ನವದೆಹಲಿ: ಗ್ರಾಮೀಣ ಭಾಗಕ್ಕೆ ನೀರು ಪೂರೈಸುವ ಜಲ ಮೂಲಗಳಾದ ಕೆರೆ, ಸರೋವರ, ನದಿಗಳ ನೀರು ತ್ಯಾಜ್ಯ ಸೇರ್ಪಡೆಯಿಂದ ಕಲುಷಿತಗೊಳ್ಳದಂತೆ ಹಾಗೂ ಒತ್ತುವರಿಯಾಗದಂತೆ ಸಂರಕ್ಷಿಸಲು ರಾಷ್ಟ್ರೀಯ ಯೋಜನೆ ರೂಪಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ 2 ದಿನಗಳ ಜಲಮೂಲಗಳ ಸುಸ್ಥಿರತೆ ಕುರಿತ ಶೃಂಗಸಭೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮಲ ತ್ಯಾಜ್ಯ, ಕೈಗಾರಿಕಾ ತ್ಯಾಜ್ಯ ಇತ್ಯಾದಿಯನ್ನು ಸಂಸ್ಕರಿಸಿ ಪ್ರತ್ಯೇಕ ಕೆರೆಗೆ ಹರಿಸಿ ಅದನ್ನು ಕೃಷಿಗೆ ಮಾತ್ರ ಬಳಸಲು ಹಾಗೂ ಕುಡಿಯುವ ನೀರು ಪೂರೈಸುವ ಜಲ ಮೂಲಗಳಿಗೆ ತ್ಯಾಜ್ಯ ಸೇರದಂತೆ ಕ್ರಮ ವಹಿಸಲು ರಾಷ್ಟ್ರೀಯ ಯೋಜನೆ ರೂಪಿಸುವ ಅಗತ್ಯ ಪ್ರತಿಪಾದಿಸಿದರು.
ಜಲ ಕಾಯಿದೆ ಇದ್ದಾಗ್ಯೂ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗಳನ್ನು ಸ್ಥಾಪಿಸಿದ್ದಾಗ್ಯೂ, ಹಲವು ಕೈಗಾರಿಕೆಗಳು ರಾಸಾಯನಿಕ ತ್ಯಾಜ್ಯವನ್ನು ಮೇಲ್ಮೈ ಜಲ ಮೂಲಗಳಾದ ಕೆರೆ, ಕಟ್ಟೆ, ಹಳ್ಳ, ನದಿಗಳಿಗೆ ಹರಿಸುತ್ತಿದ್ದು, ಇವುಗಳನ್ನು ಮುಚ್ಚಲು ಆದೇಶ ನೀಡಿದರೂ ತಡೆಯಾಜ್ಞೆ ತಂದು ಮತ್ತೆ ಕಾರ್ಯನಿರ್ವಹಿಸುತ್ತವೆ. ಹೀಗಾಗಿ, ದೇಶಾದ್ಯಂತ ಮೇಲ್ಮೈ ಜಲ ಸಂರಕ್ಷಣೆಗೆ ಕೇಂದ್ರ ಸರ್ಕಾರ ಕಠಿಣ ಕಾನೂನು ಜಾರಿಗೆ ತರುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಕರ್ನಾಟಕ ಭಾರತದ ಎರಡನೇ ಶುಷ್ಕ ಅಥವಾ ಬರಡು ಭೂಮಿಯ ರಾಜ್ಯವಾಗಿದೆಯ ರಾಜ್ಯದಲ್ಲಿ 31 ಜಿಲ್ಲೆ, 234 ಬ್ಲಾಕ್. 5989 ಗ್ರಾಮ ಪಂಚಾಯತಿ, 57,879 ವಸತಿ ಪ್ರದೇಶಗಳಿದ್ದು 26,589 ಹಳ್ಳಿಗಳಲ್ಲಿ 4ಕೋಟಿ 45 ಲಕ್ಷ ಜನರು ವಾಸಿಸುತ್ತಿದ್ದಾರೆ. ಇವರೆಲ್ಲರಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವುದು ದೊಡ್ಡ ಸವಾಲಾಗಿದೆ ಎಂದರು.
