ಬೆಂಗಳೂರು: ರಾಜ್ಯದ ಜಲಸಂಪನ್ಮೂಲ ಯೋಜನೆಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಜಲಸಂಪನ್ಮೂಲ ಸಚಿವರು ಶುಕ್ರವಾರ ಇಲಾಖೆಯ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ವಿಧಾನಸೌಧದ ಮೂರನೆ ಮಹಡಿಯಲ್ಲಿ ಇಲಾಖೆಯ ನಾಲ್ಕು ನಿಗಮಗಳ ಸಭೆ ನಡೆಸಿದ ಅವರು, ಬಾಕಿ ಇರುವ ಯೋಜನೆಗಳಿಗೆ ವೇಗ ನೀಡುವುದು, ಕಾನೂನು ತೊಡಕುಗಳನ್ನು ನಿವಾರಿಸುವುದು ಹಾಗೂ ಅಂತರಜಲ ಮಟ್ಟ ಹೆಚ್ಚಿಸಲು ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಸಭೆಯಲ್ಲಿ ಕೃಷ್ಣಾ, ಕಾವೇರಿ, ವಿಶ್ವೇಶ್ವರಯ್ಯ ಹಾಗೂ ಕರ್ನಾಟಕ ನೀರಾವರಿ ನಿಗಮಗಳ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಯೋಜನೆಗಳ ಭೌತಿಕ ಮತ್ತು ಆರ್ಥಿಕ ಪ್ರಗತಿಯನ್ನು ಸಚಿವರು ಸುದೀರ್ಘವಾಗಿ ಪರಾಮರ್ಶಿಸಿದರು.
ಸಚಿವರ ಪ್ರಮುಖ ಸೂಚನೆಗಳು:
ಕೆರೆಗಳ ಭರ್ತಿಗೆ ಆದ್ಯತೆ: ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನೀರನ್ನು ಪಂಪ್ ಮಾಡಿ ಕೆರೆ-ಕಟ್ಟೆಗಳನ್ನು ತುಂಬಿಸಬೇಕು. ಅಂತರಜಲ ಹೆಚ್ಚಳಕ್ಕೆ ಕೇವಲ ಸಾಂಪ್ರದಾಯಿಕ ವಿಧಾನವಲ್ಲದೆ, ವೈಜ್ಞಾನಿಕ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.
ಯುಕೆಪಿ-3 ವಿವಾದಗಳಿಗೆ ‘ಮಧ್ಯಸ್ಥಿಕೆ’ ಮದ್ದು: ಕೃಷ್ಣಾ ಮೇಲ್ದಂಡೆ ಯೋಜನೆ (UKP-3) ಹಂತ 1 ಮತ್ತು 2ರ ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ದರ ನಿಗದಿ ಹಾಗೂ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ತ್ವರಿತವಾಗಿ ಬಗೆಹರಿಸಬೇಕು. 20 ವರ್ಷಗಳ ಹಿಂದಿನ ಸುಮಾರು 1500 ಪ್ರಕರಣಗಳಿದ್ದು, ಇವುಗಳನ್ನು ‘ಮಧ್ಯಸ್ಥಿಕೆ’ (Mediation) ಮೂಲಕ ಇತ್ಯರ್ಥಪಡಿಸಿ 9 ಉಪ-ಯೋಜನೆಗಳ ಭೂಸ್ವಾಧೀನವನ್ನು ಚುರುಕುಗೊಳಿಸುವಂತೆ ತಾಕೀತು ಮಾಡಿದರು.
ಶೀಘ್ರವೇ ಪರಿಹಾರ ವಿತರಣೆ: ಯುಕೆಪಿ-3 ಯೋಜನೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಸಚಿವ ಸಂಪುಟ ಘೋಷಿಸಿರುವ ಪರಿಹಾರದ ಹಣ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಸ್ವಾಧೀನ ಪ್ರಕ್ರಿಯೆಯ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸುವಂತೆ ನಿರ್ದೇಶಿಸಿದರು.
