ಬೆಂಗಳೂರು:ಪ್ರತಿಭಾವಂತ ವಿದ್ಯಾರ್ಥಿಗಳು- ಯುವಕರೇ ನಮ್ಮ ಬೆಂಗಳೂರಿನ ಹೆಮ್ಮೆ-ಕಿರೀಟ, ರಾಜ್ಯದ ಹಾಗೂ ದೇಶದ ಭವಿಷ್ಯ. ಇಡೀ ಬೆಂಗಳೂರಿನ ಜನತೆಯ ಪರವಾಗಿ ಅವರ ಪ್ರತಿಭೆಯನ್ನು ಸಂಭ್ರಮಿಸುವುದು ನಮ್ಮ ಕರ್ತವ್ಯ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಪ್ರಶಂಸಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಬೆಂಗಳೂರು ಜಿಲ್ಲಾ ಪಂಚಾಯತ್ ವತಿಯಿಂದ ಶನಿವಾರ ಟೌನ್ ಹಾಲ್ನಲ್ಲಿ ಪೌರ ಸನ್ಮಾನ–‘ನಮ್ಮೂರು ಹೆಮ್ಮೆ’ ಕಾರ್ಯಕ್ರಮ ಆಯೋಜಿಸಿ ಶಾಲಾ ಮತ್ತು ಪದವಿ ಪೂರ್ವ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ 181 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡರು, “ಒಬ್ಬ ವಿದ್ಯಾರ್ಥಿ 99ಕ್ಕೂ ಹೆಚ್ಚು ಅಂಕಗಳನ್ನು ಪಡೆಯುವುದು ಅಷ್ಟು ಸುಲಭದ ಕೆಲಸವಲ್ಲ. ಆತ ಈ ಸಾಧನೆಯ ಶಿಖರ ಏರಲು ಸಾಕಷ್ಟು ಪರಿಶ್ರಮಪಟ್ಟಿರುತ್ತಾನೆ. ಪರಿಶ್ರಮವನ್ನು ಮೈಗೂಡಿಸಿಕೊಂಡವರಿಂದ ಮಾತ್ರ ಇಂತಹ ಮೈಲುಗಲ್ಲು ತಲುಪುವುದು ಸಾಧ್ಯ. ಅಂತಹ ಪ್ರತಿಭೆಯನ್ನು ಸಂಭ್ರಮಿಸುವುದು ನಮ್ಮ ಕರ್ತವ್ಯ. ನಾವು ಸಾಧಿಸದೇ ಇದ್ದರೂ, ಅವರ ಸಾಧನೆಯನ್ನು ನಮ್ಮ ಸಾಧನೆಯೆಂಬಂತೆ ಸಂಭ್ರಮಿಸುವುದು ಹೆಮ್ಮೆಯ ವಿಷಯ” ಎಂದು ಅಭಿಪ್ರಾಯಪಟ್ಟರು.
ತಮ್ಮ ಅನುಭವವನ್ನು ಹಂಚಿಕೊಂಡ ಸಚಿವರು, ತಮ್ಮ ಗ್ರಾಮೀಣ ಕ್ಷೇತ್ರದಲ್ಲಿ ಹೊಸದಾಗಿ ಆರಂಭವಾದ ಒಂದು ಪ್ರೌಢಶಾಲೆಗೆ ಕಟ್ಟಡವೂ ಇಲ್ಲದೆ, ಶಾಲಾ ಕೊಠಡಿಯೂ ಇಲ್ಲದೆ, ಕೇವಲ ಒಬ್ಬ ಶಿಕ್ಷಕರಿದ್ದರೂ ಶೇ.100 ಫಲಿತಾಂಶ ಬಂದಿತ್ತು. ಆದರೆ ಎಲ್ಲ ಮೂಲಸೌಕರ್ಯಗಳಿದ್ದ ಮತ್ತೊಂದು ಶಾಲೆಯಲ್ಲಿ ಶೇ.35ರಿಂದ 40ರಷ್ಟು ಮಾತ್ರ ಫಲಿತಾಂಶ ಬಂದಿತ್ತು. ಹೀಗಾಗಿ ನಮಗೆ ಏನೆಲ್ಲಾ ಸವಲತ್ತು ಇಲ್ಲ ಎಂದು ಕೊರಗುವುದಕ್ಕಿಂತ, ಇದ್ದ ಸವಲತ್ತಿನಲ್ಲೇ ಸಾಧಿಸಿ ತೋರಿಸಬೇಕು. ಕೊಟ್ಟ ಕುದುರೆಯನ್ನು ಏರದವನು ಶೂರನೂ ಅಲ್ಲ, ವೀರನೂ ಅಲ್ಲ. ಜೀವನದಲ್ಲಿ ನಮ್ಮ ಪರಿಶ್ರಮವಿದ್ದಲ್ಲಿ, ನಮ್ಮ ಗುರಿಗೆ ಯಾವುದೇ ಅಡ್ಡಗೋಡೆಯೂ ನಿಲ್ಲಲು ಸಾಧ್ಯವಿಲ್ಲ ಉದಾಹರಿಸಿದರು.