ಆದಾಗ್ಯೂ ರಾಜ್ಯ ಸರ್ಕಾರ ಶುದ್ಧ ಮತ್ತು ಶಾಶ್ವತ ಕುಡಿಯುವ ನೀರು ಪೂರೈಕೆಗೆ ಜಲ ಜೀವನ ಮಿಷನ್ ಅನುಷ್ಠಾನಕ್ಕೆ ಕ್ರಮ ವಹಿಸಿದ್ದು, ಈ ವರೆಗೆ 101.14 ಲಕ್ಷ ವಸತಿಗಳಿಗೆ ಅಂದರೆ ಶೇ.89.3ರಷ್ಟು ಮನೆಗಳಿಗೆ ಸಕ್ರಿಯ ಕುಡಿಯುವ ನೀರು ಸಂಪರ್ಕ ಕಲ್ಪಿಸಲಾಗಿದೆ ಎಂದರು.
ನಮ್ಮ ರಾಜ್ಯದ 13341 ಹಳ್ಳಿಗಳಲ್ಲಿ ಹರ್ ಘರ್ ಜಲ್ ವ್ಯವಸ್ಥೆ ಮಾಡಲಾಗಿದ್ದು, ನೀರಿನ ಗುಣಮಟ್ಟಕ್ಕೆ ಆದ್ಯತೆ ನೀಡಿದ್ದೇವೆ. ನೀರಿನ ಗುಣಮಟ್ಟ ಕಾಪಾಡಲು 1.51 ಲಕ್ಷ ಮಹಿಳೆಯರಿಗೆ ತರಬೇತಿ ನೀಡಿ, ಕ್ಷೇತ್ರೀಯ ಪರೀಕ್ಷಾ ಕಿಟ್ (FTK) ನೀಡಲಾಗಿದೆ. ಶುದ್ಧ ಕುಡಿಯುವ ನೀರು ಪೂರೈಸಲು ಮೂಲಭೂತ ಸೌಕರ್ಯ ನಿರ್ಮಾಣ ಅಷ್ಟೇ ಅಲ್ಲ. ಕಾರ್ಯನಿರ್ವಹಣೆ ಮತ್ತು ನಿರ್ವಹಣೆ ವ್ಯವಸ್ಥೆಯನ್ನೂ ಜಾರಿಗೆ ತಂದಿದ್ದೇವೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಜಲ ಬಜೆಂಟಿಂಗ್ ಮಾಡಿದ ಪ್ರಥಮ ರಾಜ್ಯ ಕರ್ನಾಟಕ:
ಇಡೀ ದೇಶದಲ್ಲಿ ವಾಟರ್ ಬಜೆಟಿಂಗ್ ಮಾಡಿದ ಪ್ರಥಮ ರಾಜ್ಯ ಕರ್ನಾಟಕವಾಗಿದೆ ಎಂದು ತಿಳಿಸಿದ ಈಶ್ವರ ಖಂಡ್ರೆ, 4565 ಗ್ರಾಮಗಳಲ್ಲಿ ಜಲ ಬಜೆಟಿಂಗ್ ಮಾಡಲಾಗಿದ್ದು, ಇದರಿಂದ ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿ ಲಭ್ಯವಿರುವ ನೀರಿನ ಪ್ರಮಾಣ ಮತ್ತು ಆ ಪ್ರದೇಶದ ನೀರಿನ ಬಳಕೆಯ ಬೇಡಿಕೆಯನ್ನು ಲೆಕ್ಕಹಾಕಿ ಸಮತೋಲಿತವಾಗಿ ನೀರು ಪೂರೈಕೆಗೆ ವೈಜ್ಞಾನಿಕ ಹಾಗೂ ವ್ಯವಸ್ಥಿತ ಯೋಜನೆ ರೂಪಿಸಲು ಸಹಕಾರಿಯಾಗಿದೆ ಎಂದರು.
