ಸಮಗ್ರ ಸುದ್ದಿ

528 ಗ್ರೇಡ್ 1 ಕಾರ್ಯದರ್ಶಿಗಳಿಗೆ ಪಿಡಿಓ ಆಗಿ ಬಡ್ತಿ| ಗ್ರಾಮವಿಕಾಸವೇ ಪಿಡಿಓಗಳ ಧ್ಯೇಯವಾಗಬೇಕು: ಈಶ್ವರ ಖಂಡ್ರೆ

Share

ಬೆಂಗಳೂರು: ಗ್ರಾಮಗಳ ವಿಕಾಸವೇ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಪರಮ ಧ್ಯೇಯ ಮತ್ತು ಗುರಿಯಾಗಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು ನಗರ ಜಿಲ್ಲಾ ಪಂಚಾಯತಿ ಕಚೇರಿಯಲ್ಲಿಂದು ಗ್ರೇಡ್ 1 ಕಾರ್ಯದರ್ಶಿ ಹುದ್ದೆಯಿಂದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾಗಿ ಮುಂಬಡ್ತಿ ಪಡೆದ 528 ಸಿಬ್ಬಂದಿಗೆ ನಿಷ್ಠೆ, ದಕ್ಷತೆ ಮತ್ತು ಪ್ರಾಮಾಣಿಕತೆಯ ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡಿದರು.

ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು, ರಸ್ತೆ, ಚರಂಡಿ, ಕೆರೆ ಅಭಿವೃದ್ಧಿಯಂತಹ ಕಾಮಗಾರಿಗಳನ್ನು ನಿರ್ವಹಿಸುವ ಜವಾಬ್ದಾರಿ ಪಂಚಾಯತಿಗಳ ಮೇಲಿದ್ದು, ಈ ಕಾರ್ಯಕ್ಕೆ ನಿಯುಕ್ತಿಯಾಗಿರುವ ಪಿಡಿಓಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದರು.

ರಾಜ್ಯದಲ್ಲಿ ಮಳೆಯ ಕೊರತೆಯಾಗಿದ್ದು, ಯಾರೊಬ್ಬರೂ ಗುಳೆ ಹೋಗಬಾರದು. ರಾಜ್ಯ ಸರ್ಕಾರ ಆರ್ಥಿಕ ಹೊರೆಯಾದರೂ ವಿಬಿಜಿ ರಾಮ್ ಜಿ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಇದರ ಜವಾಬ್ದಾರಿ ನಿಮ್ಮ ಮೇಲಿದ್ದು, ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ಆಸ್ತಿಯನ್ನು ಸೃಜಿಸಲು ಮತ್ತು ಬಡ, ಶೋಷಿತ ಜನರಿಗೆ ಉದ್ಯೋಗ ನೀಡಲು ಶ್ರಮಿಸುವಂತೆ ಸೂಚಿಸಿದರು.

ಅಂತರ್ಜಲ ಮಟ್ಟ ಹೆಚ್ಚಳ, ಕೊಟ್ಟಿಗೆ ನಿರ್ಮಾಣ, ರಸ್ತೆ ನಿರ್ಮಾಣ, ಕಾಲುವೆ ನಿರ್ಮಾಣ ಸೇರಿದಂತೆ 318 ಕಾಮಗಾರಿಗಳನ್ನು ಕೈಗೊಳ್ಳಲು ವಿಬಿಜಿ ರಾಮ್ ಜಿ ಅಡಿಯಲ್ಲಿ ಅವಕಾಶವಿದ್ದು, ಈಗಾಗಲೇ ಗ್ರಾಮ ಪಂಚಾಯತಿಯಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ನೀವು ಗ್ರಾಮೀಣ ಜನರಿಗೆ ಹೆಚ್ಚಿನ ಉದ್ಯೋಗ ನೀಡಲು ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.

