ಸಮಗ್ರ ಸುದ್ದಿ

ಎಸ್‌ಐಆರ್ ಕರಡು ಮತದಾರರ ಪಟ್ಟಿಯಲ್ಲಿ 56,99,660 ಮತದಾರರು: ಮಹೇಶ್ವರ್ ರಾವ್ | ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ

Share

ಬೆಂಗಳೂರು: ಬೆಂಗಳೂರು ನಗರ ವ್ಯಾಪ್ತಿಯ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR)ಯ ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು 56,99,660 ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ತಿಳಿಸಿದರು.

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026ರ ಕಾರ್ಯಚಟುವಟಿಕೆಗಳ ಭಾಗವಾಗಿ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ ಬಳಿಕ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಇಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಅದರಲ್ಲಿ 27,69,866 ಪುರುಷರು, 29,29,092 ಮಹಿಳೆಯರು ಹಾಗೂ 702 ಇತರೆ ಮತ್ತು ತೃತೀಯ ಲಿಂಗದ ಮತದಾರರು ಸೇರಿದಂತೆ ಒಟ್ಟು 56,99,660 ಮತದಾರರಿದ್ದಾರೆ ಎಂದು ಹೇಳಿದರು.

ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ:

ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ ಬಳಿಕ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಇಂದಿನಿಂದ ಸೆಪ್ಟೆಂಬರ್ 23ರವರೆಗೆ ಅವಕಾಶವಿರಲಿದೆ. ಹಕ್ಕು ಮತ್ತು ಆಕ್ಷೇಪಣೆಗಳ ಕುರಿತು ನೋಟಿಸ್ ನೀಡುವುದು ಹಾಗೂ ವಿಲೇವಾರಿ ಪ್ರಕ್ರಿಯೆಯು ಇಂದಿನಿಂದ ಅಕ್ಟೋಬರ್ 22ರವರೆಗೆ ನಡೆಯಲಿದ್ದು, ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 27, 2026ರಂದು ಪ್ರಕಟಿಸಲಾಗುವುದು ಎಂದು ತಿಳಿಸಿದರು.

ನಿಮ್ಮ ಹೆಸರನ್ನು ಪರಿಶೀಲಿಸಿಕೊಳ್ಳಿ:

ಕರಡು ಮತದಾರರ ಪಟ್ಟಿಯನ್ನು ಜಿಲ್ಲಾ ಚುನಾವಣಾಧಿಕಾರಿ-ಬೆಂಗಳೂರು ಅವರ ವ್ಯಾಪ್ತಿಯ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳ ಮತದಾರರ ನೋಂದಣಾಧಿಕಾರಿಗಳ ಕಚೇರಿ, ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿ ಹಾಗೂ ವಾರ್ಡ್ ಕಚೇರಿಗಳಲ್ಲಿ ಪ್ರಕಟಿಸಲಾಗಿದ್ದು, ಸಾರ್ವಜನಿಕರಿಗೆ ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಕರಡು ಮತದಾರರ ಪಟ್ಟಿಯನ್ನು ಮುಖ್ಯ ಚುನಾವಣಾಧಿಕಾರಿ-ಕರ್ನಾಟಕ ಅವರ ಅಧಿಕೃತ ಜಾಲತಾಣ ಹಾಗೂ ಜಿಬಿಎ ಅಧಿಕೃತ ಜಾಲತಾಣದಲ್ಲಿ ಪರಿಶೀಲಿಸಿಕೊಳ್ಳುವ ಮೂಲಕ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಖಾತರಿಪಡಿಸಿಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು.

ಎ.ಎಸ್.ಡಿ.ಡಿ.ಒ. ಮಾಹಿತಿ ಜಾಲತಾಣದಲ್ಲಿ ಲಭ್ಯ:

ಜಿಲ್ಲಾ ಚುನಾವಣಾಧಿಕಾರಿ-ಬೆಂಗಳೂರು ಅವರ ವ್ಯಾಪ್ತಿಯಲ್ಲಿ 16ನೇ ಜೂನ್ 2026ರ ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು 1,03,88,363 ಮತದಾರರ ಪೈಕಿ 56,99,660 (54.87%) ಮತದಾರರ ಡಿಜಿಟಲೀಕರಣ ಮಾಡಲಾಗಿದೆ. ಈ ಪೈಕಿ 46,88,703 (45.13%) ನಾಪತ್ತೆ, ಸ್ಥಳಾಂತರ, ಮರಣ ಹೊಂದಿದ, ನಕಲು ಹಾಗೂ ಇತರೆ (ASDD) ಮತದಾರರನ್ನು ಗುರುತಿಸಲಾಗಿದೆ.

