ಸಮಗ್ರ ಸುದ್ದಿ

ಸೆಪ್ಟೆಂಬರ್‌ ಮೊದಲ ವಾರದೊಳಗಾಗಿ ಕೇಂದ್ರಕ್ಕೆ ಬರ ವರದಿ ಸಲ್ಲಿಕೆ- ಡಿಸಿಎಂ ಡಾ.ಜಿ.ಪರಮೇಶ್ವರ್

Share

ಮೈಸೂರು:ರಾಜ್ಯದಲ್ಲಿ 101 ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದ್ದೇವೆ. ಇನ್ನೂ 15 ದಿನಗಳಿಗೆ ಪರಿಶೀಲನೆ ಮಾಡುತ್ತೇವೆ. ಆ ಬಳಿಕ ಕೆಲವು ತಾಲೂಕುಗಳು ಬರಪೀಡಿತ ಪ್ರದೇಶದ ವರ್ಗಕ್ಕೆ ಬರುವ ಸಾಧ್ಯತೆ ಇರುತ್ತದೆ. ಅವುಗಳ ಆಧಾರದ ಮೇಲೆ ಮತ್ತೆ ಘೋಷಣೆ ಮಾಡುತ್ತೇವೆ ಎಂದು ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ. ಜಿ.ಪರಮೇಶ್ವರ ಅವರು ತಿಳಿಸಿದರು.

ಅವರು ಇಂದು ಮೈಸೂರಿನಲ್ಲಿ ಕಾಂಗ್ರೆಸ್ ಮುಖಂಡರ ನಿವಾಸಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ಈ ತಿಂಗಳ ಕೊನೆಗೆ ಅಥವಾ ಸೆಪ್ಟೆಂಬರ್‌ ಮೊದಲ ವಾರದಲ್ಲಿ ಕೇಂದ್ರಕ್ಕೆ ಬರ ವರದಿಯನ್ನು ಸಲ್ಲಿಸುತ್ತೇವೆ. ಬೆಳೆ ನಷ್ಟವನ್ನು ಅಂದಾಜು ಮಾಡಲಾಗುತ್ತಿದ್ದು, ಅದರ ಆಧಾರದ ಮೇಲೆ ಮೊಮೊರಾಂಡಮ್‌ ಅನ್ನು ಸಿದ್ಧಪಡಿಸುತ್ತೇವೆ. ಆ ಬಳಿಕ ಕೇಂದ್ರದಿಂದ ತಂಡಗಳು ಬಂದು ರಾಜ್ಯದಲ್ಲಿ ಸಮೀಕ್ಷೆ ನಡೆಸುತ್ತಾರೆ. ನಂತರ ಬರ ಪರಿಹಾರ ಬಿಡುಗಡೆಯಾಗುತ್ತದೆ ಎಂದು ಮಾಹಿತಿ ನೀಡಿದರು.

ಮುಂದುವರೆದು, ರೈತರಿಗೆ ಎಕರೆಗೆ ಏನು ಪರಿಹಾರ ಕೊಡಬೇಕು ಎಂಬ ಬಗ್ಗೆ ನಿರ್ಧಾರ ಮಾಡುತ್ತೇವೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಗುಳೆ ತಪ್ಪಿಸಲು ಕಾಮಗಾರಿಗಳನ್ನು ಕೈಗೊಳ್ಳುವುದು ನಮ್ಮ ಮೊದಲ ಆದ್ಯತೆ. ಈ ವಿಚಾರವಾಗಿ ಈಗಾಗಲೇ ಕ್ರಮಕೈಗೊಳ್ಳುತ್ತಿದ್ದೇವೆ. ರಾಜ್ಯದಲ್ಲಿ 2023ರಲ್ಲಿ ಉಂಟಾದ ಬರಗಾಲದಿಂದ ₹39,000 ಕೋಟಿ ನಷ್ಟವಾಗಿತ್ತು. ₹18,000 ಕೋಟಿ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ನಾವು ದೆಹಲಿಯಲ್ಲಿ ಹೋಗಿ ಪ್ರತಿಭಟನೆ ನಡೆಸಿ, ಸುಪ್ರೀಂ ಕೋರ್ಟ್ ನಿರ್ದೇಶನದ ಬಳಿಕ ₹3,500 ಕೋಟಿ ಬಿಡುಗಡೆ ಮಾಡಿದರು. ಈ ಬಾರಿ ಹಾಗಾಗಬಾರದು ಎಂದರು.

