ಸಮಗ್ರ ಸುದ್ದಿ

ಬರ ಎದುರಿಸಲು ಸರ್ಕಾರ ಸಕಲ ಸಿದ್ಧ: ಡಿಸಿಎಂ ಡಾ. ಜಿ. ಪರಮೇಶ್ವರ್

Share

​ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ತೀವ್ರ ಬರ ಪರಿಸ್ಥಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಜನ ಹಾಗೂ ಜಾನುವಾರುಗಳಿಗೆ ಯಾವುದೇ ತೊಂದರೆಯಾಗದಂತೆ ನಿಭಾಯಿಸಲು ಸಕಲ ಸಿದ್ಧತೆ ಕೈಗೊಂಡಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

​ಇಂದು ಮಧ್ಯಾಹ್ನ ಸದನದಲ್ಲಿ ಸರ್ಕಾರದ ಪರವಾಗಿ ಬರ ಪರಿಸ್ಥಿತಿ ಕುರಿತು ಮಾಹಿತಿ ನೀಡಿದ ಅವರು, ರಾಜ್ಯಾದ್ಯಂತ ಕುಡಿಯುವ ನೀರಿನ ಪೂರೈಕೆಗಾಗಿ ಈಗಾಗಲೇ 306 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಬರ ನಿರ್ವಹಣೆಗೆ ಹಣದ ಕೊರತೆಯಿಲ್ಲ ಎಂದು ಅಭಯ ನೀಡಿದರು.

​*ಮಳೆ ಕೊರತೆ ಹಾಗೂ ಬಿತ್ತನೆ ಹಿನ್ನಡೆ:

ಮಳೆ ಪ್ರಮಾಣ: ಜೂನ್ 1 ರಿಂದ ಆಗಸ್ಟ್ 24 ರವರೆಗೆ 654 ಮಿ.ಮೀ ಮಳೆಯಾಗಬೇಕಿದ್ದ ಕಡೆ 454 ಮಿ.ಮೀ ಮಾತ್ರ ಮಳೆಯಾಗಿದ್ದು, ಶೇ. 31 ರಷ್ಟು ಕೊರತೆಯಾಗಿದೆ.

ಪ್ರಾದೇಶಿಕ ವ್ಯತ್ಯಾಸ: ದಕ್ಷಿಣ ಒಳನಾಡಿನಲ್ಲಿ ಶೇ. 41, ಮಲೆನಾಡಿನಲ್ಲಿ ಶೇ. 35, ಉತ್ತರ ಒಳನಾಡಿನಲ್ಲಿ ಶೇ. 31 ಹಾಗೂ ಕರಾವಳಿಯಲ್ಲಿ ಶೇ. 24 ರಷ್ಟು ಮಳೆ ಕೊರತೆ ದಾಖಲಾಗಿದೆ.

ತಾಲೂಕುಗಳ ಸ್ಥಿತಿ: ರಾಜ್ಯದ 240 ತಾಲೂಕುಗಳ ಪೈಕಿ 175 ತಾಲೂಕುಗಳಲ್ಲಿ ಮಳೆ ಕೊರತೆಯಾಗಿದ್ದು, 14 ತಾಲೂಕುಗಳು ತೀವ್ರ ಬರದ ಛಾಯೆಗೆ ಸಿಲುಕಿವೆ. ಉಪಗ್ರಹ ಆಧಾರಿತ ಮುನ್ಸೂಚನೆಯಂತೆ ಸೆಪ್ಟೆಂಬರ್‌ನಲ್ಲೂ ಮಳೆ ಕೊರತೆ ಎದುರಾಗುವ ಸಾಧ್ಯತೆಯಿದೆ.

ಕೃಷಿ ಹಿನ್ನಡೆ: 84.10 ಲಕ್ಷ ಹೆಕ್ಟೇರ್ ಪೈಕಿ ಕೇವಲ 60 ಲಕ್ಷ ಹೆಕ್ಟೇರ್‌ (ಶೇ. 71) ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ತೋಟಗಾರಿಕೆಯಲ್ಲಿ 4.36 ಲಕ್ಷ ಹೆಕ್ಟೇರ್ ಪೈಕಿ 2.45 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು, ಬೆಳೆಗಳ ಬೆಳವಣಿಗೆ ಕುಂಠಿತಗೊಂಡಿದೆ.

