ಸಮಗ್ರ ಸುದ್ದಿ

​ವಿಧಾನ ಪರಿಷತ್ತಿನ 159ನೇ ಅಧಿವೇಶನ ಮುಕ್ತಾಯ: 8 ದಿನಗಳಲ್ಲಿ 16 ಪ್ರಮುಖ ವಿಧೇಯಕಗಳಿಗೆ ಅಂಕಿತ

Share

​ಬೆಂಗಳೂರು:ಕರ್ನಾಟಕ ವಿಧಾನ ಪರಿಷತ್ತಿನ 159ನೇ ಅಧಿವೇಶನವು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಮಾನ್ಯ ಸಭಾಪತಿಯವರು ಸದನದಲ್ಲಿ ನಡೆದ ಒಟ್ಟು ಕಾರ್ಯಕಲಾಪಗಳ ಸಾರಾಂಶವನ್ನು ಪ್ರಕಟಿಸಿದರು. ದಿನಾಂಕ 13.08.2026 ರಿಂದ 24.08.2026 ರವರೆಗೆ ಒಟ್ಟು 8 ದಿನಗಳ ಕಾಲ ನಡೆದ ಈ ಅಧಿವೇಶನದಲ್ಲಿ 25 ಗಂಟೆ 30 ನಿಮಿಷಗಳ ಕಾಲ ಮಹತ್ವದ ಚರ್ಚೆಗಳು ಹಾಗೂ ಶಾಸನ ರಚನಾ ಕಲಾಪಗಳು ಜರುಗಿದವು.

​ಅಧಿವೇಶನದ ಆರಂಭದಲ್ಲಿ, ಕಳೆದ ಅಧಿವೇಶನದಿಂದೀಚೆಗೆ ಅಗಲಿದ 15 ಗಣ್ಯ ವ್ಯಕ್ತಿಗಳಿಗೆ ಸದನವು ಭಕ್ತಿಪೂರ್ವಕ ಸಂತಾಪ ಸೂಚಿಸಿತು. ತದನಂತರ, ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಪಟ್ಟಿಯನ್ನು ಕಾರ್ಯದರ್ಶಿಯವರು ಮಂಡಿಸಿದರು. ಇದೇ ವೇಳೆ 2026-27ನೇ ಸಾಲಿನ ಪೂರಕ ಅಂದಾಜುಗಳ ಮೊದಲನೇ ಕಂತನ್ನು ಸಹ ಸದನಕ್ಕೆ ಒಪ್ಪಿಸಲಾಯಿತು.

16 ವಿಧೇಯಕಗಳಿಗೆ ಸಹಮತಿ ಹಾಗೂ ಪ್ರಮುಖ ನಿರ್ಣಯಗಳು:

ವಿಧೇಯಕಗಳು: ವಿಧಾನಸಭೆಯಿಂದ ಅಂಗೀಕೃತಗೊಂಡಿದ್ದ ಒಟ್ಟು 16 ಪ್ರಮುಖ ವಿಧೇಯಕಗಳಿಗೆ ವಿಧಾನ ಪರಿಷತ್ತು ತನ್ನ ಪೂರ್ಣ ಸಹಮತಿಯನ್ನು ನೀಡಿದೆ.

ಖಂಡನಾ ನಿರ್ಣಯ: ಸದನದಲ್ಲಿ ಖಂಡನಾ ನಿರ್ಣಯವನ್ನು ಮಂಡಿಸಿ ಅಂಗೀಕರಿಸಲಾಯಿತು.

ನಾಮನಿರ್ದೇಶನ ಅಧಿಕಾರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಹಾಗೂ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸೆನೆಟ್‌ಗೆ ಚುನಾವಣೆ ನಡೆಸುವ ಬದಲಾಗಿ, ಮಾನ್ಯ ಶಾಸಕರುಗಳನ್ನು ನೇರವಾಗಿ ನಾಮನಿರ್ದೇಶನ ಮಾಡುವ ಅಧಿಕಾರವನ್ನು ಮಾನ್ಯ ಸಭಾಪತಿಯವರಿಗೆ ನೀಡುವ ಪ್ರಸ್ತಾವನೆಗೆ ಸದನವು ಒಪ್ಪಿಗೆ ನೀಡಿದೆ.

ವಿಶೇಷ ಸದನ ಸಮಿತಿಗಳ ಅವಧಿ ವಿಸ್ತರಣೆ:

ಶಿಕ್ಷಕರ ವೇತನ ತಾರತಮ್ಯ ಪರಿಶೀಲನಾ ಸಮಿತಿ: ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಪದೋನ್ನತಿ ಪಡೆದ ಶಿಕ್ಷಕರು ಮತ್ತು ಕಾಲಬದ್ಧ ವೇತನ ಮುಂಬಡ್ತಿ ಪಡೆದ ಶಿಕ್ಷಕರ ನಡುವಿನ ವೇತನ ತಾರತಮ್ಯ ಸರಿಪಡಿಸುವ ವಿಶೇಷ ಸಮಿತಿಗೆ 02.06.2026 ರಿಂದ 6 ತಿಂಗಳ ಕಾಲಾವಕಾಶ ನೀಡಲಾಗಿದೆ.

