ಸಮಗ್ರ ಸುದ್ದಿ

101 ತಾಲೂಕುಗಳು ಬರ ಘೋಷಣೆಗೆ ತೀರ್ಮಾನ|ಬರ ಪರಿಸ್ಥಿತಿಯ ಸಮರ್ಥ ನಿರ್ವಹಣೆಗೆ ರೂ. 635 ಕೋಟಿ ವ್ಯಯ- ಡಿಸಿಎಂ ಡಾ.ಜಿ.ಪರಮೇಶ್ವರ

Share

ಬೆಂಗಳೂರು :ರಾಜ್ಯದಲ್ಲಿ ಹಿಂದೆಂದೂ ಕಾಣದ ಬರ ಈ ವರ್ಷ ಬಂದಿದೆ. ಜನ – ಜಾನುವಾರುಗಳಿಗೆ ಯಾವುದೇ ಸಮಸ್ಯೆಯಾಗದಂತೆ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ರೂ. 635 ಕೋಟಿ ವ್ಯಯಿಸುತ್ತಿದ್ದೇವೆ. ನಮ್ಮಲ್ಲಿ ಹಣದ ಕೊರತೆ ಇಲ್ಲ ಎಂದು ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ.ಜಿ.ಪರಮೇಶ್ವರ ಅವರು ತಿಳಿಸಿದರು.

ಅವರು ಇಂದು ರಾಜ್ಯದ ಬರಪೀಡಿತ ತಾಲೂಕುಗಳ ಕುರಿತಂತೆ ವಿಧಾನಸೌಧದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ, ಪ್ರಸ್ತುತ ಬರ ಪರಿಸ್ಥಿತಿ, ಬೆಳೆ ನಷ್ಟದ ಮಾಹಿತಿ ಸೇರಿದಂತೆ ಬರ ನಿರ್ವಹಣೆಗೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಧ್ಯಮಕ್ಕೆ ವಿವರಿಸಿದರು.

ರಾಜ್ಯದಲ್ಲಿ ಜೂನ್ 1 ರಿಂದ ಆಗಸ್ಟ್ 26 ರವರೆಗೆ 666 ಮಿಲಿ ಮೀಟರ್ ಮಳೆಯಾಗಬೇಕಾದ ಕಡೆ ಕೇವಲ 465 ಮಿ.ಮೀ ಮಳೆಯಾಗಿದೆ. ಇದರಿಂದಾಗಿ ಶೇ.30 ರಷ್ಟು ಮಳೆ ಕೊರತೆಯಾಗಿದೆ. ರಾಜ್ಯದ 29 ಜಿಲ್ಲೆಗಳು ಹಾಗೂ 190 ತಾಲ್ಲೂಕುಗಳು ಮಳೆ ಕೊರತೆ ಮತ್ತು ತೀವ್ರ ಮಳೆ ಕೊರತೆಯ (Deficit to Large Deficit) ವ್ಯಾಪ್ತಿಯಲ್ಲಿದ್ದು, ಅದರಲ್ಲಿ 12 ತಾಲ್ಲೂಕುಗಳು ತೀವ್ರ ಮಳೆ ಕೊರತೆಯನ್ನು ಅನುಭವಿಸುತ್ತಿವೆ. ಆಗಸ್ಟ್ 26ರ ವೇಳೆಗೆ, ಮಳೆಯಿಲ್ಲದೆ ಸತತ ಮೂರಕ್ಕಿಂತ ಹೆಚ್ಚು ವಾರಗಳ ಕಾಲ ಒಣಹವೆ (Dry-spell) ಅನುಭವಿಸಿದ 134 ತಾಲ್ಲೂಕುಗಳನ್ನು ಗುರುತಿಸಲಾಗಿದೆ ಹಾಗೂ ಅವು ಟ್ರಿಗರ್-1 ಅಡಿಯಲ್ಲಿ ಮೌಲ್ಯಮಾಪನಕ್ಕೆ ಅರ್ಹತೆ ಪಡೆದಿವೆ ಎಂದು ಮಾಹಿತಿ ನೀಡಿದರು.

