ಸಮಗ್ರ ಸುದ್ದಿ

ಕಸ್ತೂರಿ ರಂಗನ್ ವರದಿ; ಪಶ್ಚಿಮ ಘಟ್ಟಗಳ ಬಗ್ಗೆ ಚರ್ಚಿಸಲು ಒಂದು ದಿನದ ವಿಶೇಷ ಅಧಿವೇಶನ: ಸಿಎಂ ಡಿ ಕೆ ಶಿವಕುಮಾರ್ | ಜಿಲ್ಲೆಗಳ ಅಭಿವೃದ್ಧಿ ಕುರಿತು ಶಾಸಕರೊಂದಿಗೆ ಸಿಎಂ ಸಭೆ

Share

ಬೆಂಗಳೂರು: ಡಾ. ಕೆ. ಕಸ್ತೂರಿರಂಗನ್ ವರದಿ ಆಧರಿಸಿ ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಿ ಕೇಂದ್ರ ಸರ್ಕಾರ ಹೊರಡಿಸಿತು 7 ನೇ ಕರಡು ಅಧಿಸೂಚನೆಗೆ ಸಂಬಂಧಿಸಿದಂತೆ ಬಗ್ಗೆ ಚರ್ಚಿಸಿ ಪಕ್ಷಾತೀತವಾಗಿ ತೀರ್ಮಾನ ಕೈಗೊಳ್ಳಲು ಒಂದು ದಿನದ ವಿಶೇಷ ಅಧಿವೇಶನವನ್ನು ಕರೆಯಲಾಗುವುದು ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ವಿವಿಧ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಬಗ್ಗೆ ಪಕ್ಷದ ಶಾಸಕರು ಹಾಗೂ ಹಿಂದಿನ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿಗಳೊಂದಿಗೆ ಸಭೆ ನಡೆಸಿದ ಬಳಿಕ ಶಿವಕುಮಾರ್ ಅವರು ಬುಧವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು.

“ಡಾ. ಕೆ. ಕಸ್ತೂರಿರಂಗನ್ ವರದಿ ಆಧರಿಸಿ ಹೊರಡಿಸಿರುವ 7ನೇ ಕರಡು ಅಧಿಸೂಚನೆಯನ್ನು ಪ್ರಸ್ತುತ ರೂಪದಲ್ಲಿ ಅಂತಿಮಗೊಳಿಸಬಾರದು. ಆರು ರಾಜ್ಯಗಳ 56,000 ಚ.ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದು ಘೋಷಿಸಲು ಕೇಂದ್ರ ಪ್ರಸ್ತಾಪಿಸಿದೆ. ಕರ್ನಾಟಕದ 20,668 ಚ.ಕಿ.ಮೀ. ಪ್ರದೇಶ, 10 ಜಿಲ್ಲೆಗಳ (ಬೆಳಗಾವಿ, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಹಾಸನ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಮೈಸೂರು, ಶಿವಮೊಗ್ಗ, ಉಡುಪಿ) 33 ತಾಲ್ಲೂಕುಗಳು ಹಾಗೂ 1,449 ಗ್ರಾಮಗಳು ESA ವ್ಯಾಪ್ತಿಗೆ ಸೇರುತ್ತವೆ. ಕೃಷಿಕರ ಜೀವನೋಪಾಯ ಹಾಗೂ ಭವಿಷ್ಯದ ಅಭಿವೃದ್ಧಿಗೆ ತೊಂದರೆಯಾಗಲಿದೆ” ಎಂದರು.

“ಕಸ್ತೂರಿರಂಗನ್ ಸಮಿತಿಯ ಶಿಫಾರಸುಗಳನ್ನು ತಿರಸ್ಕರಿಸಿ, ಕೇಂದ್ರ ಸರ್ಕಾರವು 31 ಜುಲೈ 2024ರ ಕರಡು ಅಧಿಸೂಚನೆಯನ್ನು ಹಿಂಪಡೆಯಬೇಕು ಎಂದು ಕೇಂದ್ರಕ್ಕೆ ಮನವಿ ಮಾಡಲು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟ ಒಮ್ಮತದ ನಿರ್ಧಾರ ಕೈಗೊಂಡಿತ್ತು. ಆದಾಗ್ಯೂ ಕೇಂದ್ರ ಸರ್ಕಾರ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದು, ರಾಜ್ಯ ಸರ್ಕಾರ ಇದನ್ನು ಒಪ್ಪುವುದಿಲ್ಲ” ಎಂದು ಸ್ಪಷ್ಟಪಡಿಸಿದರು.

“ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ, ಜನರ ಅಭಿಪ್ರಾಯವನ್ನೂ ಪಡೆಯಲಾಗುವುದು. ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರದ ವತಿಯಿಂದ ಜನಜಾಗೃತಿ ಮೂಡಿಸಲಾಗುವುದು. ರಾಜ್ಯದ ನಿಲುವಿವನ್ನು ಕೇಂದ್ರ ಸರ್ಕಾರ ಗೌರವಿಸಬೇಕು. ಈ ವಿಚಾರವಾಗಿ ಕಾನೂನು ಚೌಕಟ್ಟಿನಲ್ಲಿ ಚರ್ಚಿಸಲಾಗುವುದು. ಕರ್ನಾಟಕಕ್ಕೆ ಒಂದು ನಿಯಮ ಹಾಗೂ ಬೇರೆಡೆ ಇನ್ನೊಂದು ನಿಯಮವನ್ನು ಕೇಂದ್ರ ಕೈಗೊಂಡಿದೆ” ಎಂದರು.

ಬರಗಾಲ ಪರಿಸ್ಥಿತಿ ನಿರ್ವಹಣೆಯಲ್ಲಿ ಶಾಸಕರ ಪಾತ್ರ

ಬರಗಾಲ ಪರಿಸ್ಥಿತಿ ನಿರ್ವಹಣೆಯಲ್ಲಿ ಶಾಸಕರ ಪಾತ್ರದ ಬಗ್ಗೆ ಅವರಿಗೆ ಸಭೆಯಲ್ಲಿ ವಿವರಿಸಲಾಗಿದೆ. 100 ಕ್ಕೂ ಹೆಚ್ಚು ತಾಲ್ಲೂಕುಗಳನ್ನು ಬರಪೀಡಿತ ಎಂದು ಶೀಘ್ರವೇ ಉಪಮುಖ್ಯಮಂತ್ರಿಗಳು ಘೋಷಣೆ ಮಾಡಲಿದ್ದಾರೆ. ಭವಿಷ್ಯದಲ್ಲಿ ಮತ್ತಷ್ಟು ತಾಲ್ಲೂಕುಗಳನ್ನು ಬರಗಾಲ ಪೀಡಿತ ಘೋಷಣೆ ಮಾಡುವ ಬಗ್ಗೆ ಸರ್ಕಾರ ನಿರ್ಣಯ ಮಾಡಲಿದ್ದು, ಕೇಂದ್ರಕ್ಕೆ ಬರ ಪರಿಹಾರಕ್ಕಾಗಿ ನಿಯೋಗದೊಂದಿಗೆ ತೆರಳಿ ಮನವಿ ಮಾಡಲಿದ್ದೇನೆ” ಎಂದರು.

ಪ್ರತಿ ತಿಂಗಳಲ್ಲಿ ಎರಡು ದಿನ ಸಚಿವರ ಭೇಟಿ

“ಶಾಸಕರು ಹೊಸ ಸರ್ಕಾರದ ಚಿಂತನೆ ಯೋಜನೆಗಳ ಬಗ್ಗೆ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಪ್ರತಿ ಸಚಿವ ತಿಂಗಳ ಮೊದಲ ಹಾಗೂ ಮೂರನೇ ಶನಿವಾರದಂದು ಜಿಲ್ಲೆಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಲು ಸಭೆ ನಡೆಸಲು ಸೂಚಿಸಲಾಗಿದೆ” ಎಂದು ತಿಳಿಸಿದರು.

“ನಂತರ ಹೋಬಳಿ ಮಟ್ಟದಲ್ಲಿ ಈ ರೀತಿ ರಾಜ್ಯದ ಎಲ್ಲಾ 224 ಕ್ಷೇತ್ರಕ್ಕೆ ಸಚಿವರು ಭೇಟಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಆಯಾ ಶಾಸಕರು ಪಂಚಾಯತಿ ಮಟ್ಟದಲ್ಲಿಯೂ ಜನರ ಸಮಸ್ಯೆಗಳನ್ನು ಆಲಿಸಿ, ಜನರ ಭಾವನೆಗಳನ್ನು ಅರಿತು, ಸರ್ಕಾರಕ್ಕೆ ತಿಳಿಸಲು ಅನುಕೂಲವಾಗುವಂತೆ ಪ್ರಜಾಸೇವೆ ಇಲಾಖೆಯನ್ನು ರಚಿಸಲಾಗಿದೆ. ಈ ಬಗ್ಗೆ ಶಾಸಕರಿಗೆ ಮಾರ್ಗದರ್ಶನ ನೀಡಲಾಗಿದೆ” ಎಂದು ವಿವರಿಸಿದರು.

