ ಆಲೋಚನೆಗಳನ್ನು ಹೊಂದಿದ್ದಾರೆ. ಎಲ್ಲರಿಗೂ ಸಮಾನತೆ ಸಿಗಬೇಕು, ರಾಜ್ಯ ಪ್ರಗತಿ ಹೊಂದಬೇಕು‌ ಎಂಬ ಕನಸು ಹೊಂದಿದ್ದಾರೆ ಎಂದು ಹೇಳಿದರು. 

ಈ ಎಲ್ಲರ ಸಹಭಾಗಿತ್ವದಲ್ಲಿ ರಾಜ್ಯವನ್ನು ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಮಾಡುತ್ತೇವೆ. ಜನಪರ ಯೋಜನೆಗಳನ್ನು ಮುಂದುವರಿಸುವ ಜೊತೆಗೆ ಹೊಸ ಕಾರ್ಯಕ್ರಮಗಳನ್ನು ಘೋಷಣೆ ಮಾಡುತ್ತೇವೆ. ಈಗಾಗಲೇ ಭಾರತ್ ಜೋಡೋ ಯುವ ಸಂಘವನ್ನು ಮಾಡಲಾಗುತ್ತಿದೆ. ಹೀಗೆ ನಾವು ಗ್ಯಾರಂಟಿ ಯೋಜನೆ, ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮಗಳನ್ನು ಸಮಾನವಾಗಿ ಜಾರಿ ಮಾಡುತ್ತಾ, ರಾಜ್ಯವನ್ನು ಪ್ರಗತಿಯ ಹಾದಿಯಲ್ಲಿ ಮುನ್ನಡೆಸುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸಭಾಪತಿಗಳಾದ ಸಲೀಂ ಅಹ್ಮದ್, ಸಚಿವರಾದ ಶಿವರಾಜ್ ಎಸ್.ತಂಗಡಗಿ, ಬಸವಂತಪ್ಪ, ಡಾ. ಯತೀಂದ್ರ ಸಿದ್ದರಾಮಯ್ಯ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎಂ.ರೇವಣ್ಣ, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಪ್ರದೀಪ್ ಈಶ್ವರ್, ಭೀಮಣ್ಣ ಚಿಮ್ಮನಕಟ್ಟಿ, ವಿಧಾನ ಪರಿಷತ್ ಸದಸ್ಯರಾದ ಎಫ್‌.ಹೆಚ್‌.ಜಕ್ಕಪ್ಪನವರ್, ಗಾಯತ್ರಿ ಶಾಂತನಗೌಡ ಮುಂತಾದವರು ಉಪಸ್ಥಿತರಿದ್ದರು.


Share

You cannot copy content of this page