ಸೌಲಭ್ಯಗಳ ಕೊರತೆಯನ್ನು ಸಾಧನೆಗೆ ಅಡ್ಡಿಯಾಗಲು ಬಿಡಬಾರದು. ಎಲ್ಲಿ ಛಲ ಮತ್ತು ಪರಿಶ್ರಮ ಇರುತ್ತದೆಯೋ ಅಲ್ಲಿ ಯಾವ ಸವಾಲೂ ಅಡ್ಡಿಯಾಗುವುದಿಲ್ಲ. ಗುರಿಯಿಟ್ಟು ಮುನ್ನಡೆದರೆ ಏನನ್ನಾದರೂ ಸಾಧಿಸಬಹುದು. ನಿಮ್ಮ ಶ್ರದ್ಧೆ ಮತ್ತು ಪರಿಶ್ರಮಕ್ಕೆ ಯಾವ ಗೋಡೆಯೂ ಅಡ್ಡಿಯಾಗಲು ಸಾಧ್ಯವಿಲ್ಲ ಎಂದು ಹೇಳಿದರು.
ನನ್ನ ಕ್ಷೇತ್ರದಲ್ಲೂ ಪ್ರತಿವರ್ಷ ನೂರಾರು ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಸಿದ್ದೇನೆ. ಅಪಾರ್ಟ್ಮೆಂಟ್ ಮಾಲೀಕರ ಮಕ್ಕಳಿಗಿಂತ, ಅಲ್ಲಿ ಕೆಲಸ ಮಾಡುವವರ ಮಕ್ಕಳು ಹೆಚ್ಚು ಅಂಕಗಳನ್ನು ಪಡೆದಿರುವ, ಪಾನಿಪುರಿ ಅಂಗಡಿಯವರ ಮಗ 625ಕ್ಕೆ 625 ಅಂಕಗಳನ್ನು ಪಡೆದಿರುವ ನಿದರ್ಶನಗಳನ್ನು ಕಂಡಿದ್ದೇನೆ. ಸಾಕಷ್ಟು ಮಿತಿಗಳ ನಡುವೆಯೂ ಆ ಮಕ್ಕಳ ಸಾಧನೆ ಅಪಾರ. ಓದಿನಲ್ಲಿ ಆಸಕ್ತಿ ಹೊಂದಿರುವ ಮಕ್ಕಳಿಗೆ ಶಾಲೆ ಮುಖ್ಯವಲ್ಲ; ಪರಿಶ್ರಮ ಮುಖ್ಯ. ಪರಿಶ್ರಮವೇ ಯಶಸ್ಸಿನ ಕೀಲಿ ಎಂದರು.