ಈ ವರ್ಷ ನಾನು ಕೇಂದ್ರಕ್ಕೆ ಮನವಿಯನ್ನು ಮಾಡಿದ್ದೇನೆ. ಕಳೆದ ಬಾರಿಯ ಘಟನೆಗಳು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಬೇಕು. ನಾವು ಮೆಮೊರಾಂಡಮ್‌ ಏನು ಸಲ್ಲಿಸುತ್ತೇವೆಯೋ ಅದನ್ನು ಬರ ಘೋಷಣೆಗಿರುವ ಮಾನದಂಡಗಳಂತೆ ಮಾಡಿದ್ದೇವೆ. ಅದನ್ನು ಪರಿಶೀಲಿಸಿ, ನಮಗೆ ಪರಿಹಾರ ಹಣವನ್ನು ಕೊಡಲಿ. ಎಸ್‌ಡಿಆರ್‌ಎಫ್‌ನಲ್ಲಿ ₹1,200 ಕೋಟಿ ಹಣವನ್ನು ಕೊಡಲು ತೀರ್ಮಾನ ಮಾಡಿದ್ದಾರೆ. ಇನ್ನೂ ಅದನ್ನು ನಮಗೆ ಕೊಡಬೇಕು. ನಮ್ಮದು 25% ಹಾಗೂ ಕೇಂದ್ರದಿಂದ 75% ಇರುತ್ತೆ. 1,200 ಕೋಟಿ ಹಣವನ್ನು ತಕ್ಷಣ ಬಿಡುಗಡೆ ಮಾಡಿ ಎಂದು ಅವರಿಗೆ ಹೇಳಿದ್ದೇವೆ. ಅದು ಬಿಡುಗಡೆಯಾದರೆ ನಾವು ನಮ್ಮ ರೈತರಿಗೆ ಪರಿಹಾರ ಕೊಡಲು ಅನುಕೂಲವಾಗುತ್ತದೆ. ಒಂದು ವಾರ ಅಥವಾ 10 ದಿನಗೊಳಗಾಗಿ ಹಣವನ್ನು ರೈತರಿಗೆ ಕೊಟ್ಟುಬಿಡುತ್ತೇವೆ ಎಂದು ವಿವರಿಸಿದರು.

ನಾಗೇಂದ್ರ ಅವರು ರಾಜೀನಾಮೆ ನೀಡಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾಗೇಂದ್ರ ಅವರು ಯಾವುದೇ ಅಪರಾಧವನ್ನು ಮಾಡಿಲ್ಲ. ಆದರೂ, ಅವರನ್ನು ಬಿಜೆಪಿಯವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ರಾಜಕೀಯ ಮಾಡಿದ್ದಾರೆ. ನಾಗೇಂದ್ರ ಅವರು ಪಕ್ಷದಲ್ಲಿ ಶಿಸ್ತಿನ ಸಿಪಾಯಿಯಾಗಿ ಸರ್ಕಾರಕ್ಕೆ ಮುಜುಗರ ಆಗಬಾರದು ಎಂಬ ದೃಷ್ಟಿಯಿಂದ ರಾಜೀನಾಮೆ ನೀಡಿದ್ದಾರೆ. ಅವರು ರಾಜೀನಾಮೆ ನೀಡುವ ಅಗತ್ಯ ಇರಲಿಲ್ಲ. ಸಿಬಿಐ, ಇಡಿ ಚಾರ್ಜ್‌ಶೀಟ್‌ನಲ್ಲಿ ಅವರ ಹೆಸರು ಇರಲಿಲ್ಲ. ನಾನು ಗೃಹ ಸಚಿವನಾಗಿದ್ದ ಕಾರಣ ಆ ಬಗ್ಗೆ ನನಗೆ ಮಾಹಿತಿ ಇದೆ. ಸುಮ್ಮನೆ ಅನಾವಶ್ಯಕವಾಗಿ ರಾಜಕಾರಣ ಮಾಡಿ ಅವರನ್ನು ರಾಜೀನಾಮೆ ಕೊಡುವಂತೆ ಮಾಡಿದ್ದಾರೆ. ನಾವು ಮುಂದಿನ ದಿನಗಳಲ್ಲಿ ವಸ್ತುಸ್ಥಿತಿಯ ಬಗ್ಗೆ ಜನಸಮುದಾಯಕ್ಕೆ ತಿಳಿಸುತ್ತೇವೆ ಎಂದರು.

ಮುಂದುವರೆದು, ಸದನದಲ್ಲೂ ಕಾನೂನಾತ್ಮಕವಾಗಿ ಪ್ರಶ್ನೆಗಳನ್ನು ಕೇಳಿ, ನಾವು ಉತ್ತರವನ್ನು ನೀಡುತ್ತೇವೆ ಎಂದು ವಿಪಕ್ಷಕ್ಕೆ ಹೇಳಿದ್ದೆವು. ನಿಮ್ಮಲ್ಲಿ ದಾಖಲೆಗಳು ಇದ್ದರೆ ಅದನ್ನು ಸದನಕ್ಕೆ ಹೇಳಿ, ಅದಕ್ಕೆ ಉತ್ತರ ನೀಡಲು ನಾವು ಸಮರ್ಥರಿದ್ದೇವೆ ಎಂದು ಹೇಳಿದ್ದೆವು. ಅವರಲ್ಲಿ ದಾಖಲೆಗಳೇ ಇಲ್ಲ, ಸುಖಾಸುಮ್ಮನೆ ರಾಜಕಾರಣ ಮಾಡಿದ್ದಾರೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೌನವಾಗಿದ್ದಾರೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಅವರೆಲ್ಲಿ ಮೌನವಾಗಿದ್ದಾರೆ. ಅವರು ಸದನಕ್ಕೆ ಬಂದಿದ್ದರು. ಸದನದಲ್ಲಿ ಉಪಸ್ಥಿತರಿದ್ದರು. ಒಂದೆರಡು ತಿಂಗಳು ಆರಾಮವಾಗಿ ವಿಶ್ರಾಂತಿ ತೆಗೆದುಕೊಂಡು ಮತ್ತೆ ಚಟುವಟಿಕೆಯನ್ನು ಶುರು ಮಾಡುತ್ತಾರೆ ಎಂದರು.


Share

You cannot copy content of this page