ಬೆಂಗಳೂರು:ಪ್ರಜಾಪ್ರಭುತ್ವದ ವಿಕೇಂದ್ರೀಕರಣ ಮಾಡುವ ಮೂಲಕ ರಾಜಕಾರಣದ ಜವಬ್ಧಾರಿಯನ್ನು ಎಲ್ಲರಿಗೂ ಸಿಗುವಂತೆ ಮಾಡಿ, ಹೊಣೆಗಾರಿಕೆ ಮತ್ತು ನಾಗರಿಕ ಸಹಭಾಗಿತ್ವವವನ್ನು ಬೆಳೆಸಿದ ಭಾರತ ಕಂಡ ಶ್ರೇಷ್ಠ ರಾಜಕಾರಣಿ ರಾಮಕೃಷ್ಣ ಹೆಗಡೆ ಅವರು ಎಂದು ಉಪರಾಷ್ಟ್ರಪತಿ ಸಿ. ಪಿ. ರಾಧಾಕೃಷ್ಣನ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಜನ್ಮ ಶತಮಾನೋತ್ವವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಮಕೃಷ್ಣ ಹೆಗಡೆ ಅವರು ಕರ್ನಾಟಕದ ಮೂಲಕ ತಮ್ಮ ರಾಜಕೀಯ ಆರಂಭಿಸಿ ಗ್ರಾಮ ಸ್ವರಾಜ್ಯದ ಕನಸಿಗೆ ಗ್ರಾಮೀಣ ಮಟ್ಟದಲ್ಲಿ ಪಂಚಾಯಿತಿಗಳಿಗೆ ಅಧಿಕಾರ ನೀಡುವ ಮೂಲಕ ರಾಷ್ಟ್ರಕ್ಕೆ ಮಾದರಿಯಾಗಿದ್ದರು ಎಂದು ಹೇಳಿದರು.
ರಾಮಕೃಷ್ಣ ಹೆಗಡೆಯವರು ಒಬ್ಬ ಶ್ರೇಷ್ಠ ಮುತ್ಸದ್ದಿ, ರಾಷ್ಟ್ರಪ್ರೇಮಿ ಮತ್ತು ನಾಯಕರನ್ನು ರೂಪಿಸಿದವರು ಎಂದು ಬಣ್ಣಿಸಿದ ಅವರು, ಹೆಗಡೆಯವರ ನಾಯಕತ್ವದಲ್ಲಿ ಕರ್ನಾಟಕವು ರಾಷ್ಟ್ರ ಮಟ್ಟದಲ್ಲಿ ಉತ್ತಮ ಆಡಳಿತಕ್ಕೆ ಮಾದರಿಯಾಗಿ ಹೊರಹೊಮ್ಮಿತು ಎಂದರು.
ಹೆಗಡೆಯವರು ತಮ್ಮ ನಂಬಿಕೆಗಳಿಗೆ ಬದ್ಧವಾಗಿ ನಿಂತ ಧೀರ ನಾಯಕರಾಗಿದ್ದರು ಮತ್ತು ಕರ್ನಾಟಕದಲ್ಲಿ ಹಲವಾರು ಆಧುನಿಕ ಆಡಳಿತ ಸಂಸ್ಥೆಗಳಿಗೆ ತಡಿಪಾಯ ಹಾಕಿದರು. ಅವರ ಸಾರ್ವಜನಿಕ ಜೀವನವು ವಿಕೇಂದ್ರೀಕರಣ, ಹೊಣೆಗಾರಿಕೆ, ನಾಗರಿಕರ ಸಹಭಾಗಿತ್ವ, ಒಕ್ಕೂಟ ವ್ಯವಸ್ಥೆ ಮತ್ತು ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಬೆಳೆಸಿತ್ತು.
ವಿಕೇಂದ್ರೀಕರಣಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿದ ಉಪರಾಷ್ಟ್ರಪತಿಯವರು, ಆಡಳಿತವನ್ನು ಜನರಿಗೆ ಹತ್ತಿರ ತಂದ 1985 ರ ಕರ್ನಾಟಕ ಜಿಲ್ಲಾ ಪರಿಷತ್ತುಗಳು, ತಾಲ್ಲೂಕು ಪಂಚಾಯತ್ ಸಮಿತಿಗಳು, ಮಂಡಲ ಪಂಚಾಯತ್ಗಳು ಮತ್ತು ನ್ಯಾಯ ಪಂಚಾಯತ್ಗಳ ಕಾಯ್ದೆಯನ್ನು ಉಲ್ಲೇಖಿಸಿದರು. ಈ ದೂರದೃಷ್ಟಿಯು ನಂತರ 73 ನೇ ಸಾಂವಿಧಾನಿಕ ತಿದ್ದುಪಡಿಯ ಮೂಲಕ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಾಂವಿಧಾನಿಕ ಸ್ಥಾನಮಾನ ನೀಡುವ ಮೂಲಕ ಇನ್ನಷ್ಟು ಬಲಗೊಳ್ಳಲು ಸಾಧ್ಯವಾಯಿತು ಎಂದರು.
ವೈಯಕ್ತಿಕ ನೆನಪೊಂದನ್ನು ಹಂಚಿಕೊಂಡ ಉಪರಾಷ್ಟ್ರಪತಿಯವರು ಹೆಗಡೆಯವರು ಹಣ ಎಂದರೇನು? ಎನ್ನುವುದಕ್ಕೆ ನೀಡಿದ್ದ ಸರಳ ವ್ಯಾಖ್ಯಾನವನ್ನು ವಿವರಿಸಿದರು. ಹೆಗಡೆಯವಅಭಿಪ್ರಾಯದಲ್ಲಿ ಹಣ ಎಂದರೆ: ಉತ್ತಮ ಮನೆ, ಉತ್ತಮ ಆರೋಗ್ಯ, ಉತ್ತಮ ಶಿಕ್ಷಣ ಮತ್ತು ಉತ್ತಮ ಕಾರನ್ನು ಹೊಂದಿರುವ ಆರಾಮದಾಯಕ ಜೀವನ—’ಅದಕ್ಕಿಂತ ಹೆಚ್ಚಾಗಿ ಹಣ ಎಂದರೆ ಇನ್ನೇನು?’ ಎಂದು ಹೇಳಿದ್ದರು. ಈ ಮಾತುಗಳು ಹೆಗಡೆಯವರ ಸರಳತೆ ಮತ್ತು ಜೀವನದ ಮೇಲಿನ ಅವರ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ ಎಂದು ಗೌರವ ವ್ಯಕ್ತಪಡಿಸಿದರು.
ಹೊಣೆಗಾರಿಕೆಗೆ ಹೆಗಡೆಯವರು ನೀಡುತ್ತಿದ್ದ ಪ್ರಾಶಸ್ತ್ಯವನ್ನು ಎತ್ತಿಹಿಡಿದ ಉಪರಾಷ್ಟ್ರಪತಿಯವರು, ಕರ್ನಾಟಕದಲ್ಲಿ ಲೋಕಾಯುಕ್ತವನ್ನು ಬಲಪಡಿಸಿದ್ದನ್ನು ಸ್ಮರಿಸಿದರು ಮತ್ತು ಸಾರ್ವಜನಿಕ ಹುದ್ದೆಯು ನಂಬಿಕೆಯ ಹೊಣೆಗಾರಿಕೆಯಾಗಿದೆ ಎಂದರು. ಸದೃಢವಾದ ರಾಜ್ಯಗಳು ಭಾರತವನ್ನು ಬಲಪಡಿಸುತ್ತವೆ, ಸದೃಢವಾದ ಸ್ಥಳೀಯ ಸರ್ಕಾರಗಳು ರಾಜ್ಯಗಳನ್ನು ಬಲಪಡಿಸುತ್ತವೆ ಮತ್ತು ಸಶಕ್ತ ನಾಗರಿಕರು ಸ್ಥಳೀಯ ಸರ್ಕಾರವನ್ನು ಬಲಪಡಿಸುತ್ತಾರೆ ಎಂಬ ಹೆಗಡೆಯವರ ನಂಬಿದ್ದರು.
