ಚಿಂತಾಮಣಿ :ಶೋಷಿತ ಸಮುದಾಯಗಳ ಮಕ್ಕಳು ವಿದ್ಯಾವಂತರಾಗಬೇಕು. ಒಂದೊತ್ತು ಊಟ ಕಡಿಮೆಯಾದರೂ ಚಿಂತೆ ಇಲ್ಲ. ನಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸುತ್ತೇವೆ ಎಂಬ ಸಂಕಲ್ಪ ಮಾಡಬೇಕು ಎಂದು ಉಪಮುಖ್ಯಮಂತ್ರಿಗಳಾದ ಡಾ. ಜಿ.ಪರಮೇಶ್ವರ ಅವರು ಹೇಳಿದರು.
ಅವರು ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನೂತನವಾಗಿ ನಿರ್ಮಿಸಲಾದ ಡಾ. ಬಿ.ಆರ್. ಅಂಬೇಡ್ಕರ್ ಭವನ – ಅನುಭವ ಕೇಂದ್ರ ಹಾಗೂ ಭಗವಾನ್ ಬುದ್ಧರ ಪುತ್ಥಳಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿ ಮತ್ತು ಡಿಜಿಟಲ್ ಅಧ್ಯಯನ ಕೇಂದ್ರವನ್ನು ಲೋಕಾರ್ಪಣೆಗೊಳಿಸಿದ ಬಳಿಕ ಮಾತನಾಡಿ, ಶಿಕ್ಷಣ ಮಾತ್ರ ನಮ್ಮನ್ನು ಬದಲಾಯಿಸುತ್ತದೆ. ಪ್ರತಿಯೊಬ್ಬರೂ ಶಿಕ್ಷಣ ಪಡೆದುಕೊಳ್ಳುವಂತೆ ಪ್ರೇರೇಪಿಸಿದರು.
ಚಿಂತಾಮಣಿ ತಾಲೂಕಿನಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಭವನ – ಅನುಭವ ಕೇಂದ್ರವನ್ನು ನಿರ್ಮಿಸುವ ಮೂಲಕ ಡಾ. ಎಂ.ಸಿ.ಸುಧಾಕರ್ ಅವರು ಇತಿಹಾಸ ಸೃಷ್ಟಿಸಿದ್ದಾರೆ. ಇಡೀ ರಾಜ್ಯದಲ್ಲಿ ಬೆಂಗಳೂರು ನಗರ ಸೇರಿದಂತೆ ಎಲ್ಲಿಯೂ ಇಂತಹ ಅಂಬೇಡ್ಕರ್ ಭವನ ನೋಡಿಲ್ಲ.
ಅಂಬೇಡ್ಕರ್ ಅವರ ಸಾಧನೆ ಮತ್ತು ಇತಿಹಾಸವನ್ನು ಅರ್ಥೈಸುವುದು ಅಷ್ಟು ಸುಲಭದ ಕೆಲಸವಲ್ಲ. ಆ ಕೆಲಸವನ್ನು ಇಲ್ಲಿ ಮಾಡಲಾಗಿದೆ. ಶಾಲಾ ಮಕ್ಕಳ ಕಲಿಕೆಗೆ ಅಂಬೇಡ್ಕರ್ ಅನುಭವ ಕೇಂದ್ರ, ಡಿಜಿಟಲ್ ಅಧ್ಯಯನ ಕೇಂದ್ರ ಅನುಕೂಲವಾಗಲಿದೆ. ಡಾ.ಎಂ.ಸಿ. ಸುಧಾಕರ್ ಅವರ ಹೆಸರು ಚಿಂತಾಮಣಿಯ ಇತಿಹಾಸದಲ್ಲಿ ಉಳಿಯಲಿದೆ. ನೀವೆಲ್ಲರೂ ಅವರ ಜೊತೆ ನಿಲ್ಲಬೇಕು ಎಂದರು.
