ಚಿತ್ರದುರ್ಗ: ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಸೂಕ್ತ ಮಾನದಂಡಗಳನ್ನು ಅನುರಿಸಿಯೇ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಸಚಿವ ಟಿ. ರಘುಮೂರ್ತಿ ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಶುಕ್ರವಾರ ಪತ್ರಿಕಾ ಹೇಳಿಕೆ ಹೊರಡಿಸಿರುವ ಸಚಿವರು, ಚಿತ್ರದುರ್ಗ ಜಿಲ್ಲೆಯಲ್ಲಿ ಮೂರು ತಾಲೂಕುಗಳಾದ ಚಳ್ಳಕೆರೆ, ಹಿರಿಯೂರು, ಹೊಸದುರ್ಗವನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಇನ್ನೂ ಕೆಲವು ತಾಲೂಕುಗಳು ಸಂಕಷ್ಟ ಎದುರಿಸುತ್ತಿವೆ ಎಂಬ ಮಾಹಿತಿ ಇದೆ. ಆದರೆ ರೈತರು ಯಾವುದೇ ಕಾರಣಕ್ಕೂ ಆತಂಕ ಪಡಬೇಕಾದ ಅಗತ್ಯವಿಲ್ಲ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದರು ತಿಳಿಸಿದ್ದಾರೆ.
ಚಿತ್ರದುರ್ಗ, ಮೊಳಕಾಲ್ಮೂರು, ಹೊಳಲ್ಕೆರೆ ತಾಲೂಕು ಸೇರಿಸಬೇಕು ಎಂದು ಒತ್ತಾಯಗಳು ಕೇಳಿಬಂದಿವೆ. ಈ ಬಗ್ಗೆ ಸರ್ಕಾರ ಸೂಕ್ತ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಿದೆ ಎಂದು ರೈತರಿಗೆ ಸಚಿವರು ಭರವಸೆ ನೀಡಿದ್ದಾರೆ.
ಬರ ಘೋಷಣೆ ಮಾನದಂಡಗಳು
ಬರ ಘೋಷಣೆ ಮಾಡುವಾಗ ಸರ್ಕಾರ ಕೆಲವು ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ‘ಬರ ನಿರ್ವಹಣೆ ಕೈಪಿಡಿ – 2020’ ರ ಮಾರ್ಗದರ್ಶಿ ಸೂತ್ರದನ್ವಯ, ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC), 2026ರ ಜೂನ್ 1 ರಿಂದ ಆಗಸ್ಟ್ 12ರ ಅವಧಿಗೆ ವೈಜ್ಞಾನಿಕ ಬರ ಪರಿಶೀಲನೆ ನಡೆಸಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಒಟ್ಟು ಮೂರು ಹಂತದಲ್ಲಿ ಅಧ್ಯಯನ ನಡೆಸಲಾಗುತ್ತದೆ. ಪ್ರತಿ ತಾಲೂಕಿನಲ್ಲಿ ಕಡ್ಡಾಯ ಸೂಚಕಗಳ ಮೌಲ್ಯಮಾಪನ (ASSESSMENT OF MANDATORY INDICATORS) ಮಾಡಲಾಗುತ್ತದೆ. ಮಳೆ ಕೊರತೆ (Rainfall Deviation) ಮತ್ತು ಶುಷ್ಕ ಅವಧಿ (Dry Spell) ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ ಎಂದು ರಘುಮೂರ್ತಿ ವಿವರಿಸಿದ್ದಾರೆ.