ಮುಂದುವರೆದು, ಕೇಂದ್ರ ಸರ್ಕಾರವು Drought Manual -2020  ರ ಪ್ರಕಾರ ಬರಪೀಡಿತ ತಾಲ್ಲೂಕು ಎಂದು ಘೋಷಿಸಲು ಹಲವು ಟ್ರಿಗರ್ ಪಾಯಿಂಟುಗಳ ಅವಶ್ಯವಿದೆ ಎಂದಿದೆ. ಟ್ರಿಗರ್-1 : 3 ಅಥವಾ ಅದಕ್ಕಿಂತ ಹೆಚ್ಚಿನ ವಾರಗಳಲ್ಲಿ ಮಳೆಯಾಗದಿದ್ದರೆ- ಡ್ರೈ ಸೈಲ್ ವೀಕ್ಸ್ ಎಂದು ಕರೆಯುತ್ತೇವೆ. ಟ್ರಿಗರ್-2 : ಬಿತ್ತನೆಯ ಪ್ರಮಾಣ, ಬಿತ್ತಿದ ಬೆಳೆಗಳ ಸ್ಥಿತಿಗತಿ, ಮಣ್ಣಿನ ತೇವಾಂಶ, ಅಂತರ್ಜಲದ ಪ್ರಮಾಣ, ಕೆರೆಕಟ್ಟೆಗಳಲ್ಲಿ, ಅಣೆಕಟ್ಟುಗಳಲ್ಲಿನ ನೀರಿನ ಪ್ರಮಾಣ ಇತ್ಯಾದಿಗಳು ಇದರಲ್ಲಿ ಸೇರುತ್ತವೆ. ಈ ಎರಡೂ ಅಂಶಗಳನ್ನು ಆಧರಿಸಿ ನಾವು ಅಸೆಸ್‍ಮೆಂಟ್ ಮಾಡಿದ್ದೇವೆ. ಗ್ರೌಂಡ್ ಟ್ರೂಥಿಂಗ್ ಮಾಡಿದ್ದೇವೆ. 134 ತಾಲ್ಲೂಕುಗಳು ಟ್ರಿಗರ್ – 1 ಪ್ರಕಾರ ಅರ್ಹತೆ ಪಡೆದಿವೆ. ಗ್ರೌಂಡ್ ಟ್ರೂಥಿಂಗ್ ಮಾಡಿದಾಗ ಸದ್ಯಕ್ಕೆ 101 ತಾಲ್ಲೂಕುಗಳು ಬರಪೀಡಿತ ಎಂದು ಘೋಷಿಸುವುದಕ್ಕೆ ಅರ್ಹತೆ ಪಡೆದಿವೆ. ಉಳಿದ 32 ತಾಲ್ಲೂಕುಗಳು ಟ್ರಿಗರ್ 1 ಪ್ರಕಾರ ಅರ್ಹತೆ ಪಡೆದಿವೆ. ಅವುಗಳನ್ನು ಪರಿಶೀಲಿಸುವ ಕೆಲಸ ನಡೆಯುತ್ತಿದೆ ಎಂದು ವಿವರಣೆ ನೀಡಿದರು.

ಮೊದಲ ಹಂತದಲ್ಲಿ 101 ತಾಲೂಕುಗಳು ಬರ ಘೋಷಣೆಯಾದ ಬಳಿಕ, ಪ್ರತಿ 15 ದಿನಕ್ಕೆ ಪರಿಶೀಲನೆ ನಡೆಸುತ್ತೇವೆ. ಹೋಬಳಿವಾರು ಗ್ರೌಂಡ್ ಟ್ರೂಥಿಂಗ್ ನಡೆಸಿರುವ ಮಾಹಿತಿ ಇದೆ. ಅದನ್ನು ವಿಶ್ಲೇಷಿಸಿ ಬರಪೀಡಿತ ಎಂದು ಪರಿಗಣಿಸಲಾಗಿದೆ. ಕೆಲವು ತಾಲ್ಲೂಕುಗಳಲ್ಲಿ ಎರಡು ವಾರ ಮಳೆ ಇಲ್ಲದೆ ಮಧ್ಯದಲ್ಲಿ ಯಾವಾಗಲೋ ಒಮ್ಮೆ ಮಳೆ ಬಂದರೂ ಅದು ಟ್ರಿಗರ್- 1 ವಿಚಾರದಲ್ಲಿ ಅರ್ಹತೆ ಕಳೆದುಕೊಂಡು ಬಿಡುತ್ತದೆ. ಆದರೆ ಅಲ್ಲಿ ಬೆಳೆಯಾಗಿರುವುದಿಲ್ಲ. ಆದರೂ ಬರಪೀಡಿತ ಎಂದು ಘೋಷಿಸಲು ಆಗುವುದಿಲ್ಲ. ಈ ರೀತಿಯ ಅನೇಕ ಸಮಸ್ಯೆಗಳು ಆ ಮಾನದಂಡಗಳಿವೆ. ಅವುಗಳನ್ನು ಹಿಂದಿನಂತೆ ಸರಿಪಡಿಸಿ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಲೇ ಇದ್ದೇವೆ. ಆದರೂ ಕೇಂದ್ರ ಸರ್ಕಾರ ಈ ಕುರಿತು ತಲೆಕೆಡಿಸಿಕೊಳ್ಳುತ್ತಿಲ್ಲ. ನಮ್ಮಲ್ಲೂ ಇದೇ ಸಮಸ್ಯೆಯಾಗಿರುವುದು. ಹಾಗಾಗಿ ಹಂತ ಹಂತವಾಗಿ ನಾವು ಬರ ಘೋಷಣೆ ಮಾಡಬೇಕಾಗುತ್ತದೆ ಎಂದು ತಿಳಿಸಿದರು.