ನಿರಂತರ ನೀರು ಪೂರೈಕೆಯಿಂದ ಜಲ, ವಿದ್ಯುತ್ ಉಳಿತಾಯ:
ಕರ್ನಾಟಕದ ಸುಮಾರು 268 ಹಳ್ಳಿಗಳಲ್ಲಿ ವಾರದ ಏಳೂ ದಿನ, ದಿನದ 24 ಗಂಟೆಯೂ ನಿರಂತರ ಕುಡಿಯುವ ನೀರು ಪೂರೈಕೆಯ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆ ಜಾರಿಯಿಂದ ಶೇ.7ರಷ್ಟು ಕುಡಿಯುವ ನೀರಿನ ಉಳಿತಾಯ ಆಗಿದೆ. ಜೊತೆಗೆ ಶೇ.12 ರಷ್ಟು ನೀರು ಪಂಪ್ ಮಾಡುವ ಅವಧಿಯ ವಿದ್ಯುತ್ ಉಳಿತಾಯವೂ ಆಗಿದೆ. ಜೊತೆಗೆ 268 ಗ್ರಾಮಗಳಲ್ಲಿ ಬಳಕೆ ಪ್ರಮಾಣಕ್ಕೆ ಅನುಗುಣವಾಗಿ (ವಾಲ್ಯುಮೆಟ್ರಿಕ್) ಬಿಲ್ಲಿಂಗ್ ವ್ಯವಸ್ಥೆ ಜಾರಿ ಮಾಡಿದ್ದು, ಇದರಿಂದ ಜನರು ಬಳಸುವ ನೀರಿನ ನಿಖರ ಪ್ರಮಾಣ ತಿಳಿಯಲು, ಅದಕ್ಕೆ ಅನುಗುಣವಾಗಿ ನೀರು ಪೂರೈಕೆ ಯೋಜನೆ ರೂಪಿಸಲು ಅನುಕೂಲ ಆಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಜಲ ಮಹತ್ವ ತಿಳಿಸಲು ಸಾಂಪ್ರದಾಯಿಕ ಉತ್ಸವ, ಬಾಗಿನ:
ರಾಜ್ಯದ ಜನರಲ್ಲಿ ನೀರಿನ ಹಾಗೂ ನದಿ, ಕೆರೆಗಳ ಮಹತ್ವ ತಿಳಿಸಲು ಸಾಂಪ್ರದಾಯಿಕ ಪದ್ಧತಿಗಳನ್ನು ಬಳಿಸಿಕೊಂಡು 16 ಉತ್ಸವಗಳನ್ನು ಆಚರಿಸಲಾಗುತ್ತಿದ್ದು ಜಾಗೃತಿ ಮೂಡಿಸಲಾಗುತ್ತಿದೆ. ಇದರಲ್ಲಿ ಜಲಾಶಯಗಳು ತುಂಬಿದಾಗ, ಕೆರೆಗಳು ತುಂಬಿ ಹರಿದಾಗ ಬಾಗಿನ ಸಮರ್ಪಣೆ ಮಾಡಲಾಗುತ್ತದೆ.
ಜಲಪಾತಗಳು ಧುಮ್ಮಿಕ್ಕಿ ಹರಿಯುವಾಗ ವಿಜಯಪುರ, ಮಂಡ್ಯ, ಚಾಮರಾಜನಗರಗಳಲ್ಲಿ ಜಲಪಾತೋತ್ಸವ ಆಚರಿಸಲಾಗುತ್ತದೆ, ಕೊಡಗಿನ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವದ ದಿನ ತುಲಾ ಸಂಕ್ರಮಣ ಪೂಜೆ, ಮೈಸೂರಿನ ಟಿ. ನರಸೀಪುರದಲ್ಲಿ ತ್ರಿವೇಣಿ ಸಂಗಮದ ಕುಂಭಮೇಳ, ಶಿವಮೊಗ್ಗದಲ್ಲಿ ತುಂಗಾ ತೆಪ್ಪೋತ್ಸವ ಹೀಗೆ ವಿವಿಧ ಉತ್ಸವಗಳನ್ನು ಆಯೋಜಿಸಿ, ಸ್ಥಳೀಯ ರೈತರು, ಸ್ಥಳೀಯ ಜನರು ಹಾಗೂ ಪ್ರವಾಸಿಗರನ್ನೂ ಸೇರಿಸಿಕೊಂಡು ಎಲ್ಲರಲ್ಲೂ ನೀರಿನ ಸಂರಕ್ಷಣೆಯ ಅರಿವು ಮೂಡಿಸುತ್ತಿದ್ದೇವೆ ಎಂದರು.
