ಬೆಂಗಳೂರು:ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಘಟಕದಲ್ಲಿ ಖಾಲಿ ಇರುವ ಶೀಘ್ರಲಿಪಿಗಾರ ಗ್ರೇಡ್-III (Stenographer Grade-III) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಶೀಘ್ರಲಿಪಿಗಾರ ಗ್ರೇಡ್-III ಒಟ್ಟು 21 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ದ್ವಿತೀಯ ಪಿ.ಯು.ಸಿ. ಉತ್ತೀರ್ಣರಾಗಿರಬೇಕು ಅಥವಾ 3 ವರ್ಷಗಳ ಡಿಪ್ಲೋಮಾ ಇನ್ ಕಮರ್ಷಿಯಲ್ ಪ್ರಾಕ್ಟಿಸ್/ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಕನ್ನಡ ಮತ್ತು ಆಂಗ್ಲ ಭಾಷೆಯ ಹಿರಿಯ ಶ್ರೇಣಿ ಶೀಘ್ರಲಿಪಿ ಹಾಗೂ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕಂಪ್ಯೂಟರ್ ಬಳಕೆಯ ಜ್ಞಾನ ಹೊಂದಿರಬೇಕು. ಕನಿಷ್ಠ 18 ವರ್ಷ ತುಂಬಿರಬೇಕು. ಸರ್ಕಾರದ ನಿಯಮಾವಳಿಗಳಂತೆ ವಯೋಸಡಿಲಿಕೆ ಅನ್ವಯವಾಗಲಿದ್ದು, ವಿಶೇಷ ಕ್ರಮವಾಗಿ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಏಕಕಾಲಿಕ ಸಡಿಲಿಕೆ ನೀಡಲಾಗಿದೆ.
ಆಗಸ್ಟ್ 17 ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿಸಲು 2026 ರ ಸೆಪ್ಟೆಂಬರ್ 15 ಕೊನೆಯ ದಿನಾಂಕವಾಗಿದೆ.
ಅರ್ಜಿ ಸಲ್ಲಿಸುವ ವೆಬ್‍ಸೈಟ್: https://bengalururural.dcourts.gov.in/online-recruitment ಹಾಗೂ ಹೆಚ್ಚಿನ ವಿವರಗಳಿಗಾಗಿ, ಆಯ್ಕೆ ವಿಧಾನ ಮತ್ತು ಷರತ್ತುಗಳನ್ನು ತಿಳಿಯಲು ಅಭ್ಯರ್ಥಿಗಳು ನ್ಯಾಯಾಲಯದ ಅಧಿಕೃತ ವೆಬ್‍ಸೈಟ್‍ಗೆ ಭೇಟಿ ನೀಡುವಂತೆ ಪ್ರಕಟಣೆ ತಿಳಿಸಿದೆ.