ನರ್ಸಿಂಗ್ ಕಾಲೇಜು ಅಕ್ರಮ ತನಿಖಾ ಸಮಿತಿ: 2020-21ನೇ ಸಾಲಿನಲ್ಲಿ ಮೂಲಸೌಕರ್ಯಗಳಿಲ್ಲದಿದ್ದರೂ ಅನುಮತಿ ನೀಡಿದ ಹಾಗೂ ಇಂಡಿಯನ್ ನರ್ಸಿಂಗ್ ಕೌನ್ಸಿಲ್ ಮಾರ್ಗಸೂಚಿ ಉಲ್ಲಂಘಿಸಿದ ನರ್ಸಿಂಗ್ ಮತ್ತು ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜುಗಳ ಕುರಿತು ತನಿಖೆ ನಡೆಸುವ ಜಂಟಿ ಸದನ ಸಮಿತಿಯ ಅವಧಿಯನ್ನು 14.07.2026 ರಿಂದ ಮುಂದಿನ 12 ತಿಂಗಳವರೆಗೆ ವಿಸ್ತರಿಸಲಾಗಿದೆ.

​*ಪ್ರಮುಖ ಸಮಿತಿಗಳ ವರದಿ ಸಲ್ಲಿಕೆ:

​ಅಧಿವೇಶನದಲ್ಲಿ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿಯ 44ನೇ ಹಾಗೂ 45ನೇ ವರದಿ, ಸಾರ್ವಜನಿಕ ಉದ್ದಿಮೆಗಳ ಸಮಿತಿಯ 139ನೇ ಮತ್ತು 140ನೇ ವರದಿ, ಹಕ್ಕುಬಾಧ್ಯತಾ ಸಮಿತಿಯ 105ನೇ ವರದಿ, ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ 2ನೇ ವರದಿ ಹಾಗೂ ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ ನಿಯಮ ಸಡಿಲಿಕೆ ಪರಿಶೀಲನಾ ವಿಶೇಷ ಸಮಿತಿಯ ಮಧ್ಯಂತರ ವರದಿಗಳನ್ನು ಸದನಕ್ಕೆ ಒಪ್ಪಿಸಲಾಯಿತು.

ಪ್ರಶ್ನೋತ್ತರ ಹಾಗೂ ಸಾರ್ವಜನಿಕ ಮಹತ್ವದ ಚರ್ಚೆಗಳು:

ಪ್ರಶ್ನೆಗಳು:ಪ್ರಸ್ತುತ ಅಧಿವೇಶನದಲ್ಲಿ ಒಟ್ಟು 1,210 ಪ್ರಶ್ನೆಗಳನ್ನು ಸ್ವೀಕರಿಸಲಾಗಿತ್ತು. ಇದರಲ್ಲಿ 120 ಚುಕ್ಕೆ ಗುರುತಿನ ಪ್ರಶ್ನೆಗಳ ಪೈಕಿ 84 ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಿಸಲಾಯಿತು. 1,090 ಚುಕ್ಕೆ ರಹಿತ ಪ್ರಶ್ನೆಗಳ ಪೈಕಿ 610 ಪ್ರಶ್ನೆಗಳಿಗೆ ಲಿಖಿತ ಉತ್ತರಗಳನ್ನು ಮಂಡಿಸಲಾಯಿತು.

ಗಮನಸೆಳೆಯುವ ಸೂಚನೆಗಳು: ನಿಯಮ 72ರಡಿ ಸ್ವೀಕರಿಸಿದ 105 ಸೂಚನೆಗಳಲ್ಲಿ 7 ಸೂಚನೆಗಳಿಗೆ ಹಾಗೂ ನಿಯಮ 330ರಡಿ ಸ್ವೀಕರಿಸಿದ 72 ಸೂಚನೆಗಳಲ್ಲಿ 3 ಸೂಚನೆಗಳಿಗೆ ಚರ್ಚಿಸಿ ಉತ್ತರಿಸಲಾಯಿತು.

ಶೂನ್ಯ ವೇಳೆ: ಶೂನ್ಯ ವೇಳೆಯ 34 ಸೂಚನೆಗಳ ಪೈಕಿ 4 ಸೂಚನೆಗಳಿಗೆ ಚರ್ಚಿಸಿ ಉತ್ತರಿಸಲಾಯಿತು ಹಾಗೂ 10 ಸೂಚನೆಗಳಿಗೆ ಉತ್ತರಗಳನ್ನು ಮಂಡಿಸಲಾಯಿತು.

ಅಧಿವೇಶನದ ಕಲಾಪಗಳನ್ನು ಸುಗಮವಾಗಿ ನಡೆಸಲು ಸಹಕರಿಸಿದ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಸಭಾನಾಯಕರು, ವಿರೋಧ ಪಕ್ಷದ ನಾಯಕರು, ಸಚಿವರು, ಶಾಸಕರು, ಮಾಧ್ಯಮ ಪ್ರತಿನಿಧಿಗಳು ಹಾಗೂ ವಿಧಾನ ಪರಿಷತ್ತಿನ ಸಚಿವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸಭಾಪತಿ ಸಲೀಂ ಅಹಮದ್ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು. 


Share

You cannot copy content of this page