ಪ್ರಸ್ತುತ ನಿತ್ಯ 3 ಲಕ್ಷ ಮಾನವ ದಿನ ಸೃಜನೆಯಾಗುತ್ತಿದೆ. ಈ ಮಾಸಾಂತ್ಯದೊಳಗೆ ವಿಬಿಜಿ ರಾಮ್ ಜಿ ಅಡಿಯಲ್ಲಿ ಕನಿಷ್ಠ 5ರಿಂದ 6 ಲಕ್ಷ ಮಾನವ ದಿನ ಸೃಜನೆ ಮಾಡುವ ಗುರಿ ಇಟ್ಟುಕೊಂಡು ಕೆಲಸ ಮಾಡುವಂತೆ ಅವರು ಕರೆ ನೀಡಿದರು.
ಗ್ರಾಮದ ಸ್ವಚ್ಛತೆ ಅತ್ಯಂತ ಮುಖ್ಯವಾಗಿದೆ. ಸಮುದಾಯ ಆರೋಗ್ಯ ಕಾಪಾಡುವಲ್ಲಿ ಸ್ವಚ್ಛತೆ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿ ನಿಮ್ಮ ನಿಮ್ಮ ಗ್ರಾಮಗಳ ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು ಎಂದೂ ತಿಳಿಸಿದರು.

ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಅರಿವು ಕೇಂದ್ರ ಅಂದರೆ ಗ್ರಂಥಾಲಯಗಳು ಕಾರ್ಯ ನಿರ್ವಹಿಸುತ್ತಿದ್ದು, ಗ್ರಾಮೀಣ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಈ ಅರಿವು ಕೇಂದ್ರಗಳು ಸಕಾರಾತ್ಮಕವಾಗಿ ಕಾರ್ಯ ನಿರ್ವಹಿಸುವಂತೆ ಮಾಡಬೇಕು ಎಂದು ಹೇಳಿದರು.

ಗ್ರಾಮಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ತಾಂತ್ರಿಕವಾಗಿ ಹೆಚ್ಚಿನ ಅರಿವು ಪಡೆದು, ಸಕಾಲದಲ್ಲಿ ಇ-ಸ್ವತ್ತು ನೀಡುವ ನಿಟ್ಟಿನಲ್ಲಿ ಶ್ರಮಿಸಬೇಕು. ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಟ್ಟ ಕೆರೆ, ಕುಂಟೆ ಸೇರಿದಂತೆ ಸರ್ಕಾರದ ಆಸ್ತಿಯನ್ನು ರಕ್ಷಿಸುವ ಕಾರ್ಯ ಮಾಡಬೇಕು ಎಂದರು.
ನಮ್ಮ ಹೊಲ ನಮ್ಮ ದಾರಿ ಎಂಬ ಯೋಜನೆ ಜಾರಿಗೆ ತರುವುದು ತಮ್ಮ ಗುರಿಯಾಗಿದ್ದು, ಈ ಬಗ್ಗೆ ಯೋಜನೆ ರೂಪಿಸುವುದಾಗಿ ಹೇಳಿದರು. ಶಿಕ್ಷಣಕ್ಕೆ, ಸಮುದಾಯ ಆರೋಗ್ಯಕ್ಕೆ ಒತ್ತು ನೀಡಿ, ಗ್ರಾಮೀಣ ಭಾಗದಲ್ಲಿರುವ ಮಕ್ಕಳ ಅಪೌಷ್ಟಿಕತೆಯ ನಿವಾರಣೆಗೂ ಕ್ರಮ ವಹಿಸುವಂತೆ ತಿಳಿಸಿದರು.

ನಿಮಗೆ ದೊರಕುವ ಪಂಚಾಯತಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿ, ಗ್ರಾಮೀಣ ಅಭಿವೃದ್ಧಿಯಷ್ಟೇ ನಿಮ್ಮ ಗುರಿಯಾಗಬೇಕು ಎಂದು ಹೇಳಿದ ಅವರು ಪ್ರಾಮಾಣಿಕತೆಯಿಂದ ಮತ್ತು ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತೇನೆ ಎಂಬ ಪ್ರಮಾಣ ವಚನ ಬೋಧಿಸಿ, ಎಲ್ಲರಿಗೂ ವೃತ್ತಿ ಜೀವನ ಶುಭಕರವಾಗಿರಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಇಲಾಖೆಯ ಆಯುಕ್ತರಾದ ಡಾ. ಅರುಂದತಿ ಚಂದ್ರಶೇಖರ್, ಬೆಂಗಳೂರು ನಗರ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯತೀಶ್ ಮತ್ತಿತರರು ಪಾಲ್ಗೊಂಡಿದ್ದರು.


Share

You cannot copy content of this page