ಪ್ರಮುಖ ಯೋಜನೆಗಳ ಕುರಿತ ಮಹತ್ವದ ಬೆಳವಣಿಗೆಗಳು
ಮೇಕೆದಾಟು ಯೋಜನೆ: 67 ಟಿಎಂಸಿ ಸಾಮರ್ಥ್ಯದ ಮೇಕೆದಾಟು ಯೋಜನೆಯ ಪರಿಷ್ಕೃತ ಡಿಪಿಆರ್ ಅನ್ನು ಆಗಸ್ಟ್ 13ರಂದು ಕೇಂದ್ರಕ್ಕೆ ಕಳುಹಿಸಲಾಗಿದೆ. ಡ್ಯಾಂ ಸುತ್ತಲೂ ನೀರಾವರಿ ಪ್ರದೇಶವಿಲ್ಲ ಎಂಬುದನ್ನು ಸ್ಪಷ್ಟಪಡಿಸುವ ಮೂಲಕ ತಮಿಳುನಾಡಿನ ಎಲ್ಲ ಅನುಮಾನಗಳಿಗೂ ತಾರ್ಕಿಕ ಅಂತ್ಯ ಹಾಡಲಾಗಿದೆ ಎಂದು ಸಭೆಯಲ್ಲಿ ವಿವರಿಸಲಾಯಿತು. ಈ ಬಗ್ಗೆ ಪ್ರತ್ಯೇಕ ಸಭೆಗೂ ಅಧಿಕಾರಿಗಳಿಗೆ ಸೂಚಿಸಿದರು.
ಮಹದಾಯಿ (ಕಳಸಾ-ಬಂಡೂರಿ): ಜಲವಿವಾದ ನ್ಯಾಯಾಧಿಕರಣ ಅಂತಿಮ ತೀರ್ಪು ನೀಡಿದ್ದು, ಕೇಂದ್ರ ಜಲ ಆಯೋಗವು (CWC) ಪರಿಷ್ಕೃತ ಡಿಪಿಆರ್‌ಗೆ ಅನುಮತಿಯನ್ನೂ ನೀಡಿದೆ. ಸುಪ್ರೀಂ ಕೋರ್ಟ್‌ನಲ್ಲಿ ಯಾವುದೇ ಪ್ರಕರಣ ಇಲ್ಲದಿದ್ದರೂ, ಅರಣ್ಯ ಇಲಾಖೆ ನ್ಯಾಯಾಲಯದ ಪ್ರಕರಣದ ಬಗ್ಗೆ ಪ್ರಸ್ತಾಪಿಸುತ್ತಿದೆ. ಹೀಗಾಗಿ ಅರಣ್ಯ ಇಲಾಖೆಗೆ ಪತ್ರ ಮುಖೇನ ವಾಸ್ತವ ಸ್ಥಿತಿಯನ್ನು ತಿಳಿಸಿ, ನ್ಯಾಷನಲ್ ಬೋರ್ಡ್ ಫಾರ್ ವೈಲ್ಡ್ ಲೈಫ್ (NBWL) ಕ್ಲಿಯರೆನ್ಸ್ ಪಡೆಯುವ ಪ್ರಕ್ರಿಯೆ ಚುರುಕುಗೊಳಿಸಲು ಸಚಿವರು ಸೂಚನೆ ನೀಡಿದರು.
ಎತ್ತಿನಹೊಳೆ ಯೋಜನೆ: 256 ಕಿ.ಮೀ ಉದ್ದದ ಗುರುತ್ವಾಕರ್ಷಣಾ ಕಾಲುವೆ ಯೋಜನೆಯ ಇದಾಗಿದ್ದು, ಈಗಾಗಲೇ 40 ಕಿ.ಮೀ ವರೆಗೂ ನೀರು ಹರಿದಿದೆ. ಮೊದಲ ಹಂತದಲ್ಲಿ 111 ಹೆಕ್ಟೇರ್ ಅರಣ್ಯ ಪ್ರದೇಶದ ಬಳಕೆಗೆ ಕೇಂದ್ರದ ಒಪ್ಪಿಗೆ ಸಿಕ್ಕಿದೆ. ಯೋಜನೆಯಲ್ಲಿರುವ ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸಲು ಹಾಸನ ಜಿಲ್ಲಾಧಿಕಾರಿಗೆ ಸಚಿವರು ಸೂಚನೆ ನೀಡಿದರು
ಭದ್ರಾ ಮೇಲ್ದಂಡೆ ಯೋಜನೆ: 2023-24ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಈ ಯೋಜನೆಗೆ 5,300 ಕೋಟಿ ರೂ. ನೆರವು ಘೋಷಿಸಿದ್ದರೂ, ಈವರೆಗೂ ಅನುದಾನ ಬಿಡುಗಡೆಯಾಗದ ಬಗ್ಗೆ ಸಭೆಯಲ್ಲಿ ಕಳವಳ ವ್ಯಕ್ತವಾಯಿತು.