ಅಂತರ್ಜಲ- ಮೇಲ್ಮೈ ನೀರಿನ ಸಮತೋಲಿತ ಪೂರೈಕೆ:
ರಾಜ್ಯದ ಹಲವು ಭಾಗದ ಭೂಮಿಯೊಳಗೆ ಹೆಬ್ಬಂಡೆಗಳು, ಲ್ಯಾಟರೈಟ್ ಕಲ್ಲುಗಳು ಇರುವ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದರೂ ಈ ಭಾಗದಲ್ಲಿ ನೀರು ಭೂಮಿಗೆ ಇಂಗುವುದಿಲ್ಲ. ಹೀಗಾಗಿ ಕೆಲವು ಭಾಗದಲ್ಲಿ ಅಂತರ್ಜಲ ಪುನಶ್ಚೇತನವೇ ಆಗುವುದಿಲ್ಲ. ಬೇಸಿಗೆಯಲ್ಲಿ ಲಕ್ಷಾಂತರ ಕೊಳವೆ ಬಾವಿಗಳು ಬತ್ತಿ ಹೋಗುತ್ತವೆ. ಹೊಸದಾಗಿ ಕೊಳವೆ ಬಾವಿ ಕೊರೆದರೂ ನೀರು ಬರುವುದಿಲ್ಲ. ಇದರ ಜೊತೆಗೆ ಶಾಲೆ, ಕಾಲೇಜು, ಆಸ್ಪತ್ರೆ, ಕಚೇರಿ ಇತ್ಯಾದಿಗಳ ಸಾಂಸ್ಥಿಕ ನೀರಿನ ಬೇಡಿಕೆ, ಕೈಗಾರಿಕೆಗಳು ಮತ್ತು ವಾಣಿಜ್ಯ ನೀರಿನ ಬೇಡಿಕೆಯೂ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಾಗಿ ಮೇಲ್ಮೈ ಜಲ ಮತ್ತು ಅಂತರ್ಜಲವನ್ನು ಸಮತೋಲಿತವಾಗಿ ಪೂರೈಸಲಾಗುತ್ತಿದೆ ಎಂದರು.
ನಾವು ಗ್ರಾಮೀಣ ಕುಡಿಯುವ ನೀರಿನ ಸುಸ್ಥಿರ ಪೂರೈಕೆಗಾಗಿ ಮತ್ತು ಮುಂದಿನ 30 ವರ್ಷಗಳಲ್ಲಿ ಹೆಚ್ಚಳವಾಗುವ ಜನಸಂಖ್ಯೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮೇಲ್ಮೈ ಜಲ ಸಂರಕ್ಷಣೆ ಮಾಡಲು ಕ್ರಮ ಕೈಗೊಂಡಿದ್ದೇವೆ. ವಿಬಿಜಿ ರಾಮ್ ಜಿ ಸಹಯೋಗದಲ್ಲಿ ಕೆರೆಗಳ ಹೂಳು ಎತ್ತುವ ಮೂಲಕ ಕೆರೆ, ಸರೋವರಗಳ ನೀರು ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸುತ್ತಿದ್ದೇವೆ. ಇದರ ಜೊತೆಗೆ ಕೆರೆಗೆ ಮಳೆಯ ನೀರು ಹರಿದು ಬರಲು ಕಾಲುವೆಗಳ ದುರಸ್ತಿ ಮಾಡುತ್ತಿದ್ದೇವೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಡಿಸ್ಟ್ರಿಕ್ಟ್ ವಾಟರ್ ಅಂಡ್ ಸ್ಯಾನಿಟೇಷನ್ ಮಿಷನ್ – ಜಿಲ್ಲಾ ನೀರು ಮತ್ತು ನೈರ್ಮಲ್ಯ ಅಭಿಯಾನದಡಿ ಡಿಸ್ಟ್ರಿಕ್ಟ್ ಫೆಡರಲ್ ಕೌಂಟ್ ಮಾಡಿ ಜಿಲ್ಲೆಯಲ್ಲಿ ರಾಜ್ಯಮಟ್ಟದಲ್ಲಿ ಸಮಿತಿ ರಚಿಸಿದ್ದೇವೆ. ಇದು ರಾಜ್ಯದಲ್ಲಿ ಶಾಶ್ವತ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಂಡಿದ್ದೇವೆ ಎಂದರು.