ಆಗಸ್ಟ್ 21 ರವರೆಗೆ ರಾಜ್ಯದಲ್ಲಿ ಶೇ.71 ರಷ್ಟು ಬಿತ್ತನೆಯಾಗಿದೆ. 84.10 ಲಕ್ಷ ಹೆಕ್ಟೇರುಗಳಷ್ಟು ಪ್ರದೇಶದಲ್ಲಿ ಬಿತ್ತನೆಯಾಗಬೇಕಿತ್ತು. ಆದರೆ ಕೇವಲ 60 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಒಟ್ಟು 240 ತಾಲ್ಲೂಕುಗಳ ಪೈಕಿ 104 ತಾಲ್ಲೂಕುಗಳಲ್ಲಿ ಶೇ.75 ಕ್ಕಿಂತ ಕಡಿಮೆ ಬಿತ್ತನೆಯಾಗಿದ್ದು, ಅದರಲ್ಲಿ 42 ತಾಲ್ಲೂಕುಗಳಲ್ಲಿ ಶೇ.25 ಕ್ಕಿಂತಲೂ ಕಡಿಮೆ ಬಿತ್ತನೆಯಾಗಿದೆ. ತೋಟಗಾರಿಕೆ ಬೆಳೆಗಳೂ ಅμÉ್ಟ, ಆಗಸ್ಟ್ 25ರ ವರೆಗೆ 4.36 ಲಕ್ಷ ಹೆಕ್ಕೇರುಗಳ ಪೈಕಿ ಕೇವಲ 3.04 ಲಕ್ಷ ಹೆಕ್ಟೇರುಗಳಲ್ಲಿ (ಶೇ.69) ಮಾತ್ರ ಬಿತ್ತನೆಯಾಗಿದೆ. ಬಿತ್ತನೆಯಾದ ಬೆಳೆಗಳಿಗೂ ಕೂಡ ಮಳೆ ಸಾಲದೆ ನಿರೀಕ್ಷಿತ ಬೆಳವಣಿಗೆ ಸಾಧ್ಯವಾಗುತ್ತಿಲ್ಲ. ಮಳೆಯ ಕೊರತೆಯ ನಡುವೆಯೆ ಬೆಳೆಯುವ ಅಲ್ಪಾವಧಿ ತಳಿಗಳನ್ನು ಬೆಳೆಯುವಂತೆ ತಿಳುವಳಿಕೆ ನೀಡಿ ರೈತರಿಗೆ ಬಿತ್ತನೆ ಬೀಜವನ್ನು ವಿತರಿಸಲಾಗಿದೆ ಎಂದರು.

ಅಲ್ಲದೇ, ಮಳೆಯ ಅಭಾವದಿಂದಾಗಿ ಮಣ್ಣಿನ ತೇವಾಂಶವೂ ತೀವ್ರವಾಗಿ ಕುಸಿದಿದೆ. ಆಗಸ್ಟ್ 26ರವರೆಗಿನ ತೇವಾಂಶ ಸಮರ್ಪಕತಾ ಸೂಚ್ಯಂಕದ (MAI) ಪ್ರಕಾರ, ರಾಜ್ಯದ 178 ತಾಲ್ಲೂಕುಗಳಲ್ಲಿ (ಶೇ.74) ಮಣ್ಣಿನ ತೇವಾಂಶದ ತೀವ್ರ ಕೊರತೆ ಎದುರಾಗಿದೆ. ಇದರಲ್ಲಿ 86 ತಾಲ್ಲೂಕುಗಳು ಅತಿ ತೀವ್ರ ಹಾಗೂ 92 ತಾಲ್ಲೂಕುಗಳು ಸಾಧಾರಣ ತೇವಾಂಶ ಕೊರತೆಯನ್ನು ಎದುರಿಸುತ್ತಿದ್ದು, ಇದು ಬೆಳೆಗಳ ಪ್ರಾಥಮಿಕ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರಿದೆ ಎಂದು ತಿಳಿಸಿದರು.