ತುಂಗಭದ್ರಾ ಡ್ಯಾಂ: ತುಂಗಭದ್ರಾ ಜಲಾಶಯದ ಎಲ್ಲ ಗೇಟ್‌ಗಳನ್ನು ಹೊಸದಾಗಿ ಅಳವಡಿಸಲಾಗಿದ್ದು, ನವಲಿ ಸಮತೋಲನಾ ಜಲಾಶಯ ನಿರ್ಮಾಣದ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪವಾಯಿತು.
ಆರ್ಥಿಕ ಸಮಸ್ಯೆಗಳ ಇತ್ಯರ್ಥಕ್ಕೆ ಸಿಎಂ ಜೊತೆ ಚರ್ಚೆ
ಇಲಾಖೆಯ ಆರ್ಥಿಕ ಸಮಸ್ಯೆಗಳು ಹಾಗೂ ಬಾಕಿ ಇರುವ ಬಿಲ್‌ಗಳ ಪಾವತಿ ಕುರಿತು ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಲಾಗಿದ್ದು, ಸಂಬಂಧಿಸಿದ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಪ್ರಸ್ತುತ ಇಲಾಖೆಯಲ್ಲಿ 16,000 ಕೋಟಿ ರೂ. ಮೊತ್ತದ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ವಿಶ್ವಬ್ಯಾಂಕ್ ನೆರವಿನೊಂದಿಗೆ ರಾಜ್ಯದ ಅಣೆಕಟ್ಟುಗಳ ಅಭಿವೃದ್ಧಿ ಮತ್ತು ಪುನಶ್ಚೇತನ (DRIP) ಹಾಗೂ ಜಲಶಕ್ತಿ ಸಚಿವಾಲಯದ M-cadwm ಯೋಜನೆಗಳ ಕುರಿತೂ ಪರಾಮರ್ಶೆ ನಡೆಸಲಾಯಿತು.
ರಾಜ್ಯದಲ್ಲಿ 140.60 ಲಕ್ಷ ಹೆಕ್ಟೇರ್ ಬೇಸಾಯ ಯೋಗ್ಯ ಭೂಮಿ ಇದ್ದು, 107 ಲಕ್ಷ ಹೆಕ್ಟೇರ್ ಬಿತ್ತನೆ ಕ್ಷೇತ್ರವಿದೆ. ಇದರಲ್ಲಿ ಬೃಹತ್ ನೀರಾವರಿ ಯೋಜನೆಯಡಿ 42 ಲಕ್ಷ ಹೆಕ್ಟೇರ್ ಪ್ರದೇಶವನ್ನು ತರಲಾಗಿದೆ. ಇದೇ ವೇಳೆ ಇಲಾಖೆಯಲ್ಲಿನ ಖಾಲಿ ಹುದ್ದೆಗಳ ಭರ್ತಿ, ಕಾವೇರಿ ಜಲ ವಿವಾದದ ಪ್ರಸ್ತುತ ಸ್ಥಿತಿಗತಿ ಹಾಗೂ ಅಣೆಕಟ್ಟುಗಳ ನೀರಿನ ಸಂಗ್ರಹಣೆಯ ಬಗ್ಗೆಯೂ ಸಚಿವರು ಮಾಹಿತಿ ಪಡೆದರು.
ಸಭೆಯಲ್ಲಿ ಇಲಾಖೆಯ ಹೆಚ್ಚುವರಿ ಮುಖ್ಯ ಆಯುಕ್ತರಾದ ಗೌರವ್ ಗುಪ್ತ ಸೇರಿದಂತೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.