ಎಸ್ ಐ ಆರ್: ಅರ್ಹ ಮತದಾರರ ಹಕ್ಕು ಉಳಿಸಲು ಸರ್ಕಾರ ಬದ್ಧ

ಎಸ್ ಐ ಆರ್ ಪ್ರಕ್ರಿಯೆಯಲ್ಲಿ ಸುಮಾರು 1 ಕೋಟಿಗೂ ಹೆಚ್ಚು ಜನರು ಮಟಪಟ್ಟಿಯಿಂದ ಕೈಬಿಡಲಾಗಿದೆ. ಖಾಯಂ ನಿವಾಸ ಪತ್ರ , ಜಾತಿ ಪ್ರಮಾಣ ಪತ್ರ ಸರ್ಕಾರ ಒದಗಿಸಲಾಗುತ್ತಿದೆ. ಬೂತ್ ಮಟ್ಟದಲ್ಲಿ ಸಭೆ ನಡೆಸಿ ಮತಪಟ್ಟಿಯನ್ನು ಪ್ರಕಟಿಸಲು ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯುಕ್ತರನ್ನು ಕೋರಲಾಗಿದೆ. ಜನರಿಗೆ ಮತದ ಶಕ್ತಿ ಹಾಗೂ ಮತದ ಹಕ್ಕಿನ ಬಗ್ಗೆ ಶಾಸಕರು ಅರಿವು ಮೂಡಿಸಬೇಕು. ಅರ್ಹ ಮತದಾರರಿಗೆ ಅನ್ಯಾಯವಾಗಬಾರದು. ಜನರಿಗೆ ಮತದಾನದ ಹಕ್ಕು ಕೊಡಿಸಲು ಶ್ರಮಿಸಬೇಕೆಂದು ಶಾಸಕರಿಗೆ ಮಾರ್ಗದರ್ಶನ ನೀಡಲಾಗಿದೆ” ಎಂದು ವಿವರಿಸಿದರು.

ಭಾರತ್ ಜೋಡೋ ಯುವಸಂಘ: ಆನ್ಲೈನ್ ನಲ್ಲಿ 7 ಲಕ್ಷ ನೋಂದಣಿ

“ಯುವಕರಿಗೆ ಹೊಸ ಪೀಳಿಗೆಯ ಹೊಸ ಕಾರ್ಯಕ್ರಮ ರೂಪಿಸಲಾಗಿದೆ. ಪಂಚಾಯತಿ ಮಟ್ಟದಲ್ಲಿ ಕ್ರೀಡೆ, ಯೋಗ , ಪರಿಸರ ಗಿಡ ಬೋಧನೆ, ಸಮುದಾಯ ಸೇವೆ, ನಾಯಕತ್ವ, ವಿಪತ್ತು ನಿರ್ವಹಣೆ ವಿಷಯಗಳ ಬಗ್ಗೆ ಸೂಕ್ತ ಅರಿವು, ಡ್ರಗ್ಸ್ ಮುಕ್ತ ರಾಗಲು, ದೇಶದ ಸಮಗ್ರತೆ, ಸಂವಿಧಾನದ ಬಗ್ಎ್ ಅರಿವು ಮೂಡಿಸುಲು ಜಾತಿ ಧರ್ಮಗಳನ್ನು ಬದಿಗೊತ್ತಿ ಭಾಗವಹಿಸಲು ಮಾರ್ಗದರ್ಶನ ನೀಡಬೇಕು. ಪ್ರತಿ ಸಂಘಕ್ಕೆ 10 ಲಕ್ಷ ರೂ. ಗಳನ್ನು ನಿಡಲಾಗುವುದು. ಪ್ರತಿ ಸಂಘಕ್ಕೆ ವಾರ್ಡ್ ನ ಸರ್ಕಾರಿ ನೌಕರರನ್ನು ಮಾರ್ಗದರ್ಶಕರಾಗಿ ನೇಮಿಸಲಾಗುವುದು. ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ನೀಡಬೇಕು. ಪಂಚಾಯತಿಗಳಲ್ಲಿ 200 ಜನ ಸದಸ್ಯರಾಗಬೇಕು. ನೋ ಟು ಡ್ರಗ್ಸ್ , ಎಸ್ ಟು ಸ್ಪೋರ್ಟ್ಸ್ , ಆನ್ ಲೈನ್ ನಲ್ಲಿ ಈಗಾಗಲೇ 7 ಲಕ್ಷ ಜನ ಸದಸ್ಯತ್ವ ಪಡೆದಿದ್ದಾರೆ. ಸರ್ಕಾರದ ಶಾಲೆ, ಸಮುದಾಯಭವನ ದಲ್ಲಿ ನಿಯಮಿತವಾಗಿ ಸಭೆ ನಡೆಸಲು ಅವಕಾಶ ನೀಡಲಾಗಿದೆ” ಎಂದು ಮಾಹಿತಿ ನೀಡಿದರು.

