ಬೆಂಗಳೂರು: ಪಿಎಂ ಇ-ಡ್ರೈವ್ ಯೋಜನೆಯಡಿ ರಾಜ್ಯದ ಸರ್ಕಾರಿ ಇಲಾಖೆಗಳು ಹಾಗೂ ಸಾರ್ವಜನಿಕ ವಲಯದ ಸಂಸ್ಥೆಗಳ ಆವರಣಗಳಲ್ಲಿ ಲಭ್ಯವಿರುವ ಸೂಕ್ತ ಸ್ಥಳಗಳನ್ನು ಬಳಸಿಕೊಂಡು ಸಾರ್ವಜನಿಕ ಎಲೆಕ್ಟ್ರಿಕ್ ವಾಹನ (ಇವಿ) ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ಮುಂದಾಗಿದೆ.
ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರು ಶನಿವಾರ ಬೆಸ್ಕಾಂ ಕಾರ್ಪೊರೇಟ್ ಕಚೇರಿಯಲ್ಲಿ ಪ್ರಮುಖ ಸರ್ಕಾರಿ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪಿಎಂ ಇ-ಡ್ರೈವ್ ಯೋಜನೆಯಡಿ ಸರ್ಕಾರಿ ಸ್ವಾಮ್ಯದ ಸ್ಥಳಗಳಲ್ಲಿ ಇವಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವ ಕುರಿತು ಚರ್ಚಿಸಿದರು.
ಸರ್ಕಾರಿ ಇಲಾಖೆಗಳಿಗೆ ಸೇರಿದ ಸ್ಥಳಗಳಲ್ಲಿ ಲಭ್ಯ ಇರುವ ಪಾರ್ಕಿಂಗ್ ಅಥವಾ ಖಾಲಿ ಜಾಗಗಳಲ್ಲಿ ಇವಿ ಚಾರ್ಚಿಂಗ್ ಕೇಂದ್ರಗಳ ಸ್ಥಾಪನೆಗೆ ಸೂಕ್ತ ಸ್ಥಳಗಳನ್ನು ಗುರುತಿಸುವುದು, ಅಗತ್ಯ ಅನುಮೋದನೆಗಳನ್ನು ತ್ವರಿತವಾಗಿ ನೀಡುವುದು ಹಾಗೂ ಗುರುತಿಸಲಾದ ಸ್ಥಳಗಳನ್ನು ಯೋಜನೆಯ ರಾಜ್ಯ ನೋಡಲ್ ಏಜೆನ್ಸಿಯಾಗಿರುವ ಬೆಸ್ಕಾಂಗೆ ಹಸ್ತಾಂತರಿಸುವಂತೆ ಇಲಾಖೆಗಳ ಅಧಿಕಾರಿಗಳಿಗೆ ಸಭೆಯಲ್ಲಿ ಗೌರವ್ ಗುಪ್ತ ಅವರು ಸೂಚಿಸಿದರು. ಜತೆಗೆ, ಸಾರ್ವಜನಿಕರಿಗೆ 24×7 ಪ್ರವೇಶ ಕಲ್ಪಿಸಲು ಹಾಗೂ ಅಗತ್ಯವಿದ್ದೆಡೆ ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆ ಮಾಡುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
“ಕೇಂದ್ರ ವಿದ್ಯುತ್ ಸಚಿವಾಲಯದ ಮಾರ್ಗಸೂಚಿಯಂತೆ ಇವಿ ಚಾರ್ಜಿಂಗ್ ಕೇಂದ್ರ ಸ್ಥಾಪನೆಯಾಗುವ ಜಾಗದ ಮಾಲೀಕತ್ವ ಹೊಂದಿರುವ ಸರ್ಕಾರಿ ಇಲಾಖೆಗೆ ಚಾರ್ಜಿಂಗ್ ಮೂಲಕ ಬಳಕೆಯಾಗುವ ಪ್ರತಿ ಕಿಲೋವ್ಯಾಟ್ ಗಂಟೆಗೆ (kWh) ಒಂದು ರೂಪಾಯಿ ಆದಾಯ ಹಂಚಿಕೆ ಆಗಲಿದೆ. ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ ಮತ್ತು ಕಾರ್ಯಾಚರಣೆಗಾಗಿ ಬೆಸ್ಕಾಂ ಹಾಗೂ ಸಂಬಂಧಿತ ಇಲಾಖೆಯ ನಡುವೆ 10 ವರ್ಷಗಳ ಅವಧಿಯ ಒಡಂಬಡಿಕೆ ಮಾಡಿಕೊಳ್ಳಲಾಗುವುದು. ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ, ಕಾರ್ಯಾಚರಣೆ ಹಾಗೂ ನಿರ್ವಹಣೆಯ ಜವಾಬ್ದಾರಿ ಬೆಸ್ಕಾಂನದ್ದಾಗಿರುತ್ತದೆ,” ಎಂದು ಗೌರವ್ ಗುಪ್ತ ತಿಳಿಸಿದರು.
