ಸಮಗ್ರ ಸುದ್ದಿ

ಕರ್ನಾಟಕದಲ್ಲಿ ಸೆಮಿಕಂಡಕ್ಟರ್ ಇಕೋಸಿಸ್ಟಂ ಬಲವರ್ಧನೆಗೆ ಅಪ್ಲೈಡ್ ಮೆಟೀರಿಯಲ್ಸ್ ಹೂಡಿಕೆ

Share

ಬೆಂಗಳೂರು: ಅಪ್ಲೈಡ್ ಮೆಟೀರಿಯಲ್ಸ್‌ನ ಕಾರ್ಪೊರೇಟ್ ಉಪಾಧ್ಯಕ್ಷ ಹಾಗೂ ಮುಖ್ಯ ಜಾಗತಿಕ ನೀತಿ ಅಧಿಕಾರಿ ರಾಬರ್ಟ್ ಬ್ಲೇರ್ ಹಾಗೂ ಸಂಸ್ಥೆಯ ಭಾರತದ ನಾಯಕತ್ವ ತಂಡವನ್ನು ಗೃಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಅವರು ಭೇಟಿ ಮಾಡಿ, ಬೆಂಗಳೂರಿನಲ್ಲಿ ಸಂಸ್ಥೆಯ ಮುಂಬರುವ ಆರ್‌&ಡಿ ಹಾಗೂ ಸೆಮಿಕಂಡಕ್ಟರ್ ಇಕೋಸಿಸ್ಟಂ ಅಭಿವೃದ್ಧಿ ಹೂಡಿಕೆ ಕುರಿತು ಚರ್ಚಿಸಿದರು.

ಸಭೆಯಲ್ಲಿ ಬೆಂಗಳೂರಿನಲ್ಲಿ ಪ್ರಸ್ತಾಪಿಸಲಾಗಿರುವ ಸಂಸ್ಥೆಯ ಮುಂಬರುವ ಆರ್‌&ಡಿ ಹೂಡಿಕೆ ಹಾಗೂ ಸೆಮಿಕಂಡಕ್ಟರ್ ಇಕೋಸಿಸ್ಟಂ ಅಭಿವೃದ್ಧಿಯ ಮೂಲಕ ಕರ್ನಾಟಕದಲ್ಲಿ ಸಂಪೂರ್ಣ ಮೌಲ್ಯ ಸರಪಳಿಯಾದ್ಯಂತ ಸೃಷ್ಟಿಯಾಗಬಹುದಾದ ಅವಕಾಶಗಳ ಕುರಿತು ಸಮಗ್ರವಾಗಿ ಚರ್ಚೆ ನಡೆಸಲಾಯಿತು.

ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಕರ್ನಾಟಕ ಈಗಾಗಲೇ ಹೊಂದಿರುವ ಸಾಮರ್ಥ್ಯವನ್ನು ಮತ್ತಷ್ಟು ವೃದ್ಧಿಸುವುದು, ಸಂಶೋಧನೆ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡುವುದು ಹಾಗೂ ಬಲಿಷ್ಠ ಮತ್ತು ಸಮಗ್ರ ಸೆಮಿಕಂಡಕ್ಟರ್ ಇಕೋಸಿಸ್ಟಂ ನಿರ್ಮಿಸುವುದು ರಾಜ್ಯ ಸರ್ಕಾರದ ಪ್ರಮುಖ ಆದ್ಯತೆಗಳಲ್ಲೊಂದಾಗಿದೆ. ಈ ನಿಟ್ಟಿನಲ್ಲಿ ಜಾಗತಿಕ ಮಟ್ಟದ ತಂತ್ರಜ್ಞಾನ ಸಂಸ್ಥೆಗಳ ಹೂಡಿಕೆಗಳು ಕರ್ನಾಟಕದ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಲಿವೆ ಎಂದು ಈ ಸಂದರ್ಭದಲ್ಲಿ ಸಚಿವರು ಹೇಳಿದರು.

ಅಪ್ಲೈಡ್ ಮೆಟೀರಿಯಲ್ಸ್‌ನಂತಹ ಜಾಗತಿಕ ತಂತ್ರಜ್ಞಾನ ಪಾಲುದಾರರೊಂದಿಗೆ ಕರ್ನಾಟಕ ನಿರಂತರವಾಗಿ ಕಾರ್ಯನಿರ್ವಹಿಸಲಿದ್ದು, ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಹೂಡಿಕೆ, ಸಂಶೋಧನೆ, ತಂತ್ರಜ್ಞಾನ ಅಭಿವೃದ್ಧಿ ಹಾಗೂ ಕೌಶಲ್ಯ ವೃದ್ಧಿಗೆ ಅಗತ್ಯವಾದ ಪರಿಸರವನ್ನು ನಿರ್ಮಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ ಸಚಿವರು ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಸೆಮಿಕಂಡಕ್ಟರ್ ಸಂಬಂಧಿತ ಚಟುವಟಿಕೆಗಳ ವಿಸ್ತರಣೆಯು ನೇರ ಹೂಡಿಕೆಗಳ ಜೊತೆಗೆ ಸಂಪೂರ್ಣ ಮೌಲ್ಯ ಸರಪಳಿಯಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ, ಇದರಿಂದ ಸಂಶೋಧನೆ ಮತ್ತು ಅಭಿವೃದ್ಧಿ, ತಂತ್ರಜ್ಞಾನ, ಪೂರೈಕೆ ಸರಪಳಿ ಹಾಗೂ ಸಂಬಂಧಿತ ಕೈಗಾರಿಕೆಗಳ ಬೆಳವಣಿಗೆಗೆ ಮತ್ತಷ್ಟು ವೇಗ ದೊರೆಯಲಿದೆ ಎಂದರು.

ಕರ್ನಾಟಕವು ಜಾಗತಿಕ ತಂತ್ರಜ್ಞಾನ ಮತ್ತು ಸೆಮಿಕಂಡಕ್ಟರ್ ಉದ್ಯಮಗಳಿಗೆ ಪ್ರಮುಖ ತಾಣವಾಗಿ ಹೊರಹೊಮ್ಮುವ ನಿಟ್ಟಿನಲ್ಲಿ ತನ್ನ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸುತ್ತಿದ್ದು, ಅಪ್ಲೈಡ್ ಮೆಟೀರಿಯಲ್ಸ್‌ನಂತಹ ಪಾಲುದಾರರ ಸಹಭಾಗಿತ್ವವು ಈ ಪ್ರಯತ್ನಗಳಿಗೆ ಮತ್ತಷ್ಟು ಬಲ ನೀಡಲಿದೆ.

ತುಮಕೂರಿನಲ್ಲಿ ಸಂಯೋಜಿತ ‘ಗ್ರೀನ್ ಡೇಟಾ ಸೆಂಟರ್’ ಸ್ಥಾಪನೆಯ ಪ್ರಸ್ತಾವನೆ ಸೇರಿದಂತೆ ಬೆಂಗಳೂರಿನಾಚೆಗೂ ಸುಸ್ಥಿರ ಡಿಜಿಟಲ್ ಮೂಲಸೌಕರ್ಯವನ್ನು ವಿಸ್ತರಿಸುವ ರಾಜ್ಯದ ವಿಶಾಲ ಯೋಜನೆಯೊಂದಿಗೆ ಸೆಮಿಕಂಡಕ್ಟರ್ ಇಕೋಸಿಸ್ಟಂ ಅಭಿವೃದ್ಧಿಯ ಪ್ರಯತ್ನಗಳು ಸಹ ಪೂರಕವಾಗಿವೆ. ಡಿಜಿಟಲ್ ಮೂಲಸೌಕರ್ಯ, ಸುಸ್ಥಿರ ತಂತ್ರಜ್ಞಾನ ಮತ್ತು ಉನ್ನತ ತಂತ್ರಜ್ಞಾನ ಆಧಾರಿತ ಕೈಗಾರಿಕೆಗಳಲ್ಲಿ ಹೂಡಿಕೆಯನ್ನು ಆಕರ್ಷಿಸುವ ಮೂಲಕ ಕರ್ನಾಟಕವನ್ನು ಭವಿಷ್ಯದ ತಂತ್ರಜ್ಞಾನ ಆರ್ಥಿಕತೆಯ ಪ್ರಮುಖ ಕೇಂದ್ರವನ್ನಾಗಿ ರೂಪಿಸುವತ್ತ ಸರ್ಕಾರ ಮುಂದಾಗಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.


Share

You cannot copy content of this page