ಜಿಲ್ಲೆಗಳಲ್ಲಿ ಬಡವರಿಗೆ 50 ಸಾವಿರ ಸೈಟ್ ಹಂಚಿಕೆ

“ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದಾರೆ. ಪ್ರತಿಯೊಬ್ಬ ಫಲಾನುಭವಿಗಳ ಹಿಂದಿನ ಪರಿಸ್ಥಿತಿ, ಪ್ರಸ್ತುತ ಪರಿಸ್ಥಿತಿ ಸೇರಿದಂತೆ ಹಲವು ವಿವರ ಪಡೆಯಬೇಕು. ಅಭಿವೃದ್ಧಿ ಕೆಲಸಗಳಲ್ಲಿ ಬೋಗಸ್ ಬಿಲ್, ಕಾಮಗಾರಿಗಳಿಗೆ ಅವಕಾಶ ನೀಡಬಾರದು. ಪ್ರತಿ ಜಿಲ್ಲೆಯಲ್ಲಿ ಕಂದಾಯ ಇಲಾಖೆಯಿಂದ 50 ಸಾವಿರ ಸೈಟ್ ಹಂಚಿಕೆಗೆ ತೀರ್ಮಾನಿಸಲಾಗಿದ್ದು, ಇದಕ್ಕಾಗಿ ಸರ್ಕಾರಿ ಜಮೀನಿಗಳ ಗುರುತಿಸಲಾಗಿದೆ. ಬಡವರಿಗೆ ಸೈಟ್ ಹಂಚುವ ಯೋಜನೆ ಇದಾಗಿದೆ” ಎಂದರು.

ಎಸ್ ಐ ಆರ್ ನಂತರ ಸ್ಥಳೀಯ ಸಂಸ್ಥೆಗಳ ಚುನಾವಣೆ:

“ನವೆಂಬರ್ ಒಳಗೆ ಪಂಚಾಯತಿ ಹಾಗೂ ಪಾಲಿಕೆ ಚುನಾವಣೆಗಳನ್ನು ನಡೆಸಲಾಗುವುದು. ಎಸ್ ಐ ಆರ್ ಮುಗಿದ ತಕ್ಷಣ ಚುನಾವಣೆ ನಡೆಸಲು ಆಯೋಗಕ್ಕೆ ಪತ್ರ ಬರೆಯಲಾಗುವುದು. ಗ್ರಾಮೀಣ , ತಾಲ್ಲೂಕುಗಳಿಂದ ಜನರ ವಲಸೆ ತಪ್ಪಿಸಲು ಸ್ಥಳೀಯ ಮಟ್ಟದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಆದ್ಯತೆ ನೀಡುವಂತೆ ಶಾಸಕರಿಗೆ ತಿಳಿಸಲಾಗಿದೆ” ಎಂದರು.