ರಾಜ್ಯದ 132 ತಾಲ್ಲೂಕುಗಳಲ್ಲಿ ಕಳೆದ ದಶಕದ ಸರಾಸರಿಗೆ ಹೋಲಿಸಿದರೆ ಅಂತರ್ಜಲ ಮಟ್ಟ ಕುಸಿದಿದ್ದು, ಮುಂದಿನ ದಿನಗಳಲ್ಲಿ ಅದು ಇನ್ನಷ್ಟು ಕುಸಿಯುವ ಆತಂಕವಿದೆ, ಹಾಗಾಗಿ ಸರ್ಕಾರವು ಅಂತರ್ಜಲ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳುತ್ತಿದೆ. ರಾಜ್ಯದ ಜನತೆ ಕೂಡ ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡು ಅಂತರ್ಜಲ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಕಳೆದ ವರ್ಷ ಇದೇ ಅವಧಿಯಲ್ಲಿ 815.70 ಟಿಎಂಸಿಗಳಷ್ಟು ನೀರು ಸಂಗ್ರಹವಾಗಿತ್ತು. ಈ ವರ್ಷ (ಆಗಸ್ಟ್ 26ರ ವರೆಗೆ) ಕೇವಲ 684.09 ಟಿಎಂಸಿಗಳಷ್ಟು ಮಾತ್ರ ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದರು.

ಆಗಸ್ಟ್ 22ರ ವರೆಗೆ ಮಾಹಿತಿಯಂತೆ, ರಾಜ್ಯದ 758 ಗ್ರಾಮಗಳಿಗೆ 149 ಟ್ಯಾಂಕರುಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. 714 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದುಕೊಳ್ಳಲಾಗಿದೆ. ನಗರ ಪ್ರದೇಶದ 18 ಸ್ಥಳೀಯ ಸಂಸ್ಥೆಗಳ 114 ವಾರ್ಡುಗಳಿಗೆ 48 ಟ್ಯಾಂಕರುಗಳ ಮೂಲಕ ನೀರು ಸರಬರಾಜು ಮಾಡುತ್ತಿದ್ದೇವೆ. ಇಲ್ಲಿಯೂ 18 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆಯಲಾಗಿದೆ. ಪರಿಸ್ಥಿತಿ ತೀವ್ರವಾದರೆ ಮುಂದಿನ ಬೇಸಿಗೆಯಲ್ಲಿ 2,059 ಗ್ರಾಮ ಪಂಚಾಯತ್‍ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದು ಎಂದು ಅಂದಾಜು ಮಾಡಿ ಅದಕ್ಕೆ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.

ಜಿಲ್ಲಾಧಿಕಾರಿಗಳು ಹಾಗೂ ಪಶುಸಂಗೋಪನಾ ಇಲಾಖೆಯವರು ನೀಡಿದ ಮಾಹಿತಿ ಪ್ರಕಾರ, ರಾಜ್ಯದಲ್ಲಿ 151 ಲಕ್ಷ ಟನ್‍ಗಳಷ್ಟು ಮೇವಿನ ಸಂಗ್ರಹವಿದೆ. ಇದು 33 ವಾರಗಳಿಗೆ ಸಾಕಾಗುತ್ತದೆ. 49 ತಾಲ್ಲೂಕುಗಳಲ್ಲಿ 25 ವಾರಗಳಿಗೆ ಹಾಗೂ 18 ತಾಲ್ಲೂಕುಗಳಲ್ಲಿ 20 ವಾರಗಳಿಗಿಂತ ಕಡಿಮೆ ಅವಧಿಗೆ ಸಾಕಾಗುವಷ್ಟು ಮೇವಿನ ಸಂಗ್ರಹವಿದೆ. ಇದರ ನಡುವೆ ನೀರಿನ ಆಸರೆ ಹೊಂದಿರುವ ರೈತರಿಗೆ ಮೇವಿನ ಬೀಜದ ಕಿಟ್‍ಗಳನ್ನು ನೀಡಲು 25 ಕೋಟಿ ರೂಗಳನ್ನು ಬಿಡುಗಡೆ ಮಾಡಿದ್ದೇವೆ. ಕೆಎಂಎಫ್ ಕಡೆಯಿಂದಲೂ ಕಿಟ್‍ಗಳನ್ನು ನೀಡುತ್ತಿದ್ದೇವೆ. ಮೇವು ಬೆಳೆದ ರೈತರು ಅದನ್ನು ಜೋಪಾನ ಮಾಡಬೇಕೆಂದು ವಿನಂತಿಸಿದ್ದೇವೆ ಎಂದು ತಿಳಿಸಿದರು.


Share

You cannot copy content of this page