ಸಾರ್ವಜನಿಕರ ಅನುಕೂಲಕ್ಕಾಗಿ ಮಾನ್ಯ ಮುಖ್ಯ ಚುನಾವಣಾಧಿಕಾರಿ-ಕರ್ನಾಟಕ ಅವರ ಜಾಲತಾಣ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಜಾಲತಾಣಗಳಲ್ಲಿ ಈ ಮಾಹಿತಿಯನ್ನು ಪ್ರಕಟಿಸಲಾಗಿರುತ್ತದೆ.

9,008 ಮತಗಟ್ಟೆಗಳ ಸ್ಥಾಪನೆ:

ಜಿಲ್ಲಾ ಚುನಾವಣಾಧಿಕಾರಿ-ಬೆಂಗಳೂರು ಅವರ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಹಿಂದೆ 8,972 ಮತಗಟ್ಟೆಗಳಿದ್ದು, ಮತಗಟ್ಟೆಗಳ ಪುನರ್‌ವಿಂಗಡಣೆ (Rationalization of Polling Stations) ಕಾರ್ಯ ಮುಕ್ತಾಯಗೊಂಡ ನಂತರ 36 ಮತಗಟ್ಟೆಗಳನ್ನು ಹೆಚ್ಚಿಸಿ ಒಟ್ಟು 9,008 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.

ನಮೂನೆ-6ರ ಮೂಲಕ ಹೊಸ ಮತದಾರರ ಸೇರ್ಪಡೆಗೆ ಅವಕಾಶ:

18 ವರ್ಷ ಮೇಲ್ಪಟ್ಟ ಯುವ ಮತದಾರರು ದಿನಾಂಕ 01.10.2026ಕ್ಕೆ ಅನ್ವಯವಾಗುವಂತೆ ನಮೂನೆ-6 ಅನ್ನು ಸಲ್ಲಿಸಿ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಅವಕಾಶ ಕಲ್ಪಿಸಲಾಗಿದೆ.

ಮತದಾರರು ಆನ್‌ಲೈನ್ ಮೂಲಕವೂ Voters Portal (voters.eci.gov.in) ಹಾಗೂ ECI Mobile Application ಪೋರ್ಟಲ್‌ನಲ್ಲಿ ತಮ್ಮ ಹೆಸರನ್ನು ಸೇರ್ಪಡೆಗೊಳಿಸಿಕೊಳ್ಳಬಹುದಾಗಿದೆ.

ಮತದಾರರ ಪಟ್ಟಿ ಸೇರ್ಪಡೆಗೆ ಸಲ್ಲಿಸಬೇಕಾದ ದಾಖಲೆಗಳು:

 ವಯಸ್ಸಿನ ಪುರಾವೆ.
 ಸಾಮಾನ್ಯ ನಿವಾಸದ ಪುರಾವೆ (ವಿಳಾಸದ ಪುರಾವೆ).
 ಇತ್ತೀಚಿನ ಒಂದು ಪಾಸ್‌ಪೋರ್ಟ್ ಅಳತೆಯ ಬಣ್ಣದ ಛಾಯಾಚಿತ್ರ.
 ಕೊನೆಯ SIRಗೆ ಸಂಬಂಧಿಸಿದಂತೆ ಭರ್ತಿ ಮಾಡಿದ ಘೋಷಣಾ ನಮೂನೆಗೆ (Declaration Form) ಸಂಬಂಧಿಸಿದ ವಿವರಗಳು.
 ಅರ್ಜಿದಾರರು ಕೊನೆಯ SIRಗೆ ಸಂಬಂಧಿಸಿದ ವಿವರಗಳನ್ನು ಹೊಂದಿರದಿದ್ದಲ್ಲಿ, ಘೋಷಣಾ ನಮೂನೆಯಲ್ಲಿ (Declaration Form) ನಿಗದಿಪಡಿಸಿರುವ ಪರ್ಯಾಯ ದಾಖಲೆಗಳನ್ನು ಪರಿಶೀಲನೆಯ ಸಂದರ್ಭದಲ್ಲಿ ಹಾಜರುಪಡಿಸಬೇಕು.