ಹೆಗಡೆಯವರನ್ನು ಸ್ಥಳೀಯ ಸಂಸ್ಥೆಗಳು ಮತ್ತು ನಾಯಕರ ನಿರ್ಮಾತೃ ಎಂದು ಬಣ್ಣಿಸಿದ ಉಪ ರಾಷ್ಟ್ರಪತಿಗಳು ‘ಶ್ರೇಷ್ಠ ನಾಯಕರು ಒಂದು ಕ್ಷಣವನ್ನು ರೂಪಾಂತರಿಸಬಹುದು. ಆದರೆ ಶ್ರೇಷ್ಠ ಸಂಸ್ಥೆಗಳ ನಿರ್ಮಾತೃಗಳು ತಲೆಮಾರುಗಳನ್ನೇ ರೂಪಾಂತರಿಸುತ್ತಾರೆ’ ಎಂದು ಹೇಳಿದರು.
ಹೆಗಡೆಯವರ ಪ್ರಾಮಾಣಿಕತೆ, ಧೈರ್ಯ ಮತ್ತು ಸಾರ್ವಜನಿಕ ಸೇವೆಯ ಬದ್ಧತೆಯನ್ನು ಯುವ ಪೀಳಿಗೆಯು ಅನುಕರಿಸಬೇಕು ಹಾಗೂ ‘ರಾಷ್ಟ್ರ ಪ್ರಥಮ’ ಎಂಬ ತತ್ವವನ್ನು ಎತ್ತಿಹಿಡಿಯಬೇಕು ಎಂದು ಕರೆ ನೀಡಿದರು. ಈ ಮೌಲ್ಯಗಳನ್ನು ಮುನ್ನಡೆಸಿಕೊಂಡು ಹೋಗುವುದೇ ಅವರ ಪರಂಪರೆಗೆ ಸಲ್ಲಿಸುವ ಅತ್ಯಂತ ಅರ್ಥಪೂರ್ಣ ಶತಮಾನೋತ್ಸವ ಇದಾಗಿದೆ ಎಂದರು. ಆರಂಭದಲ್ಲಿ ಕನ್ನಡದಲ್ಲಿ ಎಲ್ಲರಿಗೂ ಶುಭಾಶಯ ಕೋರಿದ್ದು ವಿಶೇಷವಾಗಿತ್ತು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ ರಾಮಕೃಷ್ಣ ಹೆಗಡೆಯವರು ಹಾಗೂ ನಾನು ಇಬ್ಬರೂ ಕನಕಪುರ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಮುಖ್ಯಮಂತ್ರಿಯಾದವರು ಎಂದು ಹರ್ಷ ವ್ಯಕ್ತಪಡಿಸಿ, ಹೆಗಡೆಯವರ ಜೀವನವೊಂದು ರಾಜಕಾರಣಿಗಳಿಗೆ ಡಿಕ್ಷನರಿ ಇದ್ದಂತೆ ಎಂದು ಬಣ್ಣಿಸಿದರು.
ಪಂಚಾಯತ್ ರಾಜ್ ನಿಂದ ಪಾರ್ಲಿಮೆಂಟ್ ವರೆಗೆ ನಾಯಕರನ್ನು ಹಾಗೂ ನಾಯಕತ್ವವನ್ನು ಬೆಳೆಸಿದ ಕೀರ್ತಿ ಹೆಗಡೆಯವರಿಗೆ ಸಲ್ಲುತ್ತದೆ ಎಂದ ಅವರು ಹೆಗಡೆಯವರು ಎಂದಿಗೂ ದ್ವೇಷದ ರಾಜಕಾರಣ ಮಾಡದ ಅಂತ್ಯಂತ ಗೌರವಾನ್ವಿತ ರಾಜಕಾರಣಿ ಎಂದರು.
