ಸಮಗ್ರ ಸುದ್ದಿ

ಇಂದು ಶಾಸಕರುಗಳ ಜೊತೆ ಸಭೆ ; 102 ತಾಲೂಕುಗಳಲ್ಲಿ ಬರ; ಆಗಸ್ಟ್‌ ಮಾಸಾಂತ್ಯದೊಳಗೆ ಕೇಂದ್ರಕ್ಕೆ ಬರ ವರದಿ ಸಲ್ಲಿಕೆ -ಡಿಸಿಎಂ ಡಾ.ಜಿ.ಪರಮೇಶ್ವರ

Share

ಬೆಂಗಳೂರು: ಪ್ರತಿನಿತ್ಯ ಅನೇಕ ಶಾಸಕರುಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಪ್ರಯತ್ನಿಸುತ್ತಾರೆ. ಆ ಕಾರಣಕ್ಕಾಗಿ ಇಂದು ಮುಖ್ಯಮಂತ್ರಿಗಳು ಶಾಸಕರುಗಳ ಜೊತೆ ಸಭೆ ನಡೆಸಲಿದ್ದಾರೆ. ಅವರ ಸಮಸ್ಯೆಗಳನ್ನು ಆಲಿಸಿ, ಬಗೆಹರಿಸುವ ನಿಟ್ಟಿನಲ್ಲಿ ಚರ್ಚೆಗಳು ನಡೆಯಲಿದೆ ಎಂದು ಉಪ ಮುಖ್ಯಮಂತ್ರಿಗಳಾದ ಡಾ. ಜಿ.ಪರಮೇಶ್ವರ ಅವರು ತಿಳಿಸಿದರು.

ಅವರು ಇಂದು ತಮ್ಮ ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿ, ಬ್ಯಾಚ್‌ ಟು ಬ್ಯಾಚ್‌ ರೀತಿಯಲ್ಲಿ ಸಾಯಂಕಾಲದವರೆಗೆ ಶಾಸಕರುಗಳ ಜೊತೆ ಸಭೆಯನ್ನು ಮಾಡಿ ಸಮಸ್ಯೆಯನ್ನು ಆಲಿಸಿ ಮುಖ್ಯಮಂತ್ರಿಗಳು ಉತ್ತರವನ್ನು ಒದಗಿಸಲಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಎಂಎಲ್ಎಗಳನ್ನು ಮಾತ್ರ ಸಭೆಗೆ ಕರೆದಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆಡಳಿತ ಪಕ್ಷವಾಗಿ ನಾವು ಒಗ್ಗಟ್ಟಾಗಿ ಇರಬೇಕು. ಯಾವುದೇ ಪಕ್ಷವು ಆಡಳಿತದಲ್ಲಿದ್ದಾಗ ಹೆಚ್ಚಿನ ಒತ್ತು ಕೊಡುತ್ತಾರೆ. ಹಾಗಾಗಿ ನಾವು ಕೂಡ ಅದೇ ಕೆಲಸವನ್ನು ಮಾಡುತ್ತಿದ್ದೇವೆ. ನಮ್ಮನ್ನು ಜನರು ಆರಿಸಿದ್ದಾರೆ, ಆಡಳಿತ ಪಕ್ಷ ಅವರದ್ದು ಎಂಬ ನಿರೀಕ್ಷೆ ಕೂಡ ಹಾಗೆಯೇ ಇರುತ್ತದೆ. ಹಾಗಾಗಿ ಹೆಚ್ಚು ಅವಕಾಶಗಳು ಇರುತ್ತವೆ ಎಂದು ತಿಳಿಸಿದರು.

ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವುದಾಗಲಿ, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಜವಾಬ್ದಾರಿಯನ್ನು ಸಚಿವರಿಗೆ ಒಪ್ಪಿಸುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಪ್ರತಿ ಜಿಲ್ಲೆಗೆ ಒಬ್ಬ ಮಂತ್ರಿಯನ್ನು ನೇಮಕ ಮಾಡಿದ್ದೇವೆ. ಅವರು ಎರಡು ಕೆಲಸವನ್ನು ಮಾಡಬೇಕು. ಅವರು ಪಕ್ಷದ ಕೆಲಸವನ್ನು ಮಾಡಬೇಕು. ಜೊತೆಗೆ ಅಭಿವೃದ್ಧಿ ಕೆಲಸವನ್ನು ಮಾಡಬೇಕು. ಅವರಿಗೆ ಅದಕ್ಕೆ ಜವಾಬ್ದಾರಿಯನ್ನು ಕೊಡುತ್ತೇವೆ. ಜಿಲ್ಲಾ ಮಂತ್ರಿಗಳಾಗಿದ್ದಾಗ, ಆ ಜಿಲ್ಲೆಗೆ ಸಂಬಂಧಿಸಿದ ಪಕ್ಷದ ಸಮಸ್ಯೆಯನ್ನು ಬಗೆಹರಿಸಬೇಕು. ಜೊತೆಗೆ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು. ಇದು ಮೊದಲಿನಿಂದಲೂ ನಡೆದುಕೊಂಡು ಬಂದಿರುವಂತದ್ದು ಎಂದು ವಿವರಿಸಿದರು.

ಆಗಸ್ಟ್ ಮಾಸಾಂತ್ಯದೊಳಗೆ ಕೇಂದ್ರಕ್ಕೆ ಬರ ವರದಿಯನ್ನು ಸಲ್ಲಿಸುತ್ತೀರಾ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿ, ಇಂದಿನ ಸಭೆಯಲ್ಲಿ ಈ ಬಗ್ಗೆಯೂ ಚರ್ಚೆ ಮಾಡುತ್ತೇವೆ. ಕೇಂದ್ರ ಸರ್ಕಾರದಿಂದ ಬರ ಘೋಷಣೆಗಿರುವ ನಿಯಮಗಳ ಪ್ರಕಾರ ನಾವು ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಬಹುದು. ಮಾನದಂಡಗಳ ಪ್ರಕಾರ ಈಗ 102 ತಾಲೂಕುಗಳಲ್ಲಿ ಬರ ಇದೆ. ಗ್ರೌಂಡ್ ಟ್ರೂಥಿಂಗ್ ಮಾಡಿದನ್ನು ನಾವು ಸಚಿವ ಸಂಪುಟದಲ್ಲಿ ಚರ್ಚಿಸುತ್ತೇವೆ. ಪ್ರತಿ ವಾರವೂ ಈ ಬಗ್ಗೆ ವಿಮರ್ಶಿಸುತ್ತೇವೆ. ಈ ತಿಂಗಳ ಕೊನೆಯಲ್ಲಿ ಸಂಪೂರ್ಣ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.

ಹನೂರು ಕೇಸ್‌ ತನಿಖೆಗೆ ಸಿಐಡಿಗೆ ಕೊಟ್ಟಿರುವ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ಇಂತಹ ಘಟನೆಗಳು ಆದಾಗ ಸರ್ಕಾರಕ್ಕೆ ಯಾವುದೇ ರೀತಿಯಲ್ಲಿ ಅನುಮಾನಗಳನ್ನು ಉಂಟಾದಾಗ ಅದನ್ನು ಸಿಐಡಿಗೆ ಕೊಡುತ್ತೇವೆ. ಅದೇ ರೀತಿಯಲ್ಲಿ ಈ ಕೇಸ್ ಅನ್ನು ಕೂಡ ಕೊಡಲಾಗಿದೆ. ಅದರಲ್ಲಿ ಹೊಸತೇನಿಲ್ಲ ಎಂದರು.


Share

You cannot copy content of this page