ನಮೂನೆ-6ರೊಂದಿಗೆ ಸಲ್ಲಿಸಬೇಕಾದ ಯಾವುದಾದರೂ ಒಂದು ದಾಖಲೆ:

 ಯಾವುದೇ ಕೇಂದ್ರ ಸರ್ಕಾರ/ರಾಜ್ಯ ಸರ್ಕಾರ/ಸಾರ್ವಜನಿಕ ವಲಯದ ಸಂಸ್ಥೆ (PSU)ಯ ನಿಯಮಿತ ನೌಕರರು/ಪಿಂಚಣಿದಾರರಿಗೆ ನೀಡಲಾದ ಯಾವುದೇ ಗುರುತಿನ ಚೀಟಿ/ಪಿಂಚಣಿ ಪಾವತಿ ಆದೇಶ (Pension Payment Order).

 01.07.1987ರ ಮೊದಲು ಭಾರತದಲ್ಲಿ ಸರ್ಕಾರ/ಸ್ಥಳೀಯ ಪ್ರಾಧಿಕಾರಗಳು/ಬ್ಯಾಂಕ್‌ಗಳು/ಅಂಚೆ ಕಚೇರಿ/LIC/ಸಾರ್ವಜನಿಕ ವಲಯದ ಸಂಸ್ಥೆಗಳು (PSUs) ನೀಡಿರುವ ಯಾವುದೇ ಗುರುತಿನ ಚೀಟಿ/ಪ್ರಮಾಣಪತ್ರ/ದಾಖಲೆ.

 ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜನನ ಪ್ರಮಾಣಪತ್ರ.

 ಪಾಸ್‌ಪೋರ್ಟ್.

 ಮಾನ್ಯತೆ ಪಡೆದ ಮಂಡಳಿಗಳು/ವಿಶ್ವವಿದ್ಯಾಲಯಗಳು ನೀಡಿರುವ ಮೆಟ್ರಿಕ್ಯುಲೇಷನ್/ಶೈಕ್ಷಣಿಕ ಪ್ರಮಾಣಪತ್ರ.

 ಸಕ್ಷಮ ರಾಜ್ಯ ಪ್ರಾಧಿಕಾರದಿಂದ ನೀಡಲಾದ ಶಾಶ್ವತ ನಿವಾಸ ಪ್ರಮಾಣಪತ್ರ.

 ಅರಣ್ಯ ಹಕ್ಕುಗಳ ಪ್ರಮಾಣಪತ್ರ (Forest Rights Certificate).

 ಸಕ್ಷಮ ಪ್ರಾಧಿಕಾರದಿಂದ ನೀಡಲಾದ SC/ST/OBC ಅಥವಾ ಯಾವುದೇ ಜಾತಿ ಪ್ರಮಾಣಪತ್ರ.

 ರಾಷ್ಟ್ರೀಯ ನಾಗರಿಕರ ನೋಂದಣಿ (National Register of Citizens – NRC), ಅನ್ವಯವಾಗುವ ಸ್ಥಳಗಳಲ್ಲಿ.

 ರಾಜ್ಯ/ಸ್ಥಳೀಯ ಪ್ರಾಧಿಕಾರಗಳು ಸಿದ್ಧಪಡಿಸಿರುವ ಕುಟುಂಬ ನೋಂದಣಿ (Family Register).

 ಸರ್ಕಾರದಿಂದ ನೀಡಲಾದ ಯಾವುದೇ ಭೂಮಿ/ಮನೆ ಹಂಚಿಕೆ ಪ್ರಮಾಣಪತ್ರ.

ಫಾರ್ಮ್-ಡಿ ಜೊತೆಗೆ ನಮೂನೆ-6 ನೀಡಿ:

ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಗೊಳಿಸಲು ನಮೂನೆ-6 ಅನ್ನು Form-D ಯೊಂದಿಗೆ ಭರ್ತಿ ಮಾಡಿ ಮತದಾರರ ನೋಂದಣಾಧಿಕಾರಿಗಳಿಗೆ ಹಾಗೂ ಬಿ.ಎಲ್.ಒ.ಗಳಿಗೆ ಸಲ್ಲಿಸಬಹುದಾಗಿದೆ.

