ಸಮಗ್ರ ಸುದ್ದಿ

ನೇಪಾಳ, ಟಿಬೆಟ್ ಪ್ರವಾಹ: ಸಂಕಷ್ಟದಲ್ಲಿರುವ ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರದಿಂದ ತುರ್ತು ಕ್ರಮ

Share

ಬೆಂಗಳೂರು:ನೇಪಾಳ ಮತ್ತು ಚೀನಾದ ಟಿಬೆಟ್ ಸ್ವಾಯತ್ತ ಪ್ರದೇಶದ (TAR) ಗಡಿ ಭಾಗಗಳಲ್ಲಿ ಉಂಟಾಗಿರುವ ದಿಢೀರ್ ಪ್ರವಾಹ ಹಾಗೂ ಭೂಕುಸಿತದಿಂದಾಗಿ ಕನ್ನಡಿಗರು ಸಿಲುಕಿ ಸಂಕಷ್ಟದಲ್ಲಿರುವವರ ರಕ್ಷಣೆ ಮತ್ತು ಸ್ಥಳಾಂತರಕ್ಕೆ ಕರ್ನಾಟಕ ಸರ್ಕಾರ ಸಮರೋಪಾದಿ ಕ್ರಮಗಳನ್ನು ಕೈಗೊಂಡಿದೆ.

ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರು ಈ ಪರಿಸ್ಥಿತಿಯನ್ನು ನೇರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಬಾಧಿತ ಪ್ರದೇಶಗಳಲ್ಲಿರುವ ಕನ್ನಡಿಗರ ಕ್ಷೇಮಾಭಿವೃದ್ಧಿಗಾಗಿ ರಾಜ್ಯ ಸರ್ಕಾರವು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಹಾಗೂ ನವದೆಹಲಿಯ ಕರ್ನಾಟಕ ಭವನದ ರೆಸಿಡೆಂಟ್ ಕಮಿಷನರ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದೆ.

ಸಹಾಯಧನ ಮತ್ತು ರಕ್ಷಣಾ ವ್ಯವಸ್ಥೆಯ ಮುಖ್ಯ ಅಂಶಗಳು:

ಮಾಹಿತಿ ಸಂಗ್ರಹಕ್ಕೆ ಗೂಗಲ್ ಫಾರ್ಮ್: ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ವ್ಯಕ್ತಿಗಳು, ಅವರ ಪ್ರಸ್ತುತ ಸ್ಥಳ, ಅಗತ್ಯವಿರುವ ನೆರವು ಮತ್ತು ಟೂರ್ ಆಪರೇಟರ್‍ಗಳ ವಿವರಗಳನ್ನು ಸಂಗ್ರಹಿಸಲು ರಾಜ್ಯ ಸರ್ಕಾರವು ವಿಶೇಷ ಗೂಗಲ್ ಫಾರ್ಮ್ ಲಿಂಕ್ ಹಂಚಿಕೊಂಡಿದೆ. ಸಿಲುಕಿರುವ ವ್ಯಕ್ತಿಗಳು ಅಥವಾ ಅವರ ಸಂಬಂಧಿಕರು ತಕ್ಷಣವೇ ಈ ಫಾರ್ಮ್ ಭರ್ತಿ ಮಾಡಲು ಕೋರಲಾಗಿದೆ.

24/7 ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ: ಪರಿಸ್ಥಿತಿಯ ಮೇಲ್ವಿಚಾರಣೆಗೆ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC) 24 ಗಂಟೆಯೂ ಕಾರ್ಯಾಚರಿಸುತ್ತಿದ್ದು, ವಿದೇಶಾಂಗ ಸಚಿವಾಲಯದ ಕ್ಷಿಪ್ರ ಪ್ರತಿಕ್ರಿಯೆ ಕೋಶ (Rapid Response Cell) ಮತ್ತು ಗೃಹ ಸಚಿವಾಲಯದ ಸಮಗ್ರ ನಿಯಂತ್ರಣ ಕೊಠಡಿಯೊಂದಿಗೆ ನಿರಂತರ ಸಮನ್ವಯ ಸಾಧಿಸುತ್ತಿದೆ.

ದೂತಾವಾಸಗಳೊಂದಿಗೆ ಸಮನ್ವಯ: ಕಠ್ಮಂಡು ಮತ್ತು ಬೀಜಿಂಗ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳೊಂದಿಗೆ ನವದೆಹಲಿಯ ಕರ್ನಾಟಕ ಭವನವು ಸಂಪರ್ಕದಲ್ಲಿದ್ದು, ಕನ್ನಡಿಗರನ್ನು ಸುರಕ್ಷಿತವಾಗಿ ರಕ್ಷಿಸಲು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ.

ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಸೂಚನೆಗಳು:
ಬಾಧಿತ ಪ್ರದೇಶಗಳಲ್ಲಿರುವ ಕನ್ನಡಿಗರು ಸುರಕ್ಷಿತ ಸ್ಥಳಗಳಲ್ಲೇ ಉಳಿಯಬೇಕು. ಸ್ಥಳೀಯ ಆಡಳಿತ ಹಾಗೂ ಭಾರತೀಯ ರಾಯಭಾರ ಕಚೇರಿ ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅಧಿಕೃತ ಸೂಚನೆ ಲಭ್ಯವಾಗುವವರೆಗೆ ಅಪಾಯಕಾರಿ ಮಾರ್ಗಗಳಲ್ಲಿ ಪ್ರಯಾಣಿಸಬಾರದು ಎಂದು ಸರ್ಕಾರ ಎಚ್ಚರಿಸಿದೆ.

ಸಹಾಯಕ್ಕಾಗಿ ಸಂಪರ್ಕಿಸಿ:

ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ಸಹಾಯವಾಣಿ: 1070 / 080-22253707.
ಗೂಗಲ್ ಫಾರ್ಮ್ ಲಿಂಕ್: https://docs.google.com/forms/d/1gnw8B8vaYknr0Y2Lkn_fpWubPnKI6a8C4Em7co1Shbk/edit


Share

You cannot copy content of this page