ವಿರೋಧ ಪಕ್ಷದವರಿಗೆ ಬಡವರು, ಬರದ ಬಗ್ಗೆ ಕಾಳಜಿ ಇಲ್ಲ

“ಶಾಸಕರ ಬೇಡಿಕೆಯನ್ನು ಕೇಳಿದ್ದೇನೆ. ತಮ್ಮ ಕ್ಷೇತ್ರದ ಅಭಿವೃದ್ದೀಯೇ ನಮ್ಮ ಗುರಿ. ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ ಪಾರದರ್ಶಕ ಆಡಳಿತ, ರಾಜ್ಯದ ಹಿತಕ್ಕೆ ಶ್ರಮಿಸಬೇಕು ಎಂದರು. ವಿರೋಧ ಪಕ್ಷದವರಿಗೆ ಬಡವರು, ಬರದ ಬಗ್ಗೆ ಕಾಳಜಿ ಇಲ್ಲ. ಅವರಿಗೆ ರಾಜಕೀಯ ಮುಖ್ಯ. ಡಿಸಿಎಂ ಅವರು ಶೀಘ್ರ ಬರಪೀಡಿತ ತಾಲ್ಲೂಕು ಪ್ರಕಟಿಸಲಿದ್ದಾರೆ. ಕುಡಿಯುವ ನೀರಿಗೆ 1 ಕೋಟಿ ರೂ. ನೀಡಲಾಗಿದೆ. 102 ತಾಲ್ಲೂಕು ಪ್ರವಾಸ ಅಧ್ಯಯನ ಮುಕ್ತಾಯವಾದ ನಂತರ ಬರಪೀಡಿತ ಪ್ರದೇಶ ಘೋಷಣೆ ಮಾಡಲಾಗುವುದು” ಎಂದರು.

ಸಾರ್ವಜನಿಕ ಉದ್ದೇಶಕ್ಕೆ ಪಾರ್ಕ್ ಜಾಗ ಬಳಕೆ:

ಪಾರ್ಕ್ ಗಳ ಜಾಗ ಬಳಕೆ ಬಗ್ಗೆ ಮಸೂದೆಗೆ ವಿರೋಧ ಪಕ್ಷಗಳ ಟೀಕೆ ಬಗ್ಗೆ ಕೇಳಿದಾಗ “ರಸ್ತೆ ಅಗಲೀಕರಣ ಸೇರಿದಂತೆ ಸಾರ್ವಜನಿಕರಿಗೆ ಅನುಕೂಲವಾಗುವ ಅಭಿವೃದ್ಧಿ ಕಾರ್ಯಗಳಿಗೆ ಕಾನೂನು ರೀತಿ ಭೂಮಿ ಬಳಸುವ ಚಿಂತನೆಯಿದೆ. ನಾವು ಖಾಸಗಿಯವರಿಗೆ ಅವಕಾಶ ನೀಡುವುದಿಲ್ಲ. ಬೇರೆ ಸರ್ಕಾರದಲ್ಲಿ ಅವರು ಅವರ ಪಕ್ಷ ಹಾಗೂ ಕಾರ್ಯಕರ್ತರಿಗೆ ನೀಡಿರುವುದು ಹೇಳಲೇ? ಸದಾಶಿವನಗರದ ನಮ್ಮ ನಿವಾಸದ ಬಳಿ ಪಾರ್ಕ್ ನೋಡಿ” ಎಂದು ತಿರುಗೇಟು ನೀಡಿದರು.

ಸಚಿವ ನಾಗೇಂದ್ರ ಅವರು ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂಬ ಚರ್ಚೆ ಇದೆ ಎಂದು ಕೇಳಿದಾಗ, “ನಾಗೇಂದ್ರ ಪಕ್ಷದ ವಿಚಾರದಲ್ಲಿ ಎಂದು ಹಿಂದೇಟು ಹಾಕಿಲ್ಲ. ಪಕ್ಷದ ಶಿಸ್ತಿನ ಸಿಪಾಯಿ. ಅವರು ನಿರಪರಾಧಿ. ಆದರೂ ನಾವು ರಾಜೀನಾಮೆ ಪಡೆದಿದ್ದೆವು. ಅವರ ನಾಯಕತ್ವದಲ್ಲಿ ಅಪಾರ ವಿಶ್ವಾಸವಿದೆ” ಎಂದರು.

ದೆಹಲಿ ಭೇಟಿ ಬಗ್ಗೆ ಕೇಳಿದಾಗ, “ದೆಹಲಿ ಭೇಟಿ ವೇಳೆ ಕೇಂದ್ರದ ಸಚಿವರು, ಕಾನೂನು ತಜ್ಞರ ಜೊತೆ ಚರ್ಚೆ. ನಮ್ಮ ಪಕ್ಷದ ಕಚೇರಿ ಶಂಕುಸ್ಥಾಪನೆ ಬಗ್ಗೆ ನಾಯಕರೊಂದಿಗೆ ಚರ್ಚಿಸಲಾಗುವುದು” ಎಂದರು.