ಎರಡನೇ ಹಂತದಲ್ಲಿ ಪ್ರಭಾವ ಸೂಚಕಗಳ ಮೌಲ್ಯಮಾಪನ (ASSESSMENT OF IMPACT INDICATORS) ನಡೆಯುತ್ತದೆ. ಈ ಪೈಕಿ ಬಿತ್ತನೆಯಾದ ಕೃಷಿ ಬೆಳೆಗಳ ಸ್ಥಿತಿ (Crop Sown Status), ಉಪಗ್ರಹ ಆಧಾರಿತ ಸಸ್ಯವರ್ಗದ ಸೂಚ್ಯಂಕ (Satellite-based Vegetation Indices), ಮಣ್ಣಿನ ತೇವಾಂಶ (Soil Moisture) ಜಲವಿಜ್ಞಾನ/ನೆಲದ ನೀರಿನ ಮಟ್ಟ (Hydrology) ಪರಿಶೀಲನೆ ನಡೆಸಿದ ನಂತರ ಸೂಚಕಗಳ ಆಧಾರದ ಮೇಲೆ ಅರ್ಹ ತಾಲೂಕುಗಳನ್ನು ‘ಮಧ್ಯಮ’ (Moderate) ಅಥವಾ ‘ತೀವ್ರ’ (Severe) ಬರ ಪೀಡಿತ ಎಂದು ವರ್ಗೀಕರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ನಿರ್ಣಾಯಕ ಹಂತ
‘ಮಧ್ಯಮ’ ಅಥವಾ ‘ತೀವ್ರ’ ಬರ ಪೀಡಿತ ಎಂದು ವರ್ಗೀಕರಿಸಲ್ಪಟ್ಟ ತಾಲೂಕುಗಳನ್ನು ಮೂರನೇ ಹಂತದಲ್ಲಿ ಗ್ರೌಂಡ್ ಟ್ರೂಥಿಂಗ್ ಪರಿಶೀಲನೆಗೆ (GROUND TRUTHING – GT) ಒಳಪಡಿಸಲಾಗುತ್ತದೆ. ಈ ಪರಿಶೀಲನೆಯ ವೇಳೆ ತಳಮಟ್ಟದ ಬರ ಪರಿಣಾಮದ ಬಗ್ಗೆ ಅಧ್ಯಯನ ನಡೆಸಲಾಗುತ್ತದೆ. ಇದು ಬರದ ತೀವ್ರತೆಯನ್ನು ನಿರ್ಧರಿಸಲು ನೆರವಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಕೆಎಸ್‍ಎನ್‌ಡಿಎಂಸಿ ನಡೆಸಿದ ಸಮಗ್ರ ಬರ ಮೌಲ್ಯಮಾಪನದ ಆಧಾರದ ಮೇಲೆ, ಒಟ್ಟು 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಇ-ಆಡಳಿತ (DPAR) ಇಲಾಖೆಯ “Crop Loss GT” ಮೊಬೈಲ್ ಆ್ಯಪ್ ಮೂಲಕವೂ ಪರಿಶೀಲನೆ ನಡೆಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಮುಂದೆಯೂ ಘೋಷಿಸುವ ಸಾಧ್ಯತೆ
ಸೆಪ್ಟೆಂಬರ್ ತಿಂಗಳ ಮಳೆ ಮುನ್ಸೂಚನೆಯನ್ನು ಗಮನದಲ್ಲಿಟ್ಟುಕೊಂಡು, ಕೃಷಿ ಬೆಳೆಗಳ ಮೇಲಾಗುವ ಪರಿಣಾಮಗಳನ್ನು ಆಧರಿಸಿ 2026ರ ಖಾರೀಫ್ ಋತುವಿನ ಕೊನೆಯವರೆಗೆ ಮತ್ತೊಮ್ಮೆ ಬರ ಪರಿಸ್ಥಿತಿ ಪರಾಮರ್ಶಿಸಲಾಗುವುದು. ನಿಯಮಾನುಸಾರ ಪರಿಶೀಲನೆ ಮತ್ತು ಗ್ರೌಂಡ್ ಟ್ರೂಥಿಂಗ್ ನಂತರ ಹೆಚ್ಚುವರಿ ತಾಲೂಕುಗಳು ಬರಪೀಡಿತ ಎಂದು ಹಂತ-ಹಂತವಾಗಿ ಘೋಷಣೆ ಅಧಿಸೂಚನೆ ಹೊರಡಿಸುವ ಅವಕಾಶವೂ ಇದೆ ಎಂದು ಸಚಿವ ಟಿ. ರಘುಮೂರ್ತಿ ಸ್ಪಷ್ಟಪಡಿಸಿದ್ದಾರೆ.