ಅಂಬೇಡ್ಕರ್ ಅವರು ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದವರು. ಎಲ್ಲ ಕಷ್ಟಗಳನ್ನು ಮೀರಿ ಪದವಿ ಪಡೆದುಕೊಂಡರು. ಹೊರದೇಶದಲ್ಲಿ ವ್ಯಾಸಂಗ ಮಾಡಿದ ದಲಿತ ಸಮುದಾಯಕ್ಕೆ ಸೇರಿದ ಭಾರತದ ಮೊದಲ ವ್ಯಕ್ತಿ ಬಾಬಾ ಸಾಹೇಬ್ ಅಂಬೇಡ್ಕರ್. ಆ ಕಾಲಘಟ್ಟದಲ್ಲಿ ಪ್ರಪಂಚದಲ್ಲಿ ಆರು ಜನರನ್ನು ಜ್ಞಾನಿಗಳು ಎಂದು ಹೇಳಲಾಗುತ್ತದೆ. ಅದರಲ್ಲಿ ಬಾಬಾ ಸಾಹೇಬರು ಕೂಡ ಒಬ್ಬರು. ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಭಾರತವನ್ನು ಬದಲಾಯಿಸುವಂತ ಜ್ಞಾನ ಸಂಪಾದನೆ ಮಾಡಿದ್ದಾರೆ ಎಂದು ಹೇಳಿದರು.
ಇಂದು ಭಾರತ ಪ್ರಪಂಚದ 4ನೇ ಆರ್ಥಿಕ ರಾಷ್ಟ್ರವಾಗಿ ಬೆಳೆದಿದೆ. ನಾವೆಲ್ಲ ಆರ್ಥಿಕ ಸ್ವಾವಲಂಬಿಗಳಾಗುತ್ತಿರುವುದಕ್ಕೆ ಬಾಬಾ ಸಾಹೇಬರಿಗೆ ಆ ಕೀರ್ತಿ ಸಲ್ಲಬೇಕು. ರಿಸರ್ವ್ ಬ್ಯಾಂಕ್ ಕೂಡ ಬಾಬಾ ಸಾಹೇಬರು ಕೊಟ್ಟ ಕೊಡುಗೆ. ಮಹಿಳೆಯರ ಪ್ರಾತಿನಿಧ್ಯಕ್ಕೆ ಮೊದಲು ಒತ್ತು ನೀಡಿದವರು ಅಂಬೇಡ್ಕರ್. ಮಹಿಳೆಯರಿಗೆ ಸಮಾನತೆ ಕಲ್ಪಿಸಲು ಹಿಂದೂ ಕೋಡ್ ಬಿಲ್ ತಂದರು. ಅಂತಹ ಮಹಾನ್ ನಾಯಕನ ಫೋಟೋವನ್ನು ಇಟ್ಟುಕೊಂಡು ಭಾರತ ದೇಶದ ಪ್ರತಿಯೊಬ್ಬ ಹೆಣ್ಣುಮಗಳು ಪೂಜೆ ಮಾಡಬೇಕು ಎಂದರು.
ಮುಂದುವರೆದು, ಯಾವ ದೇಶಗಳು ಕೂಡ ಸಮಾನತೆ, ನ್ಯಾಯ, ಭ್ರಾತೃತ್ವವನ್ನು ಸಂವಿಧಾನದಲ್ಲಿ ಬರೆದಿಡುವ ಕೆಲಸ ಮಾಡಿಲ್ಲ. ಈ ಮೂರು ಅಂಶಗಳು ಇಲ್ಲವಾಗಿದ್ದರೆ ಪ್ರಜಾಪ್ರಭುತ್ವಕ್ಕೆ ಅರ್ಥ ಬರುತ್ತಿರಲಿಲ್ಲ. ನಮ್ಮವರನ್ನು ಆಯ್ಕೆ ಮಾಡುವ ಮತ್ತು ಪ್ರತಿನಿಧಿಸುವ ಹಕ್ಕು ನಮ್ಮವರಿಗೆ ಸಿಗಬೇಕು ಎಂಬುದನ್ನು ಬಾಬಾ ಸಾಹೇಬ್‌ರು ಒತ್ತಾಯಿಸಿದರು. ಈ ಕುರಿತು ಮಹಾತ್ಮ ಗಾಂಧೀಜಿಯವರೊಂದಿಗೆ ಸಂವಾದ ನಡೆಸಿದರು. ಅಂಬೇಡ್ಕರ್ ಅವರ ದಾರಿಯಲ್ಲಿ ನಾವು ನಡೆದರೆ, ಸ್ವಾಭಿಮಾನ, ಸಮಾನತೆ ಮತ್ತು ಭ್ರಾತೃತ್ವ ಬರುತ್ತದೆ. ನಾವೆಲ್ಲ ಅಂಬೇಡ್ಕರ್ ಅವರ ಹಾದಿಯಲ್ಲಿ ಸಾಗೋಣ ಎಂದು ಕರೆ ನೀಡಿದರು.