ಖಾಸಗಿ ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜುಗಳ ಮೂಲಕ ಕರ್ನಾಟಕದಲ್ಲಿ ಶಿಕ್ಷಣ ಕ್ರಾಂತಿ ಆರಂಭಿಸಿದ ಕೀರ್ತಿ ಹೆಗಡೆಯವರಿಗೆ ಸಲ್ಲುತ್ತದೆ. ಇಂದು ಭಾರತಕ್ಕೆ ಅತಿ ಹೆಚ್ಚಿನ ವೈದ್ಯರನ್ನು ನೀಡುವ ಶಕ್ತಿ ನಮ್ಮ ರಾಜ್ಯಕ್ಕೆ ತುಂಬಿದ್ದು ಹೆಗಡೆಯವರು ಎಂದು ಸ್ಮರಿಸಿಕೊಂಡರು.
ರಾಮಕೃಷ್ಣ ಹೆಗಡೆಯವರ ಹೆಸರನ್ನು ಚಿರಸ್ಥಾಯಿಗೊಳಿಸಲು ರಾಜ್ಯ ಸರ್ಕಾರ ಅವರ ಹೆಸರಿನಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಅತ್ಯುತ್ತಮ ಗ್ರಾಮ ಪಂಚಾಯಿತಿ ಪ್ರಶಸ್ತಿ ಸ್ಥಾಪಿಸಲಾಗುವುದು ಹಾಗೂ ಉತ್ತರ ಕನ್ನಡದಲ್ಲಿ ಕಟ್ಟಲಾಗುತ್ತಿರುವ ನೂತನ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ಅವರ ಹೆಸರಿಡಲಾಗುವುದು ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರಿನಲ್ಲಿ ನೂತನವಾಗಿ ಅಭಿವೃದ್ಧಿಪಡಿಸುತ್ತಿರುವ ಶಿವರಾಮ ಕಾರಂತ ಲೇಔಟ್ ನ ಮುಖ್ಯ ರಸ್ತೆಗೆ ಹೆಗಡೆಯವರ ಹೆಸರಿಡಲಾಗುವುದು ಎಂದು ಹೇಳಿದರು.
ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಷಿಯವರು ಮಾತನಾಡಿ ಹೆಗಡೆಯವರು ಒಬ್ಬ ಶ್ರೇಷ್ಟ ಸಾಮಾಜಿಕ ಅಭಿಯಂತರರಾಗಿದ್ದರು, ರಾಜಕಾರಣದಲ್ಲಿ ಅವರೊಂದು ಅದ್ಭುತ ವ್ಯಕ್ತಿತ್ವವಾಗಿದ್ದರು, ಅವರ ಹೆಸರಿನಲ್ಲಿ ರಾಜ್ಯ ಸರ್ಕಾರ ಯಾವುದಾದರು ಯೋಜನೆಗಳನ್ನು ಜಾರಿಗೆ ತರಲಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಮಾತನಾಡಿ ರಾಮಕೃಷ್ಣ ಹೆಗಡೆಯವರ ಹೆಸರಿನಲ್ಲಿ ರಾಮ ಹಾಗೂ ಕೃಷ್ಣನ ಹೆಸರಿದೆ, ಅವರಲ್ಲಿ ಜನ ಸಾಮಸಾಮಾನ್ಯರಿಗಾಗಿ ಮಿಡಿಯುವ ರಾಮನಂತ ಹೃದಯ ಹಾಗೂ ಕೃಷ್ಣನಂತ ರಾಜಕೀಯ ಕೌಶಲ್ಯವಿತ್ತು, ರಾಜಕೀಯ ಪಕ್ಷಗಳು ಪಕ್ಷಭೇದ ಮರೆತು ಎಲ್ಲರೂ ಪ್ರೀತಿಸುವ ವ್ಯಕ್ತಿತ್ವ ಅವರದ್ದಾಗಿತ್ತು, ಯುವ ರಾಜಕಾರಣಿಗಳು ಅವರ ಕುರಿತ ಪುಸ್ತಕಗಳನ್ನು ಓದಬೇಕು ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ ಹೆಗಡೆಯವರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡು, ರಾಜಕಾರಣದಲ್ಲಿ ಹೆಗಡೆಯವರು ಉತ್ತರದಾಯಿತ್ವ ರಾಜಕಾರಣಕ್ಕೆ ಮಾದರಿಯಾಗಿದ್ದರು, ಅವರು ಬೆಳೆಸಿದಅಂದಿನ ಯುವ ರಾಜಕಾರಣಿಗಳಲ್ಲಿ ನಾನು ಸಹ ಒಬ್ಬ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಹೆಗಡೆಯವರು ಅಂದಿನ ಕಾಲದಲ್ಲಿ ಮಾದರಿ ಯೋಜನೆಗಳನ್ನು ತರುವ ಮೂಲಕ ರಾಷ್ಟ್ರದ ಗಮನವನ್ನು ಸೆಳೆದಿದ್ದರು, ಅವರಿಗೆ ಪ್ರದಾನಮಂತ್ರಿಯಾಗುವಷ್ಟು ಯೋಗ್ಯತೆ ಇತ್ತು ಆದರೆ ಕಾಲ ಕೂಡಿ ಬರಲಿಲ್ಲ, ಅವರೊಬ್ಬ ಅತ್ಯಂತ ಸೂಕ್ಷ್ಮ ಹಾಗೂ ಪ್ರಮಾಣಿಕ ರಾಜಕಾರಣಿಯಾಗಿದ್ದರು ಎಂದು ಸ್ಮರಿಸಿದರು.
ರಾಮಕೃಷ್ಣ ಹೆಗಡೆಯವರ ಮಗಳು ಶ್ರೀಮತಿ ಮಮತಾ ನಿಚ್ಚಾನಿಯವರು ಸ್ವಾಗತಿಸಿದರು, ಮೊಮ್ಮಕ್ಕಳಾದ ಕಲ್ಯಾಣಿ ಹೆಗಡೆ ಹಾಗೂ ಶಶಿಭೂಷಣ ನಿರೂಪಣೆ ಮಾಡಿದ್ದು ಮತ್ತು ಮನೆಯ ಸಂಬಂಧಿಗಳು ವೇದಿಕೆಯ ಇತರೆ ಜವಬ್ಧಾರಿಗಳನ್ನು ನಿರ್ವಹಿಸಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಸಚಿವರಾದ ಬಸವರಾಜ ರಾಯರೆಡ್ಡಿ, ಜನ್ಮ ಶತಮಾನೋತ್ಸವ ಸಮಿತಿ ಅಧ್ಯಕ್ಷ ಆರ್. ವಿ ದೇಶಪಾಂಡೆ, ಮಾಜಿ ಸಂಸದ ಬಿ ಎಲ್ ಶಂಕರ್, ರಾಷ್ಟ್ರೀಯ ನವನಿರ್ಮಾಣ ವೇದಿಕೆಯ ಅಧ್ಯಕ್ಷೆ, ರಾಮಕೃಷ್ಣ ಹೆಗಡೆ ಅವರ ಪುತ್ರಿ ಮಮತಾ ನಿಚಾನಿ, ಡಾ ಎಂ ಪಿ ನಾಡಗೌಡ, ಟಿ ಪ್ರಭಾಕರ್, ಹೆಗಡೆಯವರ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.
