ಸಮಗ್ರ ಸುದ್ದಿ

ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೇಷನರ್ ಅರ್ಜಿ ಸಲ್ಲಿಕೆ: ತಾಂತ್ರಿಕ ಸಮಸ್ಯೆ ಪರಿಹಾರ, ಕೊನೆಯ ದಿನಾಂಕ ವಿಸ್ತರಣೆ ಇಲ್ಲ

Share

​ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (KPSC) 2026-27ನೇ ಸಾಲಿನ 319 ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ (ಉಳಿಕೆ ಮೂಲ ವೃಂದ 297, ಹೈ-ಕರ್ನಾಟಕ ವೃಂದ 22) ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಆನ್‌ಲೈನ್ ಅರ್ಜಿ ಸಲ್ಲಿಕೆಯ ತಾಂತ್ರಿಕ ತೊಂದರೆಗಳನ್ನು ನಿವಾರಿಸಲಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಯಾವುದೇ ಕಾರಣಕ್ಕೂ ವಿಸ್ತರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

​ಜುಲೈ 31 ರಂದು ಹೊರಡಿಸಲಾದ ಅಧಿಸೂಚನೆಯಂತೆ ಆಗಸ್ಟ್ 1 ರಿಂದ ಆಗಸ್ಟ್ 31 ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಸರ್ವರ್ ಸಮಸ್ಯೆ ಹಾಗೂ ಅರ್ಜಿ ಸಲ್ಲಿಸಲು ತಾಂತ್ರಿಕ ಅಡಚಣೆ ಉಂಟಾಗುತ್ತಿದೆ ಎಂದು ಅಭ್ಯರ್ಥಿಗಳಿಂದ ಆಕ್ಷೇಪಣೆಗಳು ವ್ಯಕ್ತವಾಗಿದ್ದವು. ಈ ದೂರುಗಳ ಹಿನ್ನೆಲೆಯಲ್ಲಿ ಆಯೋಗದ ತಾಂತ್ರಿಕ ತಂಡವು ಪರಿಶೀಲನೆ ನಡೆಸಿದ್ದು, ಕಂಡುಬಂದ ಲೋಪದೋಷಗಳಿಗೆ ಸ್ಪಷ್ಟನೆ ನೀಡಿದೆ.

ತಾಂತ್ರಿಕ ತೊಂದರೆಗೆ ಕಾರಣಗಳು:

ದಾಖಲೆಗಳ ಅಪ್‌ಲೋಡ್ ದೋಷ: ಹಾಳಾದ (Corrupt) PDF, JPEG ಅಥವಾ PNG ಫೈಲ್‌ಗಳನ್ನು ಅಪ್‌ಲೋಡ್ ಮಾಡುತ್ತಿರುವುದರಿಂದ ಪ್ರೊಫೈಲ್ ನವೀಕರಣಗೊಳ್ಳುತ್ತಿಲ್ಲ.

API ದತ್ತಾಂಶ ದೋಷ: SSLC, PUC ಹಾಗೂ ಮೀಸಲಾತಿ ಪ್ರಮಾಣಪತ್ರಗಳಿಗೆ ಸಂಬಂಧಿಸಿದಂತೆ API ಸೇವೆಯಿಂದ ಪಡೆದ ದತ್ತಾಂಶಗಳಲ್ಲಿ ಲೋಪಗಳಿದ್ದಲ್ಲಿ, ಅಭ್ಯರ್ಥಿಗಳು ‘ಮ್ಯಾನುಯಲ್ ಎಂಟ್ರಿ’ (Manual Entry) ಆಯ್ಕೆ ಮಾಡಿಕೊಂಡು ಮಾಹಿತಿ ಭರ್ತಿ ಮಾಡಬೇಕು.

“ಫೈಲ್ ಗಾತ್ರ:* ಆಯೋಗ ಸೂಚಿಸಿರುವ ಸರಿಯಾದ ಗಾತ್ರದ (Size) ಫೈಲ್‌ಗಳನ್ನು ಮಾತ್ರ ಅಪ್‌ಲೋಡ್ ಮಾಡಬೇಕೆಂದು ತಿಳಿಸಲಾಗಿದೆ.

​ಆಯೋಗದ ತಾಂತ್ರಿಕ ತಂಡವು ಅಭ್ಯರ್ಥಿಗಳು ಎದುರಿಸುತ್ತಿದ್ದ ತಾಂತ್ರಿಕ ಅಡಚಣೆಗಳನ್ನು ಈಗಾಗಲೇ ಸಂಪೂರ್ಣವಾಗಿ ನಿವಾರಿಸಿದೆ. ಆದ್ದರಿಂದ ಅಭ್ಯರ್ಥಿಗಳು KPSC UDYOGA ತಂತ್ರಾಂಶದಲ್ಲಿ ಲಭ್ಯವಿರುವ ‘User Manual’ ಹಾಗೂ ಅರ್ಜಿ ಸಲ್ಲಿಸುವ ವಿಧಾನದ ವೀಡಿಯೊ ವೀಕ್ಷಿಸಿ, ಸರಿಯಾಗಿ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಕೊನೆಯ ದಿನಾಂಕ ವಿಸ್ತರಣೆಯಿಲ್ಲ:

ತಾಂತ್ರಿಕ ತೊಂದರೆಯ ಕಾರಣ ನೀಡಿ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವನ್ನು ವಿಸ್ತರಿಸುವಂತೆ ಅಭ್ಯರ್ಥಿಗಳು ಸಲ್ಲಿಸುತ್ತಿರುವ ಮನವಿಗಳನ್ನು ಪುರಸ್ಕರಿಸಲಾಗುವುದಿಲ್ಲ. ನಿಗದಿತ ಕೊನೆಯ ದಿನಾಂಕವಾದ ಆಗಸ್ಟ್ 31, 2026 ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಜ್ಯೋತಿ ಕೆ. ಅವರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.


Share

You cannot copy content of this page