ಇಡೀ ದೇಶದಲ್ಲಿ ಇಂದು ಅಂತರ್ಜಲ ದಿನೇ ದಿನೇ ಕಡಿಮೆಯಾಗುತ್ತಿದೆ. ಸಮೀಕ್ಷೆಯ ಪ್ರಕಾರ ದೇಶದಲ್ಲಿ ದಿನದಿಂದ ದಿನಕ್ಕೆ ಅಂತರ್ಜಲ ಇಳುವರಿ ಕಡಿಮೆಯಾಗುತ್ತಿದೆ. ಪ್ರತಿ ನಾಲ್ಕರಲ್ಲಿ 1 ಕುಡಿಯಲು ಯೋಗ್ಯವಾಗಿಲ್ಲ ಎಂದು ಸಮೀಕ್ಷೆ ಹೇಳುತ್ತದೆ. 6750 ಅಂತರ್ಜಲದ ನೀರಿನ ಪರೀಕ್ಷೆ ಮಾಡಿದರೆ 4953 ಮಾತ್ರ ಕುಡಿಯಲು ಯೋಗ್ಯವಾಗಿದ್ದು, ಇನ್ನುಳಿದ 1797 ಬಳಕೆಗೆ ಯೋಗ್ಯವಾಗಿಲ್ಲ ಎಂಬುದು ವೇದ್ಯವಾಗುತ್ತದೆ ಎಂದರು.
ಜಲ ಮೂಲದ ಆರೋಗ್ಯ, ಅಂತರ್ಜಲ, ಮಳೆಯ ಪ್ರಮಾಣ, ನೀರಿನ ಗುಣಮಟ್ಟ ಇತ್ಯಾದಿ ದತ್ತಾಂಶ ಸಂಗ್ರಹಣೆ, ಗ್ರಾಮೀಣ ನೀರು ಪುನಶ್ಚೇತನ ಕಾರ್ಯಕ್ರಮದಲ್ಲಿ ಜನರ ಪಾಲ್ಗೊಳ್ಳುವಿಕೆಯಂತಹ ಕಾರ್ಯಕ್ರಮಗಳಿಂದ ನೀರಿನ ನಿರ್ವಹಣೆಗೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಒಟ್ಟಾರೆಯಾಗಿ ನಾವು ಬರ ಬಂದಾಗ ಬಾವಿ ತೋಡುವ ಬದಲು, ಮುಂಚಿತವಾಗಿಯೇ ಜಲ ಕಂಟಕ ನಿವಾರಿಸಲು ಕ್ರಮ ವಹಿಸುವ ಅಗತ್ಯವಿದೆ. ವಿವಿಧ ರಾಜ್ಯಗಳಲ್ಲಿನ ಉತ್ತಮ ರೂಢಿಗಳನ್ನು ಇನ್ನಿತರ ರಾಜ್ಯಗಳು ಅಳವಡಿಸಿಕೊಳ್ಳಬೇಕು ಮತ್ತು ನೀರು ಪೋಲಾಗದಂತೆ ಪ್ರತಿಯೊಬ್ಬರೂ ಕ್ರಮ ವಹಿಸಬೇಕು ಎಂದು ಈಶ್ವರ ಖಂಡ್ರೆ ತಿಳಿಸಿದರು.
ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್, ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹಾಗೂ ವಿವಿಧ ರಾಜ್ಯಗಳ ಜಲ ಸಂಪನ್ಮೂಲ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರು ಭಾಗಿಯಾಗಿದ್ದರು.