24,05,044 ಪ್ರಕರಣಗಳಿಗೆ ನೋಟಿಸ್ ಜಾರಿ:

ASDD/Anomalies ಪ್ರಕರಣಗಳು ಬೆಂಗಳೂರಿನ ನಾಲ್ಕು ಅಪರ ಜಿಲ್ಲಾ ಚುನಾವಣಾಧಿಕಾರಿಗಳ ವ್ಯಾಪ್ತಿಯಲ್ಲಿ ಒಟ್ಟು 24,05,044 ಇವೆ. ಈ ಎಲ್ಲಾ ಪ್ರಕರಣಗಳಿಗೆ ಮತದಾರರ ನೋಂದಣಾಧಿಕಾರಿಗಳು/ಸಹಾಯಕ ಮತದಾರರ ನೋಂದಣಾಧಿಕಾರಿಗಳು/ಹೆಚ್ಚುವರಿ ಸಹಾಯಕ ಮತದಾರರ ನೋಂದಣಾಧಿಕಾರಿಗಳು ನೋಟಿಸ್ ಜಾರಿ ಮಾಡಿ, ವಿಚಾರಣೆ ನಡೆಸಲು ಕ್ರಮ ಕೈಗೊಳ್ಳುವರು.

ವಿಚಾರಣೆಗೆ ಒಳಪಡಿಸುವ ಅರ್ಹ ಪ್ರಕರಣಗಳಲ್ಲಿ, ಸಂಬಂಧಪಟ್ಟ ಮತದಾರರಿಗೆ ಸೂಚಿಸುವ ನಿಗದಿತ ದಿನಾಂಕ ಮತ್ತು ಸಮಯಕ್ಕೆ ವಿಚಾರಣೆಗೆ ಹಾಜರಾಗಿ ಅಗತ್ಯ ದಾಖಲೆಗಳನ್ನು ಒದಗಿಸಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಮುಂದುವರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ನೋಟಿಸ್ ಅನ್ನು ಖುದ್ದಾಗಿ ಸಂಬಂಧಪಟ್ಟ ಮತದಾರರಿಗೆ ಅಥವಾ ಅವರ ವಾಸಸ್ಥಳದಲ್ಲಿರುವ ಮನೆಯ ಸದಸ್ಯರಿಗೆ/ಇತರರಿಗೆ ತಲುಪಿಸಲಾಗುವುದು. ನೋಟಿಸ್ ಸ್ವೀಕರಿಸಿರುವುದಕ್ಕೆ ಅವರಿಂದ ಸಹಿ ಪಡೆಯಲಾಗುವುದು. ವಿಚಾರಣೆಯ ಸಂದರ್ಭದಲ್ಲಿ ಮತದಾರರ ಹಾಜರಾತಿ ಕಡ್ಡಾಯವಾಗಿದ್ದು, ಮತದಾರರು ಹಾಜರಾತಿ ವಹಿಯಲ್ಲಿ ತಮ್ಮ ಸಹಿಯನ್ನು ಹಾಕಬೇಕಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ 1950ಕ್ಕೆ ಕರೆ ಮಾಡಿ:

ಮತದಾರರಲ್ಲಿ ಯಾವುದೇ ಗೊಂದಲ/ಅನುಮಾನಗಳಿದ್ದಲ್ಲಿ, ದೂರು, ಸಲಹೆ ಮತ್ತು ಆಕ್ಷೇಪಣೆಗಳನ್ನು ಜಿಲ್ಲಾ ಸಹಾಯವಾಣಿ ಕೇಂದ್ರ 1950 ಅಥವಾ 1800-4255-1950ಕ್ಕೆ ಕರೆ ಮಾಡಿ ತಿಳಿಸಬಹುದು.

ಈ ವೇಳೆ ವಿಶೇಷ ಆಯುಕ್ತರಾದ ಸುಷಮಾ ಗೋಡಬೋಲೆ, ಅಪರ ಜಿಲ್ಲಾ ಚುನಾವಣಾಧಿಕಾರಿಗಳಾದ ಪೊಮ್ಮಲ ಸುನೀಲ್ ಕುಮಾರ್, ಜಿ. ಜಗದೀಶ್, ರಮೇಶ್ ಕೆ.ಎನ್., ಜಂಟಿ ಆಯುಕ್ತರಾದ ವಿಜಯ್, ಸಹಾಯಕ ಆಯುಕ್ತರು ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.


Share

You cannot copy content of this page