“ರಾಜ್ಯಾದ್ಯಂತ ವರ್ಗ-ಎ (ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಸೇರಿದ ಸ್ಥಳ ಉದಾ: ಸರ್ಕಾರಿ ಕಚೇರಿ, ಆಸ್ಪತ್ರೆ, ಶಾಲೆ ಕಾಲೇಜು ಆವರಣ) ಮತ್ತು ವರ್ಗ-ಬಿ (ಸರ್ಕಾರಿ ಸ್ವಾಮ್ಯದ ಅಥವಾ ಸರ್ಕಾರದಿಂದ ನಿರ್ವಹಿಸಲಾಗುವ ಸಾರ್ವಜನಿಕ ಸ್ಥಳಗಳು ಉದಾ: ರೈಲು ನಿಲ್ದಾಣ, ವಿಮಾನ ನಿಲ್ದಾಣ, ಮೆಟ್ರೋ/ಬಸ್ ನಿಲ್ದಾಣ ಇತ್ಯಾದಿ)ಗಳಲ್ಲಿ ಒಟ್ಟು 1,250 ಇವಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಬೆಸ್ಕಾಂ ಪ್ರಸ್ತಾವನೆ ಸಲ್ಲಿಸಿತ್ತು. ಇದರಲ್ಲಿ 33 ಸರ್ಕಾರಿ ಇಲಾಖೆಗಳ ವ್ಯಾಪ್ತಿಯ ಸ್ಥಳಗಳು ಸೇರಿವೆ. ಈ ಪೈಕಿ ಕೇಂದ್ರ ಬೃಹತ್ ಕೈಗಾರಿಕಾ ಸಚಿವಾಲಯವು ಸಮೀಕ್ಷೆ ನಡೆಸಿದ 687 ಸ್ಥಳಗಳ ಪೈಕಿ 515 ಸ್ಥಳಗಳಿಗೆ ಮೊದಲ ಹಂತದಲ್ಲಿ ಅನುಮೋದನೆ ದೊರೆತಿದೆ,” ಎಂದು ಅವರು ಹೇಳಿದರು.
“ಪಿಎಂ ಇ-ಡ್ರೈವ್ ಯೋಜನೆಯ ರಾಜ್ಯ ನೋಡಲ್ ಏಜೆನ್ಸಿಯಾಗಿರುವ ಬೆಸ್ಕಾಂ, ರಾಜ್ಯಾದ್ಯಂತ ಸಾರ್ವಜನಿಕ ಇವಿ ಚಾರ್ಜಿಂಗ್ ಕೇಂದ್ರಗಳ ಅನುಮೋದನೆ, ಮೇಲ್ವಿಚಾರಣೆ ಹಾಗೂ ಸಬ್ಸಿಡಿ ಪ್ರಕ್ರಿಯೆಯನ್ನು ಸುಗಮಗೊಳಿಸಲು ಸಮಗ್ರ ಡಿಜಿಟಲ್ ವೇದಿಕೆ ಮತ್ತು ಅನುಷ್ಠಾನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಚಾರ್ಜಿಂಗ್ ಕೇಂದ್ರಗಳನ್ನು ಇವಿ ಮಿತ್ರ ವೇದಿಕೆಗೆ ಸೇರ್ಪಡೆಗೊಳಿಸಲಾಗುವುದು. ಇದರಿಂದ ಸಾರ್ವಜನಿಕರು ಚಾರ್ಜಿಂಗ್ ಕೇಂದ್ರಗಳನ್ನು ಬಳಸಿಕೊಳ್ಳಲು ಅನುಕೂಲವಾಗಲಿದೆ,” ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ ಹೇಳಿದರು.
