ಬೆಂಗಳೂರು:ಆಹಾರ ಇಲಾಖೆಗೆ ಹೊಸದಾಗಿ ನೇಮಕಗೊಂಡ ಯುವ ಸಿಬ್ಬಂದಿಗಾಗಿ ಇಂದು ಇನ್‌ಫ್ಯಾಂಟ್ರಿ ರಸ್ತೆಯಲ್ಲಿರುವ ಕೆಎಎಸ್ ಅಸೋಸಿಯೇಷನ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾನ್ಯ ಸಚಿವರಾದ ಶ್ರೀ ರಿಜ್ವಾನ್ ಅರ್ಷದ್ ಅವರು ಭಾಗವಹಿಸಿ, ಯುವ ಸಿಬ್ಬಂದಿಗೆ ಮಾರ್ಗದರ್ಶನ ನೀಡಿದರು.
ಸಮಾಜದ ಅತ್ಯಂತ ದುರ್ಬಲ ವರ್ಗಗಳ ಜನರಿಗೆ ಸೇವೆ ಸಲ್ಲಿಸುವುದು ಆಹಾರ ಇಲಾಖೆಯ ಪ್ರಮುಖ ಜವಾಬ್ದಾರಿಯಾಗಿದ್ದು, ಉತ್ತಮ ಆಡಳಿತ, ಪರಿಣಾಮಕಾರಿ ಸೇವಾ ವಿತರಣೆ ಹಾಗೂ ಜನಕೇಂದ್ರಿತ ಕಾರ್ಯವೈಖರಿ ಇಲಾಖೆಯ ಕಾರ್ಯದ ಮೂಲ ಆಶಯಗಳಾಗಬೇಕು ಎಂದು ಸಚಿವರು ಹೇಳಿದರು.
ಹೊಸ ತಂತ್ರಜ್ಞಾನಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುವುದು, ನವೀನ ಕಾರ್ಯವಿಧಾನಗಳಿಗೆ ತೆರೆದುಕೊಳ್ಳುವುದು ಹಾಗೂ ಹೊಸ ಆಲೋಚನೆಗಳಿಗೆ ಅವಕಾಶ ನೀಡುವ ಮೂಲಕ ಇಲಾಖೆಯ ಕಾರ್ಯವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ಅವರು ಯುವ ಸಿಬ್ಬಂದಿಗೆ ಕರೆ ನೀಡಿದರು.
ಸಾರ್ವಜನಿಕರಿಗೆ ಸರ್ಕಾರದ ಸೇವೆಗಳು ತ್ವರಿತವಾಗಿ, ಪಾರದರ್ಶಕವಾಗಿ ಹಾಗೂ ಪರಿಣಾಮಕಾರಿಯಾಗಿ ತಲುಪುವಂತೆ ಕಾರ್ಯನಿರ್ವಹಿಸುವುದು ಪ್ರತಿಯೊಬ್ಬ ಸಿಬ್ಬಂದಿಯ ಜವಾಬ್ದಾರಿಯಾಗಿದೆ. ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು, ಸ್ಪಂದನಶೀಲತೆ ಹಾಗೂ ಬದ್ಧತೆಯಿಂದ ಸೇವೆ ಸಲ್ಲಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಸಚಿವರು ಸಲಹೆ ನೀಡಿದರು.
ಯುವಕರ ಉತ್ಸಾಹ, ಬದ್ಧತೆ ಹಾಗೂ ಹೊಸ ದೃಷ್ಟಿಕೋನಗಳೊಂದಿಗೆ ಆಹಾರ ಇಲಾಖೆಯನ್ನು ಇನ್ನಷ್ಟು ದಕ್ಷ, ಪಾರದರ್ಶಕ ಮತ್ತು ಜನಸ್ಪಂದನಶೀಲ ಇಲಾಖೆಯನ್ನಾಗಿ ರೂಪಿಸುವಲ್ಲಿ ಹೊಸ ಪೀಳಿಗೆಯ ಸಿಬ್ಬಂದಿ ಮಹತ್ವದ ಪಾತ್ರ ವಹಿಸಲಿದ್ದಾರೆ ಎಂಬ ವಿಶ್ವಾಸವನ್ನು ಸಚಿವ ಶ್ರೀ ರಿಜ್ವಾನ್ ಅರ್ಷದ್ ಅವರು ವ್ಯಕ್ತಪಡಿಸಿದರು.
ತರಬೇತಿ ಕಾರ್ಯಕ್ರಮವು ಹೊಸದಾಗಿ ಇಲಾಖೆಗೆ ಸೇರ್ಪಡೆಗೊಂಡ ಸಿಬ್ಬಂದಿಗೆ ತಮ್ಮ ಜವಾಬ್ದಾರಿಗಳು, ಇಲಾಖೆಯ ಕಾರ್ಯವಿಧಾನಗಳು ಹಾಗೂ ಜನಸೇವೆಯ ಮಹತ್ವವನ್ನು ಅರಿತುಕೊಳ್ಳಲು ಉತ್ತಮ ವೇದಿಕೆಯಾಯಿತು.
ಪ್ರಶಿಕ್ಷಣಾರ್ಥಿ ಶಿಬಿರದ ಕಾರ್ಯಕ್ರಮದಲ್ಲಿ ಆಹಾರ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಗದೀಶ್, ವ್ಯವಸ್ಥಾಪಕ ಮಂಜುನಾಥ್ ಇನ್ನಿತರರು ಹಾಜರಿದ್ದರು.
