ಬೆಂಗಳೂರು: ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಅರಿವು ಕೇಂದ್ರ (ಗ್ರಂಥಾಲಯ)ಗಳ ಮೇಲ್ವಿಚಾರಕರಿಗೆ 19,200 ರೂ. ಕನಿಷ್ಠ ವೇತನ ಖಾತ್ರಿ ಪಡಿಸಲು ಕ್ರಮ ವಹಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಸುಮಾರು 5420ಕ್ಕೂ ಅಧಿಕ ಗ್ರಂಥಾಲಯ ಮೇಲ್ವಿಚಾರಕರಿದ್ದು, ಇವರಿಗೆ ಈ ಹಿಂದೆ 12 ಸಾವಿರ ರೂ. ಗೌರವ ಧನ ನೀಡಲಾಗುತ್ತಿತ್ತು, ಕಾರ್ಮಿಕ ಇಲಾಖೆ ಕನಿಷ್ಠ ವೇತನ ಪರಿಷ್ಕರಿಸಿ ಅಧಿಸೂಚನೆ ಹೊರಡಿಸಿದ ತರುವಾಯ ಇವರ ಗೌರವಧನ 19,201ರೂ. ಆಗಿದೆ ಎಂದು ತಿಳಿಸಿದ್ದಾರೆ.
ಗ್ರಂಥಾಲಯ ಮೇಲ್ವಿಚಾರಕರಿಗೆ ನೀಡುವ ಮಾಸಿಕ 19201 ರೂ.ಗಳ ಪೈಕಿ 12,000ರೂ.ಗಳನ್ನು ಸರ್ಕಾರದಿಂದ ಪಾವತಿಸಲಾಗುತ್ತಿದ್ದು, ಉಳಿಕೆ ಮೊತ್ತ 7201ರೂ.ಗಳನ್ನು ಇನ್ನು ಮುಂದೆ ರಾಜ್ಯಮಟ್ಟದಲ್ಲಿ ಸಂಗ್ರಹಿಸಲಾಗುವ ಗ್ರಂಥಾಲಯ ಉಪಕರ (ಲೈಬ್ರೆರಿ ಸೆಸ್)ದಿಂದ ಪಾವತಿಸಲು ತಾವು ಅನುಮೋದನೆ ನೀಡಿರುವುದಾಗಿ ತಿಳಿಸಿದ್ದಾರೆ.
ಈ ನಿರ್ಧಾರದಿಂದಾಗಿ ಇನ್ನು ಮುಂದೆ ಅರಿವು ಕೇಂದ್ರದ ಪ್ರತಿ ಗ್ರಂಥಾಲಯ ಮೇಲ್ವಿಚಾರಕರಿಗೆ ಮಾಸಿಕ 19201ರೂ. ಕನಿಷ್ಠ ಗೌರವಧನ ಪಾವತಿಯನ್ನು ಖಚಿತಪಡಿಸುತ್ತದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಅರಿವು ಕೇಂದ್ರಗಳಿಗೆ ಕಿಯೋನಿಕ್ಸ್ ಹೊಸದಾಗಿ ಹೊರತಂದಿರುವ ಎ.ಐ. ಆಧಾರಿತ ಕಂಪ್ಯೂಟರ್ ಗಳನ್ನು ನೀಡುವುದಾಗಿ ತಿಳಿಸಿದೆ. ಇದರಿಂದ ವಿದ್ಯಾರ್ಥಿಗಳ, ಗ್ರಾಮೀಣ ಯುವಜನರ ಕಲಿಕೆಗೆ ಅನುಕೂಲವಾಗಲಿದೆ ಎಂದರು.
ಗ್ರಾಮೀಣ ಜನರಲ್ಲಿ ಓದುವ ಹವ್ಯಾಸ ಹೆಚ್ಚಿಸಲು ಗ್ರಂಥಾಲಯಗಳಿಗೆ ಮೇಜು, ಕುರ್ಚಿ ಮೊದಲಾದ ಮೂಲಸೌಕರ್ಯ ಒದಗಿಸುವುದರ ಜೊತೆಗೆ ಉತ್ತಮ ಪುಸ್ತಕ ಸರಬರಾಜು ಮಾಡಲಾಗುತ್ತಿದೆ. ಜೊತೆಗೆ ಡಿಜಿಟಲ್ ಗ್ರಂಥಾಲಯಗಳ ಅಭಿವೃದ್ಧಿಗೂ ಕ್ರಮ ವಹಿಸಲಾಗಿದೆ ಎಂದರು.
ಅರಿವು ಕೇಂದ್ರಗಳಲ್ಲಿ ಸ್ಥಳೀಯ ಉತ್ಸಾಹಿ ಯುವಜನರಿಗೆ ವಿವಿಧ ವಿದೇಶೀ ಭಾಷೆಗಳನ್ನು ಮಾತನಾಡುವ ತರಬೇತಿ ಶಿಬಿರಗಳನ್ನೂ ಆಯೋಜಿಸುವ ಮೂಲಕ ಅವರ ಉದ್ಯೋಗಾರ್ಹತೆ ಹೆಚ್ಚಿಸಲು ಸೂಚಿಸಲಾಗಿದೆ ಎಂದೂ ಈಶ್ವರ ಖಂಡ್ರೆ ತಿಳಿಸಿದರು.
ವಾರಾಂತ್ಯದಲ್ಲಿ ಕಾರ್ಯನಿರ್ವಹಿಸುವ ಶಾಖಾ ಗ್ರಂಥಾಲಯ
ಯಾವ ಗ್ರಾಮಗಳಲ್ಲಿ ಗ್ರಂಥಾಲಯ ಇಲ್ಲವೋ ಅಲ್ಲಿ ಶಾಖಾ ಗ್ರಂಥಾಲಯ (ಬ್ರಾಂಚ್ ಲೈಬ್ರರಿ) ತೆರೆಯಲು ಕ್ರಮ ವಹಿಸಲಾಗಿದೆ. ವಾರದಲ್ಲಿ ಎರಡು ದಿನ ಅಂದರೆ ಶನಿವಾರ ಮತ್ತು ಭಾನುವಾರ ಈ ಗ್ರಂಥಾಲಯಗಳು ಕಾರ್ಯನಿರ್ವಹಿಸಲಿದ್ದು, ಇಲ್ಲಿನ ಗ್ರಂಥಪಾಲಕರಿಗೆ ಮಾಸಿಕ 2000ದಿಂದ 2500 ಗೌರವಧನ ನೀಡಲಾಗುವುದು ಎಂದರು.