ಇದು ಪುರಭವನ, ನಗರದ ಐತಿಹಾಸಿಕ ಸಂಕೇತ. ಇಲ್ಲಿ ಪೌರ ಸನ್ಮಾನವನ್ನು ನಡೆಸಿದರೆ ವಿದ್ಯಾರ್ಥಿಗಳಿಗೆ ಉತ್ತಮ ಪ್ರೋತ್ಸಾಹವಾಗಲಿದೆ, ಇತರರಿಗೂ ಸ್ಫೂರ್ತಿಯಾಗಲಿದೆ ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಇಲ್ಲಿ ನಡೆಸುತ್ತಿದ್ದೇವೆ ಎಂದರು.
ಅಲ್ಲದೆ, ಪ್ರತಿಭೆ ಎಂದರೆ ಕೇವಲ ಅಂಕಗಳು ಅಥವಾ ಶೈಕ್ಷಣಿಕ ಸಾಧನೆ ಮಾತ್ರವಲ್ಲ. ಕ್ರೀಡೆಯಲ್ಲಿ ಇರಲಿ, ಕಲೆಯಲ್ಲಿ ಇರಲಿ, ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ ಅಥವಾ ಯಾವುದೇ ವೃತ್ತಿಪರ ಕ್ಷೇತ್ರದಲ್ಲಿರಲಿ—ಪ್ರತಿಯೊಂದು ಕ್ಷೇತ್ರದ ಪ್ರತಿಭೆ ಮತ್ತು ಕೌಶಲ್ಯವೂ ಸಮಾನವಾಗಿ ಗೌರವಕ್ಕೆ ಅರ್ಹ. ಜೀವನದಲ್ಲಿ ನೀವು ಏನಾಗುತ್ತೀರಿ ಎಂಬುದಕ್ಕಿಂತ, ನೀವು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಎಷ್ಟು ಶ್ರದ್ಧೆ, ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಕೆಲಸ ಮಾಡುತ್ತೀರಿ ಎಂಬುದೇ ಮುಖ್ಯ.
ಪ್ರತಿಯೊಬ್ಬ ವೃತ್ತಿಪರನೂ, ಪ್ರತಿಯೊಬ್ಬ ಸಾಧಕನೂ ತನ್ನ ಕ್ಷೇತ್ರದಲ್ಲಿ ಸಮಾನ ಗೌರವಕ್ಕೆ ಅರ್ಹ. ಯಾವ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡರೂ ಶ್ರದ್ಧೆ ಮತ್ತು ಪರಿಶ್ರಮ ಇದ್ದರೆ ಸಾಧನೆ ಸಾಧ್ಯ. ಆದ್ದರಿಂದ ನಮ್ಮ ಯುವಕರು ತಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು, ಅದರಲ್ಲಿ ಅತ್ಯುತ್ತಮವಾಗಿ ಬೆಳೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪ್ರತಿಭಾವಂತ 181 ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ
ನಮ್ಮೂರ ಹೆಮ್ಮೆ ಕಾರ್ಯಕ್ರಮದಲ್ಲಿ 106 ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು, 45 ಪಿಯುಸಿ ವಿದ್ಯಾರ್ಥಿಗಳು ಹಾಗೂ ಜಿಬಿಎ ಶಾಲೆಗಳಲ್ಲಿ ವ್ಯಾಸಂಗ ಮಾಡಿದ 30 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು181 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಯುವ ಸಾಧಕರಿಗೆ ಪ್ರಮಾಣಪತ್ರ, ಪದಕ, ನೆನಪಿನ ಕಾಣಿಕೆ, ಸ್ಮಾರ್ಟ್ ವಾಚ್, ಬ್ಯಾಗ್, ಶಾಲು ಮತ್ತು ಕುಡಿಯುವ ನೀರಿನ ಬಾಟಲಿಗಳನ್ನು ನೀಡಿ ಗೌರವಿಸಲಾಯಿತು.
ಅಲ್ಲದೆ, ಎಸ್ಎಸ್ಎಲ್ಸಿಯ ಮೊದಲ ಐದು ಅತ್ಯುತ್ತಮ ಸಾಧಕರು ಮತ್ತು ಪಿಯುಸಿಯ ಮೂರು ಅಗ್ರ ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ಟ್ಯಾಬ್ಲೆಟ್ ಗಳನ್ನು ವಿತರಿಸಲಾಯಿತು.