ಕುಡಿಯುವ ನೀರು ಹಾಗೂ ಅಂತರ್ಜಲ:

ರಾಜ್ಯದ 132 ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಸಂರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ. ಜಲಾಶಯಗಳಲ್ಲಿ ಕಳೆದ ವರ್ಷ 790 ಟಿಎಂಸಿ ನೀರಿದ್ದರೆ, ಈ ಬಾರಿ 679.6 ಟಿಎಂಸಿ ಮಾತ್ರ ಸಂಗ್ರಹವಿದೆ. ಕೆಆರ್‌ಎಸ್‌ನಲ್ಲಿ ಶೇ. 61 ರಷ್ಟು ನೀರಿದೆ. ಪ್ರಸ್ತುತ 758 ಗ್ರಾಮಗಳಿಗೆ 149 ಟ್ಯಾಂಕರ್‌ ಹಾಗೂ 714 ಖಾಸಗಿ ಕೊಳವೆಬಾವಿಗಳ ಮೂಲಕ ಕುಡಿಯುವ ನೀರು ಒದಗಿಸಲಾಗುತ್ತಿದೆ.

ಮೇವು ಮತ್ತು ಉದ್ಯೋಗ ಭದ್ರತೆ:

ರಾಜ್ಯದಲ್ಲಿ 152 ಲಕ್ಷ ಟನ್‌ಗಳಷ್ಟು മേವು ಲಭ್ಯವಿದ್ದು, 33 ವಾರಗಳಿಗೆ ಸಾಕಾಗಲಿದೆ. ರೈತರಿಗೆ ಮೇವಿನ ಕಿಟ್‌ ವಿತರಣೆಗೆ 25 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಜೊತೆಗೆ, ಗುಳೆ ಹೋಗುವುದನ್ನು ತಡೆಯಲು ವಿ ಬಿ ಜಿ ರಾಮ್‌ ಜಿ ಯೋಜನೆಯಡಿ ಜುಲೈ 1 ರಿಂದ 65.19 ಲಕ್ಷ ಮಾನವ ದಿನಗಳನ್ನು ಸೃಷ್ಟಿಸಿ 16,460 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಬರ ಘೋಷಣೆ ಮತ್ತು ಕೇಂದ್ರದ ಮಾರ್ಗಸೂಚಿ:

ಕೇಂದ್ರ ಸರ್ಕಾರದ 2020 ರ ‘ಬರ ನಿರ್ವಹಣಾ ಕೈಪಿಡಿ’ (Drought Manual) ನಿಬಂಧನೆಗಳಿಂದಾಗಿ ತಕ್ಷಣ ಬರ ಘೋಷಿಸಲು ತಾಂತ್ರಿಕ ತೊಡಕಿದೆ. ಈಗಾಗಲೇ 102 ತಾಲೂಕುಗಳ ಗ್ರೌಂಡ್ ಟ್ರೂಥಿಂಗ್ ಪೂರ್ಣಗೊಂಡಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಬರಪೀಡಿತ ತಾಲೂಕುಗಳನ್ನು ಘೋಷಿಸಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು. ಕೇಂದ್ರದ ಬಿಗಿ ಮಾರ್ಗಸೂಚಿ ಸಡಿಲಿಕೆಗೆ ರಾಜ್ಯ ಸರ್ಕಾರ ನಿರಂತರವಾಗಿ ಒತ್ತಾಯಿಸುತ್ತಿದ್ದು, ಈ ವಿಷಯದಲ್ಲಿ ವಿಪಕ್ಷಗಳೂ ಕೈಜೋಡಿಸಿ ಪಕ್ಷಭೇದ ಮರೆತು ಸಹಕರಿಸಬೇಕು ಎಂದು ಡಾ. ಜಿ. ಪರಮೇಶ್ವರ್ ವಿನಂತಿಸಿದರು. 


Share

You cannot copy content of this page