ಪ್ರಸ್ತುತ ಸಮಾಜ ಯಾವ ರೀತಿ ಇದೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಶೋಷಿತ ಸಮಾಜಕ್ಕೆ ಸೇರಿದವರು ವಿದ್ಯಾವಂತರಾಗಿದ್ದಾರೆ, ಅಧಿಕಾರಿಗಳಾಗಿದ್ದಾರೆ, ಮಂತ್ರಿಗಳಾಗಿದ್ದಾರೆ. ಆದರೆ, ಸಮಾಜ ಶೋಷಿತ ಸಮುದಾಯಗಳನ್ನು ಈವರೆಗೂ ಒಪ್ಪಲಿಲ್ಲ ಎಂಬುದಕ್ಕೆ ಇತ್ತೀಚೆಗೆ ಮಲ್ಲಿಕಾರ್ಜುನ ಖರ್ಗೆ ಅವರ ವಿಚಾರದಲ್ಲಿ ನಡೆದ ಘಟನೆಯೇ ಸಾಕ್ಷಿ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಭೇಟಿ ನೀಡಿದ ಸ್ಥಳವನ್ನು ಶುದ್ಧೀಕರಿಸಿ ಸಮಾಜಕ್ಕೆ ಯಾವ ಸಂದೇಶ ನೀಡಲು ಹೊರಟಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಬಾಬು ಜಗಜೀವನ್ ರಾಮ್ ಅವರು ಬನಾರಸ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ನಂತರವೂ ಶುದ್ಧೀಕರಣ ಮಾಡಿದ್ದರು. ಇಂತಹ ತಪ್ಪಿನ ನಡೆಗಳನ್ನು ಯಾರೊಬ್ಬರು ಖಂಡಿಸಲಿಲ್ಲ. ನಾವೆಲ್ಲರೂ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಿದರು.
ಶೋಷಿತ ಸಮುದಾಯಗಳಿಗೆ ಬದಲಾವಣೆ ತರಬೇಕು ಎಂದು ಹೋರಾಟ ಮಾಡಿಕೊಂಡು ಬಂದಿದ್ದೇವೆ. ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಎಸ್‌ಸಿಎಸ್‌ಪಿ / ಟಿಎಸ್‌ಪಿ ತಂದಿರುವುದು ಕರ್ನಾಟಕ. ಈ ಕಾಯ್ದೆ ತರುವ ಮೂಲಕ ಸಿದ್ದರಾಮಯ್ಯ ಅವರು ನಮ್ಮೆಲ್ಲರ ಮನಸ್ಸಿನಲ್ಲಿ ಉಳಿದಿದ್ದಾರೆ. ನಾವೆಲ್ಲರೂ ಬಾಬಾ ಸಾಹೇಬರು ಹಾಕಿದ ದಾರಿಯಲ್ಲಿ ನಡೆದು ಬದಲಾವಣೆ ತರುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಎಂ.ಸಿ. ಸುಧಾಕರ್ ಅವರು ಭವಿಷ್ಯದ ನಾಯಕ. ಅವರಿಗೆ ಸಾಕಷ್ಟು ಅವಕಾಶಗಳಿವೆ. ಸುಧಾಕರ್ ಅವರ ತಂದೆ ಚೌಡರೆಡ್ಡಿ ಅವರ ಜೊತೆಯಲ್ಲಿ ನಾನು ಕೆಲಸ ಮಾಡಿದ್ದೇನೆ. ಅವರ ಮನಸ್ಸು ಹೇಗಿದೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವರಾದ ಕೆ.ಹೆಚ್.ಮುನಿಯಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಈಶ್ವರ ಖಂಡ್ರೆ, ಮಾಜಿ ಸಚಿವರಾದ ಡಾ. ಹೆಚ್.ಸಿ.ಮಹದೇವಪ್ಪ, ಡಾ. ಎಂ.ಸಿ.ಸುಧಾಕರ್, ಸಂಸದರಾದ ಎಂ. ಮಲ್ಲೇಶ್ ಬಾಬು, ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್.ಅನೀಲ್ ಕುಮಾರ್, ಡಿ.ಟಿ.ಶ್ರೀನಿವಾಸ್, ಜಿಲ್ಲಾಧಿಕಾರಿಗಳಾದ ಪ್ರಭು ಜಿ, ಜಿಲ್ಲಾ ಪಂಚಾಯತ್ ಸಿಇಒ ಡಾ. ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕುಶಲ್ ಚೌಕ್ಸೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