ಸಭೆಯಲ್ಲಿ ಕೆಪಿಟಿಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ರಾಮ್ ಪ್ರಸಾತ್ ಮನೋಹರ್, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ, ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕಿ ದಿವ್ಯಾ ಪ್ರಭು, ಜೆ.ಆರ್.ಜೆ. ಹಾಗೂ ಇಂಧನ ಇಲಾಖೆ ಹಾಗೂ ಇತರ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಕೋಟ್:
“ಇವಿ ಬಳಕೆ ಮತ್ತು ಉತ್ತೇಜನದಲ್ಲಿ ಕರ್ನಾಟಕವು ದೇಶದಲ್ಲೇ ಮುಂಚೂಣಿಯಲ್ಲಿದೆ. ಪಳೆಯುಳಿಕೆ ಇಂಧನ ಬಳಕೆಯ ಪ್ರಮಾಣ ತಗ್ಗಿಸಲು ಇಲೆಕ್ಟ್ರಿಕ್ ವಾಹನಗಳ ಬಳಕೆಗೆ ಒತ್ತು ನೀಡಲಾಗುತ್ತಿದೆ. ಇದಕ್ಕೆ ಪೂರಕವಾದ ಮೂಲಸೌಕರ್ಯ ಕಲ್ಪಿಸುವ ಮೂಲಕ ಸುಸ್ಥಿರ ಹಾಗೂ ಹಸಿರು ಕರ್ನಾಟಕವನ್ನು ರೂಪಿಸುವ ಗುರಿಯತ್ತ ಹೆಜ್ಜೆ ಹಾಕುತ್ತಿದ್ದೇವೆ. ಇದೀಗ, ಪಿಎಂ ಇ-ಡ್ರೈವ್ ಯೋಜನೆಯ ಅನುಷ್ಠಾನಕ್ಕೆ ಆದ್ಯತೆ ನೀಡಿ, ರಾಜ್ಯದ ನೋಡಲ್ ಏಜೆನ್ಸಿಯಾಗಿ ಬೆಸ್ಕಾಂಅನ್ನು ನೇಮಿಸಲಾಗಿದೆ. ರಾಜ್ಯದಲ್ಲಿ ಇವಿ ಚಾರ್ಜಿಂಗ್ ಮೂಲಸೌಕರ್ಯ ಸ್ಥಾಪನೆ ಹಾಗೂ ಯೋಜನೆಗೆ ಸಂಬಂಧಿಸಿದ ವಿವರಗಳು ಮತ್ತು ಇತರ ಅಗತ್ಯ ಮಾಹಿತಿಯನ್ನು ಸಲ್ಲಿಸುವ ಜವಾಬ್ದಾರಿಯನ್ನು ಬೆಸ್ಕಾಂ ನಿರ್ವಹಿಸಲಿದೆ”.
–ಕೆ.ಜೆ. ಜಾರ್ಜ್, ಇಂಧನ ಹಾಗೂ ಪ್ರವಾಸೋದ್ಯಮ ಸಚಿವರು
ಪ್ರಸ್ತಾವಿತ ಚಾರ್ಜಿಂಗ್ ಕೇಂದ್ರಗಳ ಮಾದರಿ
ಮಾದರಿ 1: ನಗರ ಪ್ರದೇಶ- 2 ಚಾರ್ಜರ್‌ಗಳು + 1 ವೇಗದ ಚಾರ್ಜರ್, ಪ್ರದೇಶ: 133 ಚ.ಮೀ., ವಿದ್ಯುತ್ ಲೋಡ್: 84 ಕಿ.ವ್ಯಾ.
ಮಾದರಿ 2: ನಗರ ಪ್ರದೇಶ- 2 ಚಾರ್ಜರ್‌ಗಳು + 2 ವೇಗದ ಚಾರ್ಜರ್‌ಗಳು, ಪ್ರದೇಶ:175 ಚ.ಮೀ., ವಿದ್ಯುತ್ ಲೋಡ್: 204 ಕಿ.ವ್ಯಾ.
ಮಾದರಿ 3: ಹೆದ್ದಾರಿ- 2 ವೇಗದ ಚಾರ್ಜರ್‌ಗಳು, ಪ್ರದೇಶ:221 ಚ.ಮೀ., ವಿದ್ಯುತ್ ಲೋಡ್: 180 ಕಿ.ವ್ಯಾ.
ಮಾದರಿ 4: ಹೆದ್ದಾರಿ- 3 ವೇಗದ ಚಾರ್ಜರ್‌ಗಳು, ಪ್ರದೇಶ:476 ಚ.ಮೀ., ವಿದ್ಯುತ್ ಲೋಡ್: 360 ಕಿ.ವ್ಯಾ.