ಬೆಂಗಳೂರಿನ ಜಲಮೂಲ, ಹಸಿರು ಪ್ರದೇಶ ಅಭಿವೃದ್ಧಿಗೆ ಒತ್ತು

“ಬೆಂಗಳೂರಿನ ಮುಂದಿನ 25 ವರ್ಷಗಳ ನೀರಿನ ಭದ್ರತೆಗಾಗಿ ಪ್ರಮುಖ ಕೆರೆಗಳ ಸಂರಕ್ಷಣೆ, ಅಂತರ್ಜಲ ಹೆಚ್ಚಳ ಹಾಗೂ ಒತ್ತುವರಿ ತಡೆಗೆ ಸರ್ಕಾರ ಸಮಗ್ರ ಯೋಜನೆ ರೂಪಿಸುತ್ತಿದೆ” ಎಂದು ತಿಳಿಸಿದರು.

“ಹೆಸರಘಟ್ಟ, ಬೆಟ್ಟದಕೋಟೆ, ಹೊಸಕೋಟೆ, ಎಲೆಮಲ್ಲಪ್ಪ ಶೆಟ್ಟಿ, ಬನ್ನೇರುಘಟ್ಟ, ಬಾಗಲೂರು ಹಾಗೂ ಬೈರಮಂಗಲ ಕೆರೆಗಳನ್ನು ಅಭಿವೃದ್ಧಿಪಡಿಸಿ ಹೊಸ ಜೀವ ನೀಡಲು ಕಾರ್ಯಕ್ರಮ ರೂಪಿಸಲಾಗುತ್ತಿದೆ. ಕೆರೆಗಳ ಒತ್ತುವರಿ ತಡೆ, ಅಗತ್ಯವಿರುವ ಕಡೆ ಆಳಗೊಳಿಸುವುದು ಹಾಗೂ ಕೊಳಚೆ ನೀರು ಸೇರುವುದನ್ನು ತಡೆಯುವ ಕ್ರಮಗಳಿಗೆ ಆದ್ಯತೆ ನೀಡಲಾಗುತ್ತಿದೆ” ಎಂದು ಮಾಹಿತಿ ನೀಡಿದರು.

“ಈ ಕುರಿತು BWSSB, ಕೆರೆ ಅಭಿವೃದ್ಧಿ ಪ್ರಾಧಿಕಾರ, ಸಣ್ಣ ನೀರಾವರಿ ಇಲಾಖೆ ಹಾಗೂ BDA ಸೇರಿದಂತೆ ಸಂಬಂಧಿಸಿದ ಸಂಸ್ಥೆಗಳಿಗೆ ವರದಿ ಸಿದ್ಧಪಡಿಸುವಂತೆ ಸೂಚಿಸಲಾಗುತ್ತದೆ” ಎಂದು ಹೇಳಿದರು.

5,000ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಹೊಸ ಉದ್ಯಾನಗಳು

“ಬೆಂಗಳೂರು ನಗರಕ್ಕೆ ಹಸಿರು ಹೊದಿಕೆ ಹೆಚ್ಚಿಸಲು ತುರಹಳ್ಳಿ ಅರಣ್ಯ, ತೊಟ್ಟಿಕಲ್ಲು ಜಲಪಾತ, ಬಿಎಂ ಕಾವಲ್ ಅರಣ್ಯ, ಬಸವಂತಪುರ, ಮಂಡೂರು ಹಾಗೂ ಜ್ಯೋತಿಪುರ ಸೇರಿದಂತೆ ಒಟ್ಟು 5,000ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಹೊಸ ಉದ್ಯಾನಗಳನ್ನು ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ. ಇದರ ಮೂಲಕ ಬೆಂಗಳೂರಿನಲ್ಲಿ ಹಸಿರು ಪ್ರದೇಶ ವಿಸ್ತರಣೆ, ಪರಿಸರ ಸಂರಕ್ಷಣೆ ಮತ್ತು ಭವಿಷ್ಯದ ನೀರಿನ ಭದ್ರತೆಗೆ ಒತ್ತು ನೀಡಲಾಗುತ್ತಿದೆ” ಎಂದರು.

ಈ ಸಂದರ್ಭದಲ್ಲಿ ಸಚಿವರುಗಳಾದ ಕೃಷ್ಣಬೈರೇಗೌಡ, ಬಿ ಸುರೇಶ್, ಕೆ.ಹೆಚ್.ಮುನಿಯಪ್ಪ, ರಿಜ್ವಾನ್ ಅರ್ಷದ್,ಕೆಪಿಸಿಸಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹಾಲಿ ಹಾಗೂ ಮಾಜಿ ಶಾಸಕರುಗಳು, ಮುಖಂಡರು ಉಪಸ್ಥಿತರಿದ್ದರು.


Share

You cannot copy content of this page